ಲೋಕಪಾಲ ಹುದ್ದೆಗೆ 16 ಆಕಾಂಕ್ಷಿಗಳು

ನವದೆಹಲಿ (ಪಿಟಿಐ): ಸುಪ್ರೀಂಕೋರ್ಟ್ನ ಮೂವರು ನಿವೃತ್ತ ನ್ಯಾಯಮೂರ್ತಿಗಳು ಸೇರಿದಂತೆ ಒಟ್ಟು 16 ಮಂದಿ ಲೋಕಪಾಲ ಮುಖ್ಯಸ್ಥರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮತ್ತು ಯುಜಿಸಿಯ ಒಬ್ಬ ಸದಸ್ಯರು ಕೂಡಾ ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಆಕಾಂಕ್ಷಿಗಳ ಪಟ್ಟಿಯನ್ನು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಗುರುವಾರ ಬಹಿರಂಗಪಡಿಸಿದೆ.
ಮೂವರು ನಿವೃತ್ತ ನ್ಯಾಯಮೂರ್ತಿಗಳಾದ ಜಿ.ಎಸ್. ಮಿಶ್ರಾ, ಸಿ.ಕೆ. ಪ್ರಸಾದ್ ಮತ್ತು ಬಲ್ಬೀರ್ ಸಿಂಗ್ ಚೌಹಾಣ್ ಅವರ ಹೆಸರನ್ನು ಸುಪ್ರೀಂಕೋರ್ಟ್ ಸೂಚಿಸಿದೆ.
ಜಾರ್ಖಂಡ್ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ. ಕರ್ಪಗ ವಿನಾಯಕಂ, ಯುಜಿಸಿಯ ಮಾಜಿ ಸದಸ್ಯ ಮತ್ತು ಮಾಜಿ ಮಾಹಿತಿ ಆಯುಕ್ತ ಎಂ.ಎಂ. ಅನ್ಸಾರಿ ಹಾಗೂ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಅವರು ವೈಯಕ್ತಿವಾಗಿ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಆಕಾಂಕ್ಷಿಗಳ ಹೆಸರು ತಿಳಿಯಲು ಮಾಹಿತಿ ಹಕ್ಕು ಕಾಯ್ದೆಯಡಿ ಸುಭಾಷ್ ಅಗರ್ವಾಲ್ ಎಂಬವರು ಅರ್ಜಿ ಸಲ್ಲಿಸಿದ್ದರು. ಆದ್ದರಿಂದ ಪಟ್ಟಿಯನ್ನು ಬಹಿರಂಗಪಡಿಸುವಂತೆ ಮಾಹಿತಿ ಆಯುಕ್ತ ಸುಧೀರ್ ಭಾರ್ಗವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸೂಚಿಸಿದ್ದರು.
ಶಿಕ್ಷಕ ಅರುಣ್ ಗಣೇಶ್ ಜಗದೇವ್, ಸಾಮಾಜಿಕ ಕಾರ್ಯಕರ್ತರಾದ ಚಂದ್ರ ಭೂಷಣ್ ಮಿಶ್ರಾ ಮತ್ತು ಚಪ್ಪಿಡಿ ವೆಂಕಟೇಶ್ವರ ನಾನಾ ರಾವ್, ಪತ್ರಕರ್ತ ಗುಲ್ಶನ್ ಕುಮಾರ್, ವಕೀಲ ವಿನಯ್ ಭೂಷಣ್ ಭಾಟಿಯಾ, ಉಕ್ಕು ಕಂಪೆನಿಯ ಉದ್ಯೋಗಿ ಅಂಜನಿ ಕುಮಾರ್, ಎಂ.ಆರ್. ಪ್ರಜಾಪತಿ, ದೀಪಕ್ ಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ರಾಮ್ ಸಜಿವನ್, ನಿವೃತ್ತ ಐಪಿಎಸ್ ಅಧಿಕಾರಿ ಕೆ. ನಂದಬಾಲನ್ ಅವರು ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಸೇರಿದ್ದಾರೆ.
‘ಆಕಾಂಕ್ಷಿಗಳ ಹೆಸರು ಬಹಿರಂಗಪಡಿಸಿರುವುದರಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರಲು ಸಾಧ್ಯ’ ಎಂದು ಸುಧೀರ್ ಭಾರ್ಗವ ತಿಳಿಸಿದ್ದಾರೆ.
‘ಇದು ಅತಿ ಮಹತ್ವದ ಹುದ್ದೆ. ಹೀಗೆ ಹೆಸರು ಬಹಿರಂಗಪಡಿಸಿದರೆ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟ ಮಾಹಿತಿಗಳು ದೊರೆಯಲು ಸಾಧ್ಯ. ಅವರ ಬಗ್ಗೆ ತಿಳಿದ ವಿಷಯಗಳನ್ನು ಸಾರ್ವಜನಿಕರು ಆಯ್ಕೆ ಸಮಿತಿಯ ಗಮನಕ್ಕೆ ತರುವರು. ಅಭ್ಯರ್ಥಿಗಳಿಗೆ ಏನನ್ನೂ ಅಡಗಿಸಿಡಲು ಅವಕಾಶ ಲಭಿಸುವುದಿಲ್ಲ. ಇದರಿಂದ ಆಯ್ಕೆ ಪ್ರಕ್ರಿಯೆಯ ಮೇಲೆ ಜನರಿಗೆ ಇನ್ನಷ್ಟು ವಿಶ್ವಾಸ ಮೂಡುತ್ತದೆ’ ಎಂದು ಹೇಳಿದ್ದಾರೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆ 2014ರ ಜನವರಿ 17 ರಂದು ಲೋಕಪಾಲ ಮುಖ್ಯಸ್ಥರ ಒಂದು ಹುದ್ದೆ ಮತ್ತು ಇತರ ಎಂಟು ಹುದ್ದೆಗಳಿಗೆ (ನ್ಯಾಯಾಂಗದ ನಾಲ್ಕು ಮತ್ತು ಇತರ ನಾಲ್ಕು) ಅರ್ಜಿ ಆಹ್ವಾನಿಸಿತ್ತು.
ನ್ಯಾಯಾಂಗ ಸದಸ್ಯರ ಹುದ್ದೆಗೆ (ನಾಲ್ಕು ಸ್ಥಾನಗಳು) 23 ಮತ್ತು ಇತರ ನಾಲ್ಕು ಸ್ಥಾನಗಳಿಗೆ ಒಟ್ಟು 380 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯ ಕಾರ್ಯದರ್ಶಿ ಗುಲಾಂ ನಬಿ ಲೋನ್, ಮಾಜಿ ಮಾಹಿತಿ ಆಯುಕ್ತ ಸತ್ಯಾನಂದ ಮಿಶ್ರಾ, ದೆಹಲಿಯ ಮಾಜಿ ಪೊಲೀಸ್ ಆಯುಕ್ತ ನೀರಜ್ ಕುಮಾರ್, ಸಿಬಿಐನ ಮಾಜಿ ನಿರ್ದೇಶಕ ಕೆ. ಸಲೀಂ ಅಲಿ ಇದರಲ್ಲಿ ಸೇರಿದ್ದಾರೆ.
ಗೃಹಿಣಿ, ವಿದ್ಯಾರ್ಥಿ, ವಿಮಾ ಏಜೆಂಟ್ ಅರ್ಜಿ
ಲೋಕಪಾಲದಲ್ಲಿನ ಹುದ್ದೆಗಳಿಗೆ ಖ್ಯಾತನಾಮರಲ್ಲದೆ ಗ್ಯಾರೇಜ್ ಸಹಾಯಕ, ಗೃಹಿಣಿ, ಸಾಲ ವಸೂಲಾತಿ ಏಜೆಂಟ್, ಬಿ.ಟೆಕ್ ವಿದ್ಯಾರ್ಥಿ ಮತ್ತು ವಿಮಾ ಏಜೆಂಟ್ ಸಹ ಅರ್ಜಿ ಸಲ್ಲಿಸಿದ್ದಾರೆ. ತಾವು ಲೋಕಪಾಲ ಹುದ್ದೆಗೆ ಸಮರ್ಥರಾಗಿದ್ದು, ಭ್ರಷ್ಟಾಚಾರ ವಿರುದ್ಧ ಹೋರಾಟದ ಅತ್ಯುನ್ನತ ಸಂಸ್ಥೆಗೆ ಅರ್ಹರಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಸಂಸದೀಯ ಕಾರ್ಯದರ್ಶಿ ಅಜಿತ್ ಸೇತ್, ದೆಹಲಿಯ ಮಾಜಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಹಾಗೂ ಮಾಹಿತಿ ಆಯೋಗದ ಮಾಜಿ ಮುಖ್ಯ ಆಯುಕ್ತ ಸತ್ಯಾನಂದ ಮಿಶ್ರಾ ಮುಂತಾದವರು ಈ ಹುದ್ದೆಗಳಿಗೆ ಆಯ್ಕೆ ಬಯಸಿದ್ದಾರೆ.
ಇದೇ ರೀತಿ ಬಿ.ಟೆಕ್ ವಿದ್ಯಾರ್ಥಿ ಹಿಮಾಂಶು ಪ್ರಸಾದ್, ರೈತ ಕುಸುಮಾವತಿ ಭೀಮರಾವ್ ಜಾಧವ್ ಮತ್ತು ಕಾನೂನು ವಿದ್ಯಾರ್ಥಿ ಕೇಶವ್ ನಂದ ಭಾರ್ತಿ ಸಹ ಅರ್ಜಿ ಸಲ್ಲಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.