ಬುಧವಾರ, ಏಪ್ರಿಲ್ 21, 2021
30 °C

ಲೇಡಿಗೋಷನ್ ಕಟ್ಟಡಕ್ಕೆ ಶಂಕುಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ 16ರಂದು ನಗರಕ್ಕೆ ಆಗಮಿಸಲಿದ್ದು, ನಗರದ ಲೇಡಿಗೋಷನ್ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಮೀನುಗಾರ ಮಹಿಳೆಯರಿಗೆ ಶೇ. 3 ಬಡ್ಡಿ ಸಾಲದ ಚೆಕ್ ವಿತರಿಸಲಿದ್ದಾರೆ’ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ತಿಳಿಸಿದರು.ನಗರದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಧ್ಯಾಹ್ನ ಸುಳ್ಯದಲ್ಲಿ ಜರುಗಲಿರುವ ರೈತ ಸಮಾವೇಶದಲ್ಲಿ ಭಾಗವಹಿಸುವರು. ಬಳಿಕ ಪುಣಚ ಮಹಿಷ ಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು’ ಎಂದು ಅವರು ವಿವರಿಸಿದರು.‘ಕುಮ್ಕಿ ಜಮೀನನ್ನು ಅಕ್ರಮ ಸಕ್ರಮದ ವ್ಯಾಪ್ತಿಗೆ ತರಲು ಕೋರ್ಟ್ ತಡೆಯಾಜ್ಞೆ ಅಡ್ಡಿಯಾಗಿದೆ. ಈ ತಡೆಯಾಜ್ಞೆ ತೆರವುಗೊಳಿಸಲು ಸರ್ಕಾರ ಪ್ರಯತ್ನ ಮುಂದುವರಿಸಿದೆ’ ಎಂದರು.‘ರಾಜ್ಯ ಸರ್ಕಾರ ರೈತರಿಗೆ ಅನೇಕ ಸವಲತ್ತು ನೀಡಿದೆ. ರೈತರು ಬಿಜೆಪಿಯತ್ತ ಒಲವು ಹೊಂದಿರುವುದನ್ನು ಸಹಿಸದೆ ವಿರೋಧಪಕ್ಷಗಳು ಕೆಲವು ಸಂಘಟನೆಗಳನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಯತ್ನದಲ್ಲಿ ತೊಡಗಿವೆ. ರೈತರ ದಿಕ್ಕು ತಪ್ಪಿಸುವ ಇಂಥ ಯತ್ನ ಕೈಗೂಡುವುದಿಲ್ಲ’ ಎಂದು ಗಮನ ಸೆಳೆದರು.‘ಕುಮ್ಕಿ, ಕಾನ ಬಾಣೆ ಜಮೀನಿನ ಹಕ್ಕಿಗೆ ಸಂಬಂಧಿಸಿ ಜಿಲ್ಲೆಯಲ್ಲಿ ಎದುರಾಗಿರುವ ಸಮಸ್ಯೆಯನ್ನು ಪಕ್ಷದ ಪ್ರಮುಖರು, ಇತ್ತೀಚೆಗೆ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು, ಅವರು ಸರ್ವೆ ಕಾರ್ಯ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಆ ಬಳಿಕ ಜಿಲ್ಲೆಯಲ್ಲಿ ಯಾವುದೇ ಸರ್ವೆ ನಡೆದಿಲ್ಲ. ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ. ರಾಜ್ಯ ಸಚಿವ ಸಂಪುಟವೂ ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಿದೆ’ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.‘ಮಂಗಳೂರು, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಡೆಯುತ್ತಿದೆ. ಈ 3 ಎಪಿಎಂಸಿಗಳಲ್ಲಿ ಬಿಜೆಪಿ ಚುಕ್ಕಾಣಿ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.ವಿಧಾನಸಭೆ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಮಾತನಾಡಿ, ‘ಜಿಲ್ಲೆಯ ಆಸ್ಪತ್ರೆ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳನ್ನು ಉದ್ಯಮಿಗಳ ನೆರವಿನಿಂದ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ. ಇಲ್ಲಿನ ಪ್ರಾದೇಶಿಕ ಆಧುನಿಕ ಶಿಶುವೈದ್ಯಶಾಸ್ತ್ರ ಕೇಂದ್ರವನ್ನೂ (ಆರ್‌ಎಪಿಸಿ) ಇದೇ ರೀತಿ ಮೇಲ್ದರ್ಜೆಗೇರಿಸಲಾಗಿದೆ. ರಾಜ್ಯದಲ್ಲಿ ಶಿಶುಮರಣ ಪ್ರಮಾಣ ಪ್ರತಿ ಸಾವಿರಕ್ಕೆ 60 ಇದ್ದರು, ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಪ್ರಮಾಣ ಸಾವಿರಕ್ಕೆ 10ರಷ್ಟಿದೆ. ಜಿಲ್ಲೆಯಲ್ಲಿ ಲಭ್ಯ ಇರುವ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಯೇ ಇದಕ್ಕೆ ಕಾರಣ. ಇದನ್ನು ಇನ್ನಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ದಾನಿಯೊಬ್ಬರ ನೆರವಿನಿಂದ ಲೇಡಿಗೋಷನ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ’ ಎಂದರು.ಸಂಸದ ನಳಿನ್ ಕುಮಾರ್ ಕಟೀಲ್, ದ.ಕ.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಕೆ.ಟಿ.ಭಟ್, ಪಕ್ಷದ ಮುಖಂಡ ಸಂಜೀವ ಮಠಂದೂರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.