ಲೋಕಪಾಲ ಮಸೂದೆ ಶೀಘ್ರ: ಪ್ರಧಾನಿ

7

ಲೋಕಪಾಲ ಮಸೂದೆ ಶೀಘ್ರ: ಪ್ರಧಾನಿ

Published:
Updated:

ಏರ್ ಇಂಡಿಯಾ ವಿಮಾನ (ಐಎಎನ್‌ಎಸ್): ಪರಿಣಾಮಕಾರಿ ಲೋಕಪಾಲಕ್ಕಾಗಿ ಶೀಘ್ರದಲ್ಲೇ ಮಸೂದೆ ತರಲಾಗುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ರಾತ್ರಿ ಭರವಸೆ ನೀಡಿದ್ದಾರೆ.

ಈ ನಿಟ್ಟಿನಲ್ಲಿ, ಅಣ್ಣಾ ಹಜಾರೆ ಅವರ ಚಳವಳಿಯ ಉದ್ದೇಶ ಈಡೇರಿದೆ ಎಂದು ಅವರು ಹೇಳಿದ್ದಾರೆ.ಅಣ್ಣಾ ತಂಡದ ಸದಸ್ಯರ ಮೇಲೆ ಇತ್ತೀಚೆಗೆ ನಡೆದ ದಾಳಿಗಳನ್ನು ಖಂಡಿಸಿರುವ ಪ್ರಧಾನಿ, ಯಾರನ್ನೂ ವೈಯಕ್ತಿಕವಾಗಿ ಖಂಡಿಸಲು ಈ ಅವಕಾಶವನ್ನು ನಾನು ಬಳಸಿಕೊಳ್ಳುವುದಿಲ್ಲ ಎಂದು ಪ್ರಿಟೊರಿಯಾದಿಂದ ಹಿಂದಿರುಗುವ ಸಂದರ್ಭದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಪ್ರಜಾಪ್ರಭುತ್ವದಲ್ಲಿ ವಿಭಿನ್ನ ಅಭಿಪ್ರಾಯಕ್ಕೆ ಅವಕಾಶವಿದೆ, ಇಂತಹ ವಿಷಯಗಳಲ್ಲಿ ಹಿಂಸಾಚಾರಕ್ಕೆ ಸ್ಥಾನ ಇಲ್ಲ. ಈ ಬಗೆಯ ಘಟನೆಗಳು ಖಂಡನಾರ್ಹ.ಹಿಂಸೆಯಿಂದ ಏನನ್ನೂ ಸಾಧಿಸಲಾಗದು. ಯಾರು ಎಷ್ಟೇ ಕೋಪಗೊಂಡಿರಲಿ ಅಥವಾ ಹತಾಶರಾಗಿರಲಿ ಅದನ್ನು ಹೊರಹಾಕಲು ಸಾಕಷ್ಟು ಬಗೆಯ ನಾಗರಿಕ ಮಾರ್ಗಗಳಿವೆ ಎಂದು ಹೇಳಿದರು. ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂಬ ಹೇಳಿಕೆಯನ್ನು ಅವರು ತಳ್ಳಿಹಾಕಿದರು.ಅಡ್ವಾಣಿಗೆ ಸಲಹೆ: ರಥಯಾತ್ರೆ ನಡೆಸುತ್ತಿರುವ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರಿಂದ ಕಟು ಟೀಕೆಗೆ ಒಳಗಾಗುತ್ತಿರುವ ಪ್ರಧಾನಿ, `ಅಡ್ವಾಣಿ ಅವರು ಬಿರು ನುಡಿಗಳನ್ನು ಆಡಬಾರದು, ರಾಜಕೀಯದಲ್ಲಿ ಇಂತಹ ಮಾತುಗಳು ಸಲ್ಲದು~ ಎಂದರು.ರಥಯಾತ್ರೆ ಯಶಸ್ವಿಯಾಗಲಿ ಎಂದ ಅವರು, ಅಡ್ವಾಣಿ ಅವರಿಗೆ ಪ್ರಧಾನಿಯಾಗುವ ಸಾಮರ್ಥ್ಯ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಅದನ್ನು ಈ ದೇಶದ ಜನ ನಿರ್ಧರಿಸಬೇಕು, ವಿದೇಶಿ ನೆಲದಲ್ಲಿ ನಾನು ನಮ್ಮ ದೇಶದ ಯಾವ ನಾಯಕನನ್ನೂ ಟೀಕಿಸಲಾರೆ ಎಂದರು.ದುರ್ಬಲ ಪ್ರಧಾನಿ ಎಂದು ಮಂಗಳವಾರ ಸಿಂಗ್ ಅವರನ್ನು ಟೀಕಿಸಿದ್ದ ಅಡ್ವಾಣಿ, ಅವರ ಬಗ್ಗೆ ನನಗೆ ಅನುಕಂಪ ಇದೆ ಎಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry