ಶನಿವಾರ, ನವೆಂಬರ್ 23, 2019
17 °C
ಐಐಎಂನ ಉನ್ನತ ಹುದ್ದೆಗೆ ಶ್ರೀಧರ್ ರಾಜೀನಾಮೆ

ಲೋಕಸತ್ತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ

Published:
Updated:

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸತ್ತಾ ಪಕ್ಷದ ಅಭ್ಯರ್ಥಿಯಾಗಿ ಶ್ರೀಧರ್ ಪಬ್ಬಿಸೆಟ್ಟಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ನಗರದ `ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ವೆುಂಟ್'ನಲ್ಲಿ ತಾವು ಹೊಂದಿದ್ದ ಉನ್ನತ ಹುದ್ದೆಗೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ.34 ವರ್ಷದ ತರುಣ ಶ್ರೀಧರ್, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಇ. ಪದವಿ (ಕಂಪ್ಯೂಟರ್ ಎಂಜಿನಿಯರಿಂಗ್) ಪಡೆದಿದ್ದಾರೆ. ಐಐಎಂನ `ಸಾರ್ವಜನಿಕ ನೀತಿ ಕೇಂದ್ರ'ದಲ್ಲಿ ಅವರು ಐದು ವರ್ಷಗಳ ಕಾಲ ಮುಖ್ಯ ನಿರ್ವಾಹಕ ಅಧಿಕಾರಿ (ಸಿಒಒ) ಆಗಿ ಕಾರ್ಯನಿರ್ವಹಿಸಿದ್ದರು. ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ತರಲು ಶ್ರಮಿಸುತ್ತಿರುವ ಅವರು ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರುವ ಕನಸು ಹೊಂದಿದ್ದಾರೆ. 2008ರ ವಿಧಾನಸಭೆ ಹಾಗೂ 2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ `ಕರ್ನಾಟಕ ಎಲೆಕ್ಷನ್ ವಾಚ್'ನ ಸಮನ್ವಯಕಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಜನರ ಒಳಗೊಳ್ಳುವಿಕೆಯಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ವಿಸ್ತ್ರತ ಅಧ್ಯಯನ ನಡೆಸಿರುವ ಅವರಿಗೆ ರಾಜಕೀಯ ವ್ಯವಸ್ಥೆ ಸುಧಾರಣೆ, ನಿರುದ್ಯೋಗ ಸಮಸ್ಯೆ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಆಶಯ ಇದೆ. `ದೇಶದ ಬಗ್ಗೆ ಕಾಳಜಿ ಉಳ್ಳ ಹೆಚ್ಚಿನ ನಾಗರಿಕರು ಕೈಜೋಡಿಸಬೇಕು. ಆಗ ಆದ್ಯತೆಯಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯವಾಗುತ್ತದೆ' ಎಂಬುದು ಅವರ ನುಡಿ. `ದೇಶದ ಯಾವ ಮಗು ಸಹ ಅಪೌಷ್ಠಿಕತೆ ಸಮಸ್ಯೆಯಿಂದ ಬಳಲಬಾರದು. ಅವರಿಗೆ ಉತ್ತಮ ಆರೋಗ್ಯ ಸೇವೆ ದೊರಕಬೇಕು ಹಾಗೂ ಗುಣಮಟ್ಟದ ಶಿಕ್ಷಣ ದೊರಕುವಂತೆ ಆಗಬೇಕು' ಎಂದು ಶ್ರೀಧರ್ ಹೇಳುತ್ತಾರೆ. `ಅಭಿವೃದ್ಧಿ ಪ್ರಕ್ರಿಯೆ ಯಾಂತ್ರಿಕವಾಗಿ ಆಗುವುದಿಲ್ಲ. ಸರ್ಕಾರದ ನೀತಿಯಲ್ಲಿ ಬದಲಾವಣೆಯಾಗಬೇಕು ಎಂದರು.`ಯುವಜನರು ದೇಶದ ಆಸ್ತಿ. ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸ ಆಗಬೇಕಿದೆ. ಆಗ ಸಮೃದ್ಧ ದೇಶವಾಗಿ ಪರಿವರ್ತನೆ ಹೊಂದಲು ಸಾಧ್ಯ. ನಮ್ಮ ಸಹೋದರ ಸಹೋದರಿಯರಲ್ಲಿ ಶೇ 50 ಮಂದಿ 25 ವರ್ಷಕ್ಕಿಂತ ಕಡಿವೆುಯವರು. ಕೇಂದ್ರ ಸಚಿವ ಸಂಪುಟದಲ್ಲಿರುವ ಸಚಿವರ ಸರಾಸರಿ ವಯಸ್ಸು 65 ಹಾಗೂ ಶಾಸಕರ ಸರಾಸರಿ ವಯಸ್ಸು 50. ಈ ಪರಿಸ್ಥಿತಿ ಬದಲಾಗಬೇಕಿದೆ. ಯುವಜನರ ಕೈಗೆ ಅಧಿಕಾರದ ಚುಕ್ಕಾಣಿ ಸಿಗಬೇಕು' ಎಂದು ಅವರು ಪ್ರತಿಪಾದಿಸುತ್ತಾರೆ.`ರಾಜ್ಯದ ಎಲ್ಲ ಸರ್ಕಾರಿ ಸೇವೆಗಳು ಸಕಾಲದ ಅಡಿಯಲ್ಲಿ ಬರಬೇಕು. ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಯಾಗಬೇಕು. ಸರ್ಕಾರಿ ಸೇವೆಗಳು ಜನರಿಗೆ ತ್ವರಿತಗತಿಯಲ್ಲಿ ದೊರಕಬೇಕು. ಭ್ರಷ್ಟಾಚಾರಕ್ಕೆ ಕೊನೆ ಹಾಡಬೇಕು. ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ಲೋಕಸತ್ತಾ ಪಕ್ಷ ಬೆಂಬಲಿಸಬೇಕು' ಎಂದು ಅವರು ವಿನಂತಿಸುತ್ತಾರೆ.

ಪ್ರತಿಕ್ರಿಯಿಸಿ (+)