ಮಂಗಳವಾರ, ಮೇ 18, 2021
30 °C
ಡಿಸಿಸಿ ಬ್ಯಾಂಕ್‌ನಿಂದ ನೂತನ ಸಚಿವರು, ಶಾಸಕರಿಗೆ ಅಭಿನಂದನೆ

`ಲೇವಾದೇವಿ ಸಾಲ ಪಡೆದ ರೈತರಿಗೂ ನೆರವು ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಸಹಕಾರಿ ಸಂಸ್ಥೆಗಳಿಂದ ಸಾಲ ಪಡೆದ ರೈತರಿಗಿಂತ ಇತರ ಲೇವಾದೇವಿ ಸಂಸ್ಥೆಯಿಂದ ಅಧಿಕ ಬಡ್ಡಿದರದಲ್ಲಿ ಸಾಲ ಪಡೆದ ರೈತರೇ ಆತ್ಮಹತ್ಯೆಗೆ ಶರಣಾಗುವುದು ಹೆಚ್ಚು. ಅಂತಹ ರೈತರ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕಾಗಿದೆ' ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟರು.ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ಇಲ್ಲಿನ ಲೊಯೋಲಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೂತನ ಶಾಸಕರು ಹಾಗೂ ಸಚಿವರ ಅಭಿನಂದನೆ ಮತ್ತು ಚಿಂತನಾ ಸಮಾವೇಶದಲ್ಲಿ ಅವರು ಮಾತನಾಡಿದರು.`ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಬ್ಯಾಂಕ್‌ಗಳು ರಾಷ್ಟ್ರೀಕರಣಗೊಂಡರೂ, ಅವುಗಳ ಸಿಬ್ಬಂದಿಯ ಮನೋಧರ್ಮ ರಾಷ್ಟ್ರೀಕರಣಗೊಂಡಿಲ್ಲ' ಎಂದು ಅವರು ಬೇಸರ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಮಾತನಾಡಿ, `ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಯುವ ಜನಾಂಗದ ಅಭಿವೃದ್ಧಿ ಆಗದೆ ದೇಶದ ಪ್ರಗತಿ ಕಷ್ಟಸಾಧ್ಯ. ಚುನಾವಣಾ ಪ್ರಣಾಳಿಕೆಯಲ್ಲೂ ಕಾಂಗ್ರೆಸ್ ಈ ವಿಚಾರಕ್ಕೆ ಆದ್ಯತೆ ನೀಡಿತ್ತು. ಜುಲೈ ಎರಡನೇ ವಾರ ಮಂಡನೆಯಾಗುವ ಬಜೆಟ್‌ನಲ್ಲಿ ಪ್ರಣಾಳಿಕೆಯ ಅಂಶಗಳನ್ನು ಜಾರಿಗೊಳಿಸುವ ಮೂಲಕ ಪ್ರತಿಮನೆಯಲ್ಲೂ ದೀಪ ಬೆಳಗಿಸುವ ಪ್ರಯತ್ನ ಮಾಡಲಾಗುವುದು' ಎಂದರು.ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, `ಸರ್ಕಾರ ಹಾಗೂ ಸಹಕಾರ ಒಂದೇ ನಾಣ್ಯದ ಎರಡು ಮುಖಗಳು. ಸಹಕಾರಿ ವ್ಯವಸ್ಥೆಯ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ' ಎಂದರು.ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, `ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಜನಪ್ರತಿನಿಧಿಗಳು ಸರಿಯಾಗಿ ನಿರ್ವಹಿಸದಿದ್ದರೆ, ಹಾರ ತುರಾಯಿಗಳೇ ಮುಳ್ಳಾಗಿ ಕಾಡುತ್ತವೆ' ಎಂದರು.ಮೀನುಗಾರಿಕೆ, ಕ್ರೀಡೆ ಮತ್ತು ಯುವಜನ ಸೇವಾ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, `ರೈತರ ಹೆಸರು ಹೇಳಿಕೊಂಡು ರೈತರನ್ನೇ ಶೋಷಿಸುವ ವ್ಯವಸ್ಥೆ ಸಮಾಜದಲ್ಲಿದೆ. ಈ ವ್ಯವಸ್ಥೆಯನ್ನು ಮಟ್ಟ ಹಾಕಿ ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧ' ಎಂದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ, `ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ನಾಲ್ಕು ಮಂದಿ ಸಚಿವರಾಗಿದ್ದೇವೆ. ಈ ಅವಕಾಶ ಬಳಸಿ ಜಿಲ್ಲೆಯ ಚಿತ್ರಣವನ್ನೇ ಬದಲಿಸಬೇಕಿದೆ' ಎಂದರು.ಸಚಿವರಾದ ಬಿ.ರಮಾನಾಥ ರೈ, ಎಸ್.ಆರ್.ಪಾಟಿಲ್, ಅಭಯಚಂದ್ರ ಜೈನ್, ಕಿಮ್ಮನೆ ರತ್ನಾಕರ, ಯು.ಟಿ.ಖಾದರ್, ಶಾಸಕರಾದ ವಸಂತ ಬಂಗೇರ, ಗೋಪಾಲ ಪೂಜಾರಿ, ಶಕುಂತಳಾ ಶೆಟ್ಟಿ, ಪ್ರಮೋದ್ ಮಧ್ವರಾಜ್, ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಶಾಸಕರಾದ ವಿ.ಸುನಿಲ್ ಕುಮಾರ್, ಎಸ್.ಅಂಗಾರ ಗೈರುಹಾಜರಾಗಿದ್ದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಸ್ವಾಗತಿಸಿದರು. ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ದೇವರಾಜ್ ವಂದಿಸಿದರು. ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್, ಉದ್ಯಮಿಗಳಾದ ರೋಹನ್ ಮೊಂತೆರೊ, ಸುಧೀರ್ ಹೆಗ್ಡೆ ಮತ್ತಿತರರರು ಉಪಸ್ಥಿತರಿದ್ದರು.`ಕರಾವಳಿಗೆ ಐಟಿ ಪಾರ್ಕ್'

`ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಬೆಂಗಳೂರಿನ ಬೆರಳೆಣಿಕೆ ಮಂದಿಯ ಹತೋಟಿಯಲ್ಲಿದೆ. ಇದನ್ನು ವಿಕೇಂದ್ರೀಕರಣಗೊಳಿಸುವ ಸಲುವಾಗಿ ಕರಾವಳಿಯಲ್ಲೂ ಐಟಿ ಪಾರ್ಕ್ ಸ್ಥಾಪಿಸುವ ಚಿಂತನೆ ಇದೆ. ಐ.ಟಿ.ಪಾರ್ಕ್‌ಗಾಗಿ ಉಡುಪಿ ಜಿಲ್ಲೆಯಲ್ಲಿ 125 ಎಕರೆ ಜಾಗ ಒದಗಿಸುವುದಾಗಿ ಉಸ್ತುವಾರಿ ಸಚಿವ ಸೊರಕೆ ತಿಳಿಸಿದ್ದಾರೆ' ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟಿಲ್ ತಿಳಿಸಿದರು.`ರಾಜ್ಯದ ಬಜೆಟ್‌ನ ಪ್ರಮಾಣ 1.17 ಲಕ್ಷ ಕೋಟಿ. ಆದರೆ, ಐ.ಟಿ ಕ್ಷೇತ್ರವೊಂದರಿಂದಲೇ ದೇಶವು 1.35 ಲಕ್ಷ ಕೋಟಿ ಆದಾಯ ಗಳಿಸುತ್ತಿದೆ. ಐ.ಟಿ. ಉದ್ದಿಮೆಗಳ ಸಿಂಹಪಾಲು ಇರುವುದು ಬೆಂಗಳೂರಿನಲ್ಲಿ' ಎಂದರು.`ಪಿಲಿಕುಳದ 3ಡಿ ತಾರಾಲಯದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಈ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇನೆ' ಎಂದು ಅವರು ಭರವಸೆ ನೀಡಿದರು.ಸಬ್ಸಿಡಿ ನೇರ ರೈತರ ಖಾತೆಗೆ: ಆಗ್ರಹ

`ರೈತರಿಗೆ ಯಂತ್ರೋಪಕರಣ ಖರೀದಿಗೆ ನೀಡುವ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು' ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಆಗ್ರಹಿಸಿದರು.

`ಯಂತ್ರೋಪಕರಣಗಳಿಗೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇದ್ದರೂ ಅವುಗಳ ದರವನ್ನು ದುಪ್ಪಟ್ಟು ತೋರಿಸಿ ರೈತರ ಹಣವನ್ನು ಕೊಳ್ಳೆ ಹೊಡೆಯಲಾಗುತ್ತಿದೆ' ಎಂದು ಅವರು ಆರೋಪಿಸಿದರು.

`ಸ್ವಸಹಾಯ ಸಂಘದ ಸದಸ್ಯರಿಗೆ ಶೇ 2 ಬಡ್ಡಿದರದಲ್ಲಿ ಸಾಲ ನೀಡುವ ಭರವಸೆಯನ್ನೂ ಸರ್ಕಾರ ಈಡೇರಿಸಬೇಕು. ತೆಂಗಿಗೂ ಉತ್ತಮ ಧಾರಣೆ ಲಭಿಸಬೇಕು. ಕಾಡುಪ್ರಾಣಿ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದರು.

`ಹಿಂದಿನ ಸರ್ಕಾರ 2007- 09ರಲ್ಲಿ ಹಾಗೂ 2011-12ರಲ್ಲಿ ಘೋಷಿಸಿದ್ದ ಬಡ್ಡಿ ಸಬ್ಸಿಡಿಯ 2,025 ಕೋಟಿ ಮೊತ್ತ ಸಹಕಾರಿ ಸಂಘಗಳಿಗೆ ಪಾವತಿ ಆಗಬೇಕಿದೆ. ಅದನ್ನು ಪಾವತಿಸದೆ, ಸರ್ಕಾರ ಘೋಷಿಸಿದಂತೆ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ 1ಲಕ್ಷ ಹಾಗೂ ಶೇ 2 ಬಡ್ಡಿ ದರದಲ್ಲಿ ರೂ 5 ಲಕ್ಷದವರೆಗೆ ಸಾಲ ನೀಡುವುದು ಕಷ್ಟಸಾಧ್ಯ. ಬೇರೆ ಬೇರೆ ಜಿಲ್ಲೆಗಳಲ್ಲಿ ಸಂಪನ್ಮೂಲ ವೆಚ್ಚ ಬೇರೆ ಬೇರೆಯಾಗಿದ್ದು, ಅದಕ್ಕೆ ಅನುಗುಣವಾಗಿ ಸಾಲದ ಬಡ್ಡಿದರದ ಮೊತ್ತವನ್ನು ಸರ್ಕಾರ ಸಹಕಾರಿ ಬ್ಯಾಂಕ್‌ಗಳಿಗೆ ಪಾವತಿಸಬೇಕು' ಎಂದು ಅವರು ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.