ಲೆಲಿಸಾ, ಲೂಸಿಗೆ ಬಂಗಾರ

7

ಲೆಲಿಸಾ, ಲೂಸಿಗೆ ಬಂಗಾರ

Published:
Updated:
ಲೆಲಿಸಾ, ಲೂಸಿಗೆ ಬಂಗಾರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಕಿಕ್ಕಿರಿದು ತುಂಬಿದ್ದ ಸ್ಪರ್ಧಿಗಳ ನಡುವೆ ಮಿಂಚಿನ ಪ್ರದರ್ಶನ ನೀಡಿದ ಇಥಿಯೋಪಿಯಾದ ಲೆಲಿಸಾ ದೆಸಿಸಾ ಹಾಗೂ ಕೀನ್ಯಾದ ಲೂಸಿ ಕಬು ಅವರು ಇಲ್ಲಿ ನಡೆದ ದೆಹಲಿ ಹಾಫ್ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಎನಿಸಿಕೊಂಡರು.ರಾಷ್ಟ್ರದ ರಾಜಧಾನಿಯ ತಂಪನೆಯ ವಾತಾವರಣದಲ್ಲಿ ಭಾನುವಾರ ನಡೆದ ಈ ಸ್ಪರ್ಧೆಯಲ್ಲಿ 30,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. ಕಳೆದ ಸಲದ ರನ್ನರ್ ಆಪ್ ಲೆಲಿಸಾ ದೆಸಿಸಾ ನಿಗದಿತ ಗುರಿಯನ್ನು 59 ನಿಮಿಷ 30 ಸೆಕೆಂಡ್‌ಗಳಲ್ಲಿ ತಲುಪಿದರು. ಮಹಿಳೆಯರ ವಿಭಾಗದಲ್ಲಿ ಲೂಸಿ ಕಬು 1 ಗಂಟೆ 07.4 ಸೆ. ಸಮಯ ತಗೆದುಕೊಂಡು ಪ್ರಶಸ್ತಿ ಬಾಚಿಕೊಂಡರು. 21 ಕಿ.ಮೀ. ಓಟದ ಸ್ಪರ್ಧೆ ಇದಾಗಿತ್ತು.ಭಾರತೀಯ ಅಥ್ಲೀಟ್‌ಗಳಲ್ಲಿ ವಾರಣಾಸಿಯ ಅಥ್ಲೀಟ್ ಸುರೇಶ್ ಕುಮಾರ್ ಗಮನ ಸೆಳೆದರು. ಪುರುಷರ ವಿಭಾಗದಲ್ಲಿ ಅವರು 1:04.8ಸೆ. ಕ್ರಮಿಸಿ ಪ್ರಥಮ ಸ್ಥಾನ ಪಡೆದರೆ, ಕೇತ ರಾಮ್ (1:04.44ಸೆ) ದ್ವಿತೀಯ ಸ್ಥಾನ ಗಳಿಸಿದರು. 815ಕ್ಕೂ ಹೆಚ್ಚು ಹಿರಿಯ ಅಥ್ಲೀಟ್‌ಗಳು ಇದರಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.ಕಳೆದ ಸಲದ ಚಾಂಪಿಯನ್ ಲಲಿತಾ ಬಬ್ಬರ್ ಮಹಿಳೆಯರ ವಿಭಾಗದಲ್ಲಿ ಮತ್ತೆ ತಮ್ಮ ಪ್ರಭುತ್ವ ಮೆರೆದರು. 1:17.38ಸೆಕೆಂಡ್‌ಗಳಲ್ಲಿ ಗುರಿ ತಲುಪಿ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡರು.`ನನಗೆ ಗೆಲುವು ದೊರೆತದ್ದು ಸಂತಸ. ನೀಡಿದೆ. ನನ್ನ ಸಾಧನೆಯ ಶ್ರೇಯ ನನ್ನ ಕುಟುಂಬಕ್ಕೆ ಸೇರಬೇಕು. ಖಂಡಿತವಾಗಿಯೂ ನನಗೆ ನಂಬಿಕೆಯಿತ್ತು. ಇಂಥದ್ದೊಂದು ಸಾಧನೆ ನನ್ನಿಂದ ಸಾಧ್ಯವಿತ್ತು. ಈ ಮ್ಯಾರಥಾನ್ ಸಾಕಷ್ಟು ಖುಷಿ ನೀಡಿದೆ~ ಎಂದು ಕೀನ್ಯಾದ ಚಾಂಪಿಯನ್ ಲೂಸಿ ಹೇಳಿದರು.ಮೆರ್ಗಾಗೆ ನಿರಾಸೆ: ಸತತ ಎರಡು ಸಲ ಚಾಂಪಿಯನ್ ಆಗಿದ್ದ ಇಥಿಯೋಪಿಯಾದ ಡೆರಿಬಾ ಮೆರ್ಗಾ ಅವರು ಇಲ್ಲಿ ನಿರಾಸೆ ಅನುಭವಿಸಿದರು. ಪ್ರಶಸ್ತಿ ಗೆಲ್ಲುವ ನೆಚ್ಚಿನ ಅಥ್ಲೀಟ್ ಸಹ ಎನಿಸಿದ್ದರು. ಆದರೆ, ಶನಿವಾರ ಗಾಯಗೊಂಡಿದ್ದ ಕಾರಣ, ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಈ ಅಥ್ಲೀಟ್ 2008 ಹಾಗೂ 09ರಲ್ಲಿ ಚಾಂಪಿಯನ್ ಆಗಿದ್ದರು.ಬಾಲಿವುಡ್ ರಂಗು: ಹಾಫ್ ಮ್ಯಾರಥಾನ್‌ಗೆ ಬಾಲಿವುಡ್‌ನ ಕಲಾವಿದರು ಆಗಮಿಸಿ ರಂಗು ತುಂಬಿದ್ದರು. ಶಾರೂಖ್ ಖಾನ್, ಬಿಪಾಶಾ ಬಸು, ರಾಹುಲ್ ಬೋಸ್ ಈ ಸಂದರ್ಭದಲ್ಲಿ ಹಾಜರಿದ್ದರು. ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸಹ ಇದ್ದರು. ಕೆಲವರು ಬಣ್ಣ ಬಣ್ಣದ ವೇಷ ತೊಟ್ಟು, ಕೆಲ ಮಕ್ಕಳು `ಇಂಡಿಯಾ~ ಎಂದು ಟೀ ಶರ್ಟ್‌ಗಳ ಮೇಲೆ ಬರೆಸಿಕೊಂಡು ಅಥ್ಲೀಟ್‌ಗಳಿಗೆ ಬೆಂಬಲ ನೀಡಿದ್ದು ಕಂಡು ಬಂದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry