ಸೋಮವಾರ, ಜೂನ್ 21, 2021
30 °C
ಸುದ್ದಿ ವಿಶ್ಲೇಷಣೆ

ಲೋಕಸಭೆ: ಅಭ್ಯರ್ಥಿಗಳ ಆಯ್ಕೆ ಆಭಾಸ!

ರವೀಂದ್ರ ಭಟ್ಟ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚುನಾವಣೆಯ ಸಮಯದಲ್ಲಿ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದು ಎಂದರೆ ಜೇನು­ಗೂಡಿಗೆ ಕೈ ಹಾಕಿದಂತೆ. ಅಸಮಾಧಾನದ ಸುರುಳಿ ಬಿಚ್ಚಿಕೊಳ್ಳುತ್ತಲೇ ಇರುತ್ತದೆ. ಕೆಲವು ಕ್ಷೇತ್ರಗಳಲ್ಲಿ ಈ ಅಸಮಾಧಾನ ಯಾರನ್ನೋ ಗೆಲ್ಲಿಸುತ್ತದೆ, ಇನ್ಯಾರನ್ನೋ ಸೋಲಿಸುತ್ತದೆ.ಅಸಮಾಧಾನ ಹೆಚ್ಚಾದಷ್ಟೂ ಅಧಿಕೃತ ಅಭ್ಯರ್ಥಿಯ ಕಾಲೆಳೆಯುವವರು ಹೆಚ್ಚಾ­ಗು­ತ್ತಾರೆ ಎನ್ನುವುದು ತಿಳಿದಿದ್ದರೂ ಪ್ರತಿ ಬಾರಿಯೂ ಇಂತಹ ತಪ್ಪುಗಳು ನಡೆಯುತ್ತಲೇ ಇರುತ್ತವೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷ ಮತ್ತು ಅಧಿಕೃತ ವಿರೋಧ ಪಕ್ಷ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಯ ಆಭಾಸಗಳು ಮೇಲ್ನೋಟಕ್ಕೇ ಗೋಚರವಾಗುತ್ತಿವೆ.ಹಿಂದೆಲ್ಲ ಪಕ್ಷ ಏನೇ ಆದೇಶ ಕೊಟ್ಟರೂ ಅದನ್ನು ಪಾಲಿಸುವ ಮುಖಂಡರು ಇದ್ದರು. ಈಗ ಕಾಲ ಬದಲಾಗಿದೆ. ಮುಖಂಡರ ಮೇಲೆ ಹೈಕಮಾಂಡ್‌ ಹಿಡಿತ ಕೂಡ ಕಡಿಮೆಯಾಗಿದೆ. ರಾಜ್ಯದ ನಾಲ್ಕು ಸಚಿವರಿಗೆ ಈ ಬಾರಿ ಲೋಕ­ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎಂದು ಹೈಕಮಾಂಡ್‌ ಸೂಚಿಸಿತ್ತು.  ಆದರೆ ಈ ಆದೇಶವನ್ನು ಕೇಳಲು ಯಾರೂ ಸಿದ್ಧರಿರಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುನ್ನವೇ ಮೂವರು ಸಚಿವರು ಪಾರಾದರು. ಪ್ರಕಾಶ ಹುಕ್ಕೇರಿ ಹೆಸರು ಪಟ್ಟಿಯಲ್ಲಿ ಸೇರಿತು. ಆದರೆ ಅವರೂ ಸ್ಪರ್ಧಿಸುವುದಿಲ್ಲ ಎಂದು  ಪಟ್ಟು ಹಿಡಿದಿದ್ದಾರೆ.ಬಿಜೆಪಿಯಲ್ಲೂ: ಕಾಂಗ್ರೆಸ್‌ ಕತೆ ಹೀಗಾದರೆ ಬಿಜೆಪಿ ಕತೆ ಭಿನ್ನವಲ್ಲ. ಕ್ಷೇತ್ರದ ಮಟ್ಟಿಗೆ ಸಂಪೂರ್ಣ ಅನಾಮಧೇಯರೇ ಆಗಿರುವ ಪ್ರತಾಪ ಸಿಂಹ ಅವರನ್ನು ಮೈಸೂರು–ಕೊಡಗು ಕ್ಷೇತ್ರದಲ್ಲಿ ಬಿಜೆಇ ಕಣಕ್ಕಿಳಿಸಿದೆ. ಇದಕ್ಕೆ ಸ್ಥಳೀಯವಾಗಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಎಚ್‌.ವಿಜಯಶಂಕರ್‌ ಪಕ್ಷದ ನಿರ್ಧಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.ಮೈಸೂರು ಕ್ಷೇತ್ರದಲ್ಲಿ ಒಕ್ಕಲಿಗ ಜನಾಂಗದ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ ನಡೆಸಿತ್ತು. ಇದಕ್ಕೆ ಮುಖ್ಯ ಕಾರಣ ಎಂದರೆ ಕುರುಬ ಜನಾಂಗಕ್ಕೆ ಸೇರಿದ ಎಚ್‌.ವಿಶ್ವನಾಥ್‌ ಕಾಂಗ್ರೆಸ್‌ ಅಭ್ಯರ್ಥಿ. ಅವರ ವಿರುದ್ಧ ಕುರುಬ ಜನಾಂಗಕ್ಕೇ ಸೇರಿದ ವಿಜಯಶಂಕರ್‌ ಅವರನ್ನು ನಿಲ್ಲಿಸಿದರೆ,  ‘ಕುರುಬರು ಬಿಜೆಪಿಗೆ ಮತ ಹಾಕುವುದಿಲ್ಲ. ಬದಲಾಗಿ ಸಿದ್ದರಾಮಯ್ಯ ಮತ್ತು ವಿಶ್ವನಾಥ್‌ ಅವರನ್ನೇ ಹೆಚ್ಚು ಆದರಿಸುತ್ತಾರೆ’ ಎನ್ನುವ ಮಾತಿದೆ. ಇನ್ನೊಂದು ಪ್ರಮುಖ ಕಾರಣ,   ಎಚ್‌.ವಿಶ್ವನಾಥ್‌ ಅವರು ಜೆಡಿಎಸ್‌ ವರಿಷ್ಠ ದೇವೇಗೌಡರ ಪ್ರಬಲ ವಿರೋಧಿ.ಹೀಗಾಗಿ ಗೌಡರ ಕುಟುಂಬಕ್ಕೆ ಸಿದ್ದರಾಮಯ್ಯ ಅವರಿಗಿಂತ ವಿಶ್ವನಾಥ್‌ ಮೇಲೇ ಹೆಚ್ಚು ಸಿಟ್ಟು. ಅದಕ್ಕಾಗಿ ಶತಾಯ ಗತಾಯ ವಿಶ್ವನಾಥ್‌ ಅವರನ್ನು ಸೋಲಿಸಲು ಗೌಡರ ಕುಟುಂಬ ಶ್ರಮಿಸುತ್ತದೆ. ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಶತ್ರುವಿನ ಶತ್ರು ತನಗೆ ಮಿತ್ರನಾಗ­ದಿದ್ದರೂ ಪರಿಸ್ಥಿತಿಯ ಸಹಾಯವನ್ನಾದರೂ ಪಡೆಯಬಹುದು ಎನ್ನುವುದು ಬಿಜೆಪಿಯ ಲೆಕ್ಕಾಚಾರ. ಬಿಜೆಪಿಯ ಸಾಂಪ್ರದಾಯಿಕ ಮತಗಳ ಜೊತೆಗೆ ಒಕ್ಕಲಿಗರ ಮತಗಳೂ ಸೇರಿ ಪಕ್ಷಕ್ಕೆ ಗೆಲುವು ಸುಲಭ ಎಂಬ ನಂಬಿಕೆ.ಕಳೆದ ಬಾರಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ ಮತದಾರರಿಗೆ ಈ ಬಾರಿಯೂ ಆ ಪಕ್ಷವನ್ನು ಬೆಂಬಲಿಸದೇ ಇರಲು ಯಾವುದೇ ಕಾರಣ ಇಲ್ಲ. ಅದೇ ರೀತಿ ಬಿಜೆಪಿ ಬೆಂಬಲಿಸುವ ಮತದಾರರೂ ಸ್ಥಿರವಾಗಿಯೇ ಇದ್ದಾರೆ.  ಹೀಗಿರುವಾಗ ಮೂರನೇ ಮತಬ್ಯಾಂಕ್‌ ಮೇಲೆ ಕಣ್ಣು ಹಾಕುವುದು ಬಿಜೆಪಿಗೆ ಅನಿವಾ­ರ್ಯವಾಗಿತ್ತು.ಸಾಮಾನ್ಯವಾಗಿ ಒಕ್ಕಲಿಗ ಜನಾಂಗದ ಮೇಲೆ ಆ ಜನಾಂಗದ ಸರ್ಕಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಹಿಡಿತವಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ನಂತರ ಒಕ್ಕಲಿಗ  ಅಧಿ­ಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ತೊಂದರೆ­ಯಾಗಿದೆ ಎಂಬ ಭಾವನೆ ಇದೆ. ಇದರಿಂದಾಗಿ ಜೆಡಿಎಸ್‌ ಪಕ್ಷ ಮೈಸೂರಿನಲ್ಲಿ ಅಧಿಕೃತ ಅಭ್ಯರ್ಥಿಯನ್ನು ನಿಲ್ಲಿಸಿದರೂ ಒಕ್ಕಲಿಗರು ಬಿಜೆಪಿಯನ್ನೇ ಬೆಂಬಲಿಸುತ್ತಾರೆ ಎಂಬ ನಂಬಿಕೆ ಆ ಪಕ್ಷದ್ದು.‌ಕಾಂಗ್ರೆಸ್‌ನಲ್ಲಿಯೇ ಇರುವ ಒಕ್ಕಲಿಗ ಶಾಸಕರೂ ತಮ್ಮ ಜನಾಂಗದ ಮತವನ್ನು ಕಾಂಗ್ರೆಸ್‌ ಪಕ್ಷಕ್ಕೆ ಹಾಕಿಸುವಷ್ಟು ಪ್ರಬಲರಾಗಿಲ್ಲ ಎಂಬ ಆಲೋಚನೆ ಬಿಜೆಪಿಯದ್ದು.ಮೈಸೂರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ. ಇಲ್ಲಿಯೇ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿದರೆ ಸಿದ್ದರಾಮಯ್ಯ ಅವರ ಮೇಲೆ ವಿಜಯ ಸಾಧಿಸಿದಂತಾಗುತ್ತದೆ. ಈ ಅವಕಾಶವನ್ನು ದೇವೇಗೌಡ ಕುಟುಂಬ ಬಿಟ್ಟು­ಕೊಡುವುದಿಲ್ಲ ಎಂಬ ನಂಬಿಕೆಯ ಹಿನ್ನೆಲೆ-­ಯಲ್ಲಿಯೇ ಒಕ್ಕಲಿಗ ಅಭ್ಯರ್ಥಿಯನ್ನೇ ಇಲ್ಲಿ ಕಣಕ್ಕಿಳಿಸಬೇಕು ಎಂದು ಬಿಜೆಪಿ ನಿರ್ಧರಿಸಿದೆ. ಅದಕ್ಕಾಗಿ ಸದಾನಂದ ಗೌಡ, ಶೋಭಾ ಕರಂದ್ಲಾಜೆ ಅವರನ್ನು ಕರೆ ತರಲು ಯತ್ನಿಸಿದ ಮೈಸೂರು ಬಿಜೆಪಿ ಮುಖಂಡರು, ಅವರಿಬ್ಬರೂ ಬರುವುದಿಲ್ಲ ಎನ್ನುವುದು ಗೊತ್ತಾದ ನಂತರ ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಆಕಾಂಕ್ಷಿಯಾಗಿದ್ದ ಪ್ರತಾಪ ಸಿಂಹ ಅವರನ್ನು ಇಲ್ಲಿ ಕಣಕ್ಕಿಳಿಸಲು ಮುಂದಾದರು.ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಸಿದ್ದರಾಮಯ್ಯ ಅವರೇ ಕಾರಣ ಎಂಬ ಗುಸು­ಗುಸು ಇನ್ನೂ ಆರಿಲ್ಲ. ಇದರ ಲಾಭವೂ ತನಗೆ ಸಿಗಬಹುದು ಎಂಬ ಅಂದಾಜೂ ಬಿಜೆಪಿಗೆ ಇದೆ. ರಾಜ್ಯದಲ್ಲಿ ಎಲ್ಲಿಯೂ ಬಿಜೆಪಿ ಇತರೆ ಹಿಂದುಳಿದ ವರ್ಗಗಳಿಗೆ ಟಿಕೆಟ್‌ ನೀಡಿಲ್ಲ. ಗೆಲುವು ಕಷ್ಟ ಎನ್ನುವುದು ಗೊತ್ತಿರುವ ಹಾಸನದಲ್ಲಿ ತಮಗೆ ಟಿಕೆಟ್‌ ಕೊಟ್ಟು ಅವಕಾಶ ವಂಚನೆ ಮಾಡಲಾಗಿದೆ ಎಂದು ವಿಜಯಶಂಕರ್‌ ಗೊಣಗುತ್ತಿದ್ದಾರೆ. ಅದರಲ್ಲೂ ಅರ್ಥ ಇದೆ. ಆದರೆ ಅದನ್ನು ಕೇಳುವವರಿಲ್ಲ.ದ್ವಿಮುಖ ನೀತಿ‌: ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಏರುವ ಅವಸರದಲ್ಲಿರುವ ಬಿಜೆಪಿಯ ಕೆಲವು ನಿರ್ಧಾರಗಳು ಮಾತ್ರ ವಿಚಿತ್ರವಾಗಿವೆ. ಪಕ್ಷದ ಮುಖಂಡರನ್ನು ಟೀಕೆ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಯಡಿಯೂರಪ್ಪ ಅವರ ಪಕ್ಕಾ ಬೆಂಬಲಿಗ ಧನಂಜಯ ಕುಮಾರ್‌ ಅವ­ರನ್ನು ಪಕ್ಷಕ್ಕೇ ಸೇರಿಸಿಕೊಳ್ಳುವುದಿಲ್ಲ. ಆದರೆ ಅಡ್ವಾಣಿ ಸಹಿತ ಬಿಜೆಪಿಯ ಹಲವು ಮುಖಂಡ­ರನ್ನು ಟೀಕಿಸಿದ್ದ ಬಸವರಾಜು ಅವರಿಗೆ ತುಮ­ಕೂರಿನಲ್ಲಿ ಪಕ್ಷ ಮತ್ತೊಮ್ಮೆ ಟಿಕೆಟ್‌ ನೀಡಿದೆ.ಚುನಾವಣೆಯಲ್ಲಿ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ವಿಲೀನಗೊಳಿಸಲು ಬಿಜೆಪಿ ಸ್ಥಳೀಯ ನಾಯಕತ್ವ ಮುಂದಾಗಿತ್ತು. ಆದರೆ ಸುಷ್ಮಾ ಸ್ವರಾಜ್‌ ಅವರ ವಿರೋಧದಿಂದ ಈಗ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷ ವಿಲೀನವನ್ನು ಸ್ಥಗಿತದಲ್ಲಿ ಇಡಲಾಗಿದೆ. ಆದರೆ ಪಕ್ಷದ ಸಂಸ್ಥಾಪಕ ತಾವೇ ಸ್ಥಾಪಿಸಿದ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಯನ್ನು ಸೇರಿದ್ದಾರೆ. ಅವರಿಗೆ ಬಳ್ಳಾರಿಯಿಂದ ಟಿಕೆಟ್‌ ನೀಡಲಾಗಿದೆ.ಸ್ಥಳೀಯ ಶಾಸಕರು ಮತ್ತು ಮುಖಂಡರ ವಿರೋಧದ ನಡುವೆ ಉಡುಪಿ–ಚಿಕ್ಕಮಗಳೂರು ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಅಭ್ಯರ್ಥಿ. ಬೆಂಗಳೂರು ಉತ್ತರದಲ್ಲಿ ಅಳೆದು ತೂಗಿ ಸಂಧಾನ ಕಸರತ್ತು ನಡೆಸಿ ಸದಾನಂದ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಬೀದರ್‌, ಕೋಲಾರದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.ಕಾಂಗ್ರೆಸ್‌ನಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಉತ್ತಮ ಅಲ್ಲ. ಬೆಂಗಳೂರು ಕೇಂದ್ರದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಹಿರಿಯ ಮುಖಂಡ ಜಾಫರ್‌ ಷರೀಫ್‌ ಅವರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಮೊಯಿಲಿಗೆ ಟಿಕೆಟ್‌ ನೀಡಿಕೆ ವಿಳಂಬ ಕೂಡ ಗೊಂದಲಕ್ಕೆ ಕಾರಣವಾಗಿತ್ತು.ಟಿಕೆಟ್‌ ನಿರಾಕರಣೆ ನಂತರ ಜಾಫರ್‌ ಷರೀಫ್‌ ಪ್ರತಿಕ್ರಿಯೆ ಮಾತ್ರ ವಿಚಿತ್ರವಾಗಿದೆ. ‘ನಾನೀಗ ಜೀತದಿಂದ ಮುಕ್ತನಾಗಿದ್ದೇನೆ’ ಎಂದಿದ್ದಾರೆ. ಸುದೀರ್ಘ ಕಾಲ ಕಾಂಗ್ರೆಸ್‌ನಲ್ಲಿದ್ದು ಪಕ್ಷದ ಮತ್ತು ಸರ್ಕಾರದ ಬಹುತೇಕ ಎಲ್ಲ ಉನ್ನತ ಸ್ಥಾನವನ್ನು ಪಡೆದ ಷರೀಫ್‌ ಸಾಹೇಬರ ಈ ಹೇಳಿಕೆ ಮತದಾರರಿಗೆ ತಮಾಷೆಯಾಗಿ ಕಂಡರೆ ಅಚ್ಚರಿಯಲ್ಲ.ಮಂಗಳೂರಿನಲ್ಲಿ ಅಭ್ಯರ್ಥಿ ಆಯ್ಕೆಗೆ ನಡೆದ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಪ್ರಾಥಮಿಕ ಸದಸ್ಯರಲ್ಲ ಮತ್ತು ಸಮಾಜ ಸೇವಕ ಎನ್ನುವುದಕ್ಕೆ ವಿವರಣೆ ನೀಡಿಲ್ಲ ಎಂಬ ಕಾರಣಕ್ಕೆ ಹರ್ಷ ಮೊಯಿಲಿಗೆ ಅವಕಾಶ ನಿರಾಕರಿಸಲಾಯಿತು. ಆದರೆ  ಸಮಾಜ ಸೇವೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳದ ನಂದನ್‌ ನಿಲೇಕಣಿ ಅವರಿಗೆ ಪಕ್ಷದ ಪ್ರಾಥಮಿಕ ಸದಸ್ಯರಾಗುವ ಮೊದಲೇ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್‌ ಘೋಷಣೆ ಮಾಡಲಾಗಿತ್ತು.ಪ್ರೀತಿ ಮತ್ತು ಯುದ್ಧದಲ್ಲಿ ಮಾತ್ರ ಅಲ್ಲ, ಚುನಾವಣೆ ಸಂದರ್ಭದಲ್ಲಿಯೂ ಏನು ಬೇಕಾದರೂ ಆಗಬಹುದು!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.