ಲೋಕಪಾಲ: ಮೂಡದ ಒಮ್ಮತ, ಸಭೆ ಮತ್ತೆ ವಿಫಲ

ಶನಿವಾರ, ಜೂಲೈ 20, 2019
22 °C

ಲೋಕಪಾಲ: ಮೂಡದ ಒಮ್ಮತ, ಸಭೆ ಮತ್ತೆ ವಿಫಲ

Published:
Updated:

ನವದೆಹಲಿ: `ಲೋಕಪಾಲ ಮಸೂದೆ~ ಕರಡು ಸಿದ್ಧತೆಗೆ ರಚಿಸಲಾಗಿರುವ ಸಮಿತಿಯಲ್ಲಿ ಭಿನ್ನಾಭಿಪ್ರಾಯಗಳು ಮುಂದುವರಿದಿದ್ದು, ಬುಧವಾರದ  ಸಭೆಯೂ ವ್ಯರ್ಥ ಕಸರತ್ತಾಯಿತು. ಸರ್ಕಾರ ಮತ್ತು ನಾಗರಿಕ ಸಂಘಟನೆಗಳ ಸದಸ್ಯರ ಮಧ್ಯೆ ಒಮ್ಮತ ಏರ್ಪಡದಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರಕ್ಕೆ ಅಂಕುಶ ಹಾಕುವ ಮಸೂದೆ ರಚನೆ ಮತ್ತು ಜಾರಿ ಕುರಿತು ಎದ್ದಿರುವ ಅನುಮಾನಗಳು ಮತ್ತಷ್ಟು ದಟ್ಟವಾಗತೊಡಗಿವೆ.

ಹಣಕಾಸು ಸಚಿವ ಪ್ರಣವ್ ಮುಖರ್ಜಿ ಕಚೇರಿಯಲ್ಲಿ ಮೂರು ತಾಸು ನಡೆದ ಸುದೀರ್ಘ ಸಭೆಯಲ್ಲಿ ಲೋಕಪಾಲ ಮಸೂದೆ ಸ್ವರೂಪ ಮತ್ತು ಇದರಲ್ಲಿ ಎಷ್ಟು ಸದಸ್ಯರು ಇರಬೇಕೆಂದು ಚರ್ಚೆ ನಡೆಯಿತು. ಈ ಸಭೆಯ ಬಳಿಕ ಸಮಿತಿ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು ಯಥಾ ಪ್ರಕಾರ ಮುಂದುವರಿದಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಪ್ರತಿನಿಧಿಗಳು ಹಾಗೂ ನಾಗರಿಕ ಸಂಘಟನೆಗಳ ಸದಸ್ಯರು ಪ್ರತ್ಯೇಕ ಲೋಕಪಾಲ ಕರಡು ಮಸೂದೆ ಸಿದ್ಧಪಡಿಸಿ ಸಂಪುಟ ಸಭೆಗೆ ಕಳುಹಿಸಲಿದ್ದಾರೆ.

ಲೋಕಪಾಲ ಕರಡು ಮಸೂದೆ ಸಿದ್ಧತೆಗೆ ಸಂಬಂಧಿಸಿದಂತೆ ಎಲ್ಲ ಮಗ್ಗಲು- ಸಾಧ್ಯತೆಗಳನ್ನು ಕುರಿತು ಚರ್ಚಿಸಲಾಯಿತು. ಸಮಿತಿ ಸದಸ್ಯರಲ್ಲಿ ಕೆಲವು ಅಂಶಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿರುವ ಕಾರಣಕ್ಕೆ ಎರಡು ತಂಡದ ಅಭಿಪ್ರಾಯಗಳನ್ನು ಒಳಗೊಂಡ ಟಿಪ್ಪಣಿ ಸಿದ್ಧಪಡಿಸಿ ಸಂಪುಟಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು. ಸಂಪುಟ ಸಭೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

`ನಮ್ಮ ಕಲ್ಪನೆಗೂ ಮತ್ತು ಸರ್ಕಾರದ ಸದಸ್ಯರ ಕಲ್ಪನೆಗೂ ಬಹಳಷ್ಟು ಭಿನ್ನಾಭಿಪ್ರಾಯಗಳಿವೆ. ಈ ಕಾರಣಕ್ಕೆ ಎರಡು ಕರಡು ಮಸೂದೆ ಸಿದ್ಧಪಡಿಸಲಾಗುವುದು. ಮಸೂದೆ ಸಂಸತ್ತಿನಲ್ಲಿ ಮಂಡನೆ ಆಗುವ  ಮುನ್ನ ಕೇಂದ್ರ ಸಂಪುಟ ಪರಿಶೀಲಿಸಿ ತೀರ್ಮಾನ ಮಾಡಲಿದೆ~ ಎಂದು ಅರವಿಂದ ಕೇಜ್ರಿವಾಲ್ ಸ್ಪಷ್ಟಪಡಿಸಿದರು. ಸಮಿತಿ ಸದಸ್ಯ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ದನಿಗೂಡಿಸಿದರು.

ನಾಗರಿಕ ಸಂಘಟನೆಗಳ ಸದಸ್ಯರು ಸರ್ಕಾರದ ಬಗ್ಗೆ ಮಾಡಿರುವ ಟೀಕೆಗಳನ್ನು ಕುರಿತು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಯಾವ ಹಂತದಲ್ಲಿ ವಾಗ್ದಾನದಿಂದ ಹಿಂದೆ ಸರಿಯಲಾಗಿದೆ. ಯಾವ ಹಂತದಲ್ಲಿ ವಂಚಿಸಲಾಗಿದೆ. ಯಾವ ಹಂತದಲ್ಲಿ ಸುಳ್ಳು ಹೇಳಲಾಗಿದೆ ಎಂದು ಕೇಳಲಾಯಿತು.

ಇದಕ್ಕೆ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು `ನಾವು ಸಮಿತಿ ಸದಸ್ಯರ ವಿರುದ್ಧ ಟೀಕೆ ಮಾಡಿಲ್ಲ. ಸಮಿತಿ ಹೊರಗೆ ಸರ್ಕಾರದ ವಿರುದ್ಧ ಒಟ್ಟಾರೆಯಾಗಿ ಟೀಕೆ ಮಾಡಿದ್ದೇವೆ~ ಎಂದು ಸ್ಪಷ್ಟಪಡಿಸಿದರು ಎಂದು ಸಿಬಲ್ ವಿವರಿಸಿದರು. ನಮ್ಮ ನಡುವಿನ ಎಲ್ಲ ಭಿನ್ನಾಭಿಪ್ರಾಯಗಳ ನಿವಾರಣೆಗೆ ಪುನಃ ಈ ತಿಂಗಳ 20ರಂದು ಸಭೆ ಸೇರಲಾಗುವುದು. ಆಗಲೂ ಒಮ್ಮತ ಸಾಧ್ಯವಾಗದಿದ್ದರೆ ಮರುದಿನ (21ರಂದು) ಮತ್ತೆ ಚರ್ಚೆ ಮುಂದುವರಿಸಲಾಗುವುದು ಎಂದು ಸಿಬಲ್ ಮತ್ತು ಕೇಜ್ರಿವಾಲ್ ಹೇಳಿದರು.

ಜೂನ್ 30ರೊಳಗೆ ಕರಡು ಸಿದ್ಧತಾ ಕಸರತ್ತು ಮುಗಿಯಲಿದೆ. ಸಚಿವ ಸಂಪುಟದ ಅಂತಿಮ ತೀರ್ಮಾನದ ಬಳಿಕ ನಿಗದಿತ ಅವಧಿಯ ಒಳಗಾಗಿ ಮಸೂದೆ ಸಂಸತ್ತಿನಲ್ಲಿ ಮಂಡನೆ ಆಗಲಿದೆ. ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಲೋಕಪಾಲ ಮಸೂದೆ ಸ್ವರೂಪ ಕುರಿತಂತೆ ಸಮಿತಿ ಸದಸ್ಯರ ಅಭಿಪ್ರಾಯಗಳಲ್ಲಿ ವ್ಯತ್ಯಾಸವಿಲ್ಲ ಎಂದು ಸಿಬಲ್ ನುಡಿದರು. ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಹನ್ನೊಂದು ಮಂದಿ ಸದಸ್ಯರ `ಲೋಕಪಾಲ ಸಮಿತಿ~ ಅಡಿ ಪ್ರತ್ಯೇಕವಾದ ಸಂಸ್ಥೆ ಇರಬೇಕು. ತನಿಖೆ ಉಸ್ತುವಾರಿಯನ್ನು ನೇರವಾಗಿ ಲೋಕಪಾಲ ಸಮಿತಿಯೇ ನೋಡಿಕೊಳ್ಳಬೇಕು ಎಂಬ ಅಣ್ಣಾ ಹಜಾರೆ ತಂಡ ಇಟ್ಟಿರುವ ಸಲಹೆಗೆ ಸರ್ಕಾರದ ಸದಸ್ಯರು ವಿರೋಧ ವ್ಯಕ್ತಪಡಿಸಿದರು. 11 ಮಂದಿ ಸಮಿತಿ ಸದಸ್ಯರಿಗೆ ತೀರ್ಮಾನ ಮಾಡುವ ಅಧಿಕಾರವಿದ್ದರೆ ಸಾಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಲೋಕಪಾಲ ಕರಡು ಸಿದ್ಧತಾ ಸಮಿತಿ ಏಳನೇ ಸಭೆಯೂ ವಿಫಲವಾದ ಕುರಿತು ಪ್ರತಿಕ್ರಿಯಿಸಿದ ಕೇಜ್ರಿವಾಲ್ `ಲೋಕಪಾಲ ಹುಟ್ಟುವ ಮೊದಲೇ ಸರ್ಕಾರ ಅದನ್ನು ಕೊಲ್ಲಲು ಹೊರಟಿದೆ~ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಯುಪಿಎ ಸರ್ಕಾರಕ್ಕೆ ಭ್ರಷ್ಟಾಚಾರಕ್ಕೆ  ಕಡಿವಾಣ ಹಾಕಲು ಆಸಕ್ತಿ ಇಲ್ಲ ಎಂಬ ಆರೋಪಕ್ಕೆ ಅವರು ಅಂಟಿಕೊಂಡರು.

ಲೋಕಪಾಲ ಮಸೂದೆ ವ್ಯಾಪ್ತಿಗೆ ಪ್ರಧಾನಿ ಹಾಗೂ ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳು ಮತ್ತು ಸಂಸದರ ಸದನದ ಒಳಗಿನ ನಡವಳಿಕೆಗಳನ್ನೂ  ತರಬೇಕೆಂಬ ವಿಷಯದಲ್ಲಿ ಸಮಿತಿ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತರು ಜೂನ್ 6ರಂದು  ನಡೆದ ಸಭೆಯನ್ನು ಬಹಿಷ್ಕರಿಸಿದ್ದರು.

ಇನ್ನು ಸಮಿತಿ ಸಭೆಗಳನ್ನು ಬಹಿಷ್ಕರಿಸುವುದಿಲ್ಲ. ರಾಷ್ಟ್ರಕ್ಕೆ ಪ್ರಬಲವಾದ ಲೋಕಪಾಲ ಮಸೂದೆ ಬೇಕೆಂಬ ಹಿನ್ನೆಲೆಯಲ್ಲಿ ಸಭೆಗಳಲ್ಲಿ ಭಾಗವಹಿಸುತ್ತೇವೆ ಎಂದು ಕೇಜ್ರಿವಾಲ್ ಖಚಿತಪಡಿಸಿದರು.

ರಾಜ್ಯಗಳ ಅಭಿಪ್ರಾಯ ಬಯಸಿದ ಪ್ರಣವ್

ನವದೆಹಲಿ (ಪಿಟಿಐ):
ಲೋಕಪಾಲ ಮಸೂದೆಯ ಕರಡು ರಚನಾ ಸಭೆಯ ಅಧ್ಯಕ್ಷ ಪ್ರಣವ್ ಮುಖರ್ಜಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಪ್ರಶ್ನಾವಳಿಯೊಂದನ್ನು ಕಳುಹಿಸಿ ಅಭಿಪ್ರಾಯ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಆರು ಪ್ರಶ್ನೆಗಳನ್ನು ಒಳಗೊಂಡಿರುವ ಈ ಪ್ರಶ್ನಾವಳಿಗೆ ಕಾಂಗ್ರೆಸ್ ಆಡಳಿತವಿರುವ ಮುಖ್ಯಮಂತ್ರಿಗಳು ಪಕ್ಷದ ನಿರ್ಧಾರಗಳನ್ನೇ ಅನುಮೋದಿಸಿದ್ದರೆ ಕಾಂಗ್ರೆಸ್ಸೇತರ ರಾಜ್ಯ ಸರ್ಕಾರಗಳು ಈಗೇಕೆ ಇಂತಹ ಪ್ರಶ್ನಾವಳಿ ಎಂಬ ಸವಾಲನ್ನೆತ್ತಿವೆ.

ಲೋಕಪಾಲ ಮಸೂದೆಯನ್ನು ತೀವ್ರವಾಗಿ ವಿರೋಧಿಸಿರುವ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು, `ಇಂತಹ ಮಸೂದೆ ರಚಿಸುವ ಬದಲಿಗೆ ಈಗಿರುವ ಆಡಳಿತ ಯಂತ್ರದ ಮಜಲುಗಳನ್ನೇ ಇನ್ನಷ್ಟು ಹರಿತಗೊಳಿಸುವುದು ಸೂಕ್ತ~ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry