ಗುರುವಾರ , ಮೇ 6, 2021
23 °C

ಲೈಂಗಿಕ ಕಿರುಕುಳ ಆರೋಪ :ಅಧಿಕಾರಿಗೆ ಧರ್ಮದೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಟ್ಯಾಕ್ಸ್ ಪ್ರೊ ಬ್ಯುಸಿನೆಸ್ ಸಲೂಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಕೇಶ್‌ಶೆಟ್ಟಿ ಅವರು ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಹೊಯ್ಸಳ ಸೇನೆ ಸೇರಿದಂತೆ ಹಲವು ಮಹಿಳಾ ಸಂಘಟನೆಗಳ ಕಾರ್ಯಕರ್ತರು ಅವರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಂಗಳವಾರ ನಡೆದಿದೆ.ನೀಲಿಚಿತ್ರದಲ್ಲಿ ಅಭಿನಯಿಸುವಂತೆ ಕಂಪೆನಿಯ ಮಹಿಳಾ ಉದ್ಯೋಗಿಯೊಬ್ಬರಿಗೆ, ರಾಕೇಶ್‌ಶೆಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೇ ಇತರೆ ಮಹಿಳಾ ಉದ್ಯೋಗಿಗಳ ಜತೆಯೂ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತರು ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದರು.ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಬಸವನಗುಡಿ ಪೊಲೀಸರು ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ನಿಯಂತ್ರಿಸಿದರು.

ಲೈಂಗಿಕ ಕಿರುಕುಳದ ಆರೋಪವನ್ನು ತಳ್ಳಿ ಹಾಕಿರುವ ರಾಕೇಶ್‌ಶೆಟ್ಟಿ, `ನನ್ನ ಮೇಲೆ ಆರೋಪ ಮಾಡಿರುವ ಆ ಮಹಿಳಾ ಉದ್ಯೋಗಿಯೇ ನನಗೆ ಕರೆ ಮಾಡಿ ಹಣ ನೀಡುವಂತೆ ಹಲವು ತಿಂಗಳುಗಳಿಂದ ಬೆದರಿಕೆ ಹಾಕುತ್ತಿದ್ದರು. ಈ ಸಂಬಂಧ ಮೂರು ತಿಂಗಳ ಹಿಂದೆಯೇ ಆ ಮಹಿಳಾ ಉದ್ಯೋಗಿಯ ವಿರುದ್ಧ ಬಸವನಗುಡಿ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದೆ~ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.`ನನ್ನ ದೂರಿನ ಸಂಬಂಧ ತನಿಖೆ ನಡೆಸಿದ ಪೊಲೀಸರು ಮಹಿಳಾ ಉದ್ಯೋಗಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದರು. ಇದರಿಂದ ಕೋಪಗೊಂಡು ಆ ಮಹಿಳಾ ಉದ್ಯೋಗಿ ಕೆಲ ಸಂಘಟನೆಗಳ ಸದಸ್ಯರ ಜತೆ ಹಲ್ಲೆ ನಡೆಸಿದ್ದಾರೆ~ ಎಂದು ದೂರಿದರು.ಘಟನೆ ಸಂಬಂಧ ರಾಕೇಶ್‌ಶೆಟ್ಟಿ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.