ಲೆಕ್ಕಕ್ಕೆ ಸಿಗದ 30.57 ಕೋಟಿ: ತೀವ್ರ ತಪಾಸಣೆ

ಶನಿವಾರ, ಮೇ 25, 2019
27 °C

ಲೆಕ್ಕಕ್ಕೆ ಸಿಗದ 30.57 ಕೋಟಿ: ತೀವ್ರ ತಪಾಸಣೆ

Published:
Updated:

ಕೋಲಾರ: “2010-11 ಹಾಗೂ 2011-12ನೇ ಸಾಲಿನಲ್ಲಿ ಉದ್ಯೋಗಖಾತ್ರಿ ಯೋಜನೆಯ ಅಡಿಯಲ್ಲಿ ನಿಮ್ಮ ಬಳಿ ಇನ್ನೂ ರೂ 30.57 ಕೋಟಿ ಇದೆ. 15 ದಿನದೊಳಗೆ ಅದಕ್ಕೆ ಸರಿಯಾದ ಲೆಕ್ಕ ಕೊಡಿ. ನಂತರ ಹಣ ಕೇಳಿ...”

-ಇದು ಕಳೆದ ಜುಲೈ 24ರಂದು ಇಲ್ಲಿನ ಜಿಲ್ಲಾ ಪಂಚಾಯಿತಿಗೆ ಸರ್ಕಾರ ಬರೆದ ಪತ್ರ.ಆದರೆ ಪಂಚಾಯಿತಿಗಳಲ್ಲಿ ಅಷ್ಟೂ ಹಣ ಈಗಾಗಲೇ ಖರ್ಚಾಗಿದೆ. ಅದಕ್ಕೆ ಸ್ಪಷ್ಟ ಲೆಕ್ಕ ಕೊಡುವ ಸ್ಥಿತಿಯಲ್ಲಿ ಜಿಲ್ಲಾ ಪಂಚಾಯಿತಿ ಇಲ್ಲ. ಹೀಗಾಗಿಯೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್ ಪ್ರತಿ ತಾಲ್ಲೂಕಿಗೆಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಲೆಕ್ಕ ಸರಿಪಡಿಸುವಂತೆ ಸೂಚಿಸಿದ್ದರು.ಆ ಕೆಲಸ ಇನ್ನೂ ಮುಗಿಯದ ಪರಿಣಾಮ ಬುಧವಾರ ಇಡಿ ದಿನ ಕೆಲಸ ಮಾಡಿ ವಾಸ್ತವಾಂಶದ ವರದಿ ಸಿದ್ಧಪಡಿಸಿ ನೀಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದರು. ಪರಿಣಾಮವಾಗಿ ಐದು ತಾಲ್ಲೂಕಿನ ನೋಡಲ್ ಅಧಿಕಾರಿಗಳು ಮತ್ತು 156 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಜಿಪಂ ಸಭಾಂಗಣದಲ್ಲಿ ನೆರೆದಿದ್ದರು.ನೋಡಲ್ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿಯಿಂದ ಹಣ ಬಿಡುಗಡೆಯಾದ ಬಗ್ಗೆ ಬ್ಯಾಂಕ್ ಪುಸ್ತಕ, ಗ್ರಾಮ ಪಂಚಾಯಿತಿಯ ಕ್ಯಾಶ್ ಬುಕ್‌ಮತ್ತು ಎಂಐಎಸ್ (ಮೇನೇಜ್‌ಮೆಂಟ್ ಇನ್‌ಫರ್ಮೇಶನ್ ಸಿಸ್ಟಂ)ನಲ್ಲಿ ದಾಖಲಾದ ಲೆಕ್ಕದ ಪಟ್ಟಿಗಳನ್ನು ಪರಿಶೀಲಿಸಿದರು.ಎಂಐಎಸ್ ದಾಖಲೆಯಲ್ಲಿ ಉಳಿದಿದೆ ಎಂದು ದಾಖಲಾಗಿರುವ, ಆದರೆ ವಾಸ್ತವದಲ್ಲಿ ಇಲ್ಲದ ರೂ 30.57 ಕೋಟಿಗೆ ಖರ್ಚಿನ ದಾಖಲೆಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿ ಅಪ್‌ಡೇಟ್ ಮಾಡುವ ಪ್ರಕ್ರಿಯೆ ಭರದಿಂದ ನಡೆದಿತ್ತು.

ಖಾತ್ರಿ ಯೋಜನೆ ಅಡಿ ಕಾಮಗಾರಿಗಳು ನಡೆದಿರುತ್ತವೆ. ಹಣವೂ ಖರ್ಚಾಗಿರುತ್ತದೆ. ಆದರೆ ಆ ಬಗ್ಗೆ ಎಂಐಎಸ್‌ನದಲ್ಲಿ ದಾಖಲಾಗದೇ ಇರುವುದರಿಂದ, ಖಾತ್ರಿ ಹಣ ಖರ್ಚಾಗದೆ ಉಳಿದಿದೆ ಎಂದು ಎಂಐಎಸ್ ದಾಖಲೆಯಲ್ಲಿ ನಮೂದಾಗಿದೆ. ಈಗ ಖರ್ಚಾಗಿರುವ ಹಣದ ಬಗ್ಗೆ ಮಾಹಿತಿ ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಶ್ರೀನಿವಾಸಪುರ ತಾಲ್ಲೂಕಿನ ನೋಡಲ್ ಅಧಿಕಾರಿಯಾಗಿರುವ ಜಿಪಂ ಸಹಾಯಕ ಯೋಜನಾಧಿಕಾರಿ ಮೋಹನ್‌ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.ಜುಲೈನಲ್ಲಿ ಪತ್ರ ಬರೆದ ಸರ್ಕಾರ ಆಂಶಿಕ ಅವಕಾಶವನ್ನು ನೀಡಿದೆ. ಈಗ ಸರಿಪಡಿಸಿ ಲೆಕ್ಕ ಸರಿಯಾಗಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಹಣ ಬಿಡುಗಡೆಗೆ ತೊಂದರೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ಏರುಪೇರು: ಗ್ರಾಮ ಪಂಚಾಯಿತಿಗಳಿಗೆ ಹಣ ಬಿಡುಗಡೆ ಮಾಡುವ ಸಂದರ್ಭದಲ್ಲೂ ಏರುಪೇರಾಗಿದೆ. ಅಗತ್ಯವಿದ್ದ ಪಂಚಾಯಿತಿಗೆ ನೀಡದೆ ಬೇರೊಂದು ಪಂಚಾಯಿತಿಗೆ ಹಣ ಬಿಡುಗಡೆಯಾಗಿರುವ ನಿದರ್ಶನಗಳೂ ಪತ್ತೆಯಾಗಿವೆ ಎಂದು ಜಿಪಂ ಉಪಕಾರ್ಯದರ್ಶಿಯೂ ಆಗಿರುವ ಬಂಗಾರಪೇಟೆ ನೋಡಲ್ ಅಧಿಕಾರಿ ಬದನೂರು ತಿಳಿಸಿದರು.

ಬಂಗಾರಪೇಟೆ ತಾಲ್ಲೂಕಿನ ಕಾರಹಳ್ಳಿ ಗ್ರಾಮ ಪಂಚಾಯಿತಿಗೆ ರೂ 10 ಲಕ್ಷ ನೀಡಬೇಕಿತ್ತು ಆದರೆ ನೀಡಿಲ್ಲ.ಕಾಮಸಮುದ್ರ ಪಂಚಾಯಿತಿಗೆ ರೂ 8 ಲಕ್ಷ ಹೆಚ್ಚುವರಿ ಹಣ ಪಾವತಿಸಲಾಗಿದೆ. ಅದೇ ರೀತಿ ಕಂಗಾಂಡ್ಲಹಳ್ಳಿ ಪಂಚಾಯಿತಿಗೂ 10 ಲಕ್ಷ ಹೆಚ್ಚುವರಿ ನೀಡಲಾಗಿದೆ. ಹೀಗಾಗಿ ಲೆಕ್ಕದಲ್ಲಿ ಏರುಪೇರಾಗಿದೆ. ಅವೆಲ್ಲವನ್ನೂ ಈಗ ಸರಿಪಡಿಸುವ ಕೆಲಸ ನಡೆದಿದೆ ಎಂದು ಅವರು ನುಡಿದರು.ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ, ಯೋಜನಾ ನಿರ್ದೇಶಕ ವೆಂಕಟರಮಣ ಮತ್ತು ಮುಖ್ಯ ಯೋಜನಾಧಿಕಾರಿ ಧನುಷ್ ಕ್ರಮವಾಗಿ ಕೋಲಾರ, ಮುಳಬಾಗಲು ಮತ್ತು ಮಾಲೂರು ತಾಲ್ಲೂಕು ಲೆಕ್ಕ ಪರಿಶೀಲನೆ ನಡೆಸಿದರು.19.07 ಕೋಟಿಗೆ ಲೆಕ್ಕ: ಬೆಳಿಗ್ಗೆಯಿಂದ ಸತತವಾಗಿ ನಡೆದ ಪರಿಶೀಲನೆ ಬಳಿಕ ಮಧ್ಯಾಹ್ನದ ಹೊತ್ತಿಗೆ 19.07 ಕೋಟಿಗೆ ಲೆಕ್ಕ ದೊರೆತಿದೆ. ಪರಿಣಾಮವಾಗಿ ರೂ 30.57 ಕೋಟಿ ಬದಲಿಗೆ 11.50 ಕೋಟಿ ಬಾಕಿ ಇದೆ ಎಂಬ ಎಂಐಎಸ್ ದಾಖಲೆ ತೋರಿಸುತ್ತಿದೆ. ಬುಧವಾರ ಎಷ್ಟೇ ಹೊತ್ತಾದರೂ ಲೆಕ್ಕ ಅಪ್‌ಲೋಡ್ ಮಾಡುವ ಕೆಲಸ ಪೂರ್ಣಗೊಳಿಸಲಾಗುವುದು ಎಂದು ಮೋಹನ್ ಕುಮಾರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry