ಲೈಂಗಿಕ ಅಲ್ಪಸಂಖ್ಯಾತರ ಅಭದ್ರತೆ ನಿವಾರಣೆಗೆ ಸಲಹೆ

7

ಲೈಂಗಿಕ ಅಲ್ಪಸಂಖ್ಯಾತರ ಅಭದ್ರತೆ ನಿವಾರಣೆಗೆ ಸಲಹೆ

Published:
Updated:
ಲೈಂಗಿಕ ಅಲ್ಪಸಂಖ್ಯಾತರ ಅಭದ್ರತೆ ನಿವಾರಣೆಗೆ ಸಲಹೆ

ಬೆಂಗಳೂರು: `ಲೈಂಗಿಕ ಅಲ್ಪಸಂಖ್ಯಾತ ರಿಗೆ ಸಮಾಜವು ದಯೆ ದಾಕ್ಷಿಣ್ಯ, ಪ್ರೀತಿ, ಕರುಣೆ, ಅನುರಾಗ ತೋರಿಸಬೇಕು~ ಎಂದು ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಕಿವಿಮಾತು ಹೇಳಿದರು.ಸಂಗಮ ಸಂಘಟನೆಯ ಆಶ್ರಯದಲ್ಲಿ ನಗರದ ಎನ್‌ಜಿಒ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಕುರಿತ `ಚಿಟ್ಟೆಗಳು ಹಾರಾಡಲಿ~ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಮಾತನಾಡಿದರು.`ಮನುಷ್ಯನಿಗೆ ಪ್ರೀತಿ, ವಾತ್ಸಲ್ಯ, ಅನುರಾಗ ತೋರಿಸಿದರೆ ಆತ ಕೆಟ್ಟವನು ಆಗುವುದಿಲ್ಲ. ಇವುಗಳು ಸಿಕ್ಕಾಗ ಆತ ಯಾವ ಆಸ್ತಿಯನ್ನು ನಿರೀಕ್ಷಿಸುವುದಿಲ್ಲ. ವ್ಯಕ್ತಿಯನ್ನು ದೂರುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಪ್ರತಿಯೊಬ್ಬರಿಗೆ ಮನಃಸಾಕ್ಷಿ ಹಾಗೂ ವಿಚಕ್ಷಣಾ ಜ್ಞಾನ ಇದೆ. ಆ ಜ್ಞಾನದಿಂದ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು~ ಎಂದು ಅವರು ಸಲಹೆ ನೀಡಿದರು.`ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರುಗಳು ಕೆಟ್ಟದಾಗಿ ವರ್ತಿಸಿ ಸಮಸ್ಯೆ ಸೃಷ್ಟಿಸುತ್ತಾರೆ ಎಂಬ ಆರೋಪ ಇದೆ. ಅವರು ಈ ರೀತಿ ಏಕೆ ವರ್ತಿಸುತ್ತಾರೆ ಎಂಬುದನ್ನು ಯಾರೂ ಯೋಚಿಸುವುದಿಲ್ಲ. ಹಿಜಡಾಗಳನ್ನು ಹೆತ್ತವರು ತಮ್ಮ ಮಗು ಎಂದು ಹೇಳಿಕೊಳ್ಳುವುದಿಲ್ಲ. ಪೋಷಕರು ಅವರನ್ನು ದೂರ ಮಾಡುತ್ತಾರೆ. ಮನುಷ್ಯರೇ ಅಲ್ಲ ಎಂಬಂತೆ ಸಮಾಜ ನೋಡುತ್ತದೆ. ಜನರ ಇಂತಹ ವರ್ತನೆಯಿಂದ ಲೈಂಗಿಕ ಅಲ್ಪಸಂಖ್ಯಾತರಲ್ಲಿ ಹತಾಶೆ ಬೆಳೆಯುತ್ತದೆ. ಜನರ ಗಮನ ಸೆಳೆಯಬೇಕು ಎಂದು ಯತ್ನಿಸುತ್ತಾರೆ~ ಎಂದು ಅವರು ಅಭಿಪ್ರಾಯಪಟ್ಟರು.`ಅವರ ಅಭದ್ರತೆಯನ್ನು ಹೋಗಲಾಡಿಸಬೇಕು. ಅವರ ಕಷ್ಟಗಳ ಬಗ್ಗೆ ಜಾಗೃತಿ ಮೂಡಿಸಿ ಸಮಾಜದ ಕಣ್ಣು ತೆರೆಸಬೇಕು. ಈ ನಿಟ್ಟಿನಲ್ಲಿ ಕೆಲವು ವರ್ಷಗಳಿಂದ ತಕ್ಕ ಮಟ್ಟಿನ ಜಾಗೃತಿ ಕಾರ್ಯಗಳು ಆಗಿವೆ. ತಮ್ಮ ಸಮಸ್ಯೆ ಹೇಳಿಕೊಳ್ಳುವಷ್ಟು ಲೈಂಗಿಕ ಅಲ್ಪಸಂಖ್ಯಾತರು ಸಂಘಟಿತರಾಗಿದ್ದಾರೆ~ ಎಂದರು.ಹಿರಿಯ ಲೇಖಕ ಮರುಳಸಿದ್ದಪ್ಪ ಮಾತನಾಡಿ, `ಸಮಾಜದಲ್ಲಿ ಗೌರವಯುತವಾಗಿ ಬದುಕುವ ಹಕ್ಕು ಮುಖ್ಯವಾದ ಮೂಲಭೂತ ಹಕ್ಕು. ಆದರೆ ಮನುಷ್ಯರ ನಡುವೆ ತಾರತಮ್ಯ ಇದೆ. ಕೆಲವು ಮಾನವ ನಿರ್ಮಿತ ತಾರತಮ್ಯಗಳು. ಅದಕ್ಕೆ ಸಮಾಜದಲ್ಲಿ ದೊಡ್ಡ ಹೋರಾಟ ನಡೆದಿದೆ. ಜಾತಿ ಆಧಾರದಲ್ಲಿ ಅಲ್ಪಸಂಖ್ಯಾತರ ಸಮಸ್ಯೆ ಬಗೆಹರಿಸುವಂತಹುದು. ನಿಸರ್ಗದತ್ತವಾದ ಅಲ್ಪಸಂಖ್ಯಾತರ ಸಮಸ್ಯೆಯನ್ನು ಬಗೆಹರಿಸುವುದು ಕಷ್ಟ. ಇಲ್ಲಿ ನಡೆಯುವ ಶೋಷಣೆಯನ್ನು ಗಂಭೀರವಾಗಿ ಪರಿಗಣಿಸಬೇಕು~ ಎಂದರು. ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎನ್.ಕೆ.ಪಾಟೀಲ್, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಶ್ವನಾಥ್ ವಿ.ಅಂಗಡಿ, ಸಾಕ್ಷ್ಯಚಿತ್ರದ ನಿರ್ದೇಶಕ ಗೋಪಾಲ ಮೆನನ್, ಹಿರಿಯ ವಕೀಲ ಬಿ.ಟಿ. ವೆಂಕಟೇಶ್, ಸಮರ ಸಂಸ್ಥೆಯ ಕಾರ್ಯದರ್ಶಿ ಸೋನು ನಿರಂಜನ್, ಕರ್ನಾಟಕ ಲೈಂಗಿಕ ಕಾರ್ಮಿಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುಜಾತಾ, ಸಂಗಮ ಸಂಸ್ಥೆಯ ವ್ಯವಸ್ಥಾಪಕ ಗುರುಕಿರಣ್ ಕಾಮತ್ ಉಪಸ್ಥಿತರಿದ್ದರು. ಹೈಕೋರ್ಟ್‌ನಂತೆ ಬೇರೆಡೆಯೂ ಕೆಲಸ ಕೊಡಿ...


`ಕೆಲವು ಸಮಯದ ಹಿಂದೆ ನಗರದ ಬನಶಂಕರಿಯಲ್ಲಿ ಐದು ಜನ ಲೈಂಗಿಕ ಅಲ್ಪಸಂಖ್ಯಾತರು ಭಿಕ್ಷೆ ಬೇಡುತ್ತಿದ್ದಾಗ ಇನ್ಸ್‌ಪೆಕ್ಟರ್ ಹಾಗೂ ಇತರ ಪೊಲೀಸರು ಬಂಧಿಸಿ ಪೊಲೀಸ್ ಠಾಣೆಗೆ ಕರೆ ತಂದು ಹಿಂಸಿಸಿದರು. ನ್ಯಾಯ ಕೇಳಲು ಹೋದವರ ಮೇಲೂ ಕ್ರಿಮಿನಲ್ ಪ್ರಕರಣ ದಾಖಲಿಸಿದರು. ಮನುಷ್ಯರೇ ಅಲ್ಲ ಎಂಬಂತೆ ನೋಡಿ ದೌರ್ಜನ್ಯ ನಡೆಸಿದರು~ ಎಂದು ಸಮರ ಸಂಸ್ಥೆಯ ಕಾರ್ಯದರ್ಶಿ ಸೋನು ನಿರಂಜನ್ ಅಳಲು ತೋಡಿಕೊಂಡರು.`ನಾನು ಹೆಣ್ಣಾಗಿ ಹುಟ್ಟಿ ಗಂಡಾಗಿ ಜೀವನ ನಡೆಸುತ್ತಿದ್ದೇನೆ. ಹಿಜಡಾಗಳು ಸಹ ಮನುಷ್ಯರೇ. ನಮಗೆ ಯಾರು ಉದ್ಯೋಗ ಕೊಡುವುದಿಲ್ಲ. ಜೀವನ ನಡೆಸಲು ಬೇರೆ ದಾರಿ ಇಲ್ಲದ ಕಾರಣ ಅನಿವಾರ್ಯವಾಗಿ ಭಿಕ್ಷೆ ಬೇಡಬೇಕು. ಈ ಪರಿಸ್ಥಿತಿ ಬದಲಾಗಬೇಕು. ಹೈಕೋರ್ಟ್‌ನಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡಲಾಗಿದೆ. ಇದೇ ಮಾದರಿಯಲ್ಲಿ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ನಮಗೆ ಮೀಸಲಾತಿ ನೀಡಬೇಕು~ ಎಂದು ಅವರು ಆಗ್ರಹಿಸಿದರು.`ಬನಶಂಕರಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣವನ್ನು ಎಳೆಯಾಗಿಟ್ಟುಕೊಂಡು ಈ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ. ಸಾಕ್ಷ್ಯಚಿತ್ರದ ಅವಧಿ 75 ನಿಮಿಷ. ಸಾಕ್ಷ್ಯಚಿತ್ರ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿದೆ~ ಎಂದು ಸಾಕ್ಷ್ಯಚಿತ್ರದ ನಿರ್ದೇಶಕ ಗೋಪಾಲ ಮೆನನ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry