ಲೈಟ್ ಆಫ್

7

ಲೈಟ್ ಆಫ್

Published:
Updated:
ಲೈಟ್ ಆಫ್

ವಸುಂಧರೆಯ ಒಡಲು ಬೇಯುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಬೆವರು ಇಳಿಸುತ್ತ ಜೀವ ಸಂಕುಲ ಸಲಹುತ್ತಿರುವ ಭೂ ತಾಯಿಗೆ ತಂಪು ನೀಡಲು ‘ಡಬ್ಲುಡಬ್ಲುಎಫ್’ ಮುಂದಾಗಿದೆ. ಇಂದು ರಾತ್ರಿ 8.30 ರಿಂದ 9.30ರವರೆಗೆ ಬೆಂಗಳೂರು ಸೇರಿದಂತೆ ಜಗತ್ತಿನ ಹಲವು ನಗರಗಳಲ್ಲಿ ದೀಪಗಳನ್ನು ಆರಿಸಿ ‘ಅರ್ಥ್ ಅವರ್’ ಆಚರಿಸಲಾಗುತ್ತಿದೆ. ಬಿಸಿ ಭೂಮಿ ತಣ್ಣಗಾಗಿಸುವ  ಈ ಪುಟ್ಟ  ಪ್ರಯತ್ನದಲ್ಲಿ ನೀವು ಕೈಜೋಡಿಸುವಿರಿ ತಾನೆ?

ಸೌರವ್ಯೆಹದ ನೀಲಿ ಗ್ರಹ ಭೂಮಿ. ಸೂರ್ಯನಿಂದ ಸಿಡಿದು ಅಸ್ತಿತ್ವ ಕಂಡುಕೊಂಡ ಬಿಸಿ,ಬಿಸಿ ಭೂಮಿ 400 ಕೋಟಿ ವರ್ಷಗಳ ಹಿಂದೆ ತಣ್ಣಗಾಗುತ್ತ ಬಂತು. ಕಣ್ಣು ಹಾಯಿಸಿದಷ್ಟು ಮುಗಿಯದ ಜಲರಾಶಿ. ಶೇ 30ರಷ್ಟು ಮಾತ್ರ ಭೂಭಾಗ. 350 ಕೋಟಿ ವರ್ಷಗಳ ಹಿಂದೆ ಅಲ್ಲೊಂದು ಸಣ್ಣ ಸಂಚಲನ. ನ್ಯೂಕ್ಲಿಯಸ್ ಸಹ ಇಲ್ಲದ ಪ್ರೊಕ್ಯಾರಿಯೊಟಿಕ್ ಜೀವವೊಂದು ಉದ್ಭವಿಸಿತ್ತು.ಕೋಶದ ಮಧ್ಯ ಇದ್ದ ವರ್ಣತಂತುವೇ ಅದರ ಚೈತನ್ಯ ಕೇಂದ್ರ. ಪ್ರೊಕ್ಯಾರಿಯೊಟಿಕ್ ಹಿಂದೆ ಸ್ಪಷ್ಟ ಕೋಶ ಕೇಂದ್ರ ಹೊಂದಿದ ಯುಕ್ಯಾರಿಯೊಟಿಕ್ ಕೋಶಗಳು. ವಿಕಾಸದ ಹಾದಿಯಲ್ಲಿ ಮೇಲೆದ್ದು ಬಂದ ಸಮುದ್ರ ಜೀವಿಗಳು, ಸಸ್ಯ ಸಂಕುಲ, ಕಶೇರುಕಗಳು, ಸಸ್ತನಿಗಳು, ವಾನರ ಸಂತತಿ. 24 ಲಕ್ಷ ವರ್ಷಗಳ ಹಿಂದೆ ಕಗ್ಗತ್ತಲಿನ ಆಫ್ರಿಕಾದಲ್ಲಿ ವಾನರರಿಗಿಂತ ಭಿನ್ನವಾಗಿ ಹುಟ್ಟಿದ ಆದಿ ಮಾನವ.ಆಧುನಿಕ ಮಾನವನ ಈ ಪೂರ್ವಜ ಲಕ್ಷಾಂತರ ವರ್ಷಗಳ ಕಾಲ ನೈಸರ್ಗಿಕ ವಿಕೋಪ, ಕಾಡುಪ್ರಾಣಿಗಳ ಭೀತಿ ಎದುರಿಸಿ ತನ್ನ ಸಂತತಿ ಕಾಪಾಡಿಕೊಂಡು ಬಂದಿದ್ದ. 200 ವರ್ಷಗಳ ಹಿಂದೆಯೂ ಮಾನವ ಸಾವಿರಾರು ವರ್ಷಗಳ ಹಿಂದಿನ ಜೀವನಶೈಲಿಯನ್ನೇ ಅನುಸರಿಸುತ್ತಿದ್ದ. ಆದರೆ, 20ನೇ ಶತಮಾನದಲ್ಲಿ ಸ್ವಾರ್ಥ ಮತ್ತು ಕೊನೆಯಿಲ್ಲದ ದಾಹಕ್ಕೆ ಕೈಗೊಂಬೆಯಾದ. ತನಗೆ ತಂಪು ನೀಡುತ್ತಿದ್ದ, ಮಳೆ ಸುರಿಸುತ್ತಿದ್ದ ಕಾಡು ಕಡಿದ. ಲೋಹ, ಅದಿರಿಗಾಗಿ ಭೂಮಿಯ ಒಡಲು ಬಗೆದ. ಫ್ಯಾಷನ್ ಹುಚ್ಚಿಗಾಗಿ, ಆಹಾರಕ್ಕಾಗಿ ಪ್ರಾಣಿಗಳನ್ನು ಕೊಂದ. ತನ್ನ ಐಷಾರಾಮಕ್ಕಾಗಿ ಇಂಧನಗಳನ್ನು ಮನಬಂದಂತೆ ಉರಿಸಿದ.ಮಹಾನಗರಗಳಲ್ಲಿ ಜನರಿಗಿಂತ ವಾಹನಗಳ ಸಂಖ್ಯೆ ಹೆಚ್ಚಾಯಿತು. ಅವುಗಳ ಹೊಗೆ ನೀಲಾಗಸಕ್ಕೆ ಮಸಿ ಬಳಿಯಿತು. ಹೋಟೆಲ್, ಮಾಲ್‌ಗಳಲ್ಲಿ ಸೂರ್ಯನನ್ನು ಮೀರಿಸುವಂತೆ ಕೊರೈಸುವ ದೀಪ ಉರಿಯಿತು. ತಣ್ಣಗಿನ ಭೂಮಿ ಭುಸುಗುಟ್ಟಿದಳು. ಮತ್ತೆ ಬಿಸಿ ಏರತೊಡಗಿತು. ಧ್ರುವಗಳ ನೀರ್ಗಲ್ಲು ನಿಧಾನಕ್ಕೆ ಕರಗತೊಡಗಿತು. ಸಮುದ್ರ ಮಟ್ಟ ಮೆಲ್ಲಗೆ ಏರಿತು. ಕಳೆದ ಎರಡು ದಶಕಗಳಲ್ಲಿ ನೈಸರ್ಗಿಕ ವಿಕೋಪಗಳ ಸರಮಾಲೆ.ಇತ್ತ ವಿಶ್ವ ನಾಯಕರ ರಕ್ತದೊತ್ತಡವೂ ಏರಿತು. ಹವಾಮಾನ ವೈಪರೀತ್ಯ ತಡೆಯಲು ಸಮಾವೇಶ, ಶೃಂಗಸಭೆ ನಡೆಸಿದರೂ ಪರಿಹಾರ ಶೂನ್ಯ. ಒಂದಿಷ್ಟು ಪರಿಸರ ಪ್ರೇಮಿಗಳು ತಣ್ಣಗೆ ಕುಳಿತು ಆಲೋಚಿಸಿದರು. ಬಿಸಿ ಏರಿಕೆಗೆ ಕಾರಣವಾಗುವ ವಿದ್ಯುತ್ ದೀಪಗಳನ್ನೆಲ್ಲ ವರ್ಷದ ಒಂದು ರಾತ್ರಿ ಒಂದು ಗಂಟೆ ಆರಿಸುವ ಸಂಕಲ್ಪ ತೊಟ್ಟರು. ಪ್ರತಿವರ್ಷ ಮಾರ್ಚ್ ತಿಂಗಳ ಕೊನೆಯ ಶನಿವಾರ ರಾತ್ರಿ 8.30 ರಿಂದ 9.30ರವರೆಗೆ ‘ಅರ್ಥ್ ಅವರ್’ ಆಚರಿಸುವುದೆಂದು ನಿರ್ಧಾರವಾಯಿತು.ಪರಿಸರ ಪ್ರೇಮಿಗಳು ಮತ್ತು ವಿಶ್ವ ವನ್ಯ ನಿಧಿ (ಡಬ್ಲುಡಬ್ಲುಎಫ್) ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 2007ರಲ್ಲಿ ಆರಂಭಿಸಿದ ಈ ಅಭಿಯಾನ ಈಗ ವಿಶ್ವವ್ಯಾಪಿ.ಮೊದಲ ಬಾರಿ ‘ಅರ್ಥ್ ಅವರ್’ ಆಚರಿಸಿದಾಗ ಸಿಡ್ನಿಯ 20 ಲಕ್ಷ ಜನ ಮತ್ತು 2000 ಕಾರ್ಪೊರೇಟ್ ಸಂಸ್ಥೆಗಳು, ಉದ್ದಿಮೆಗಳು ಭಾಗಿಯಾಗಿದ್ದವು. 2010ರಲ್ಲಿ ವಿಶ್ವದಾದ್ಯಂತ 120 ದೇಶಗಳ 4500 ನಗರಗಳು ‘ಅರ್ಥ್ ಅವರ್’ನಲ್ಲಿ ಪಾಲ್ಗೊಂಡಿದ್ದವು.ಪ್ಯಾರಿಸ್‌ನ ಐಫೆಲ್ ಟವರ್, ಸಿಡ್ನಿಯ ಒಪೆರಾ ಹೌಸ್, ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಕಟ್ಟಡ, ದುಬೈನ ಬುರ್ಜ್ ಜಮೆರೈ ಹೋಟೆಲ್ ಸೇರಿದಂತೆ ವಿಶ್ವದ ಅತಿದೊಡ್ಡ ಸ್ಮಾರಕಗಳಲ್ಲಿ, ಐಷಾರಾಮಿ ಹೋಟೆಲ್‌ಗಳಲ್ಲಿ, ಶಾಪಿಂಗ್ ಮಾಲ್‌ಗಳಲ್ಲಿ ಒಂದು ಗಂಟೆ ದೀಪ ಆರಿಸಿ ‘ಅರ್ಥ್ ಅವರ್’ ಆಚರಿಸಲಾಗುತ್ತಿದೆ.2009ರಲ್ಲಿ ಭಾರತ ಮೊದಲ ಬಾರಿ ಈ ಆಚರಣೆಯಲ್ಲಿ ಭಾಗಿಯಾಯಿತು. 2010ರಲ್ಲಿ ದೇಶದ 125 ನಗರಗಳ 50 ಲಕ್ಷ ಜನ ಒಂದು ಗಂಟೆ ಕಾಲ ದೀಪ ಆರಿಸಿ ತಮ್ಮ ಬೆಂಬಲ ಸೂಚಿಸಿದರು. ಬೆಂಗಳೂರಿನ ಹೋಟೆಲ್, ಸಂಘ, ಸಂಸ್ಥೆಗಳು ಇದರಲ್ಲಿ ಹಿಂದೆ ಬಿದ್ದಿಲ್ಲ. ಈ ಬಾರಿ ಮತ್ತಷ್ಟು ಉತ್ಸಾಹದಿಂದ ಶನಿವಾರದ ‘ಅರ್ಥ್ ಅವರ್’ ಆಚರಣೆಗೆ ಸಿದ್ಧತೆ ನಡೆಸಿವೆ.ಭೂಮಿ ಪ್ರೀತಿ ಈ ಒಂದು ಗಂಟೆಗಷ್ಟೇ ಮೀಸಲಾಗದಿರಲಿ. ಸುಸ್ಥಿರ, ಪರಿಸರ ಸ್ನೇಹಿ ಜೀವನಶೈಲಿ ನಿಮ್ಮದಾಗಲಿ ಎಂಬುದು ಈ ವರ್ಷದ ಧ್ಯೇಯವಾಕ್ಯ. ತಾಪಮಾನ ಏರಿಕೆ ಕೇವಲ ಪರಿಸರವಾದಿಗಳಿಗೆ ಸಂಬಂಧಿಸಿದ ವಿಚಾರವಲ್ಲ. ನಮ್ಮ ಸಂತತಿ ಭೂಮಿಯಲ್ಲಿ ಉಳಿದು, ಬಾಳಿ ಬೆಳಗಲು ಪ್ರತಿಯೊಬ್ಬರೂ ಈ ಯತ್ನದಲ್ಲಿ ಕೈಜೋಡಿಸಬೇಕು ಎನ್ನುತ್ತಾರೆ ‘ವಿಶ್ವ ವನ್ಯ ನಿಧಿ’ ಕಾರ್ಯಕರ್ತರು.ನೀವು ಮಾಡಬೇಕಾದುದಿಷ್ಟೇ. ಇಂದು ರಾತ್ರಿ 8.30ಕ್ಕೆ ಸರಿಯಾಗಿ ಮನೆಯ ದೀಪಗಳನ್ನೆಲ್ಲ ಆರಿಸಿ. ಮೂರ್ಖರ ಪೆಟ್ಟಿಗೆ, ತಂಗಳು ಪೆಟ್ಟಿಗೆ, ಗಾಳಿಯಂತ್ರ, ಹವಾ ನಿಯಂತ್ರಕ ಎಲ್ಲವನ್ನೂ ಆಫ್ ಮಾಡಿ. ಅನಗತ್ಯ ದೀಪಗಳನ್ನು ಬಂದ್ ಮಾಡಿ. ಡಿಮ್ಮರ್ ಇದ್ದರೆ ಬಳಸಿ. ಬಿಸಿ ಭೂಮಿ ತಣ್ಣಗಾಗಿಸುವ ಅಳಿಲು ಸೇವೆಯಲ್ಲಿ ನೀವೂ ಭಾಗಿಯಾಗಿ.  

                              

                       

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry