ಲೆವೆಲ್‌ ಕ್ರಾಸಿಂಗ್‌ ತೆರೆೆಯಲು ಆಗ್ರಹ

7

ಲೆವೆಲ್‌ ಕ್ರಾಸಿಂಗ್‌ ತೆರೆೆಯಲು ಆಗ್ರಹ

Published:
Updated:

ಕಡೂರು:  ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ಚಿಕ್ಕದೇವನೂರು ಗ್ರಾಮದಲ್ಲಿದ್ದ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಅನ್ನು ರೈಲ್ವೆ ಅಧಿಕಾರಿ­ಗಳು ದುರಸ್ತಿಯ ನೆಪ ಒಡ್ಡಿ ಮುಚ್ಚಿದ್ದು ಇದರಿಂದ ಕಡೂರಿಗೆ ತೆರಳುವ ಮತ್ತು ತಮ್ಮ ಜಮೀನಿಗೆ ಓಡಾಡುವ ರೈತರಿಗೆ ಅನನು­ಕೂಲವಾಗುತ್ತಿದ್ದು ಲೆವೆಲ್‌ ಕ್ರಾಸಿಂಗ್‌ಅನ್ನು ಸಂಚಾರಕ್ಕೆ ಮುಕ್ತಗೊ­ಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಗ್ರಾಮಸ್ಥರಿಗೆ ಆಗುತ್ತಿರುವ ಅನನುಕೂಲವನ್ನು ಖುದ್ದು ವೀಕ್ಷಿಸುವಂತೆ ಗ್ರಾಮಸ್ಥರು ಮಾಡಿದ ಮನವಿಗೆ ಓಗೊಟ್ಟು ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ವಿಧಾನಪರಿಷತ್‌ ಸದಸ್ಯೆ ಗಾಯತ್ರಿ ಶಾಂತೇಗೌಡ ಮತ್ತು ಕಡೂರು ತಹಶೀಲ್ದಾರ್‌ ಶಾರದಾಂಬಾ ಅವರ ಬಳಿ ತಮ್ಮ ಅಳಲು ತೋಡಿಕೊಂಡ ಸಾರ್ವಜನಿಕರು, ಇಲ್ಲಿ ಇರುವ ಲೆವೆಲ್‌ ಕ್ರಾಸಿಂಗ್‌ ಮೂಲಕ ಜನ, ಜಾನು­ವಾರುಗಳು ಓಡಾಡುತ್ತಿದ್ದು ರೈಲ್ವೆ ಅಧಿಕಾರಿಗಳು ದುರಸ್ತಿ ಕಾರಣ ನೀಡಿ ಮುಚ್ಚಿದ್ದರು.ದುರಸ್ತಿ ಮುಗಿದ ಬಳಿಕ ರಸ್ತೆಗೆ ಅಡ್ಡಲಾಗಿ ಬಾರ್‌ಗಳನ್ನು ಅಳವಡಿಸಿ ರಸ್ತೆಯನ್ನು ಶಾಶ್ವತವಾಗಿ ಮುಚ್ಚಿದ್ದಾರೆ. ಇದರಿಂದ ಜನ ಮತ್ತು ಜಾನುವಾರುಗಳು ಸಂಚರಿಸಲು ಅಡಚಣೆಯಾಗಿದೆ, ಕಡೂರಿಗೆ ಹೋಗಲು ಇರುವ ಏಕೈಕ ರಸ್ತೆ ಇದಾಗಿದ್ದು ರಸ್ತೆ ಮುಚ್ಚಿರುವುದರಿಂದ ಸುತ್ತಿ ಬಳಸಿ ತೆರಳಬೇಕಿರುವ ಕುರುಬರಹಳ್ಳಿ, ಜಡಕನಕಟ್ಟೆ, ಡಿ.ಕಾರೇಹಳ್ಳಿ, ಗಣಪತಿಹಳ್ಳಿ, ಲಕ್ಷ್ಮೀಸಾಗರ, ಕುಪ್ಪಾಳು ಮತ್ತು ಮತಿಘಟ್ಟ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ.

ನಬಾರ್ಡ್‌ ವತಿಯಿಂದ ರಸ್ತೆ ಡಾಂಬರೀಕರಣಗೊಂಡು ಉತ್ತಮ ಸ್ಥಿತಿಯಲ್ಲಿದ್ದು ಸಂಚರಿಸಲು ಅನುಕೂಲ ಸ್ಥಿತಿ ಇದೆ. ರೈಲ್ವೆ ಅಧಿಕಾರಿಗಳು ಬದಲಿ ವ್ಯವಸ್ಥೆ ರೂಪಿಸುವುದಾಗಿ ಪಂಚಾಯಿತಿಗೆ ತಿಳಿಸಿದ್ದರೂ ಅವರು ಹೇಳುವಲ್ಲಿ ಸರಿಯಾದ ರಸ್ತೆಯೇ ಇಲ್ಲ, ಆದಕಾರಣ ಗೇಟ್‌ ನಂ.113 ಕಿ.ಮೀ.­186/­200–300ಅನ್ನು ಪುನಃ ಸಂಚಾರಕ್ಕೆ ಮುಕ್ತ­ಗೊಳಿಸಬೇಕು ಅಥವಾ ಉತ್ತಮ ಬದಲಿ ರಸ್ತೆ ರೂಪಿಸಿಕೊಡಬೇಕು ಎಂದು ಒತ್ತಾಯಿಸಿದರು.ಈ ಸಮಯದಲ್ಲಿ ತಹಶೀಲ್ದಾರ್‌ ಶಾರದಾಂಬಾ, ಗ್ರಾಮಸ್ಥರಾದ ಸಿ.ಎಲ್‌.­ಅಶೋಕ್‌, ಎಸ್‌.ಕೊಪ್ಪಲು ಮಂಜು­ನಾಥ್‌, ಎಂ.ಡಿ.ರೇಣುಕಮೂರ್ತಿ, ರಮೇಶಾ­ಚಾರ್‌, ಪಾ.ಬಸವರಾಜಪ್ಪ, ಸಿ.ಎಸ್‌.­ಅಶೋಕ್‌, ಮೊಹಮದ್‌ ಇಂತಿಯಾಜ್‌ ಮತ್ತು ಗ್ರಾಮಸ್ಥರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry