ಲೇವಾದೇವಿ ಕಾಯ್ದೆ ತಿದ್ದುಪಡಿಗೆ ಕ್ರಮ

7

ಲೇವಾದೇವಿ ಕಾಯ್ದೆ ತಿದ್ದುಪಡಿಗೆ ಕ್ರಮ

Published:
Updated:

ಬೆಂಗಳೂರು: ಸಣ್ಣ ಹಣಕಾಸು ಸಂಸ್ಥೆಗಳ ಸಾಲ ಸೌಲಭ್ಯಕ್ಕೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ರಾಜ್ಯ ಲೇವಾದೇವಿ ವ್ಯವಹಾರಗಳ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಪ್ರಯತ್ನಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರ್ ಗುರುವಾರ ಇಲ್ಲಿ ಭರವಸೆ ನೀಡಿದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ) ಹಾಗೂ ಕರ್ನಾಟಕ ಸಣ್ಣ ಹಣಕಾಸು ಸಂಸ್ಥೆಗಳ ಒಕ್ಕೂಟ (ಎಕೆಎಂಐ)ಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ಕರ್ನಾಟಕದಲ್ಲಿ ಆರ್ಥಿಕ ಸೇರ್ಪಡೆ: ಸಂಘಟಿತ ಪ್ರಯತ್ನ~ ಕುರಿತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.`ತರಕಾರಿ, ಕಿರಾಣಿ ಅಂಗಡಿ ವ್ಯಾಪಾರಿಗಳಿಗೂ ಸಕಾಲದಲ್ಲಿ ಕಿರು ಸಾಲ ಸೌಲಭ್ಯ ಒದಗಿಸುವಂತಹ ಸಣ್ಣ ಹಣಕಾಸು ಸಂಸ್ಥೆಗಳು ಬಡ ಹಾಗೂ ಮಧ್ಯಮ ವರ್ಗದ ಆರ್ಥಿಕ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇಂತಹ ಸಂಸ್ಥೆಗಳ ಅನಾನುಕೂಲಗಳನ್ನು ನಿವಾರಿಸಲು ಲೇವಾದೇವಿ ವ್ಯವಹಾರಗಳ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು~ ಎಂದರು. `ಬ್ರಿಟಿಷರ ಕಾಲದ ಕಾನೂನುಗಳನ್ನೇ ನಾವು ಕಾಲ ಕಾಲಕ್ಕೆ ತಿದ್ದುಪಡಿ ತರುವ ಮೂಲಕ ಪಾಲಿಸುತ್ತಿದ್ದೇವೆ. ನನ್ನ ಪ್ರಕಾರ, ಇಂತಹ ಕಾನೂನುಗಳನ್ನು ರದ್ದುಪಡಿಸಿ ಹೊಸ ಕಾನೂನು ರೂಪಿಸುವುದು ಅಗತ್ಯವಾಗಿದೆ. ಸಣ್ಣ ಹಣಕಾಸು ಸಂಸ್ಥೆಗಳಿಗೂ ಸಾಲ ಸೌಲಭ್ಯ ನೀಡಲು ನಿರ್ಬಂಧ ಇರಬೇಕು ನಿಜ. ಆದರೆ, ಬಡ ಮತ್ತು ಮಧ್ಯಮ ವರ್ಗದ ಜನ ದಿನನಿತ್ಯ ಪಡೆಯುವ ಸಾಲ ಸೌಲಭ್ಯಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು~ ಎಂದು ಅಭಿಪ್ರಾಯಪಟ್ಟರು.ಉದಾಹರಣೆಗೆ ರಾಜ್ಯ ಸರ್ಕಾರಿ ಸಂಸ್ಥೆಯಾದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಎಷ್ಟು ಜನರನ್ನು ಉದ್ಧಾರ ಮಾಡಿದೆ? ಇಂತಹ ಸಂಸ್ಥೆಗಳಿಂದ ಸಾಲ ಸೌಲಭ್ಯ ಪಡೆದವರು ಉದ್ಧಾರವಾಗಬೇಕು. ಆದರೆ, ಈ ಸಂಸ್ಥೆಯಲ್ಲಿ ಸಾಲ ಪಡೆದವರಲ್ಲಿ ಹಾಳಾದವರೇ ಹೆಚ್ಚು. ಸರ್ಕಾರವನ್ನು ಪ್ರತಿನಿಧಿಸುವ ಒಬ್ಬ ಸಚಿವನಾಗಿಯೇ ನಾನು ಈ ಪ್ರಶ್ನೆ ಕೇಳುವಂತಾಗಿದೆ ಎಂದು ಶೆಟ್ಟರ್ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ವಿಶೇಷ ಅಧ್ಯಯನ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಗ್ರಾಮೀಣಾಭಿವೃದ್ಧಿಯಲ್ಲಿ ಕಿರು ಸಾಲ ನೀಡುವ ಹಣಕಾಸು ಸಂಸ್ಥೆಗಳ ಪಾತ್ರದ ಬಗ್ಗೆ ರಾಜ್ಯ ಸರ್ಕಾರ ವಿಶೇಷ ಅಧ್ಯಯನ ನಡೆಸಬೇಕು. ಆ ಅಧ್ಯಯನ ವರದಿಯನ್ನು ಪ್ರಗತಿಯ ಅಳತೆ ಗೋಲನ್ನಾಗಿ ಬಳಸಬೇಕು ಎಂದು ಮನವಿ ಮಾಡಿದರು.ಎಫ್‌ಕೆಸಿಸಿಐ ಅಧ್ಯಕ್ಷ ಜೆ.ಆರ್. ಬಂಗೇರ ಸ್ವಾಗತಿಸಿದರು. ಎಕೆಎಂಐ ಅಧ್ಯಕ್ಷ ವಿವೇಕಾನಂದ ಎನ್. ಸಾಲಿಮಠ್ ಅವರು ಸಣ್ಣ ಹಣಕಾಸು ಸಂಸ್ಥೆಗಳ ಸಾಲ ಸೌಲಭ್ಯದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ, ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಪಿ. ಮುರಳೀಧರರಾವ್ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry