`ಲೈಫ್ ಆಫ್ ಪೈ'ನಲ್ಲಿ ಹುಬ್ಬಳ್ಳಿ ಹುಡುಗ!

7

`ಲೈಫ್ ಆಫ್ ಪೈ'ನಲ್ಲಿ ಹುಬ್ಬಳ್ಳಿ ಹುಡುಗ!

Published:
Updated:
`ಲೈಫ್ ಆಫ್ ಪೈ'ನಲ್ಲಿ ಹುಬ್ಬಳ್ಳಿ ಹುಡುಗ!

ಹುಬ್ಬಳ್ಳಿ:  ಜಗತ್ತಿನಾದ್ಯಂತ ಈಚೆಗೆ ಬಿಡುಗಡೆಯಾದ ಹಾಲಿವುಡ್ 3-ಡಿ  ಸಿನಿಮಾ `ಲೈಫ್ ಆಫ್ ಪೈ' ನೀವು ನೋಡಿದ್ದರೆ ಅದರ ಅನಿಮೇಶನ್ ಕಾರ್ಯಕ್ಕೆ ತಲೆದೂಗುತ್ತೀರಿ. ಹಾಗೆ ತಲೆದೂಗುವ ಹಾಗೆ ಮಾಡಿದ ತಂಡದಲ್ಲಿದ್ದವರು ಸದ್ಯ ಮುಂಬೈಯಲ್ಲಿ ನೆಲೆಸಿರುವ, ಹುಬ್ಬಳ್ಳಿಯ ಹುಡುಗ ತನ್ಸೀರ್ ಅಹ್ಮದ್ ಬಂಗ್ಲೆವಾಲೆ.ಆ ಸಿನಿಮಾದಲ್ಲಿ ಹುಲಿಯೊಟ್ಟಿಗೆ ಪೈ, ನೌಕೆಯಲ್ಲಿ ಇರುವಾಗ ಉದ್ದ ಕೋಲಿನಿಂದ ಅದನ್ನು ಹೆದರಿಸುತ್ತ, ಜೋರಾಗಿ ಕಿರಿಚಾಡುತ್ತಾನೆ. ಆಗ ಹುಲಿಯೇ ಹೆದರುತ್ತದೆ. ಈ ದೃಶ್ಯವನ್ನು ಅನಿಮೇಟ್ ಮಾಡಿದವರು ತನ್ಸೀರ್. ಸಿನಿಮಾದ ಕೊನೆಯ ದೃಶ್ಯದಲ್ಲಿ ಬರುವ ವಿಚಿತ್ರ ಪ್ರಾಣಿಗಳ ಅನಿಮೇಟ್ ಮಾಡಿದ್ದು ಕೂಡಾ ಅವರೇ. ಇದಕ್ಕಾಗಿ ಅವರು ಆರು ತಿಂಗಳು ಶ್ರಮಿಸಿದ್ದಾರೆ. ನಗರದ ವಿಜಯ ಮಹಾಂತೇಶ ಕಲಾ ಮಹಾವಿದ್ಯಾಲಯದಲ್ಲಿ ಹಿರಿಯ ಉಪನ್ಯಾಸಕರಾಗಿರುವ ಎಂ.ಜೆ. ಬಂಗ್ಲೆವಾಲೆ ಅವರ ಪುತ್ರರಾದ 28 ವರ್ಷದ ತನ್ಸೀರ್, ಗದಗದಲ್ಲಿ `ಬಿಎಫ್‌ಎ' ಯಲ್ಲಿ (ಬ್ಯಾಚಲರ್ ಆಫ್ ಫೈನ್ ಆರ್ಟ್ಸ್ ಅಪ್ಲೈಡ್) ಮೊದಲ ರ‌್ಯಾಂಕ್‌ನೊಂದಿಗೆ ಪದವಿ ಪಡೆದರು. ನಂತರ ಮುಂಬೈಯಲ್ಲಿಯ ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಕೇತನ್ ಮೆಹ್ತಾ ಅವರ `ಮ್ಯಾಕ್' ಸ್ಟುಡಿಯೋದಲ್ಲಿ ಅನಿಮೇಶನ್ ಕೋರ್ಸ್ ಸೇರಿದರು.ಅದು ಮುಗಿಯುವ ಮುನ್ನವೇ ಅಲ್ಲಿಯ ರಿದಮ್ ಅಂಡ್ ಹ್ಯೂಸ್ ಅನಿಮೇಶನ್ ಸ್ಟುಡಿಯೋದವರು ಸಂದರ್ಶನಕ್ಕೆ ಆಹ್ವಾನಿಸಿದರು. ಅಲ್ಲಿ ಜೂನಿಯರ್ ಅನಿಮೇಟರ್ ಆಗಿ ಆಯ್ಕೆಯಾದರು. ಅವರು ಅನಿಮೇಟ್ ಮಾಡಿದ ಮೊದಲ ಹಾಲಿವುಡ್ ಸಿನಿಮಾ `ಹಲ್ಕ್-2'. ನಂತರ `ಮಮ್ಮಿ-2', `ಮಮ್ಮಿ-3', `ಇನ್‌ಕ್ರೆಡಿಬಲ್ ಹಲ್ಕ್', `ನೈಟ್ ಆ್ಯಟ್ ದಿ ಮ್ಯೂಜಿಯಂ-2' ಸಿನಿಮಾಗಳಲ್ಲಿ ಕಾರ್ಯ ನಿರ್ವಹಿಸಿದರು. `ಆ್ಯಲ್ವಿನ್ ಅಂಡ್ ದಿ ಚಿಪ್ ಮಂಕ್ಸ್-2 ಅಂಡ್ 3' ಸಿನಿಮಾದಲ್ಲಿ ಅಳಿಲಿನ ಅನಿಮೇಶನ್ ಮಾಡಿದವರು ತನ್ಸೀರ್. ಅಲ್ಲದೇ `ಯೋಗಿ ಬೇರ್' ಸಿನಿಮಾಕ್ಕೂ ಅನಿಮೇಟರ್ ಆಗಿ ದುಡಿದರು. ಅವರ ಕಾರ್ಯದಕ್ಷತೆ ನೋಡಿ, ಅಮೆರಿಕೆಯ ರಿದಮ್ ಅಂಡ್ ಹ್ಯೂಸ್ ಕಂಪೆನಿಯು ಆಹ್ವಾನಿಸಿತು. ಅದರ ನಿರ್ಮಾಣದ `ಗೋಲ್ಡನ್ ಕಂಪಾಸ್' ಎಂಬ ಹಾಲಿವುಡ್ ಸಿನಿಮಾಕ್ಕೆ 20 ಜನರ ತಂಡದ ನಾಯಕರಾಗಿ ತನ್ಸೀರ್ ಆಯ್ಕೆಯಾದರು. 2007ರಲ್ಲಿ ಬಿಡುಗಡೆಗೊಂಡ `ಗೋಲ್ಡನ್ ಕಂಪಾಸ್' ಸಿನಿಮಾ 2008ರಲ್ಲಿ ಆಸ್ಕರ್ ಪ್ರಶಸ್ತಿ ಪಡೆಯಿತು.`ಸದ್ಯ ಬಿಡುಗಡೆಗೊಂಡಿರುವ `ಲೈಫ್ ಆಫ್ ಪೈ' ಸಿನಿಮಾವನ್ನು ಆಸ್ಕರ್ ಪ್ರಶಸ್ತಿ ಪುರಸ್ಕೃತ ಆ್ಯಂಗ್ಲಿ ನಿರ್ದೇಶಿಸಿದ್ದಾರೆ. ಅವರ ಸಿನಿಮಾಕ್ಕೆ ಅನಿಮೇಟ್ ಮಾಡಿದ್ದು ಬಹಳ ಖುಷಿ ಕೊಟ್ಟಿದೆ' ಎನ್ನುತ್ತಾರೆ ತನ್ಸೀರ್.  ಕಳೆದ ವರ್ಷದಿಂದ ಧಾರವಾಡದ ಕೊಪ್ಪದಕೆರೆಯಲ್ಲಿ ವಾಸಿಸುವ ತನ್ಸೀರ್ ಭಾನುವಾರ ಹುಬ್ಬಳ್ಳಿಗೆ ಬಂದಿದ್ದರು.`ಸಂದರ್ಶನದಲ್ಲಿ ಅನಿಮೇಶನ್ ಕುರಿತು ಷೋ ರೀಲ್ ತೋರಿಸಬೇಕು. `ಹೈಡ್ ಅಂಡ್ ಸೀಕ್' ಎಂಬ ಅನಿಮೇಟ್ ಮಾಡಿ, ಎದೆಬಡಿತವನ್ನು ಪರಿಣಾಮಕಾರಿಯಾಗಿ ಸೆರೆ ಹಿಡಿದಿದ್ದು ಸಂದರ್ಶಕರಿಗೆ ಮೆಚ್ಚುಗೆಯಾಯಿತು. ಹೀಗಾಗಿ ಆಯ್ಕೆಯಾದೆ' ಎನ್ನುತ್ತಾರೆ ಲೀಡ್ ಅನಿಮೇಟರ್ ಆಗಿ ಕಾರ್ಯ ನಿರ್ವಹಿಸುವ ತನ್ಸೀರ್. `ಚಿತ್ರಕಲೆ ಕಲಿತ ನಂತರ ಅನೇಕ ಉದ್ಯೋಗಾವಕಾಶಗಳಿವೆ. ಆದರೆ ಶ್ರಮಪಡಬೇಕು. ಕೇವಲ ಡ್ರಾಯಿಂಗ್ ಶಿಕ್ಷಕರಾಗಬೇಕಿಲ್ಲ. ಹೆಚ್ಚಿನದನ್ನು ಸಾಧಿಸಲು ಸಾಧ್ಯ. ತಾಂತ್ರಿಕವಾಗಿ ಪರಿಣತರಾದರೆ ಹೆಚ್ಚು ಅವಕಾಶಗಳಿವೆ' ಎನ್ನುವ ಸಲಹೆ ಅವರದು.`ನಮ್ಮ ಇಬ್ಬರು ಪುತ್ರರಲ್ಲಿ ತನ್ಸೀರ್ ಎರಡನೆಯವನು. ಏನಾದರೂ ಸಾಧಿಸಬೇಕೆಂದೇ ಮುಂಬೈಗೆ ಕಳಿಸಿದ್ದೆ. ಏಕೆಂದರೆ 2005ರಲ್ಲಿ ರೂ 1.20 ಲಕ್ಷ  ಶುಲ್ಕ ಕೊಡಬೇಕಿತ್ತು. ಕಷ್ಟವಾದರೂ ಕಳಿಸಲು ಒಪ್ಪಿದೆ. ಕೋರ್ಸ್ ಮುಗಿಯುವ ಮುನ್ನವೇ ಉದ್ಯೋಗಕ್ಕೆ ಸೇರಿದ್ದು ಖುಷಿ ಕೊಟ್ಟಿತು' ಎನ್ನುತ್ತಾರೆ ಬಂಗ್ಲೆವಾಲೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry