ಲೋಕಪಾಲ: ಕಡೆಗೂ ಮೂಡದ ಒಮ್ಮತ

ಗುರುವಾರ , ಜೂಲೈ 18, 2019
22 °C

ಲೋಕಪಾಲ: ಕಡೆಗೂ ಮೂಡದ ಒಮ್ಮತ

Published:
Updated:

ನವದೆಹಲಿ:ಭ್ರಷ್ಟಾಚಾರಕ್ಕೆ ಅಂಕುಶ ಹಾಕುವ ಉದ್ದೇಶಿತ ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ `ಜಂಟಿ ಕರಡು ಸಮಿತಿ~ಯ ಕಟ್ಟಕಡೆ ಸಭೆಯಲ್ಲೂ ಒಮ್ಮತ ಮೂಡಲಿಲ್ಲ. ಪ್ರಧಾನಿ, ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳನ್ನು ಮಸೂದೆ ವ್ಯಾಪ್ತಿಗೆ ತರಬೇಕು ಎಂಬುದು ಒಳಗೊಂಡು 6 ಅಂಶಗಳ ಬಗ್ಗೆ ತಲೆದೋರಿರುವ ಭಿನ್ನಮತ ಬಗೆಹರಿಯಲಿಲ್ಲ. ಮೊದಲಿಂದಲೂ ಸರ್ಕಾರದ ನಿಲುವಿಗೆ ಅಪಸ್ವರ ತೆಗೆದಿದ್ದ ಅಣ್ಣಾ ಹಜಾರೆ ತಂಡದಲ್ಲಿ ನಿರಾಸೆ ಕಾರ್ಮೋಡ ಕವಿದಿದೆ.ಪರಿಣಾಮಕಾರಿ ಲೋಕಪಾಲ ಮಸೂದೆ ರೂಪಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡವಳಿಕೆ ಬಗ್ಗೆ ಅಸಮಾಧಾನಗೊಂಡಿರುವ ಹಿರಿಯ ಸಾಮಾಜಿಕ ಕಾರ್ಯಕರ್ತ, ಗಾಂಧಿವಾದಿ ಅಣ್ಣಾ ಹಜಾರೆ ಆಗಸ್ಟ್ 15ರಿಂದ ಆಮರಣ ಉಪವಾಸ ಆರಂಭಿಸುವುದಾಗಿ ಘೋಷಿಸಿದ್ದಾರೆ. ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದಾಗಿ ಗುಡುಗಿದ್ದಾರೆ.ಮಂಗಳವಾರ ಸಂಜೆ ಸೇರಿದ್ದ ಲೋಕಪಾಲ ಕರಡು ಮಸೂದೆ ಸಮಿತಿಯಲ್ಲಿ ಸರ್ಕಾರದ ಪ್ರತಿನಿಧಿಗಳು ಹಾಗೂ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ `ಸಾಮಾನ್ಯ ಕರಡು~ ರಚನೆ ಸಾಧ್ಯವಾಗಲಿಲ್ಲ. ಇದರಿಂದ ಎರಡು ಕರಡು ಮಸೂದೆಗಳು ಸಂಪುಟದ ಮುಂದೆ ಹೋಗುವುದು ಅನಿವಾರ್ಯವಾಯಿತು. ಉಭಯ ಪಕ್ಷಗಳು ಕರಡು ಮಸೂದೆಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿವೆ.`ಮಸೂದೆಗೆ ಸಂಬಂಧಿಸಿದಂತೆ ಕೆಲವೊಂದು ಅಂಶಗಳನ್ನು ಒಪ್ಪದಿರಲು ನಾವು (ಉಭಯತ್ತರರು) ತೀರ್ಮಾನಿಸಿದ್ದೇವೆ. ಈ ಕಾರಣಕ್ಕೆ ಸರ್ಕಾರದ ಪ್ರತಿನಿಧಿಗಳು ಮತ್ತು ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಸಿದ್ಧಪಡಿಸಿರುವ ಪ್ರತ್ಯೇಕ ಮಾದರಿ ಮಸೂದೆಗಳು ಸಂಪುಟದ ಮುಂದೆ ಚರ್ಚೆಗೆ ಬರಬಹುದು. ಎರಡೂ ಕರಡಿನಲ್ಲಿರುವ ಉತ್ತಮ ಅಂಶಗಳನ್ನು ಒಗ್ಗೂಡಿಸಿ ಸರ್ಕಾರ ಮಸೂದೆ ರೂಪಿಸಬಹುದು. ಇಲ್ಲವೆ ಯಾವುದಾದರೂ ಒಂದು ಮಸೂದೆಯನ್ನು ಒಪ್ಪಿಕೊಳ್ಳಬಹುದು~ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಹೇಳಿದರು.`ಒಟ್ಟಾರೆ ಚರ್ಚೆ ನಿರಾಶದಾಯಕ~ ಎಂದು ನಾಗರಿಕ ಸಂಘಟನೆಗಳ ಪ್ರತಿನಿಧಿ ಪ್ರಶಾಂತ್ ಭೂಷಣ್ ಪ್ರತಿಕ್ರಿಯಿಸಿದರು. ಪರಿಣಾಮಕಾರಿ ಲೋಕಪಾಲ ಮಸೂದೆ ಜಾರಿಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ದೂರಿದರು. ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಅವರು ದನಿಗೂಡಿಸಿದರು.`ನಾವು ಇದುವರೆಗೆ ಒಂಬತ್ತು ಸಭೆಗಳನ್ನು ನಡೆಸಿದ್ದೇವೆ. ಚರ್ಚೆ ಸೌಹಾರ್ದಯುತವಾಗಿ ಮುಗಿದಿದೆ. ಎರಡು ಕರಡು ಮಸೂದೆ ಸಂಪುಟದ ಮುಂದೆ ಹೋಗಲಿದೆ. ಸಂಪುಟ ಈ ಬಗ್ಗೆ ತೀರ್ಮಾನ ಕೈಗೊಂಡು ಅಂತಿಮವಾಗಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಿದೆ.ಇದಕ್ಕೂ ಮೊದಲು ಕೆಲವು ಅಂಶಗಳನ್ನು ಕುರಿತು ರಾಜಕೀಯ ಪಕ್ಷಗಳ ಅಭಿಪ್ರಾಯ ಪಡೆಯಲಾಗುತ್ತಿದೆ  ಎಂದು  ಸಿಬಲ್ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಾನೂನು ಸಚಿವ ವೀರಪ್ಪ ಮೊಯಿಲಿ ಮತ್ತು ಜಲ ಸಂಪನ್ಮೂಲ ಸಚಿವ ಸಲ್ಮಾನ್ ಖುರ್ಷಿದ್ ದನಿಗೂಡಿಸಿದರು.ನಾಗರಿಕ ಸಂಘಟನೆಗಳು ಪ್ರಸ್ತಾಪಿಸಿರುವ ಒಟ್ಟು ನಲ್ವತ್ತು ಅಂಶಗಳಲ್ಲಿ 34 ಅಂಶಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಉಳಿದವುಗಳ ಬಗ್ಗೆ ಭಿನ್ನಾಭಿಪ್ರಾಯವಿದೆ. ಸಹಮತ ಸಾಧ್ಯವಾಗದಿರುವ ಅಂಶಗಳನ್ನು ಕುರಿತು ರಾಜಕೀಯ ಪಕ್ಷಗಳ ಅಭಿಪ್ರಾಯ ಪಡೆಯಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವರು ಸ್ಪಷ್ಟಪಡಿಸಿದರು.ಕೆಲವು ಅಂಶಗಳ ಮೇಲೆ ಒಮ್ಮತ ಮೂಡದಿರುವ ಕುರಿತು ಪ್ರಸ್ತಾಪಿಸಿದ ಸಿಬಲ್,  `ದೇಶ ಮುನ್ನಡೆಸಲು ಸರ್ಕಾರದ ಹೊರಗೆ ಮತ್ತೊಂದು ಪರ್ಯಾಯ ಸರ್ಕಾರವೇ~ ಎಂದು ಪ್ರತಿಪಾದಿಸಿದರು. `ನಮ್ಮ ಹಿರಿಯಲು ಬಿಟ್ಟು ಹೋಗಿರುವ ಅಮೂಲ್ಯ ಸಂವಿಧಾನದ ಮೌಲ್ಯಗಳನ್ನು ಮೀರುವುದಾದರೂ ಹೇಗೆ~ ಎಂದು ಪ್ರಶ್ನಿಸಿದರು. `ಅಣ್ಣಾ ತಂಡದ ಮಾದರಿ ಮಸೂದೆ ಮತ್ತೊಂದು ಪರ್ಯಾಯ ವ್ಯವಸ್ಥೆ ಹುಟ್ಟಿಗೆ ಕಾರಣವಾಗಲಿದೆ. ಸಂವಿಧಾನದ ವ್ಯಾಪ್ತಿಯೊಳಗೆ ಪ್ರಬಲ ಮಸೂದೆ ಜಾರಿ ಸರ್ಕಾರದ ಉದ್ದೇಶ ಎಂದು ನುಡಿದರು.ಲೋಕಪಾಲರ ನೇಮಕ- ಪದಚ್ಯುತಿಗೆ ಸಂಬಂಧಿಸಿದಂತೆ ಸಮಿತಿಯಲ್ಲಿ ಭಿನ್ನಾಭಿಪ್ರಾಯ ಮುಂದುವರಿದಿದೆ. ಭ್ರಷ್ಟಾಚಾರಕ್ಕೆ ಅಂಕುಶ ಹಾಕಲು ಸ್ವತಂತ್ರವಾದ ಲೋಕಪಾಲ ಸಂಸ್ಥೆ ಇರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕೊಂದು ಹೊಣೆಗಾರಿಕೆ ಇರಬೇಕು.ಲೋಕಪಾಲ ಸಂಸ್ಥೆಯಡಿ ಕೆಲಸ ಮಾಡುವ ಪೊಲೀಸರು, ತನಿಖಾ ಸಂಸ್ಥೆ ಅಧಿಕಾರಿಗಳು ದಾರಿ ತಪ್ಪಿದರೆ ಕೇಳುವ ಅಧಿಕಾರ ಜನರಿಗೆ ಇರಬೇಕು ಎಂದು ಮಾನವ ಸಂಪನ್ಮೂಲ ಸಚಿವರು ವಾದಿಸಿದರು.

ಸಂಸದೀಯ ಪ್ರಜಾಪ್ರಭುತ್ವದ ಬಹು ಮುಖ್ಯ ಅಂಗವಾದ ಪ್ರಧಾನಿ ಅವರನ್ನು ಮಸೂದೆ ವ್ಯಾಪ್ತಿಗೆ ತರಲು ಸಾಧ್ಯವಿಲ್ಲ.ಪ್ರಧಾನಿ ಅವರನ್ನು ಇದರಿಂದ ಹೊರಗಿಡಬೇಕು ಎಂದು ನಿವೃತ್ತ ನ್ಯಾಯಮೂರ್ತಿಗಳಾದ ವರ್ಮ ಮತ್ತು ವೆಂಕಟಾಚಲಯ್ಯ ಅವರಂಥ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.

 ಪ್ರಧಾನಿ ಅವರನ್ನು ಈ ವ್ಯಾಪ್ತಿಗೆ ತಂದರೆ ಪ್ರತಿನಿತ್ಯ ಒಂದಿಲ್ಲೊಂದು ಆರೋಪಗಳು ಬರಬಹುದು. ಕೆಲಸ ಮಾಡಲು ಈ  ದೊಡ್ಡ ಹುದ್ದೆ ಅಲಂಕರಿಸಿದವರಿಗೆ ಅಡ್ಡಿಯಾಗಬಹುದು ಎಂದು ಸಿಬಲ್ ಸಮರ್ಥಿಸಿಕೊಂಡರು.

ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಸಿದ್ಧಪಡಿಸಿರುವ ಕರಡು ಮಸೂದೆಯಲ್ಲಿ ಅಡಕವಾಗಿರುವ ಕೆಲವು ಪ್ರಮುಖ ಅಂಶಗಳ ಬಗ್ಗೆ ಅವರ ಬಳಿಯೇ ಉತ್ತರವಿಲ್ಲ ಎಂದು ಟೀಕಿಸಿದರು.

 

ಆಗಸ್ಟ್ 1ರಿಂದ ಸಂಸತ್ ಅಧಿವೇಶನ

ನವದೆಹಲಿ (ಪಿಟಿಐ): ಸಂಸತ್ತಿನ ಮಳೆಗಾಲದ ಅಧಿವೇಶನ ಆಗಸ್ಟ್ ಒಂದರಿಂದ ಸೆಪ್ಟೆಂಬರ್ ಎಂಟರವರೆಗೆ ನಡೆಯಲಿದೆ.ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry