ಭಾನುವಾರ, ಜನವರಿ 19, 2020
26 °C

ಲೋಕಪಾಲ ಮಸೂದೆ: ಅಣ್ಣಾ ಸರಣಿ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ನಿಷ್ಪಕ್ಷಪಾತ ನಡೆಯನ್ನು ಪ್ರದರ್ಶಿಸುವ ಪ್ರಯತ್ನವಾಗಿ ಅಣ್ಣಾ ಹಜಾರೆ ಹಾಗೂ ಅವರ ತಂಡದವರು ಭಾನುವಾರ ವಿವಿಧ ಪಕ್ಷಗಳ ಮುಖಂಡರಿಗೆ ಸರಣಿ ಪತ್ರಗಳನ್ನು ರವಾನಿಸಿದ್ದಾರೆ.ಪಂಚರಾಜ್ಯಗಳ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಸೇರಿದಂತೆ ವಿವಿಧ ನಾಯಕರನ್ನು ಲೋಕಪಾಲ ಮಸೂದೆಗೆ ಸಂಬಂಧಿಸಿದ ವೇದಿಕೆಗೆ ಕರೆತರುವ ಪ್ರಯತ್ನ ಇದು ಎಂದು ಹೇಳಲಾಗಿದೆ.ಹಜಾರೆ, ಶಾಂತಿ ಭೂಷಣ್, ಪ್ರಶಾಂತ್ ಭೂಷಣ್, ಅರವಿಂದ ಕೇಜ್ರಿವಾಲ್, ಕಿರಣ್ ಬೇಡಿ ಅವರು ಸಹಿ ಮಾಡಿರುವ ಪತ್ರವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಗೂ ಕಳುಹಿಸಲಾಗಿದೆ.ಪ್ರಧಾನಿಗೆ ಬರೆದ ಪತ್ರದಲ್ಲಿ ಹಜಾರೆ ಅವರ ಸಹಿ ಮಾತ್ರವೇ ಇದೆ.`ದುರ್ಬಲ ಲೋಕಪಾಲ ಮಸೂದೆಯನ್ನು ಹಿಂದಕ್ಕೆ ಪಡೆಯುವ ಧೈರ್ಯ ಪ್ರದರ್ಶಿಸಿ ಮತ್ತು ಪ್ರಬಲ ಮಸೂದೆಯನ್ನು ತನ್ನಿ~ ಎಂದು ಇದರಲ್ಲಿ ಬರೆಯಲಾಗಿದೆ. ಇನ್ನು ರಾಹುಲ್ ಅವರಿಗೆ ಬರೆದ ಪತ್ರದಲ್ಲಿ `ಉತ್ತರಾಖಂಡದ ಮಾದರಿಯಲ್ಲಿಯೇ ಪ್ರಬಲ ಲೋಕಾಯುಕ್ತ ಕಾಯ್ದೆ ತರಲು ನಿಮ್ಮ ಪಕ್ಷಕ್ಕೆ ಧೈರ್ಯ ಇದೆಯೋ ಇಲ್ಲವೋ?~ ಎಂದು ಸವಾಲು ಹಾಕಲಾಗಿದೆ.`ಬಿಹಾರದಲ್ಲಿ ಪ್ರಬಲ ಲೋಕಾಯುಕ್ತ ಕಾಯ್ದೆ ತರಲು ನಿತೀಶ್ ಕುಮಾರ್ ಅವರ ಸರ್ಕಾರದ ಮೇಲೆ ಯಾಕೆ ನಿಮ್ಮ ಪಕ್ಷವು ಒತ್ತಡ ಹೇರಿಲ್ಲ~ ಎಂದು ಗಡ್ಕರಿ ಅವರನ್ನು ಪ್ರಶ್ನಿಸಲಾಗಿದೆ. ಅಲ್ಲದೆ ಲೋಕಪಾಲ ಮಸೂದೆ ಮೂಲಕ ಲೋಕಾಯುಕ್ತ ಕಾಯ್ದೆ ತರುವ ವಿಷಯದಲ್ಲಿ ಪಕ್ಷವು ತನ್ನ ಧೋರಣೆಯನ್ನು ಬದಲಾಯಿಸುವುದು ಯಾಕೆ ಎಂದೂ ಕೇಳಲಾಗಿದೆ.ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರಲ್ಲಿಯೂ ಅಣ್ಣಾ ತಂಡ ಹುಳುಕು ಹುಡುಕಿದೆ. ಸ್ಥಾಯಿ ಸಮಿತಿಯಲ್ಲಿ ಮಸೂದೆಯನ್ನು ವಿರೋಧಿಸದೇ, ಸಂಸತ್ ಕಲಾಪದಲ್ಲಿ ಸಭಾತ್ಯಾಗ ಮಾಡಿ ತಪ್ಪು ಮಾಡಿದಿರಿ. ಇದರಿಂದ ಯುಪಿಎ ಸರ್ಕಾರ ಕೆಳಮನೆಯಲ್ಲಿ ಮಸೂದೆ ಅನುಮೋದನೆ ಮಾಡುವಂತಾಯಿತು ಎನ್ನುವುದು ತಂಡದ ಆರೋಪ.`ಉತ್ತರ ಪ್ರದೇಶ ಚುನಾವಣೆ ಬಳಿಕ ನೀವು ಕಾಂಗ್ರೆಸ್ ಜತೆ ನಡೆಯುವಿರೋ ಅಥವಾ ಬಿಜೆಪಿಯ ಜೊತೆಗೋ?~ ಎಂದು ಯಾದವ್ ಅವರಿಗೆ ಅಣ್ಣಾ ತಂಡ ಪ್ರಶ್ನೆ ಹಾಕಿದೆ.`ಜನ ಲೋಕಪಾಲ ಮಸೂದೆ ಎಲ್ಲಿಯವರೆಗೆ ಅನುಮೋದನೆ ಆಗುವುದಿಲ್ಲವೋ ಅಲ್ಲಿಯವರೆಗೆ ಹೋರಾಟ ನಿರಂತರವಾಗಿರುತ್ತದೆ. ನಿಮಗೆ ಈಗ 80 ವರ್ಷ ಆಗಿದೆ. ದೇಶ ನಿಮಗೆ ಎಲ್ಲವನ್ನೂ ಕೊಟ್ಟಿದೆ. ಜನ ನಿಮ್ಮಿಂದ ಪ್ರತಿಫಲ ಬೇಡುತ್ತಿದ್ದಾರೆ. ಸ್ವಲ್ಪ ಧೈರ್ಯ ಮಾಡಿ~ ಎಂದು ಪ್ರಧಾನಿ ಸಿಂಗ್ ಅವರನ್ನು ಹಜಾರೆ ಹುರಿದುಂಬಿಸಿದ್ದಾರೆ.ಲೋಕಪಾಲ ಮಸೂದೆ ಪ್ರಬಲವಾಗಿದೆ ಎಂಬ ರಾಹುಲ್ ವಾದಕ್ಕೆ ಎದಿರೇಟು ನೀಡಿರುವ ಅಣ್ಣಾ ತಂಡ, `ಎದೆ ಮುಟ್ಟಿಕೊಂಡು ನೀವು ಈ ಮಾತನ್ನು ಹೇಳಿ ನೋಡೋಣ. ನಿಜವಾಗಿಯೂ ಇದು ಪ್ರಬಲವಾಗಿದೆಯೇ? ಅಥವಾ ಚುನಾವಣಾ ಪ್ರಚಾರದಲ್ಲಿ ನೀವು ಈ ರೀತಿ ಸುಳ್ಳು ಹೇಳುತ್ತಿದ್ದೀರಾ?~ಎಂದು ಪ್ರಶ್ನಿಸಿದೆ.

ಪ್ರತಿಕ್ರಿಯಿಸಿ (+)