ಬುಧವಾರ, ಅಕ್ಟೋಬರ್ 16, 2019
22 °C

ಲೋಕಪಾಲ: ರಾಷ್ಟ್ರಪತಿಗೆ ಬಿಜೆಪಿ ದೂರು

Published:
Updated:

ನವದೆಹಲಿ, (ಪಿಟಿಐ): ಬಹುಚರ್ಚಿತ ಲೋಕಪಾಲ ಮಸೂದೆ ವಿಷಯದಲ್ಲಿ ಸರ್ಕಾರ ಸಂಸತ್ತನ್ನು ಕಡೆಗಣಿಸಿದೆ ಎಂದು ಆರೋಪಿಸಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಗುರುವಾರ ದೂರು ಸಲ್ಲಿಸಿರುವ ಬಿಜೆಪಿ, ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಪುನಃ ಅಧಿವೇಶನ ಕರೆಯುವಂತೆ ಸಲಹೆ ನೀಡಲು ಕೋರಿದೆ.ಎಲ್.ಕೆ.ಅಡ್ವಾಣಿ, ಅಧ್ಯಕ್ಷ ನಿತಿನ್ ಗಡ್ಕರಿ, ಸಂಸತ್ತಿನ ಉಭಯ ಸದನಗಳ ವಿರೋಧ ಪಕ್ಷದ ನಾಯಕರಾದ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರನ್ನು ನಿಯೋಗ ಒಳಗೊಂಡಿತ್ತು.ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆ ಕುರಿತು ಕೇವಲ ಚರ್ಚೆ ನಡೆಯಿತೇ ಹೊರತು ಮತಕ್ಕೆ ಹಾಕುವ ಕಾರ್ಯ ನಡೆಯಲಿಲ್ಲ. ಸರ್ಕಾರದ ಕ್ರಮದಿಂದ ಭಾರತೀಯ ಸಂಸತ್ತನ್ನೇ ಬುಡಮೇಲು ಮಾಡಿದಂತಾಗಿದೆ ಎಂದು ನಿಯೋಗ ಮನವಿಯಲ್ಲಿ ಆರೋಪಿಸಿದೆ.`ಡಿಸೆಂಬರ್ 29ರ ರಾತ್ರಿ ರಾಜ್ಯಸಭೆಯಲ್ಲಿ ನಡೆದ ಸಂಗತಿಗಳ ಬಗ್ಗೆ ನಮಗಾಗಿರುವ ಅಸಮಾಧಾನವನ್ನು ರಾಷ್ಟ್ರಪತಿ ಅವರ ಗಮನಕ್ಕೆ ತಂದಿದ್ದೇವೆ. ಸಂಸತ್ತಿನಲ್ಲಿ ಇಂತಹ ಗಂಭೀರ ಪ್ರಕರಣಗಳು ನಡೆದಿರುವಾಗ ಭಾರತೀಯ ಸಂವಿಧಾನದ ರಕ್ಷಕರಾಗಿರುವ ರಾಷ್ಟ್ರಪತಿ ಅವರು ಮಧ್ಯಪ್ರವೇಶಿಸುವುದು ಅತ್ಯಗತ್ಯ ಎಂದು ಸ್ಪಷ್ಟಪಡಿಸಿದ್ದೇವೆ~ ಎಂದು ನಂತರ ಅಡ್ವಾಣಿ ವರದಿಗಾರರಿಗೆ ತಿಳಿಸಿದರು.`ಮಸೂದೆಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನೂ ಪರಿಶೀಲಿಸಿದ ಬಳಿಕ ಈ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ರಾಷ್ಟ್ರಪತಿ ಭರವಸೆ ನೀಡಿದ್ದಾರೆ~ ಎಂದು ಜೇಟ್ಲಿ ಹೇಳಿದರು.`ಲೋಕಪಾಲ ಮಸೂದೆ ರಾಜ್ಯಸಭೆಯಲ್ಲಿ ಮತಕ್ಕೆ ಬಾರದಂತೆ ಮಾಡುವ ಸಲುವಾಗಿಯೇ ಸರ್ಕಾರ ಕುತಂತ್ರ ನಡೆಸಿದ್ದು ಇದೀಗ ರಹಸ್ಯವಾಗೇನೂ ಉಳಿದಿಲ್ಲ. ಮಸೂದೆಗೆ ವಿರೋಧ ಪಕ್ಷಗಳು ಹಲವು ತಿದ್ದುಪಡಿಗಳನ್ನು ಸೂಚಿಸಿದ್ದವು. ಲೋಕಪಾಲ ತನಿಖಾ ತಂಡಕ್ಕೆ ಸ್ವಾಯತ್ತತೆ ನೀಡುವುದು, ಲೋಕಪಾಲರ ನೇಮಕ ಮತ್ತು ನಿರ್ಗಮನದ ಮೇಲೆ ಸರ್ಕಾರ ಪ್ರಭಾವ ಬೀರದಂತೆ ಮಾಡುವುದು ಈ ತಿದ್ದುಪಡಿಗಳಲ್ಲಿ ಸೇರಿತ್ತು~ ಎಂದು ಅವರು ಹೇಳಿದರು.

 

Post Comments (+)