ಬುಧವಾರ, ನವೆಂಬರ್ 13, 2019
28 °C

ಲೈಂಗಿಕ ದೌರ್ಜನ್ಯ ತಡೆಗೆ ಹೊಸ ಸಾಧನ

Published:
Updated:

ಅಹಮದಾಬಾದ್:ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು  ಚೆನ್ನೈನ ಸಾಫ್ಟವೇರ್ ಕಂಪೆನಿಯೊಂದು ನವೀನ ತಂತ್ರಜ್ಞಾನಗಳನ್ನೊಳಗೊಂಡ ಮಹಿಳೆಯರ ಒಳ ಉಡುಪಗಳ ಪಟ್ಟಿಯಲ್ಲಿ ಜೋಡಿಸುವಂತಹ ಉಪಕರಣವೊಂದನ್ನು ಅಭಿವೃದ್ಧಿಪಡಿಸಿದೆ.`ಸೊಸೈಟಿ ಹಾರ್ನೆಸಿಂಗ್ ಎಕ್ವಿಪ್‌ಮೆಂಟ್(ಎಸ್‌ಎಚ್‌ಇ) ಎಂಬ ಹೆಸರಿನ ಈ ಉಪಕರಣ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿ ಸುವ ವ್ಯಕ್ತಿಗಳಿಗೆ `ವಿದ್ಯುತ್ ಶಾಕ್' ನೀಡುವ ಜೊತೆಗೆ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯ ಪೋಷಕರಿಗೆ ಹಾಗೂ ಪೊಲೀಸರಿಗೆ ಎಚ್ಚರಿಕೆಯನ್ನು ರವಾನಿಸುತ್ತದೆ.ಒಳ ಉಡುಪುಗಳಿಗೆ ಅಳವಡಿಸುವ ಉಪಕರಣದಲ್ಲಿ  ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಮತ್ತು ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್ ಕಮ್ಯುನಿಕೇಷನ್ (ಜಿಎಸ್‌ಎಂ) ತಂತ್ರಜ್ಞಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಒತ್ತಡವನ್ನು ಗ್ರಹಿಸುವ `ಸೆನ್ಸಾರ್'ಗಳನ್ನು ಜೋಡಿಸಲಾಗಿದೆ. ಇವು ಮಹಿಳೆಯರ ಮೆಲೆ ದೌರ್ಜನ್ಯವೆಸಗುವವರಿಗೆ ತೀಕ್ಷ್ಣವಾದ (3,800 ಕೆ.ವಿ) ವಿದ್ಯುತ್ ಅಲೆಗಳನ್ನು ಪ್ರವಹಿಸುತ್ತದೆ. ಜೊತೆಗೆ ದೌರ್ಜನ್ಯಕ್ಕೊಳಗಾಗುವ ಮಹಿಳೆಯ ಪೋಷಕರಿಗೆ ಮತ್ತು ಪೊಲೀಸರಿಗೆ ಎಚ್ಚರಿಕೆಯ ಮಾಹಿತಿಯನ್ನು ರವಾನಿಸುತ್ತವೆ' ಎಂದು ಎಸ್‌ಎಚ್‌ಇ ಉಪಕರಣದ ಸಹ ಉತ್ಪಾದಕಿ ಮನಿಷಾ ಮೋಹನ್ ತಿಳಿಸಿದ್ದಾರೆ.`ಎಸ್‌ಎಚ್‌ಇ' ಉಪಕರಣದಿಂದ ಹೊರ ಹೊಮ್ಮುವ ವಿದ್ಯುತ್ ಅಲೆಗಳು ಸುಮಾರು 82 ಸಾರಿ ಪ್ರವಹಿಸುತ್ತವೆ. ಇದೊಂದು ಸೂಕ್ಷ್ಮ ಗ್ರಹಿಕೆಯ ಉಪಕರಣವಾಗಿದ್ದು, ಮಹಿಳೆಯರಿಗೆ ರಕ್ಷಾ ಕವಚವಾಗಲಿದೆ' ಎಂದು ಮನಿಷಾ ಅಬಿಪ್ರಾಯಪಟ್ಟಿದ್ದಾರೆ.  `ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಆರಂಭಿಸುತ್ತಿದ್ದಂತೆ, ಉಪಕರಣದಲ್ಲಿರುವ ಸೆನ್ಸಾರ್‌ಗಳು ಕಾರ್ಯಾರಂಭ ಮಾಡುತ್ತವೆ. ಜಿಪಿಎಸ್ ಮತ್ತು ಜಿಎಸ್‌ಎಂ ತಂತ್ರಜ್ಞಾನಗಳು ತುರ್ತು ರಕ್ಷಣಾ ಸಂಖ್ಯೆ `100'ಕ್ಕೆ ಹಾಗೂ ಮಹಿಳೆಯ ಪೋಷಕರಿಗೆ ಎಸ್‌ಎಂಎಸ್ ರವಾನಿಸುತ್ತವೆ' ಎಂದು `ಎಸ್‌ಎಚ್‌ಇ' ಉಪಕರಣದ ಕಾರ್ಯಚಟುವಟಿಕೆಯನ್ನು ಮನಿಷಾ ವಿವರಿಸುತ್ತಾರೆ.ಚೆನ್ನೈನ ಶ್ರೀ ರಾಮಸ್ವಾಮಿ ಮೆಮೊರಿಯಲ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಮೋಹನ್, ತನ್ನ ಇಬ್ಬರು ಸಹೋದ್ಯೋಗಿಗಳಾದ ರಿಂಪಿ ತ್ರಿಪಾಠಿ ಮತ್ತು ನೀಲಾದ್ರಿ ಬಸು ಪಾಲ್ ಅವರೊಂದಿಗೆ `ಎಸ್‌ಎಚ್‌ಇ ಉಪಕರಣ'ದ ಮಾದರಿಯನ್ನು ಅಭಿವೃದ್ಧಿಪಡಿದ್ದಾರೆ. ಸದ್ಯ ಅವರು ಆ ಉಪಕರಣಕ್ಕೆ ಅಂತಿಮ ಸ್ಪರ್ಶ ನೀಡುವಲ್ಲಿ ನಿರತರಾಗಿದ್ದು, ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ವಿನೂತನ ತಂತ್ರಜ್ಞಾನ, ವಿಶೇಷ ವಿನ್ಯಾಸಕ್ಕಾಗಿ ಎಸ್‌ಎಚ್‌ಇ  ಉಪಕರಣಕ್ಕೆ 2013ನೇ ಸಾಲಿನ ಗಾಂಧಿಯನ್ ಯಂಗ್ ಟೆಕ್ನಾಲಜಿ ಪ್ರಶಸ್ತಿ ಲಭ್ಯವಾಗಿದೆ. ಇತ್ತೀಚೆಗೆ ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ವೆುಂಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)