ಲೋಕದೊಳಲು: ಏಳೂರ ಜಾತ್ರೆಗೆ ಹರಿದು ಬಂದ ಜನಸಾಗರ...

7

ಲೋಕದೊಳಲು: ಏಳೂರ ಜಾತ್ರೆಗೆ ಹರಿದು ಬಂದ ಜನಸಾಗರ...

Published:
Updated:
ಲೋಕದೊಳಲು: ಏಳೂರ ಜಾತ್ರೆಗೆ ಹರಿದು ಬಂದ ಜನಸಾಗರ...

ಹೊಳಲ್ಕೆರೆ: ತಾಲ್ಲೂಕಿನ ಲೋಕದೊಳಲಿನಲ್ಲಿ ಸೋಮವಾರ ಐತಿಹಾಸಿಕ ದೊಡ್ಡಹೊಟ್ಟೆ ರಂಗನಾಥ ಸ್ವಾಮಿಯ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.ದೇವಸ್ಥಾನದಿಂದ ಛತ್ರಿ, ಚಾಮರ, ಶಬ್ದವಾದ್ಯಗಳೊಂದಿಗೆ ದೊಡ್ಡಹೊಟ್ಟೆ ರಂಗನಾಥ ಸ್ವಾಮಿಯನ್ನು ತೇರು ಬೀದಿಯವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಡೊಳ್ಳು, ನಗಾರಿ, ಸಮಾಳ, ಸೋಮನ ಕುಣಿತಗಳು ಮೆರವಣಿಗೆಗೆ ರಂಗು ನೀಡಿದ್ದವು. ಮೂರು ಬಾರಿ ಪ್ರದಕ್ಷಿಣೆ ಹಾಕಿದ ನಂತರ ದೇವರನ್ನು ಭಾರೀ ಹೂವಿನ ಹಾರಗಳೊಂದಿಗೆ ಅಲಂಂಕರಿಸಲಾಗಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಮೊದಲಿಗೆ ರಥಾರೋಹಣೋತ್ಸವ, ತೆಂಗಿನಕಾಯಿ ಸೇವೆ ಮತ್ತಿತರ ಪೂಜಾ ವಿಧಿವಿಧಾನಗಳು ನಡೆದವು.ದೇವರಿಗೆ ಮುಖ್ಯಪೂಜೆ ಆದ ನಂತರ ಭಕ್ತರು ಜಯಘೋಷಗಳೊಂದಿಗೆ ಪೂರ್ವ ದಿಕ್ಕಿಗೆ ಇರುವ ರಂಗನಾಥಸ್ವಾಮಿಯ ಬೆಟ್ಟದ ಕಡೆ ರಥವನ್ನು ಎಳೆದರು. ಭಕ್ತರು ದಾರಿಯುದ್ದಕ್ಕೂ ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವದ ನಂತರ ಮಹಾಮಂಗಳಾರತಿ, ಮಣೇವು, ಉರುಳುಸೇವೆ, ಪಾನಕ ಪೂಜೆಗಳು ನಡೆದವು. ರಥದ ಮುಂದೆ ವಿಶೇಷ ದೊಡ್ಡೆಡೆ ಸೇವೆ ನಡೆಸಲಾಯಿತು. ಸಿಂಹೋತ್ಸವ, ಹೂವಿನ ಪಲ್ಲಕ್ಕಿ ಉತ್ಸವ ಮತ್ತು ಅಶ್ವವಾಹನ ಪಾರ್ವಟೋತ್ಸವಗಳು ನಡೆದವು.ಏಳೂರ ಜಾತ್ರೆ: ರಥೋತ್ಸವ ಲೋಕದೊಳಲು ಗ್ರಾಮದಲ್ಲಿ ನಡೆದರೂ, ಸುತ್ತಲಿನ ಸಾಂತೇನಹಳ್ಳಿ, ತಿರುಮಲಾಪುರ, ಆವಿನಹಟ್ಟಿ, ಇಡೇಹಳ್ಳಿ, ಗುಂಡೇರಿ, ಬೊಮ್ಮನಕಟ್ಟೆ ಸೇರಿದಂತೆ 7 ಹಳ್ಳಿಗಳ ಜನ ಒಗ್ಗಟ್ಟಾಗಿ ಈ ಜಾತ್ರೆಯನ್ನು ಆಚರಿಸುತ್ತಾರೆ. ಬೆಟ್ಟದ ಮೇಲಿನ ದೇವಾಲಯಕ್ಕೆ ಸುಣ್ಣ, ಬಣ್ಣ ಬಳಿಯುವುದೂ ಸೇರಿದಂತೆ ಜಾತ್ರೆಯ ಆಚರಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ.ಉಚಿತ ಹಾಲು, ಎಣ್ಣೆ ವಿತರಣೆ: ಜಾತ್ರೆಗೆ ಬರುವ ಚಿಕ್ಕಮಕ್ಕಳಿಗೆ ಕುಡಿಯಲು ಹಾಲು, ತಲೆಗೆ ಹರಳೆಣ್ಣೆ ಕೊಡುವುದು, ಭಕ್ತರಿಗೆ ಕುಡಿಯುವ ನೀರು ವಿತರಿಸುವುದು ಇಲ್ಲಿನ ವಿಶೇಷ. ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ಗುಡ್ಡದ ಸಾಂತೇನಹಳ್ಳಿಯ ಬಸಪ್ಪ, ಹಾಲಪ್ಪ, ಉಜ್ಜಿನಪ್ಪ ಎಂಬುವರ ಮನೆತನದಿಂದ ಈ ಕಾರ್ಯ ನಡೆಯುತ್ತದೆ.

ತಿರುಮಲಾಪುರದ ಯಾದವ ಭಕ್ತರಿಂದ ಕೋಲಾಟ, ಕರಡಿಮೇಳ, ಭಜನೆ ಕಾರ್ಯಕ್ರಮಗಳು ನಡೆದವು. ರಥೋತ್ಸವದ ಅಂಗವಾಗಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪಕ್ಕದ ಬೆಟ್ಟದಲ್ಲಿ ದೊಡ್ಡಹೊಟ್ಟೆ ರಂಗನಾಥಸ್ವಾಮಿಯ ಒಡಮೂಡಿದ ಮೂರ್ತಿ ಇದ್ದು, ಜಾತ್ರೆಗೆ ಬಂದ ಭಕ್ತರು ಬೆಟ್ಟ ಹತ್ತಿ ದೇವರ ದರ್ಶನ ಪಡೆದರು. ಜಾತ್ರೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮಂಗಳವಾರ ಸಂಜೆ ವಿಶೇಷ ಅವಭೃತ ಸ್ನಾನ (ಓಕುಳಿ) ಉತ್ಸವ ನಡೆಯಲಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry