ಶನಿವಾರ, ಏಪ್ರಿಲ್ 17, 2021
31 °C

ಲೈಟ್ ಓಕೆ ಹಾರ್ನ್ ಯಾಕೆ?

ರಮೇಶ್ ಕೆ. Updated:

ಅಕ್ಷರ ಗಾತ್ರ : | |

ಗಲ್ಲಿ ಗಲ್ಲಿಗಳಲ್ಲಿ, ಸೈಲೆನ್ಸರ್ ಕಿತ್ತು ಬರುವಂತೆ ಹೊಗೆ ಉಗುಳುತ್ತಾ ಬೈಕ್ ಓಡಿಸುತ್ತಿದ್ದ ಆ ಯುವಕ ಹಿಂದಿ ಚಿತ್ರಗೀತೆಯ ಟ್ರ್ಯಾಕನ್ನೇ ತನ್ನ ವಾಹನದ ಹಾರ್ನ್ ಆಗಿಸಿಕೊಂಡು, ಗಲ್ಲಿಗೆಲ್ಲಾ ಕೇಳುವಂತೆ ಹೊಮ್ಮಿಸುತ್ತಿದ್ದ. ಆದರೆ ಶಬ್ದದ ಪ್ರಮಾಣ ಜನವಸತಿ ಪ್ರದೇಶಗಳಲ್ಲಿ ಶೇ 70ರಿಂದ 75ರಷ್ಟಾಗಿದ್ದು, ಇದು ಅಪಾಯಕಾರಿ ಮಟ್ಟ ತಲುಪಿದೆ ಎಂಬುದು ಅವನಿಗೆ ಗೊತ್ತೇ ಇಲ್ಲ.



ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹಸಿರು ದೀಪ ಹೊತ್ತಿಕೊಳ್ಳಲು ಇನ್ನೇನು ಒಂದೆರಡು ಸೆಕೆಂಡ್‌ಗಳು ಬಾಕಿ ಇರುವಾಗಲೇ ಪೋಂ... ಪೋಂ... ಶಬ್ದ ಕಿವಿಗಪ್ಪಳಿಸುತ್ತದೆ. ಇದು ಮಾಮೂಲು ಎನ್ನುವ ಭಾವನೆ ಕೆಲವರಲ್ಲಿ ಇದೆ.



ಅನಗತ್ಯವಾಗಿ ಇಂಥ ಶಬ್ದಮಾಡುವ ವಾಹನ ಚಾಲಕರು ಇತ್ತ ಗಮನಿಸಿ....

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದಲ್ಲಿ ಶಬ್ದಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಪ್ರತಿ ಸೋಮವಾರ ಆಚರಿಸಲು ನಿರ್ಧರಿಸಿರುವ `ಹಾರ್ನ್ ರಹಿತ ದಿನ~ಕ್ಕೆ ವಾಹನ ಚಾಲಕರಿಂದ ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ.



ದೇಶದಲ್ಲೇ ಅತಿ ಹೆಚ್ಚು ಶಬ್ದ ಮಾಲಿನ್ಯ ಹೊಂದಿರುವ ಮಹಾನಗರಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಉದ್ಯಾನ ನಗರಿ ಬೆಂಗಳೂರಿನಲ್ಲಿ ಶಬ್ದ ಮಾಲಿನ್ಯದ ಪ್ರಮಾಣ 65ಕ್ಕೂ ಹೆಚ್ಚು ಡೆಸಿಬಲ್‌ಗೆ ಏರಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ ಪ್ರತಿ ಸೋಮವಾರ `ಹಾರ್ನ್ ರಹಿತ ದಿನ~ ಆಚರಿಸಲು ನಿರ್ಧರಿಸಿದೆ. ಈಗಾಗಲೇ ನಗರದಲ್ಲೇ ಹೆಚ್ಚು ಶಬ್ದಮಾಲಿನ್ಯವಿರುವ ಕೋರಮಂಗಲದಲ್ಲಿ ಹಾರ್ನ್ ರಹಿತ ಸೋಮವಾರ ಆಂದೋಲನ ಆರಂಭಿಸಲಾಗಿದ್ದು, ಸ್ವಲ್ಪಮಟ್ಟಿಗೆ ಶಬ್ದಮಾಲಿನ್ಯ ಕಡಿಮೆಯಾಗಿದೆ ಎಂಬ ಅಂಶವನ್ನು ತಿಳಿಸುತ್ತಾರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನಾಚಾರ್ಯ.



`ಈ ಕಾರ್ಯಕ್ರಮವನ್ನು ಉತ್ತೇಜಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ನಮ್ಮ ವಿಭಾಗದಿಂದ ಒಬ್ಬೊಬ್ಬರು ಪ್ರತಿನಿಧಿಗಳನ್ನು ಆರ್‌ಟಿಓ ಕಚೇರಿಗಳಿಗೆ ಕಳುಹಿಸಲಾಗುತ್ತದೆ. ಚಾಲನಾ ಪರವಾನಗಿ ಪಡೆಯಲು ಬರುವ ಅಭ್ಯರ್ಥಿಗಳಿಗೆ ಈ ಬಗ್ಗೆ ಶಿಕ್ಷಣ ನೀಡಲಾಗುತ್ತದೆ. ಜೊತೆಗೆ ವಾಹನಗಳ ತಯಾರಿಕೆ ಕಂಪೆನಿಗಳಿಗೆ ಶಬ್ದದ ಸಾಮರ್ಥ್ಯವನ್ನು 85 ಡೆಸಿಬಲ್‌ಗಿಂತ ಹೆಚ್ಚಿಗೆ ಕೊಡಬೇಡಿ ಎಂದು ತಿಳಿಸಲಾಗುತ್ತದೆ~ ಎಂದು ಮಾಹಿತಿ ನೀಡುತ್ತಾರೆ.



ಪರೀಕ್ಷೆಗೆ ಒಳಗಾಗಲು ಬರುವ ವಾಹನ ರಿವರ್ಸ್ ಹಾರ್ನ್ ಸೇರಿದಂತೆ, 85 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಮಾಡುವ ವಾಹನಗಳಿಗೆ ಅನುಮತಿ ನೀಡದಂತೆ ಆರ್‌ಟಿಓ ಕಚೇರಿಗೆ ಮಾಹಿತಿ ನೀಡಲಾಗುತ್ತದೆ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆಗೂಡಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಟ್ಯಾಕ್ಸಿಗಳು, ಹಳೆ ಆಟೋಗಳಿಂದ ಅತಿಯಾದ ಶಬ್ದಮಾಲಿನ್ಯವಾಗುತ್ತಿದೆ.

ಇನ್ನೂ ಕೆಲವರು ಸೈಲೆನ್ಸರ್‌ನಿಂದ ಸೌಂಡ್ ಫಿಲ್ಟರ್ ತೆಗೆದು ವಾಹನ ಚಲಿಸುತ್ತಾರೆ. ಇದರಿಂದಾಗಿ ಅತಿಯಾದ ಶಬ್ದವಾಗುತ್ತದೆ. ಇದು ವಯೋವೃದ್ಧರು, ಮಕ್ಕಳು, ಹೃದ್ರೋಗಿಗಳಿಗೆ ತೊಂದರೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಸಾರ್ವಜನಿಕರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ.



ಭಾರತ, ಪಾಕಿಸ್ತಾನ, ಈಜಿಪ್ಟ್ ದೇಶಗಳಲ್ಲಿ ಹೆಚ್ಚು ಶಬ್ದಮಾಲಿನ್ಯವಾಗುತ್ತಿರುವುದು ಕಂಡು ಬರುತ್ತಿದೆ. ನಗರದಲ್ಲೂ ವರ್ಷದಿಂದ ವರ್ಷಕ್ಕೆ ಶಬ್ದಮಾಲಿನ್ಯ ಹೆಚ್ಚಾಗುತ್ತಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ 90ಡೆಸಿಬಲ್ ಇದ್ದು, ಹೆಬ್ಬಾಳದಲ್ಲಿ 75ಡೆಸಿಬಲ್, ಹಲಸೂರಿನಲ್ಲಿ 73ಡೆಸಿಬಲ್‌ಗಳಷ್ಟು ಶಬ್ದ ಹೊರಹೊಮ್ಮುತ್ತಿದೆ. ವಾಹನಗಳ ಹೆಚ್ಚಳದಿಂದ ಮಾಲಿನ್ಯ ಹೆಚ್ಚಾಗುತ್ತಿದ್ದು, ವಾಹನ ಚಾಲಕರೇ ಜಾಗೃತರಾಗಬೇಕು ಎಂದು ಹೇಳುತ್ತಾರೆ.



ವಾಣಿಜ್ಯ ಪ್ರದೇಶಗಳಲ್ಲಿ ಸರಾಸರಿ 90ರಿಂದ 95 ಡೆಸಿಬಲ್‌ನಷ್ಟು ಶಬ್ದ ಹೊರಹೊಮ್ಮುತ್ತಿರುವುದರಿಂದ ಸಾಮಾನ್ಯವಾಗಿ ಶಬ್ದಮಾಲಿನ್ಯ ಪ್ರಮಾಣ ಅಧಿಕವಾಗಿದೆ. ಈ ಪ್ರಮಾಣ ಶೇ 65ರಷ್ಟು ಇರಬೇಕು. ಅದಕ್ಕಾಗಿ ವಾಹನ ಚಾಲಕರು ಸಹಕಾರ ನೀಡಬೇಕಿದೆ.



ಕಾನೂನು ಇಲ್ಲ



`ಹಾರ್ನ್ ಮಾಡುವುದನ್ನು ತಡೆಯಲು ಯಾವುದೇ ಕಾನೂನು ಇಲ್ಲ. ಆದರೆ ಕರ್ಕಶ ಅದರಲ್ಲೂ ಮ್ಯೂಸಿಕಲ್ ಹಾರ್ನ್‌ಗಳನ್ನು ನಿಷೇಧ ಮಾಡಲಾಗುತ್ತಿದೆ. ಇದುವರೆಗೆ 12,716 ಪ್ರಕರಣಗಳನ್ನು ದಾಖಲಿಸಲಾಗಿದ್ದು, ತಿಂಗಳಿಗೆ 1200 ಪ್ರಕರಣಗಳು ದಾಖಲಾಗುತ್ತಿವೆ. ಶಾಲೆ, ಆಸ್ಪತ್ರೆ ಆವರಣಗಳಲ್ಲಿ ಹಾರ್ನ್ ಮಾಡಿದವರಿಗೆ ದಂಡವನ್ನು ವಿಧಿಸಲಾಗಿದೆ. ಆದರೆ ಹಾರ್ನ್ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ.

ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಹಾಗಾಗಿ ವಾಹನ ಚಾಲಕರೇ ಅನಿಯಮಿತ, ಅನವಶ್ಯಕವಾಗಿ ಹಾರ್ನ್ ಮಾಡದೇ ಶಬ್ದಮಾಲಿನ್ಯ ನಡೆಗಟ್ಟಲು ಸಹಕರಿಸಬೇಕು~ ಎಂದು ಸಲಹೆ ನೀಡುತ್ತಾರೆ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎ. ಸಲೀಂ.

“

ಪೀಕ್ ಅವರ್‌ನಲ್ಲಿ ಹೆಚ್ಚಾಗಿ ಹಾರ್ನ್ ಮಾಡುತ್ತಾರೆ. ಕಾರುಗಳಿಗೆ ಹಾಕುವ ಹಾರ್ನ್‌ಗಳನ್ನು ಬೈಕ್‌ಗಳಲ್ಲಿ ಅಳವಡಿಸಿಕೊಂಡು ಕಿರಿಕಿರಿ ಮಾಡುತ್ತಾರೆ. ಆಸ್ಪತ್ರೆ, ಶಾಲೆ ಆವರಣಗಳೆನ್ನದೆ ಎಲ್ಲಂದರಲ್ಲಿ ಅತಿಯಾಗಿ ಹಾರ್ನ್ ಮಾಡುತ್ತಾರೆ. ನೋವು ನೋಡಿದರೆ ಅಂಥವರ ವಿರುದ್ದ `ಸಿಲ್ ಹಾರ್ನ್~ ಪ್ರಕರಣ ದಾಖಲಿಸಿ, ನೂರು ರೂಪಾಯಿ ದಂಡವನ್ನು ವಿಧಿಸುತ್ತೇವೆ.

ಆದರೆ ವಾಹನಗಳು ಹೆಚ್ಚಿರುವಾಗ ಯಾವ ವಾಹನದಿಂದ ಹಾರ್ನ್ ಬಂತು ಎಂಬುದನ್ನು ಗುರುತಿಸುವುದು ಕಷ್ಟ. ಹಾಗಾಗಿ ಸಾರ್ವಜನಿಕರಲ್ಲೇ ಅರಿವು ಇರಬೇಕು. ಕರ್ಕಶವಾಗಿ ಹಾರ್ನ್ ಮಾಡುವವರ ವಿರುದ್ಧ ಹೆಚ್ಚು ಹೆಚ್ಚು ಪ್ರಕರಣ ದಾಖಲಿಸದರೆ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಬರುತ್ತದೆ” ಎಂದು ಶಿವಾಜಿನಗರದ ಸಂಚಾರಿ ಪೊಲೀಸ್‌ರೊಬ್ಬರು ವಾಸ್ತವವನ್ನು ಬಿಚ್ಚಿಡುತ್ತಾರೆ.



ಕೆಲ ವಾಹನಗಳ ಹಿಂಭಾಗದಲ್ಲಿ `ಶಬ್ದಮಾಡಿ ದಾರಿ ಕೇಳಿ~ ಎಂಬ ಘೋಷಣೆ ರಾರಾಜಿಸುತ್ತಿರುತ್ತದೆ. ಆದರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಲೈಟ್‌ಗಳನ್ನು ಬಳಸಿ, ಹಾರ್ನ್ ನಿಯಂತ್ರಿಸಿ ಎಂದು ಹೇಳುತ್ತಿದೆ...

ವಾಹನ ಚಾಲಕರ ಅಭಿಪ್ರಾಯ ಹೀಗಿದೆ...

`ನಾನು ಅಗತ್ಯವಿದ್ದಾಗ ಮಾತ್ರ ಹಾರ್ನ್ ಮಾಡುತ್ತೇನೆ. ಆದರೆ ಸೋಮವಾರ ಮಾತ್ರ ಹಾರ್ನ್ ಮಾಡಬಾರದೆಂಬ ನಿರ್ಬಂಧ ಸರಿಯಲ್ಲ.  ನಿಷೇಧಿತ ಪ್ರದೇಶದಲ್ಲಿ ಹಾರ್ನ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಶಬ್ದಮಾಲಿನ್ಯ ನಿಯಂತ್ರಣಕ್ಕೆ ಬರುತ್ತದೆ. ಹಾರ್ನ್ ಮಾಡದೆ ಇರಲು ಸಾಧ್ಯವಿಲ್ಲ ಎಂದು ನಗುತ್ತಲೇ ಉತ್ತರಿಸುತ್ತಾರೆ ಯಶವಂತಪುರದ ಕಾರು ಚಾಲಕ ಯುವರಾಜ್.

 

ಸಿಗ್ನಲ್‌ಗಳಲ್ಲಿ ಅನಿಯಮಿತವಾಗಿ ಹಾರ್ನ್ ಮಾಡುತ್ತಾರೆ. ಮನೆಗೆ ಅಥವಾ ಕಚೇರಿಗೆ ಹೋಗುವ ಧಾವಂತದಲ್ಲಿ ವಾಹನದಟ್ಟಣೆ ಪ್ರದೇಶದಲ್ಲೂ ಕಿವಿ ತಮಟೆ ಕಿತ್ತು ಬರುವಂತೆ  ಹಾರ್ನ್ ಅಬ್ಬರವಿರುತ್ತದೆ. ಶೋಕಿಗಾಗಿ ಹಾರ್ನ್ ಹಾಕಿಸುತ್ತಾರೆ. ಪ್ರಾಣಿಗಳ ಮಾಡುವ ಸದ್ದುಗಳ ರೀತಿಯ ಹಾರ್ನ್‌ಗಳು ಕಿವಿಗೆ ಕರ್ಕಶವಾಗಿರುತ್ತವೆ. ಆದ್ದರಿಂದ ಅವಶ್ಯಕತೆ ಇದ್ದಲ್ಲಿ ಮಾತ್ರ ಹಾರ್ನ್ ಬಳಸಬೇಕು. ಸಂಪೂರ್ಣವಾಗಿ ಹಾರ್ನ್ ಇಲ್ಲದೆ ವಾಹನ ಚಲಾಯಿಸುವುದು ಕಷ್ಟ.



-ಮಾರುತಿ, ಮಾರುತಿ ಕಾರ್‌ಕೇರ್ ಮಾಲೀಕ, ಪೀಣ್ಯ 1ನೇ ಹಂತ.

 

 

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.