ಶುಕ್ರವಾರ, ಏಪ್ರಿಲ್ 23, 2021
22 °C

ಲೇಖಕಿ ವೈದೇಹಿ ಅಭಿಪ್ರಾಯ:ಗೌರಮ್ಮ ಬರಹಗಳಲ್ಲಿ ಸೂಕ್ಷ್ಮ ಸಂವೇದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕೊಡಗಿನ ಗೌರಮ್ಮ ಅವರ ಬರಹಗಳು ಲೇಖಕಿಯರಿಗೆ ತವರುಮನೆ ಇದ್ದಂತೆ. ಪ್ರಸ್ತುತ ದಿನಗಳಲ್ಲಿ ವ್ಯಕ್ತವಾಗುತ್ತಿರುವ ಸೂಕ್ಷ್ಮ ಸಂವೇದನೆಗಳ ಬೇರುಗಳು ಗೌರಮ್ಮ ಅವರ ಬರಹಗಳೇ ಆಗಿವೆ~ ಎಂದು ಲೇಖಕಿ ವೈದೇಹಿ ಅಭಿಪ್ರಾಯಪಟ್ಟರು. ಕರ್ನಾಟಕ ಲೇಖಕಿಯರ ಸಂಘವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಚ್.ನಾಗವೇಣಿ ಅವರ `ಕೊಡಗಿನ ಗೌರಮ್ಮ~ ಕುರಿತ ಪುಸ್ತಕ ಬಿಡುಗಡೆ ಮತ್ತು ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.`ಸಮಕಾಲೀನ ಲೇಖಕರಿಗೆ ಹೋಲಿಸಿದರೆ ಗೌರಮ್ಮ ಅವರ ಕೃತಿಗಳು ಹೆಚ್ಚು ಪ್ರಬುದ್ಧತೆಯಿಂದ ಕೂಡಿದ್ದು, ಲೇಖನದ ವಸ್ತು, ವಿನ್ಯಾಸದ ವಿಚಾರದಲ್ಲಿ ಪ್ರಯೋಗಕ್ಕೆ ಹೆಚ್ಚು ತೆರೆದುಕೊಂಡಿದ್ದಾರೆ. ಸ್ತ್ರೀಯ ಬರವಣಿಗೆಯನ್ನು `ಭಿನ್ನ~ ಪ್ರತಿಭೆ ಎಂದು ಗುರುತಿಸುವ ಕಾಲಘಟ್ಟದಲ್ಲೂ ಚಿಂತನೆಗೆ ಹಚ್ಚುವ ಲೇಖಕಿಯಾಗಿ ಗೌರಮ್ಮ ಬೆಳೆದಿರುವ ರೀತಿಯೇ ಚಕಿತಗೊಳಿಸುತ್ತದೆ~ ಎಂದು ತಿಳಿಸಿದರು.`ಗೌರಮ್ಮ ಅವರು ಆಧುನಿಕತೆಗೆ ಒಡ್ಡಿಕೊಂಡ ಕೊಡಗಿನ ಭಾಗದವರಾಗಿದ್ದರಿಂದ ಸಾಹಿತ್ಯ ಕ್ಷೇತ್ರದಂತಹ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂಬ ಮಾತಿದೆ. ಆದರೆ ಅತಿ ಆಧುನಿಕ ಜೀವನವನ್ನು ಅಳವಡಿಸಿಕೊಂಡಿರುವ ಈಗಿನ ಲೇಖಕಿಯರು ನಡೆಯುತ್ತಿರುವ ವಿದ್ಯಮಾನಗಳಿಗೆ ಯಾವ ತೀವ್ರತೆಯಲ್ಲಿ ಸ್ಪಂದಿಸುತ್ತಿದ್ದಾರೆ?~ ಎಂದು ಪ್ರಶ್ನಿಸಿದ ಅವರು, `ಆಕೆಯ ಪ್ರತಿಭೆ ಆಧುನಿಕತೆಯ ಕೊಡುಗೆಯಲ್ಲ, ಅದು ಅವರೊಳಗಿರುವ ನಿಜವಾದ ಅಂತಃಶಕ್ತಿ~ ಎಂದು ಬಣ್ಣಿಸಿದರು.`ಸಮಾಜದಲ್ಲಿ ಮುಖ್ಯವಾಹಿನಿಯಲ್ಲಿ ಇದ್ದುಕೊಂಡೇ ಅನುಭವಗಳನ್ನು ಬರಹಕ್ಕೆ ಇಳಿಸಬೇಕೆಂಬ ನಿಯಮವಿಲ್ಲ. ಅಡುಗೆ ಮನೆ ನನ್ನ ಜಗತ್ತು, ಅಲ್ಲಿ ನಡೆಯುವ ಜೀವಾನುಭವವನ್ನು ಸಹ ಇತರರಿಗೆ ತಿಳಿಯಪಡಿಸಬೇಕು. ಬರಹದ ವಿಚಾರದಲ್ಲಿ ಸ್ತ್ರೀ, ದಲಿತ ಎಂಬ ಭಿನ್ನ ಬೇಧಗಳ ಅಗತ್ಯವಿಲ್ಲ. ಲೇಖಕರು ಅಂದ ಮೇಲೆ ಅವರು ಲೇಖಕರು ಅಷ್ಟೆ~ ಎಂದು ಸ್ಪಷ್ಟಪಡಿಸಿದರು.`ಗೌರಮ್ಮ ಅವರು ಆ ಕಾಲದ ಬಾಲ್ಯವಿವಾಹ, ವಿಧವೆ, ವರದಕ್ಷಿಣೆ ಸೇರಿದಂತೆ ಸಾಮಾಜಿಕ ಸಮಸ್ಯೆಗಳನ್ನು ಒಳಗೊಂಡು ಬರಹಗಳನ್ನು ರಚಿಸಿದ್ದಾರೆ. `ವಾಣಿಯ ಸಮಸ್ಯೆ~ ಸಹ ಎಲ್ಲ ಕಾಲಕ್ಕೂ ಒಪ್ಪುವಂತಹ ಕತೆ. ಲೇಖಕಿಯರು ಅವರ ಕೃತಿಗಳನ್ನು ಹೆಚ್ಚು ಅಧ್ಯಯನ ನಡೆಸುವ ಮೂಲಕ ಹೊಸ ಬಗೆಯ ಸಂವೇದನೆ ಮತ್ತು ಸುಧಾರಣಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.ಲೇಖಕಿ ಡಾ. ವಿಜಯಾ, `ಈ ಕೃತಿಯು ಗೌರಮ್ಮ ಅವರ ಬಗ್ಗೆ ಹಲವು ಒಳನೋಟಗಳನ್ನು ನೀಡುತ್ತದೆಯಾದರೆ, ಕೆಲವು ಮಾಹಿತಿಗಳು ಅಪೂರ್ಣ ಎನಿಸುತ್ತದೆ.  ಇನ್ನೊಂದು ಪುಸ್ತಕ ಹೊರತರುವ ಮೂಲಕ ಎಚ್.ನಾಗವೇಣಿ ಅವರು ದಕ್ಕಿಸಿಕೊಂಡ  ಮಾಹಿತಿಯನ್ನು ಓದುಗರಿಗೆ ನೀಡಬೇಕು~ ಎಂದು ಹೇಳಿದರು.ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿಯ ಸದಸ್ಯೆ ಎಚ್.ಎಲ್.ಪುಷ್ಪಾ, ಲೇಖಕಿ ಎಚ್.ನಾಗವೇಣಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ವಸುಂಧರಾ ಭೂಪತಿ, ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಎನ್.ಸಿ.ಮಹೇಶ್, ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಇತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.