ಶನಿವಾರ, ಮೇ 8, 2021
25 °C
ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ಸೂಚನೆ

ಲೆಕ್ಕ ಬೇಡ: ಜನರ ಸಮಸ್ಯೆ ಪರಿಹರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಉದ್ಯೋಗಖಾತ್ರಿ ಯೋಜನೆಯೂ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಸಂಬಂಧ ಅಧಿಕಾರಿಗಳು ಲೆಕ್ಕವನ್ನಷ್ಟೇ ನೀಡಿದರೆ ಸಾಲದು. ಮನಸು ಕೊಟ್ಟು ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪರಿಣಾಮಕಾರಿ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸೂಚಿಸಿದರು.



ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಶಕ್ತಿಶಾಲಿಯಾಗಿರುವ ಅಧಿಕಾರವನ್ನು ನಿಮಗೆ ನೀಡಲಾಗಿದೆ. ಅದನ್ನು ಬಳಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಬಗೆಹರಿಸಿ ಎಂದು ಹೇಳಿದರು.



ಸಣ್ಣ-ಪುಟ್ಟ ಸಮಸ್ಯೆಗಳು ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಲ್ಲೇಖವಾಗುವ ರೀತಿಯಲ್ಲಿ ಕೆಲಸ ಮಾಡಬಾರದು. ಶಾಸಕರು, ಜಿ.ಪಂ.ಸದಸ್ಯರಾದಿಯಾಗಿ ಪ್ರಮುಖ ಜನಪ್ರತಿನಿಧಿಗಳ ಗಮನಕ್ಕೆ ಬರುವ ಮುಂಚೆಯೇ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ನುಡಿದರು.



ರೈತರಿಗೆ ನೀರು, ಬಿತ್ತನೆ ಬೀಜ, ರಸಗೊಬ್ಬರ ವಿತರಿಸುವಲ್ಲಿ ವಿಳಂಬ ಸಲ್ಲದು. ಕಾಲಕಾಲಕ್ಕೆ ಅಗತ್ಯವಿರುವ ಸೌಕರ್ಯವನ್ನು ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು ಎಂದರು.



ಡೆಂಗೆ, ಚಿಕೂನ್‌ಗುನ್ಯಾ ಮೊದಲಾದ ರೋಗಗಳ ಅಂಕಿ-ಸಂಖ್ಯೆಯನ್ನು ಕಡಿಮೆ ಮಾಡುವುದರ ಜೊತೆಗೆ, ಜಿಲ್ಲೆಯಲ್ಲಿ ಯಾವುದೇ ಸಾಂಕ್ರಾಮಿಕ ರೋಗದಿಂದ ಜನ ಸಾಯುವಂಥ ಸನ್ನಿವೇಶ ಬಾರದ ರೀತಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದರು.



ಜನರ ಕೆಲಸ ಮಾಡುವಲ್ಲಿ ಸೋಮಾರಿಗಳಾಗಿರುವ, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳು ಜಿಲ್ಲೆಯಲ್ಲಿ ಇರುವಂತಿಲ್ಲ. ಇದು ಕೇವಲ ಅಭಿಪ್ರಾಯವಲ್ಲ, ಎಚ್ಚರಿಕೆ. ಹೀಗಾಗಿ ಯಾವುದೇ ಯೋಜನೆಯ ಅನುಷ್ಠಾನಕ್ಕೆ ಮುನ್ನ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.



ನೀರು ಕೊಡಿ: ನೀರಿನ ಸಮಸ್ಯೆ ತೀವ್ರವಾಗಿರುವ ಜಿಲ್ಲೆಯಲ್ಲಿ ಕೊಳವೆ ಬಾವಿಕೊರೆದ ಕೂಡಲೇ ಪಂಪ್, ಮೋಟರ್ ನೀಡುವ ವ್ಯವಸ್ಥೆಯೇ ಇಲ್ಲ ಎಂದು ಶಾಸಕರಾದ ಮಾಲೂರಿನ ಕೆ.ಎಸ್.ಮಂಜುನಾಥ್ ಮತ್ತು ಬಂಗಾರಪೇಟೆಯ ಕೆ.ಎಂ.ನಾರಾಯಣಸ್ವಾಮಿ ಸಚಿವರ ಗಮನ ಸೆಳೆದರು.



ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು ಜಿ.ಪಂ. ಕಾರ್ಯಪಾಲಕ ಎಂಜಿನಿಯರ್ ದೇವರಾಜ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ನೀರು ಸಿಗೋದೇ ಕಷ್ಟ. ಅಂಥದ್ದರಲ್ಲಿ ಸಿಕ್ಕ ನೀರನ್ನು ಸರಿಯಾದ ಸಮಯಕ್ಕೆ ಕೊಡದಿದ್ದರೆ ಕೊಳವೆಬಾವಿಕೊರೆದು ಏನು ಪ್ರಯೋಜನ? ಎಂದು ಪ್ರಶ್ನಿಸಿದರು.



ಸಭೆ ನಡೆಸಿ: ಜಿಲ್ಲೆಯಲ್ಲಿ ಕೊರೆದಿರುವ ಕೊಳವೆಬಾವಿಗಳಲ್ಲಿ ಎಷ್ಟಕ್ಕೆ ಪಂಪ್, ಮೋಟರ್ ಅಳವಡಿಸಿಲ್ಲ ಎಂಬ ಬಗ್ಗೆ ಶಾಸಕರು, ಜಿ.ಪಂ.ಸದಸ್ಯರೊಡನೆ ಸಭೆ ನಡೆಸಿ ಮಾಹಿತಿ ಪಡೆದು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಮತ್ತು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಝುಲ್ಫಿಕರ್ ಉಲ್ಲಾ ಅವರಿಗೆ ಸೂಚಿಸಿದರು.



ಜನಸ್ನೇಹಿಯಾಗಿ: ಜಿಲ್ಲೆಯಲ್ಲಿ ಜೂಜು ಮೊದಲಾದ ಅಪರಾಧ ಘಟನೆಗಳನ್ನು ಕಡ್ಡಾಯವಾಗಿ ಪೊಲೀಸರು ನಿಯಂತ್ರಿಸಬೇಕು. ಪ್ರತಿ ಪೊಲೀಸ್ ಠಾಣೆಯೂ ಜನಸ್ನೇಹಿಯಾಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಧೈರ್ಯದಿಂದ ಠಾಣೆಗೆ ಬಂದು ದೂರು ಕೊಟ್ಟು ನ್ಯಾಯ ಪಡೆಯುವ ಸನ್ನಿವೇಶ ನಿರ್ಮಾಣವಾಗಬೇಕು ಎಂದು ಅವರು ಸೂಚಿಸಿದರು.



ಸಭೆಯ ಆರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಸಚಿವರಿಗೆ ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.

ಶಾಸಕರಾದ ಮುಳಬಾಗಲಿನ ಜಿ.ಮಂಜುನಾಥ್, ಮಾಲೂರಿನ ಕೆ.ಎಸ್.ಮಂಜುನಾಥ್, ಬಂಗಾರಪೇಟೆಯ ಕೆ.ಎಂ.ನಾರಾಯಣಸ್ವಾಮಿ, ಕೆಜಿಎಫ್‌ನ ವೈ.ರಾಮಕ್ಕ, ಶ್ರೀನಿವಾಸಪುರದ ಕೆ.ಆರ್.ರಮೇಶ್‌ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ವೀರಯ್ಯ, ನಸೀರ್ ಅಹ್ಮದ್, ರಾಜ್ಯ ವಕ್ಪ್ ಮಂಡಳಿ ಅಧ್ಯಕ್ಷ ಅಬ್ದುಲ್ ರಿಯಾಜ್ ಖಾನ್, ಜಿ.ಪಂ. ಅಧ್ಯಕ್ಷೆ ಚೌಡೇಶ್ವರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಝಲ್ಫಿಕರ್ ಉಲ್ಲಾ, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಡಿ.ವಿ.ಹರೀಶ್, ಎ,ಎಂ.ಲಕ್ಷ್ಮಿನಾರಾಯಣ, ಸಿಮೌಲ್, ಎಂ.ಎಸ್.ಆನಂದ್,ರಾಮಸ್ವಾಮಿರೆಡ್ಡಿ, ನಾರಾಯಣರೆಡ್ಡಿ, ಶ್ರೀನಿವಾಸ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆಜಿಎಫ್‌ನ ಡಾ.ರೋಹಿಣಿ ಕಟೋಚ್, ಕೋಲಾರದ ಡಾ.ರಾಮನಿವಾಸ್ ಸಪೆಟ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಭಗವಾನ್‌ದಾಸ್ ಉಪಸ್ಥಿತರಿದ್ದರು.



ಯರಗೋಳು ತೊಡಕು ಪರಿಹಾರಕ್ಕೆ ಪ್ರಯತ್ನ: ಖಾದರ್

ಕೋಲಾರ:ಯರಗೋಳು ಕುಡಿಯುವ ನೀರು ಯೋಜನೆ ಅನುಷ್ಠಾನ ಸಂಬಂಧ ಇರುವ ತೊಡಕುಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭರವಸೆ ನೀಡಿದರು.



ಪ್ರಗತಿಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮಂಗಳೂರಿನವನಾದ್ದರಿಂದ ಕೋಲಾರ ಜಿಲ್ಲೆಯ ವಿಷಯದಲ್ಲಿ ತಾರತಮ್ಯ ಮಾಡುವೆ ಎಂಬ ಗುಮಾನಿ ಯಾರಿಗೂ ಬೇಡ. ಸರ್ಕಾರ ನನಗೆ ಕೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ತಕ್ಕಂತೆ ಕೆಲಸ ಮಾಡುವೆ. ಅಧಿಕಾರ ದುರುಪಯೋಗಪಡಿಸಿಕೊಂಡು ಯಾವುದೇ ಯೋಜನೆಗೆ ಅಡ್ಡಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.



ನೇತ್ರಾವತಿ ನದಿಯ ವ್ಯರ್ಥ ನೀರನ್ನುಬಯಲುಸೀಮೆ ಜಿಲ್ಲೆಗಳಿಗೆ ಹರಿಸುವ ಪ್ರಸ್ತಾವವನ್ನು ಬಜೆಟ್ ಅಧಿವೇಶನದ ಸಂದರ್ಭದಲ್ಲಿ ವಿರೋಧಿಸಿದ್ದು ನಿಜ. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಂಥ ಯೋಜನೆಗಳನ್ನು ಈಗ ವಿರೋಧಿಸುವ ಪ್ರಮೇಯವೇ ಇಲ್ಲ. ಅದನ್ನು ತಮ್ಮ ತವರು ಜಿಲ್ಲೆಯಾದ ಮಂಗಳೂರಿನಲ್ಲೂ ಸ್ಪಷ್ಟಪಡಿಸಿರುವೆ ಎಂದು ನುಡಿದರು.



ಎತ್ತಿನಹೊಳೆ ಯೋಜನೆ ವಿಜಯದಶಮಿಗೆ ಚಾಲನೆ

ಕೋಲಾರ: ಎತ್ತಿನಹೊಳೆ ಯೋಜನೆಯನ್ನು ವಿಜಯದಶಮಿ ಹೊತ್ತಿಗೆ ಚಾಲನೆಗೊಳಿಸುವ ಪ್ರಯತ್ನ ನಡೆದಿದೆ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.



ಸಚಿವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಮಶಿವಯ್ಯ ವರದಿ ಪ್ರಕಾರ ಯೋಜನೆ ಜಾರಿಗೊಳಿಸಿದರೆ 724.29 ಟಿಎಂಸಿ ನೀರು ದೊರಕುತ್ತದೆ. ಆದರೆ ಎತ್ತಿನಹೊಳೆ ಯೋಜನೆ ಮೂಲಕ ಕೇವಲ 24 ಟಿಎಂಸಿ ನೀರು ದೊರಕುತ್ತದೆ. ಅದನ್ನು ಗ್ರಿಡ್ ನಾಲೆಗಳ ಮೂಲಕವೇ ತರುವ ಉದ್ದೇಶ ಸರ್ಕಾರದ್ದು ಎಂದು ಹೇಳಿದರು.



ಗ್ರಿಡ್ ನಾಲೆಗಳನ್ನು ನಿರ್ಮಾಣ ಮಾಡುವ ಸಂಬಂಧ ಡಿಪಿಆರ್ (ಸಮಗ್ರ ಯೋಜನಾ ವರದಿ) ತಯಾರಿಸಲು ಸೂಚಿಸಲಾಗಿದೆ. 10 ದಿನದೊಳಗೆ ಈ ಸಂಬಂಧ ಸಭೆ ನಡೆಯಲಿದೆ. ವಿಜಯದಶಮಿ ವೇಳೆಗೆ ಯೋಜನೆಗೆ ಚಾಲನೆ ದೊರಕುವುದು ಖಚಿತ ಎಂದರು.



ನೇತ್ರಾವತಿ ನದಿ ನೀರು ಭಾಗದ ಜನರಿಗೆ ತೊಂದರೆಯನ್ನು ಉಂಟು ಮಾಡಿ ಬಯಲು ಸೀಮೆ ಜಿಲ್ಲೆಗಳಿಗೆ ನೀರು ತರುವುದಿಲ್ಲ. ನೇತ್ರಾವತಿ ನದಿ ತುಂಬಿದ ಬಳಿಕ ವ್ಯರ್ಥವಾಗಿ ಹರಿದು ಹೋಗುವ ನೀರನ್ನಷ್ಟೇ ಬಯಲು ಸೀಮೆಯ ಜಿಲ್ಲೆಗಳಿಗೆ ಪಡೆಯುವ ಉದ್ದೇಶವಿದೆ ಅಷ್ಟೆ. ನದಿಯನ್ನೇ ತಿರುಗಿಸಿ ನೀರುಪಡೆಯುವ  ಉದ್ದೇಶವೇನೂ ಇಲ್ಲ. ಆದರೆ ಹಾಗೆಂದು ಅಪಪ್ರಚಾರ ಮಾಡಲಾಗುತ್ತಿದೆ. ಮೈಸೂರಿನಲ್ಲಿ ವರುಣಾ ನಾಲೆ ನಿರ್ಮಿಸುವ ಸಂದರ್ಭದಲ್ಲೂ ರೈತರು ಪ್ರತಿಭಟಿಸಿದ್ದರು. ಹೊಸ ಯೋಜನೆಗಳ ಸಂದರ್ಭದಲ್ಲಿ ಇಂಥ ಪ್ರತಿಭಟನೆ, ಅಪಪ್ರಚಾರಗಳು ಸಾಮಾನ್ಯ ಎಂದರು.



ಕೆರೆ ಪ್ರದೇಶ ಪ್ರಾಧಿಕಾರವನ್ನು ರಚಿಸುವ ಸಂಬಂಧ ಕಾನೂನು ರೂಪಿಸಬೇಕಾಗಿದೆ. ನಂತರ ಒಂದೂವರೆ ತಿಂಗಳೊಳಗೆ ಕೆರೆಗಳ ಒತ್ತುವರಿ ತೆರವು ಮಾಡಿಲಾಗುವುದು. ಹೂಳು ತೆಗೆದು ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀಡಲಾಗುವುದು. ರಾಜಕಾಲುವೆ, ತೂಬುಗಾಲುವೆ, ಕೆರೆ ಕಟ್ಟೆ ಬಂದೋಬಸ್ತ್ ಮಾಡಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.