ಬುಧವಾರ, ನವೆಂಬರ್ 20, 2019
22 °C
ವಿಮರ್ಶೆ

ಲೋಕವನ್ನು `ಅನುಭವಿಸಿದ' ಅತೃಪ್ತನ ಆತ್ಮಕಥನ

Published:
Updated:

`ಸುರಗಿ'ಯನ್ನು ಇನ್ನೂ ಒಂದು ಬಾರಿ ಓದಿದ ನಂತರ ಬರೆಯುತ್ತಿದ್ದೇನೆ. ಇದನ್ನು ಓದುವಾಗ, ಅನೇಕ ಸಲ `ಆತ್ಮಚರಿತ್ರೆ' ಮತ್ತು `ಲೋಕಚರಿತ್ರೆ'ಗಳು ಪರಸ್ಪರ ಬೆರೆತುಹೋಗುತ್ತವೆ. ಈ ಸಂಗತಿಯು `ಸುರಗಿ'ಯ ಸಾಂಸ್ಕೃತಿಕ ಮಹತ್ವಕ್ಕೆ ಕಾರಣವಾಗಿದೆ. ಹೀಗೆ ಬದುಕುವ/ಬರೆಯುವ ಅವಕಾಶವನ್ನು ಪಡೆಯುವ ಕಲಾವಿದರು ಬಹಳ ಕಡಿಮೆ. ಅನಂತಮೂರ್ತಿಯವರಿಗೆ ಇದು ಆಯ್ಕೆಯೂ ಹೌದು, ಅದೃಷ್ಟವೂ ಹೌದು. `ತಾನು ಮಾತ್ರ ಸರಿ' ಎಂದು ಭಾವಿಸುವ, ಬರೆಯುವ `ಸೆಲ್ಫ್ ರೈಟಿಯಸ್ ನೆಸ್' ಈ ಪುಸ್ತಕವನ್ನು ಎಲ್ಲಿಯೂ ಕಾಡಿಲ್ಲ. ಅವರೇ ಹೇಳಿರುವಂತೆ, ಇದು ಆತ್ಮಕಥೆಯಾಗುತ್ತಲೇ ಆತ್ಮವಿಮರ್ಶೆಯೂ ಆಗಿದೆ. ಈ ಕಿರುಬರಹವು ಪ್ರತಿಕ್ರಿಯೆಯೇ ಹೊರತು ಪುಸ್ತಕ ವಿಮರ್ಶೆಯಲ್ಲ. ಪುನರಾವರ್ತನೆ ಮತ್ತು ಅತಿಮಾತುಗಳಿಂದ ತಪ್ಪಿಸಿಕೊಳ್ಳಲು, ಕೆಲವು ಅಂಶಗಳನ್ನು ಬಿಡಿಬಿಡಿಯಾಗಿ ಗುರುತಿಸಿದ್ದೇನೆ.* ಈ ಪುಸ್ತಕದಲ್ಲಿ, ಘಟನೆಗಳ ನಿರೂಪಣೆಯಿಂದ ಮೈಪಡೆಯುವ ಬಹಿರಂಗದ ಕಥೆಗೂ ತಲ್ಲಣ-ತಹತಹಗಳ ನಿರೂಪಣೆಯಿಂದ ಮೂಡಿಬರುವ ಅಂತರಂಗದ ಕಥೆಗೂ ಹರಿಗಡಿಯದ ಸಂಬಂಧ ಏರ್ಪಟ್ಟಿದೆ. ಸಾಮಾನ್ಯವಾಗಿ, ಮೊದಲನೆಯ ಕಥೆಯಲ್ಲಿ ಬರುವ ಸಂಗತಿಗಳ ಆಯ್ಕೆಯನ್ನು ಮತ್ತು ಅವು ನಿರೂಪಿತವಾಗುವ ಬಗೆಯನ್ನು ಎರಡನೆಯ ಕಥೆಯು ನಿಯಂತ್ರಿಸಿದೆ. ಹಾಗೆ ಆದಾಗ, ಆತ್ಮಕಥೆಯು ಭಾವತೀವ್ರವಾಗಿದೆ. ಇಲ್ಲವಾದರೆ, ಅನುಭವ-ವಿಚಾರಗಳ ನಿರೂಪಣೆಯಾಗಿದೆ.* ತನ್ನ ತಕ್ಷಣದ ಪರಿಸರದ ಹಲವು ಸಾಧ್ಯತೆಗಳನ್ನು ಹೀರುವ ಮತ್ತು ಅವುಗಳನ್ನು ಮೀರುವ ಅಪೇಕ್ಷೆಗಳು ಲೇಖಕರನ್ನು ಜಡವಾಗದಂತೆ ಕಾಪಾಡಿವೆ. ಬದುಕನ್ನು ಕೊನೆಹನಿಯವರೆಗೆ ಹೀರದವನು ಅಂತರಂಗದಲ್ಲಿ ಒಣಗುತ್ತಾನೆ. ಆ ಹೀರುವಿಕೆಯಲ್ಲಿಯೇ ಕಳೆದುಹೋದವನು ಒಳಬಾಳನ್ನು ಮುರುಟಿಸಿಕೊಂಡು, ಕೇವಲ ಲೋಲುಪನಾಗುತ್ತಾನೆ. ಹೀಗೆ ಹೀರುವ-ಮೀರುವ ಹಂಬಲವಿರುವವರು ಸದಾ ಅತೃಪ್ತರು, ಇರದುದರೆಡೆಗೆ ತುಡಿಯುವವರು. ನಿಜವಾಗಿ ನೋಡಿದರೆ, ಅನುಭವದ ಬಯಕೆಯು ಅನುಭವಿಸುವ ವಸ್ತುಗಳಿಂದ ಹಿಂಗುವುದಿಲ್ಲ. ಆದ್ದರಿಂದಲೇ ಈ ಪುಸ್ತಕದಲ್ಲಿ `ಅತ್ಯಂತ ಸಂತೋಷದ ಕ್ಷಣ'ಗಳ ದಾಖಲೆ ಇಲ್ಲವೇ ಇಲ್ಲ. ಏಕೆಂದರೆ, `ಆಲೋಚನೆಯು ತಲ್ಲೆನ ಅನುಭವದ ಶತ್ರು'. ಬಾಲ್ಯದ ದಿವ್ಯ ಕ್ಷಣಗಳು ಮಾತ್ರವೇ ತಮ್ಮ ಸಮಗ್ರತೆಯಲ್ಲಿ ನಮಗೆ ದಕ್ಕುತ್ತವೆ, ನಮ್ಮನ್ನು ಉಕ್ಕಿಸುತ್ತವೆ. `ಸುರಗಿ'ಯು ಹೀಗೆ ಲೋಕವನ್ನು `ಅನುಭವಿಸಿದ' ಅತೃಪ್ತನ ಆತ್ಮಕಥನ. ಈ ಕಥನದ ತಾತ್ವಿಕತೆಯ ಮೂಲಗಳಲ್ಲಿ ಇದೂ ಒಂದು. ಏಕೆಂದರೆ, ಅತೃಪ್ತಿಯೇ ಬೆಳವಣಿಗೆಯ ಹಾದಿ ಕೂಡ. ಈ ಅತೃಪ್ತಿಯು ಆಧ್ಯಾತ್ಮಿಕವೋ ಲೌಕಿಕವೋ ಎನ್ನುವುದು ಮಹತ್ವದ ಪ್ರಶ್ನೆ. ನಮ್ಮೆಲ್ಲರಲ್ಲಿಯೂ ಈ ಎರಡೂ ಬಗೆಯ ಅತೃಪ್ತಿಗಳು ಬೇರೆ ಬೇರೆ ಪ್ರಮಾಣದಲ್ಲಿ ಇರುತ್ತವೆ. ಲೌಕಿಕದ್ದು ಸ್ಪಷ್ಟವಾಗಿ, ಆಧ್ಯಾತ್ಮಿಕವಾದುದು ಅನುಕ್ತವಾಗಿ.* `ಸಾಂಸ್ಕೃತಿಕ ಜವಾಬ್ದಾರಿಗಳ ನಿರ್ವಹಣೆ' ಮತ್ತು `ಅಂತರಂಗದ ಅನಿಸಿಕೆಗಳ ಬಗೆಗಿನ ನಿಷ್ಠೆಯು `ಸುರಗಿ'ಯ ಮತ್ತೊಂದು ಕರ್ಷಣವನ್ನು ರೂಪಿಸಿದೆ. ಕೆ.ವಿ. ಸುಬ್ಬಣ್ಣ, ರಾಜೀವ ತಾರಾನಾಥ, ಲಂಕೇಶ್, ಜಾರ್ಜ್ ಫರ್ನಾಂಡಿಸ್ ಮತ್ತು ಗೋಪಾಲಗೌಡರ ನಡುವಿನ ಸಂಬಂಧಗಳನ್ನು ಕಟ್ಟಿಕೊಡುವ ಬಗೆಯು ಈ ಮಾತಿಗೆ ಸಾಕ್ಷಿ. ಉಳಿದವರಿಗೆ ಆತ್ಮಸಮರ್ಥನೆಯ ಅವಕಾಶ ಇರುವುದಿಲ್ಲವೆಂದು ಗೊತ್ತಿರುವುದರಿಂದ, ಈ ಪುಸ್ತಕವು ಎಲ್ಲಿಯೂ `ವಲ್ಗರ್' ಆಗಲೀ `ಸ್ಕ್ಯಾಂಡಲಸ್' ಆಗಲೀ ಆಗುವುದಿಲ್ಲ.`ಸಾರ್ವಜನಿಕವಾಗಿಯೂ ಮುಖ್ಯವಲ್ಲದ ಖಾಸಗಿ ವಿವರಗಳಿಗೆ ಆತ್ಮಕಥೆಯಲ್ಲಿ ಜಾಗವಿಲ್ಲ'ವೆನ್ನುವ ತಿಳಿವಳಿಕೆಯು `ಸುರಗಿ'ಯನ್ನು ಅನಗತ್ಯವಾದ ರೋಚಕತೆಯಿಂದ ಕಾಪಾಡಿದೆ. ಖಾಸಗಿಯಾದುದರ ಸಾರ್ವಜನಿಕ ಮಹತ್ವವು ಹಲವು ಬಗೆಗಳಲ್ಲಿ ತೀರ್ಮಾನವಾಗುತ್ತದೆ. ಮುಖ್ಯವಾಗಿ ಅದು ಅನುಭವಕ್ಕೆ ತಾತ್ವಿಕತೆಯನ್ನು ಜೋಡಿಸುವ ಪ್ರಶ್ನೆ. `ಸುರಗಿ'ಯಲ್ಲಿ ಅಂತಹ ಹಲವು ಕ್ಷಣಗಳಿವೆ.         

                               

* ಕರ್ನಾಟಕದಿಂದ ಮತ್ತು ಇಂಡಿಯಾದಿಂದ ಆಚೆಗೆ ನಡೆಯುವ ಘಟನೆಗಳನ್ನು ನಿರೂಪಿಸುವ ಭಾಗಗಳು ಬಹಳ ಅಮೂಲ್ಯವಾದವು. ಈ ಭಾಗಗಳನ್ನು ಸಾಹಿತ್ಯಕವಾಗಿ ಬರೆಯುವ ಸಾಧ್ಯತೆಗಳು ಕನ್ನಡದಲ್ಲಿ ಬಹಳ ಜನರಿಗೆ ಇರಲಿಲ್ಲ. ಇಂಗ್ಲೆಂಡಿನಲ್ಲಿ ಕಳೆದ ದಿನಗಳ ಬೌದ್ಧಿಕ, ಐಂದ್ರಿಯಿಕ ಮತ್ತು ಭಾವನಾತ್ಮಕ ಜೀವನದ ವಿವರಗಳು ತಮ್ಮ ಒಳನೋಟಗಳು ಮತ್ತು ಸ್ವ-ವಿಮರ್ಶೆಯಿಂದ ಮುಖ್ಯವಾಗುತ್ತವೆ. ಅವು ಒಬ್ಬ ವ್ಯಕ್ತಿಯ ಅನುಭವಗಳಾಗಿ ಉಳಿಯದೆ, ನಿರ್ದಿಷ್ಟ ಹಿನ್ನೆಲೆಯಿರುವವರ ಸಾರ್ವತ್ರಿಕ ಅನುಭವಗಳಾಗುತ್ತವೆ. `ಕಲಾತ್ಮಕತೆ'ಯ ಚೌಕಟ್ಟಿನಲ್ಲಿ ಇಂತಹುದೇ ಅನುಭವಗಳು ಬೇರೇನೋ ಆಗಿ ರೂಪು ತಳೆದಿರುವುದನ್ನು, ಅವರ ಕಥೆಗಳ ಓದುಗರು ಬಲ್ಲರು. ಅಂತಹ ಅನುಭವಗಳ ಪಕ್ಕದಲ್ಲಿ ಇಟ್ಟು ನೋಡಿದಾಗಲೂ ಇವುಗಳಿಗೆ ಬೇರೆ ಬಗೆಯ ಮೌಲಿಕತೆ ಬರುತ್ತದೆ.                   * ಅಂತೆಯೇ ಕರ್ನಾಟಕದ ಒಳಗೆ ನಡೆಯುವ ಬಾಲ್ಯ-ಪೂರ್ವಯೌವನಗಳ ಚಿತ್ರಣ ಕೂಡ ಅಧಿಕೃತವಾಗಿದೆ. ಸಮಸ್ಯೆ ಬರುವುದು, ನಮ್ಮ ಕಾಲದ ಸಾಂಸ್ಕೃತಿಕ- ಸಾಮಾಜಿಕ ಚರಿತ್ರೆಯ ಸಂಗಡ ಸೇರಿಹೋಗಿರುವ, ಮೂವತ್ತರಿಂದ ಎಂಬತ್ತರವರೆಗಿನ ಬದುಕಿನ `ತಂತಿಯ ಮೇಲಿನ ನಡಿಗೆ'ಯ ನಿರೂಪಣೆಯಲ್ಲಿ. ಈ ಕಾಲವು ಬ್ರಾಹ್ಮಣ ಕಲಾವಿದರ ಆತ್ಮಪರೀಕ್ಷೆಯ ಕಾಲ, ಅಗ್ನಿಪರೀಕ್ಷೆಯ ಕಾಲ, ಯಾವ ಹೆಜ್ಜೆಯೂ ತಪ್ಪು ಹೆಜ್ಜೆಯೇ. `ಸರಿಯಾದುದನ್ನೇ ಮಾಡಿದರೂ ಅದು ವಂಚನೆ ಇರಬಹುದು' ಎಂಬ ಅನುಮಾನ. ಇಂತಹ ಸಂದರ್ಭದಲ್ಲಿ  ಸೆಕ್ಯುಲರ್ ಆಗಿ ಬದುಕುವುದು ನ್ಯಾಯ ಮತ್ತು ಕಷ್ಟಸಾಧ್ಯ. ಆದ್ದರಿಂದಲೇ ಇವರು ಎಲ್ಲರ ಬಾಣಗಳ ಗುರಿಯಾಗಿ ಕೆಲವು ದಶಕಗಳನ್ನೇ ಕಳೆದಿದ್ದಾರೆ. ಸ್ವತಃ ಕಾರಂತರೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಹಳ ಬಹಳ ಹುಷಾರಾಗಿ, ಬದುಕದಿದ್ದರೆ, ಅಂತಹ ಅನುಮಾನಗಳು ಸಕಾರಣ ಆಗಿಬಿಡುತ್ತವೆ. ಹೀಗಾದಾಗ ಬರವಣಿಗೆಯಲ್ಲಿ ಸ್ವ-ಸಮರ್ಥನೆಯ ಧಾಟಿಯು ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಓದುವವರು ಕೂಡ, ಅದೇ ಸಂದರ್ಭಗಳಲ್ಲಿ ಭಾಗಿಯಾಗಿದ್ದ ಇತರರ ಬರವಣಿಗೆಯನ್ನೂ ಓದಿ ತಮ್ಮದೇ ಆದ ತೀರ್ಮಾನಗಳಿಗೆ ಬರುತ್ತಾರೆ. ಸತ್ಯ ಯಾರಿಗೆ ಗೊತ್ತು? ಯಾರಿಗೆ ಬೇಕು? ಕೊನೆಗೂ ಬೇರೆಯವರ ಬಗ್ಗೆ ಬರೆಯುವುದು ಕೂಡ ಬರೆಯುತ್ತಿರುವವನ ಸ್ವಂತಕ್ಕೆ ಸಂಬಂಧಿಸಿದಂತೆ ಮಾತ್ರವೇ. ಆದ್ದರಿಂದಲೇ ಇದರಲ್ಲಿ ಇನ್ನೊಬ್ಬರ ಆತ್ಮಚರಿತ್ರೆಯನ್ನೋ ಜೀವನಚರಿತ್ರೆಯನ್ನೋ ಹುಡುಕಬಾರದು.  ಪ್ರತಿಯೊಂದು ಘಟನೆಯ ವಿಶ್ಲೇಷಣೆಯನ್ನೂ ಹಿನ್ನೋಟದ ಬೆಂಬಲದಿಂದ ಮಾಡಬಹುದು. ರಾಜಕೀಯವೂ ಅಷ್ಟೆ, ಚಳವಳಿಗಳೂ ಅಷ್ಟೆ, ಮನುಷ್ಯ ಸಂಬಂಧಗಳೂ ಅಷ್ಟೆ. ಲಂಕೇಶ್ ಮತ್ತು ಅನಂತಮೂರ್ತಿ ಇಬ್ಬರೂ ಕಾಂಗ್ರೆಸ್ ರಾಜಕೀಯವು ಜನತಾದಳ-ಬಿ.ಜೆ.ಪಿ.ಗಳ ರಾಜಕೀಯಕ್ಕಿಂತ     ಉತ್ತಮವೆಂದು ಕಂಡುಕೊಂಡಿದ್ದು ಇಪ್ಪತ್ತು ವರ್ಷ ತಡವಾಗಿ. ಮೊದಲಿನಿಂದಲೂ ಆ ತಿಳಿವಳಿಕೆಯನ್ನು ಪಡೆದವರು ಹಲವರಿದ್ದರು. ಇಂತಹ ಕೆಲವು ಸನ್ನಿವೇಶಗಳು ಇಲ್ಲಿವೆ. ಅದೇನೇ ಇರಲಿ, ಈ ಭಾಗಗಳನ್ನು ಬರೆಯುವಾಗ ಒಂದಿಷ್ಟು ಹಿಂಜರಿಕೆ ಮತ್ತು ಒಂದಿಷ್ಟು ಜಾಣತನಗಳು ಕಾಣಿಸಿಕೊಂಡಿವೆ. ಒಂದು ಅರ್ಥದಲ್ಲಿ ಎಲ್ಲ ಆತ್ಮಕಥಾನಕ'ಗಳೂ `ಅರ್ಧ ಕಥಾನಕ'ಗಳೇ ಹೌದು. ಹೇಳದೆ ಉಳಿದ ಅರ್ಧವು ಖಂಡಿತವಾಗಿಯೂ ಗೌಣವಲ್ಲ.* `ಸೃಜನಶೀಲತೆಯ ಉಬ್ಬುತಗ್ಗುಗಳು' ಎನ್ನುವ ಅಧ್ಯಾಯದ ಹೆಸರೇ ಚೆನ್ನಾಗಿದೆ. ಸೃಜನಶೀಲತೆಯನ್ನು ಪತ್ರಿಕೋದ್ಯಮ, ಸಾರ್ವಜನಿಕಗಳೂ ಸೇರಿದಂತೆ ಹಲವು ನೆಲೆಗಳಲ್ಲಿ ಬಳಸಿಕೊಂಡಿರುವ ಈ ಲೇಖಕರಿಗೆ `ತಗ್ಗು'ಗಳಿಂದ ಅಂತಹ ಹಾನಿಯಾಗಿಲ್ಲ. ಬದುಕುವುದು ಕೂಡ ಬರವಣಿಗೆಯಷ್ಟೇ ಸೃಜನಶೀಲ. ಆದರೂ ಈ `ಅಧ್ಯಾಯವು ಇನ್ನಷ್ಟು ದೀರ್ಘವಾಗಿರಬಹುದಿತ್ತು. `ಬೇಂದ್ರೆಯವರ ಕಾವ್ಯಯೋಗ'ದಲ್ಲಿ ಆಗುವ ಹಾಗೆ, ಲೇಖಕವಿಶಿಷ್ಟವಾದ `ಟಛಿಠಿಜ್ಚಿ' ಅನ್ನು ಕಟ್ಟಿಕೊಡಲು ಅನಂತಮೂರ್ತಿಯವರಿಗೆ ಸಾಧ್ಯವಾಗಬಹುದಿತ್ತು. ಈಗಲೂ ಅಂತಹುದೊಂದು ಸಾಧ್ಯತೆ ಇದೆ. ನವ್ಯರಾಗಿಯೂ ನವ್ಯವನ್ನು ಮೀರಿದ ಕೆಲವೇ ಕೆಲವರಲ್ಲಿ ಅವರೂ ಒಬ್ಬರು. ಈ ಮೀರುವಿಕೆಯು ಲೋಕದೃಷ್ಟಿಯಲ್ಲಿ ಮಾತ್ರ ನಡೆದಿದೆಯೋ ಅಥವಾ ಸೃಜನಶೀಲ ಬರವಣಿಗೆಯಲ್ಲಿಯೂ ಅದು ಸಾಧ್ಯವಾಗಿದೆಯೋ ಎನ್ನುವುದು ಕುತೂಹಲಕಾರಿಯಾದ ಸಂಗತಿ. ಅವರು ಕಾವ್ಯದಲ್ಲಿ ತೋರಿಸಿರುವಷ್ಟು ಪ್ರಯೋಗಶೀಲತೆಯನ್ನು ಕಥೆ-ಕಾದಂಬರಿಗಳಲ್ಲಿ ತೋರಿಸಿಲ್ಲವೆಂದು ನನಗೆ ತೋರುತ್ತದೆ. ಅಲ್ಲಿನದು ವಿಕಸನವೇ ಹೊರತು `ಡಿಪಾರ್ಚರ್' ಅಲ್ಲ.* ಬರವಣಿಗೆ ಮತ್ತು ಬದುಕು ಎರಡರಲ್ಲಿಯೂ ಅವರಿಗೆ `ಸಾರ್ವಜನಿಕ'ಕ್ಕಿಂತಲೂ ಒಳಬಾಳು ಮುಖ್ಯವಾಗಿದೆ ಎನ್ನುವುದು `ಸುರಗಿ'ಯಲ್ಲಿ ನಿಚ್ಚಳವಾಗುವ ಸತ್ಯ. ಆದರೆ, ಮೀಡಿಯಾಗಳ ಬಗೆಗಿನ ಹಪಹಪಿ ಮತ್ತು `ಯಾವುದರ ಬಗ್ಗೆಯೂ ಮೌನ ತರವಲ್ಲ' ಎಂಬ ಹಟಗಳು ಅವರ ಒಳಬಾಳಿನ ಸೂಕ್ಷ್ಮಗಳನ್ನು ಜನರ ಕಣ್ಣಿಗೆ ಬೀಳದಂತೆ, ಬಿದ್ದರೂ ಗಮನಕ್ಕೆ ಬರದಂತೆ ಮಾಡಿದೆ. ಸ್ವತಃ ಅವರಿಗೂ ಸಾಮಾಜಿಕದಲ್ಲಿ ಬೆರೆಯದ `ಸ್ವಂತ'ವು ಗೌಣವೆಂದು ತೋರಿದೆ. ತಾನಲ್ಲದ ಅನ್ಯರ ಮೂಲಕ ಸತ್ಯಗಳನ್ನು ಕಾಣುವ ಹಾಗೂ ಕಾಣಿಸುವ ಕೆಲಸವು ಅವರಿಗೆ ಈಚಿನ ವರ್ಷಗಳಲ್ಲಿ ಅಷ್ಟಾಗಿ ಹಿಡಿಸಿಲ್ಲ. ಆದರೆ, ರಿಲ್ಕ್, ಬ್ಲೇಕ್ ಮುಂತಾದವರ ಕವಿತೆಗಳ ಅನುವಾದದಲ್ಲಿ ಇಂತಹುದೊಂದು ಪ್ರಯತ್ನವಿದೆ.ಉದಾಹರಣೆಗೆ ಅವರು ಕೇರಳದಲ್ಲಿ ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಮತ್ತು ಅದರ ಹಿಂದಿನ ತಾತ್ವಿಕತೆಯ ಬಗ್ಗೆ ಯಾರೂ ಏನೂ ಹೇಳಲೇ ಇಲ್ಲ. ಈಗ ಅವರೇ ಹೇಳಿಕೊಂಡಾಗ ಅದು `ಸ್ವ-ಪ್ರಶಂಸೆ'ಯಂತೆ ಕಾಣುತ್ತದೆ. ಇದೊಂದು ನಿಜವಾದ ಬಿಕ್ಕಟ್ಟು. ಅಂತೆಯೇ ಹೊರಬದುಕಿನ ವಿವರಗಳ ಬಗ್ಗೆ ಮತ್ತು ಒಳಬದುಕಿನ ತಲ್ಲಣಗಳ ಬಗ್ಗೆಯೂ ಅವರೇ ಸಮಜಾಯಿಷಿಗಳನ್ನು ಹೇಳಬೇಕಾಗಿ ಬಂದಿದೆ. ಇದಕ್ಕೆ ಒಂದು ಕಾರಣ, ಅವರ ಸುತ್ತಸುಳಿಯುವ ಮಿತ್ರವರ್ಗದಲ್ಲಿದ್ದವರಲ್ಲಿ ಅನೇಕರು ಎಷ್ಟೋ ಸಲ `ಪ್ರಶಂಸಾಪರರೋ', `ವಿಗ್ರಹಪೂಜಕ'ರೋ ಅಥವಾ `ಸಮಯಸಾಧಕರೋ' ಆಗಿರುವುದು. ಇವರುಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಹಾಗೆ ನೋಡಿದರೆ, ಅನಂತಮೂರ್ತಿಯವರು ತಮ್ಮ ಮಿತ್ರರಿಗಿಂತ ಹೆಚ್ಚಾಗಿ `ಪ್ರತಿಸ್ಪರ್ಧಿ'ಗಳಿಂದಲೇ ಕಲಿತಿರುತ್ತಾರೆ. ಯಾವುದೋ `ಒಂದನ್ನು' ಸತ್ಯವೆಂದು ತಿಳಿದವನಿಗೆ ಸಮಸ್ಯೆಗಳಿಲ್ಲ. ಸತ್ಯದ ಬಹುಮುಖತೆಯ ಅರಿವಿದ್ದು, ಸುಮ್ಮನೆ ಇರುವವನಿಗೂ ಸಮಸ್ಯೆ ಇಲ್ಲ. `ಬಹುತ್ವ' ಮತ್ತು `ಕ್ರಿಯಾಶೀಲತೆ' ಒಟ್ಟಿಗೆ ಇರಬೇಕಾದಾಗ ನಿಜವಾದ ಬಿಕ್ಕಟ್ಟು ಪ್ರಾರಂಭ. ಅವರದು ಇಂತಹ ತಲ್ಲಣ. ಇದರ ಸಂಗಡವೇ ನಮಗೆಲ್ಲರಿಗೂ ಕೀರ್ತಿ ಮತ್ತು ಯಶಸ್ಸುಗಳ ಬಗ್ಗೆ ಗುಟ್ಟಾಗಿಯೋ ಬಹಿರಂಗವಾಗಿಯೋ ಆಸೆ ಇರುತ್ತದೆ. ಅದರ ಜೊತೆಗೆ ಖಚಿತವಾದ ನಿಷ್ಠುರತೆಯ ಗೈರುಹಾಜರಿಯು, ಇವರ ಬರವಣಿಗೆ ಮತ್ತು ನಿಲುವುಗಳಲ್ಲಿ ಇಡಿಕಿರಿದಿರುತ್ತದೆ. ಹಾಗೆ ಹೊರಟಾಗ, ಎಲ್ಲರಲ್ಲಿಯೂ ಏನಾದರೊಂದು ಒಳ್ಳೆಯದನ್ನು ಹುಡುಕಬಹುದು.* ನಾನು ಈ ಪುಸ್ತಕದಿಂದ ಹಲವು ಪಾಠಗಳನ್ನು ಕಲಿತಿದ್ದೇನೆ. ಮೊದಲನೆಯದು ಎಡಪಂಥೀಯ ಆಳ್ವಿಕೆಯಲ್ಲಿ ಇರಬಹುದಾದ ಕ್ರೌರ್ಯದ ಸ್ವರೂಪ. ಹಾಗೆಂದರೆ, ಪ್ರಜಾಪ್ರಭುತ್ವ ಅಥವಾ ಸರ್ವಾಧಿಕಾರದಲ್ಲಿ ಅದಕ್ಕಿಂತ ನೂರು ಪಟ್ಟು ಕ್ರೌರ್ಯ ಇಲ್ಲವೆಂದಲ್ಲ. ಅಮೆರಿಕಾದಲ್ಲೋ ಇಂಡಿಯಾದಲ್ಲೊ ಇರುವ ಪ್ರಜಾಪ್ರಭುತ್ವದ ಅಣಕವು ಆತ್ಮವಂಚನೆಯೇ ನಿಜ. ಆದರೆ, ಸಮತಾವಾದವು ಬಿಡುಗಡೆಯ ಕನಸು ಹುಟ್ಟಿಸಿತ್ತು. ಅಂತ್ಯದಲ್ಲಿ ಅದು ಪ್ರತಿಭಟನೆಯ ಬಾಯಿಗೆ ಬಟ್ಟೆ ತುರುಕಿತು. ಎರಡನೆಯದಾಗಿ, ನೈತಿಕತೆ ಎನ್ನುವ ಪರಿಕಲ್ಪನೆಯ ಮರು ಪರಿಶೀಲನೆಯ ಅಗತ್ಯವನ್ನು ಇಲ್ಲಿನ ಹಲವು ಭಾಗಗಳು ತೋರಿಸುತ್ತವೆ. ಸ್ವಂತಕ್ಕೆ ಅಪ್ರಾಮಾಣಿಕವಾಗಿರುವುದು ಕೂಡ ಅನೈತಿಕವೇ ಇರಬಹುದು. ಕೊನೆಗೂ ಗಾಂಧಿಯಂತಹ `ಪರಮನೈತಿಕ'ನ ಬದುಕಿನಲ್ಲಿಯೂ ಶೋಷಣೆ ಇತ್ತು, `ಲ್ಯಾಕ್ ಆಫ್ ಅಂಡರ್ ಸ್ಟ್ಯಾಂಡಿಂಗ್' ಇತ್ತು. ಇದು ಅವರೇ ಹೇಳಿದ `ಮೀನ್ಸ್ ಮತ್ತು ಎಂಡ್ಸ್'ಗಿಂತ ಬಹಳ ಭಿನ್ನವಾದ ನೆಲೆ. ಮೂರನೆಯದಾಗಿ, ಈ ಪುಸ್ತಕದಲ್ಲಿ ಅವರು ಅನೇಕ ಅಪ್ರಿಯವಾದ ಸತ್ಯಗಳನ್ನು ಮ್ಯೂಟೆಡ್ ಆಗಿ ಹೇಳಿದ್ದಾರೆ. ನನ್ನ ಪ್ರತಿಯ ತುಂಬ ಅವುಗಳನ್ನು ಗುರುತು ಮಾಡಿಕೊಂಡಿದ್ದೇನೆ. ಅವು ಸೂಕ್ಷ್ಮವಾದ ಒಳನೋಟಗಳು. ಸ್ವತಃ ತನ್ನ ಮತ್ತು ಸುತ್ತಲಿನವರ ಚಿಕ್ಕಪುಟ್ಟ ದೋಷಗಳನ್ನು ನಿರ್ಮಮವಾಗಿ ಹೇಳಿಕೊಂಡಿರುವ ಬಗೆಯೂ ಇಷ್ಟವಾಯಿತು. ಎಲ್ಲಿಯೂ ಕಹಿಯಾಗಲೀ ದ್ವೇಷವಾಗಲೀ ಕಾಣುವುದಿಲ್ಲ.* ಪುಸ್ತಕದ ರಚನೆಯ ಬಗ್ಗೆ ಒಂದೆರಡು ಮಾತು. ಆ ಬಗ್ಗೆ ಸತ್ಯನಾರಾಯಣ ಅವರು ಹೇಳಿರುವುದು ಸರಿ. ಇದು ಲೀನಿಯರ್ ಆಗಿ ಕಂಡರೂ ಲೀನಿಯರ್ ಅಲ್ಲದ ಬರವಣಿಗೆ. ಏಕೆಂದರೆ, ಅನಂತಮೂರ್ತಿಯವರದು ನೆನಪುಗಳು ಕೈಹಿಡಿದು ನಡೆಸುವ ಜಾಡು. ಅವುಗಳ ಜೊತೆಗೆ, ಜ.ನಾ. ತೇಜಶ್ರಿಯವರು ಕಷ್ಟಪಟ್ಟು ಹುಡುಕಿ ತೆಗೆದ ದಾಖಲೆಗಳು ಸಮರ್ಥವಾಗಿ ಕೊಲಾಜ್ ಆಗಿವೆ. ಬದುಕಿನ ಕೆಲವು ಅಧ್ಯಾಯಗಳನ್ನು ಹಿಗ್ಗಿಸಿ ವಿವರಿಸುವ ಮತ್ತು ಬೇರೆ ಕೆಲವನ್ನು ಕುಗ್ಗಿಸಿ ಹೇಳುವ ವಿಧಾನದಿಂದ ಅವರು ತಮಗೆ ಯಾವುದು, ಏಕೆ ಮುಖ್ಯವೆಂದು ತೋರಿಸಿದ್ದಾರೆ. ಅಂತೆಯೇ, ಭಾವಗೀತೆಯಂತೆ ಆರ್ದ್ರವಾದ ಭಾಗಗಳನ್ನು `ಗದ್ಯತನದಿಂದ' ಸೊರಗಿರುವ ಭಾಗಗಳೊಡನೆ ಹೋಲಿಸಿದಾಗಲೂ ಕೆಲವು ಸತ್ಯಗಳು ಹೊಳೆಯುತ್ತವೆ. ಈ `ಗದ್ಯತನ'ವು ವಿವರಗಳಿಗೆ ಸಂಬಂಧಿಸಿದ್ದೇ ವಿನಾ ಅದನ್ನು ಬರೆದವರ ಶೈಲಿಯ ಮಾತಲ್ಲ. `ದಿನಚರಿ' ಮತ್ತು `ಕಥನ'ಗಳನ್ನು ಜಕ್ಸ್ಟ್‌ಪೋಸ್ ಮಾಡುವ ವಿಧಾನದಿಂದ ಪುಸ್ತಕಕ್ಕೆ ಸಾಕಷ್ಟು ಪ್ರಯೋಜನವಾಗಿದೆ. ಅಲ್ಲಿ ಕುವೆಂಪುರವರ ಆತ್ಮಕಥೆಯು ನೆನಪಿಗೆ ಬರುತ್ತದೆ. * ಈ ಪುಸ್ತಕವು ಮೂಡಿಬಂದಿರುವ ಬಗೆಯು ಅಪರೂಪದ್ದು. ಅನಂತ್‌ನಾಗ್, ಉಮಾಶ್ರಿ, ನಿಟ್ಟೂರು ಶ್ರಿನಿವಾಸರಾವ್ ಮುಂತಾದವರ ಆತ್ಮಕಥೆಗಳಂತೆ, ಇದು ಒಂದೇ ಸಮನೆ ಡಿಕ್ಟೇಟ್ ಮಾಡಿ ಬರೆಸಿರುವ ಪುಸ್ತಕವಲ್ಲ. ಹಾಗಾದಾಗ, ಬರೆದುಕೊಂಡವರ ಪಾತ್ರ ಗೌಣವಾಗುತ್ತದೆ. ನೆನಪುಗಳ, ಕನಸುಗಳ, ದಿನಚರಿಯ ಪುಟಗಳ, ಅಲ್ಲಿ ಇಲ್ಲಿ ಕಾಣಿಸಿಕೊಂಡಿರುವ ಲೇಖನಗಳ ಕಾಡಿನಲ್ಲಿ ಕಳೆದುಹೋಗದಂತೆ, ಏಕಾಗ್ರವಾಗಿ ಈ ಬರವಣಿಗೆಯನ್ನು ಕಟ್ಟಿರುವುದು ಅನಂತಮೂರ್ತಿಯವರು ಮತ್ತು ಜ.ನಾ. ತೇಜಶ್ರಿ ಅವರ  ಸಾಹಸ. ಮಾತುಗಳಲ್ಲಿ ಕೇಳಿಸಿಕೊಂಡಿದ್ದನ್ನು ಬರವಣಿಗೆಯಲ್ಲಿ ರೂಪಿಸುವಾಗ ಹಲವು ಬಿಕ್ಕಟ್ಟುಗಳು ಎದುರಾಗುತ್ತವೆ. ನೂರಾರು ಪುಟಗಳು ಆಡುಮಾತುಗಳನ್ನೇ ಬರೆದಿದ್ದರೆ, ಬೋರಾಗುತ್ತಿತ್ತು. ಈ ಪುಸ್ತಕವನ್ನು `ಬರವಣಿಗೆ' ಎಂದು ಕರೆಯಲು ಸಾಧ್ಯವಾಗಿರುವುದೇ ದೊಡ್ಡ ಸಾಧನೆ. ನಿರೂಪಣೆ'ಯಲ್ಲಿ `ಸೆಲ್ಫ್ ಎಫೇಸ್ಮೆಂಟ್' ಸಂಪೂರ್ಣವಾಗಿ ಸಾಧ್ಯವಾಗಿದೆ. ಕೆಲವು ಕಡೆ, ಪ್ರಶ್ನೆಗಳ ಮೂಲಕವೇ ನೆನಪುಗಳ ಮರುಕಳಿಕೆಯನ್ನು ಸಾಧಿಸಿದಂತಿದೆ. ಅದರಲ್ಲಿಯೂ ನಿರೂಪಕರು ಸ್ವತಃ ಕವಿಯೂ ಲೇಖಕರೂ ಆದಾಗ, ಮೂಡಿಬರುವ ಪ್ರಶ್ನೆಗಳು, ಕಾಮೆಂಟುಗಳು ಅನುಕ್ತವಾಗಿಯೇ ಉಳಿದಿವೆ. ಈ ತಟಸ್ಥತೆಯು ಅಪರೂಪದ್ದು. “ಈ ಪುಸ್ತಕದ ಅಂತರಂಗ ಅನಂತಮೂರ್ತಿಯವರದು, ಬಹಿರಂಗದ ಕಟ್ಟಡ ನಮ್ಮಿಬ್ಬರ ದುಡಿಮೆಯ ಫಲ” ಎನ್ನುವ ಮಾತು ನಿಜ. ಆದರೆ, ಅನಂತಮೂರ್ತಿಯವರು ಬಹಿರಂಗವನ್ನೂ ಎಚ್ಚರದಿಂದ ನೋಡಿದ್ದಾರೆ. ಅವರ ಅಪೇಕ್ಷೆಯಂತೆ, ಅವರು ಹುಡುಕಿ ಕಂಡುಕೊಂಡಿರುವ ಕೆಲವು ಸತ್ಯಗಳನ್ನು ಓದುಗರಿಗೆ ಕೊಟ್ಟಿದ್ದಾರೆ. ಹೇಳದೆ ಉಳಿದ ಸತ್ಯಗಳೂ ಸಹಜವಾಗಿಯೇ ಇರಬಹುದು. ನಿಜವಾಗಿಯೂ ಚಿತ್ತವೇನೂ ಅತ್ತಿಯಹಣ್ಣು ಅಲ್ಲ. ಯಾರ ಚಿತ್ತವೂ ಅಲ್ಲ.* ಇದು ನನಗೆ ಸಾಕಷ್ಟು ಸಂತೋಷ ಮತ್ತು ತಿಳಿವಳಿಕೆಗಳನ್ನು ಕೊಟ್ಟ, ಕೆಲವು ಪ್ರಶ್ನೆಗಳನ್ನೂ ಮೂಡಿಸಿದ ಪುಸ್ತಕ. ಈಚೆಗೆ ಕನ್ನಡದಲ್ಲಿ ಬರುತ್ತಿರುವ ಆತ್ಮಕಥೆಗಳ ಮಹಾಪೂರದಲ್ಲಿ ಇದಕ್ಕೆ ವಿಶಿಷ್ಟವಾದ ಸ್ಥಾನವಿದೆ.

ಪ್ರತಿಕ್ರಿಯಿಸಿ (+)