ಗುರುವಾರ , ಏಪ್ರಿಲ್ 22, 2021
28 °C

ಲೈಂಗಿಕ ಕಿರುಕುಳ ಪ್ರಕರಣ: ಫ್ರೊಫೆಸರ್ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಿವಬಸವಯ್ಯ ಅವರನ್ನು ಕುಲಪತಿ ಪ್ರೊ.ವಿ.ಜಿ.ತಳವಾರ್ ಅವರು ಮಂಗಳವಾರ ಅಮಾನತುಗೊಳಿಸಿದ್ದಾರೆ.ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ತಳವಾರ್ ಅವರು ಮಾ.5ರಂದು ಶಿವಬಸವಯ್ಯ ಅವರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿ ಮೂರು ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದ್ದರು. ಆದರೆ ಯಾವುದೇ ಉತ್ತರ ನೀಡದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಶಿವಬಸವಯ್ಯ ಅವರು ಲೈಂಗಿಕ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಿ ಮನನೊಂದು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಸರಿತಾ ಅವರನ್ನು ಬಿ.ಎಂ.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿತಾ ಪತಿ ಬಿ.ಆರ್. ವಿಜಯಕುಮಾರ್ ಅವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಪ್ರೊ.ಶಿವಬಸವಯ್ಯ ಹಾಗೂ ಸಂಶೋಧನಾ ವಿದ್ಯಾರ್ಥಿನಿ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮೈಸೂರು ವಿ.ವಿ. ಕುಲಪತಿ ಪ್ರೊ.ವಿ.ಜಿ.ತಳವಾರ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿತ್ತು.ಸಮಿತಿಯಿಂದ ನೋಟಿಸ್: ಲೈಂಗಿಕ ಕಿರುಕುಳ ಪ್ರಕರಣವನ್ನು ಮೈಸೂರು ವಿ.ವಿ. ಮಹಿಳಾ ದೌರ್ಜನ್ಯ ದೂರು ಸಮಿತಿಗೆ ವಿಚಾರಣೆ ಮಾಡುವಂತೆ ಕುಲಪತಿ ಅವರು ಸೂಚಿಸಿರುವುದರಿಂದ ಮಾ.11ರಂದು ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಪ್ರೊ.ಶಿವಬಸವಯ್ಯ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.ಪರ-ವಿರೋಧ ಪ್ರತಿಭಟನೆ: ಪ್ರೊ.ಶಿವಬಸವಯ್ಯ, ಕುಲಪತಿ ತಳವಾರ್ ಅವರ ಪರ ಮೈಸೂರು ವಿ.ವಿ. ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಪ್ರೊ.ಶಿವಬಸವಯ್ಯ ಅವರನ್ನು ಕೂಡಲೇ ವಜಾ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಘಟಕ ಮೈಸೂರು ವಿ.ವಿ. ಕಾರ್ಯಸೌಧದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದವು.ಪತಿಗೆ ಜೀವಬೆದರಿಕೆ: ಸಂಶೋಧನಾ ವಿದ್ಯಾರ್ಥಿನಿ ಸರಿತಾ ಅವರ ಪತಿ ಬಿ.ಎಂ.ಆಸ್ಪತ್ರೆಯಲ್ಲಿದ್ದಾಗ ಸೋಮವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಬಂದ ನಾಲ್ವರ ಗುಂಪು ಕುಲಪತಿ ಪ್ರೊ.ವಿ.ಜಿ.ತಳವಾರ್ ಅವರ ವಿರುದ್ಧ ನೀಡಲಾಗಿರುವ ದೂರನ್ನು ಹಿಂದಕ್ಕೆ ಪಡೆಯುವಂತೆ ಜೀವಬೆದರಿಕೆ ಹಾಕಿದೆ.‘ಪತ್ನಿಯ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ವೇಳೆ ಪತ್ರಕರ್ತರೆಂದು ಹೇಳಿ ಆಸ್ಪತ್ರೆಯಿಂದ ನನ್ನನ್ನು  ಕೆಳಗೆ ಕರೆತಂದ ನಾಲ್ವರು ಪ್ರೊ.ಶಿವಬಸವಯ್ಯ ಅವರ ವಿರುದ್ಧ ಏನು ಬೇಕಾದರೂ ಮಾಡಿಕೊಳ್ಳಿ. ಆದರೆ ಕುಲಪತಿ ಪ್ರೊ.ತಳವಾರ್ ವಿರುದ್ಧ ನೀಡಲಾಗಿರುವ ದೂರನ್ನು ಹಿಂದಕ್ಕೆ ಪಡೆದುಕೊಳ್ಳಿ. ಇಲ್ಲವಾದಲ್ಲಿ ಮುಂದೆ ಸಂತೋಷವಾಗಿ ಜೀವನ ಸಾಗಿಸಲು ಸಾಧ್ಯವಾಗುವುದಿಲ್ಲ. ಯೋಚಿಸಿ ಎಂದು ಜೀವ ಬೆದರಿಕೆ ಹಾಕಿದರು’ ಎಂದು ಸರಿತಾ ಪತಿ ವಿಜಯಕುಮಾರ್ ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.