ಮಂಗಳವಾರ, ನವೆಂಬರ್ 12, 2019
28 °C

ಲೋಕಕಲ್ಯಾಣಕ್ಕಾಗಿ ಅಡ್ಡಪಲ್ಲಕ್ಕಿ ಮಹೋತ್ಸವ

Published:
Updated:

ಹಾವೇರಿ: ಲೋಕ ಕಲ್ಯಾಣಾರ್ಥವಾಗಿ ಶ್ರೀ ಮದ್ ಉಜ್ಜಯನಿ, ಶ್ರೀ ಮದ್ ಶ್ರೀಶೈಲ ಹಾಗೂ ಶ್ರೀ ಮತ್ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗುರುವಾರ ಭಕ್ತಿಭಾವ ಹಾಗೂ ಸಡಗರ ಸಂಭ್ರಮದಿಂದ ನಗರದಲ್ಲಿ ಜರುಗಿತು.ನಗರದ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಭಕ್ತರು ಶ್ರೀಗಳಿಗೆ ಜೈಕಾರ ಹಾಕಿದರಲ್ಲದೇ, ರಸ್ತೆ ಇಕ್ಕೆಲಗಳಲ್ಲಿ ನಿಂತ ಸಹಸ್ರಾರು ಭಕ್ತರು ನಿಂತ ಜಾಗದಿಂದಲೇ ಶ್ರೀಗಳಿಗೆ ನಮಸ್ಕರಿಸಿದರೆ, ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿ ಆಸೀನರಾದ ಮೂವರು ಶ್ರೀಗಳು ಭಕ್ತರತ್ತ ಕೈಬೀಸಿ ಆಶೀರ್ವಾದ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.ಸುಮಾರು ಮೂರು ಗಂಟೆಗಳ ಕಾಲ ನಡೆದ ಅಡ್ಡಪಲ್ಲಕ್ಕಿ ಉತ್ಸವವು ನಗರದ ಮಹಾತ್ಮಾಗಾಂಧಿ ವೃತ್ತ, ಎಂ.ಜಿ.ರಸ್ತೆ, ಮಾರುಕಟ್ಟೆ ರಸ್ತೆ ಮೂಲಕ ಹಾಯ್ದು ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಆವರಣಕ್ಕೆ ತೆರಳಿತು. ಮೆರವಣಿಗೆಯಲ್ಲಿ ಮುತ್ತೈದೆಯರು ಕುಂಭ ಹೊತ್ತು ಸಾಗಿದರೆ, ಬಾಜಾ ಭಜಂತ್ರಿ, ಕಹಳೆ, ಸಮಾಳ, ವೀರಗಾಸೆ, ಗೊಂಬೆಗಳು, ಬ್ಯಾಂಡ್ ಸೇರಿದಂತೆ ಸಕಲ ವಾದ್ಯ ಮೇಳಗಳು ಹಾಗೂ ಆನೆಗಳು ಭಾಗವಹಿಸಿ ಉತ್ಸವಕ್ಕೆ ಮೆರಗು ತಂದಿದ್ದವು.

ಭಕ್ತರು ಹರ್ಷೋಧ್ಘಾರದ ಮಧ್ಯ ಅಡ್ಡಪಲ್ಲಕ್ಕಿಯನ್ನು ಹೊತ್ತುಕೊಂಡು ಸಾಗುತ್ತಿದ್ದರೆ, ಇದೇ ಸಂದರ್ಭದಲ್ಲಿ ವೀರಶೈವ ಧರ್ಮಗ್ರಂಥವನ್ನು ಆನೆಯ ಮೇಲೆ ಇಟ್ಟ ಅಂಬಾರಿಯಲ್ಲಿ ಮೆರವಣಿಗೆ ಮಾಡಲಾಯಿತು.ಲೋಕದಲ್ಲಿನ ಅಶಾಂತಿ ತೊಡೆದು ಹಾಕಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಈ ಅಡ್ಡ ಪಲ್ಲಕ್ಕಿ ಉತ್ಸವ ಆಯೋಜಿಸಲಾಗಿದೆ. ಇದಾದ ನಂತರ ಐದು ದಿನಗಳ ಕಾಲ ಶಿವಬಸವ ಕಲ್ಯಾಣ ಮಂಟದಲ್ಲಿ ಕಾಶಿ ಜಗ್ದಗುರುಗಳಿಂದ ಇಷ್ಟಲಿಂಗ ಪೂಜೆ, ಪ್ರತಿ ದಿನ ಸಂಜೆ ಹುಕ್ಕೇರಿಮಠದ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಧರ್ಮ ಸಭೆ ಹಾಗೂ ಕಾಶಿ ಜಗದ್ಗುರುಗಳಿಂದ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪ್ರತಿಕ್ರಿಯಿಸಿ (+)