ಶನಿವಾರ, ಮಾರ್ಚ್ 6, 2021
21 °C
ಯುದ್ಧಪೀಡಿತ ದೇಶದಲ್ಲಿ ಒಂಬತ್ತು ವರ್ಷಗಳ ಕಾಲ ಸೇವೆ

ಲೈಬೀರಿಯಾದಲ್ಲಿ ಭಾರತೀಯ ಮಹಿಳಾ ಪಡೆಗೆ ಬೀಳ್ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೈಬೀರಿಯಾದಲ್ಲಿ ಭಾರತೀಯ ಮಹಿಳಾ ಪಡೆಗೆ ಬೀಳ್ಕೊಡುಗೆ

ವಿಶ್ವಸಂಸ್ಥೆ (ಪಿಟಿಐ): ಯುದ್ಧಪೀಡಿತ ಆಫ್ರಿಕನ್‌ ರಾಷ್ಟ್ರ ಲೈಬೀರಿಯಾದಲ್ಲಿ ಒಂಬತ್ತು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಮೊದಲ ಭಾರತೀಯ ಮಹಿಳಾ ಶಾಂತಿಪಾಲನಾ ಪಡೆಗೆ ಲೈಬೀರಿಯಾದ ಅಧ್ಯಕ್ಷೆ ಎಲೆನ್‌ ಜಾನ್ಸನ್‌ ಸರ್‌ಲೀಫ್‌ ಧನ್ಯವಾದ ಸಲ್ಲಿಸಿದ್ದಾರೆ.ಕಾಂಗೊ ನಗರದ  ಹೊರವಲಯದ ಮನ್ರೋವಿಯಾದಲ್ಲಿ ನಡೆದ ಶಾಂತಿಪಾಲನಾ ಪಡೆಯ ಗೌರವ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಎಲೆನ್‌, ‘ಭಾರತೀಯ ಮಹಿಳಾ ಶಾಂತಿಪಡೆ ನೀಡಿರುವ ಕೊಡುಗೆಯಿಂದಾಗಿ ಲೈಬೀರಿಯಾದ ಮಹಿಳೆಯರಲ್ಲಿ ವೃತ್ತಿಪರತೆ ಮೂಡಿದೆ. ಅಲ್ಲದೇ, ರಾಷ್ಟ್ರೀಯ ಭದ್ರತೆಯಲ್ಲಿ ಮಹಿಳೆಯರು ತೊಡಗಿಕೊಳ್ಳಲು ಸ್ಫೂರ್ತಿ ನೀಡಿದೆ. ಈ ನಿಟ್ಟಿನಲ್ಲಿ ನಾವು ಎಂದಿಗೂ ಪಡೆಗೆ ಆಭಾರಿಯಾಗಿರುತ್ತೇವೆ’ ಎಂದು ಅವರು ಶ್ಲಾಘಿಸಿದರು.‘ನಮ್ಮ ದೇಶದ ಭದ್ರತಾ ಪಡೆಗಳಲ್ಲಿ ಈಗ ಶೇಕಡ 17ರಷ್ಟು ಮಹಿಳೆಯರಿ ದ್ದಾರೆ. ಇದು ಸಾಧ್ಯವಾದುದು ನಿಮ್ಮಿಂದ. ಕೆಲವೇ ವರ್ಷಗಳ ಹಿಂದೆ ಈ ಪಡೆಗಳಲ್ಲಿ ಬೆರಣಿಕೆಯಷ್ಟು ಮಾತ್ರ ಮಹಿಳೆಯರಿದ್ದರು. ಆದರೆ, ಭಾರತೀಯ ಮಹಿಳಾ ಶಾಂತಿಪಡೆಗಳ ಸೇವೆ, ಕರ್ತವ್ಯ ಲೈಬೀರಿಯಾದ ಮಹಿಳೆಯರ ಮೇಲೆ ಪ್ರಭಾವ ಬೀರಿದ್ದು, ಅವರೂ ನಿಮ್ಮಂತೆಯೇ ದೇಶರಕ್ಷಣೆಗೆ ಮುಂದಾಗುತ್ತಿದ್ದಾರೆ’ ಎಂದು ಅವರು ಮೆಚ್ಚುಗೆ ಸೂಚಿಸಿದರು.ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಫರೀದ್‌ ಜರೀಫ್ ಮಾತನಾಡಿ, ‘ಲೈಬೀರಿಯಾದ ಬೆಂಬಲಾರ್ಥವಾಗಿ ಭಾರತೀಯ ಮಹಿಳಾ ಶಾಂತಿ ಪಾಲನಾ ಪಡೆ, ಸತ್ಯ ಮತ್ತು ಸೇವಾಬದ್ಧತೆಯ ಪರಂಪರೆಯನ್ನು ಹುಟ್ಟುಹಾಕಿದೆ’ ಎಂದರು. ‘ಲೈಬೀರಿಯಾದಲ್ಲಿ ಶಾಂತಿಸ್ಥಿರತೆ ಸ್ಥಾಪಿಸುವಲ್ಲಿ ಹಾಗೂ ಇಲ್ಲಿನ ಪೊಲೀಸರಲ್ಲಿ ಆತ್ಮವಿಶ್ವಾಸ, ಸಾಮರ್ಥ್ಯ ರೂಪಿಸುವಲ್ಲಿ ಮಹಿಳಾಪಡೆಗಳು ದೊಡ್ಡ ಕೊಡುಗೆ ನೀಡಿವೆ’ ಎಂದು ಶ್ಲಾಘಿಸಿದರು.ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಇತಿಹಾಸದಲ್ಲಿ ಮೊದಲ ಮಹಿಳಾ ಶಾಂತಿಪಾಲನಾ ಪಡೆಯೂ ಆಗಿರುವ ಭಾರತೀಯ ಪೊಲೀಸ್‌ ಘಟಕ (ಎಫ್‌ಪಿಯು), 2007ರಿಂದ ಲೈಬೀರಿಯಾದಲ್ಲಿ ಕರ್ತವ್ಯ ನಿರ್ವಹಿಸಿದೆ. ಇದೇ ವರ್ಷ ಫೆಬ್ರುವರಿ 14ರಂದು ಅಲ್ಲಿಂದ ನಿರ್ಗಮಿಸಲಿದೆ. ರಾಷ್ಟ್ರೀಯ ಭದ್ರತೆಯ ಸಂಪೂರ್ಣ ಜವಾಬ್ದಾರಿ ನಿಭಾಯಿಸಲು ಲೈಬೀರಿಯಾ ಸಿದ್ಧವಾಗಿರುವ ಕಾರಣ, ಮಹಿಳಾ ಶಾಂತಿಪಡೆ ಭಾರತಕ್ಕೆ ಹಿಂತಿರುಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.