ಲೋಕಸಭೆ: `ಕಾವೇರಿ' ಕಲಹ

7
ಕರ್ನಾಟಕ-ತಮಿಳುನಾಡು ಸಂಸದರ ವಾಕ್ಸಮರ

ಲೋಕಸಭೆ: `ಕಾವೇರಿ' ಕಲಹ

Published:
Updated:

ನವದೆಹಲಿ (ಪಿಟಿಐ): ಕರ್ನಾಟಕ ಮತ್ತು ತಮಿಳುನಾಡು ನಡುವೆ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿರುವ `ಕಾವೇರಿ ವಿವಾದ' ಬುಧವಾರ ಲೋಕಸಭೆಯಲ್ಲಿ ಕೆಲಹೊತ್ತು ಕಲಹಕ್ಕೆ ಕಾರಣವಾಯಿತು.ಮೇಕೆದಾಟು ಜಲವಿದ್ಯುತ್ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ, ಪ್ರಧಾನಿಗೆ ಪತ್ರ ಬರೆದ ಮರುದಿನವೇ ಉಭಯ ರಾಜ್ಯಗಳ ಸಂಸದರು ಲೋಕಸಭೆಯಲ್ಲಿ ಪರಸ್ಪರ ವಾಕ್ಸಮರದಲ್ಲಿ ತೊಡಗಿದರು.ಕಾವೇರಿ ನದಿಪಾತ್ರದಲ್ಲಿ ಜಲವಿದ್ಯುತ್ ಯೋಜನೆಗಳ ಅನುಷ್ಠಾನಕ್ಕೆ ಮುಂದಾದ ಕರ್ನಾಟಕ ಸರ್ಕಾರದ ಕ್ರಮದ ವಿರುದ್ಧ ಎಐಎಡಿಎಂಕೆ ಸಂಸದ ಎಂ.ತಂಬಿದೊರೈ ಧ್ವನಿ ಎತ್ತಿದರು. `ಅನೇಕ ವರ್ಷಗಳಿಂದ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಉಭಯ ರಾಜ್ಯಗಳ ನಡುವೆ ವಿವಾದವಿದ್ದು ಕರ್ನಾಟಕ ಯಾವುದೇ ಹೊಸ ಯೋಜನೆಯನ್ನು ಆರಂಭಿಸುವ ಮೊದಲು ನಮ್ಮ ರಾಜ್ಯದ ಅನುಮತಿ ಪಡೆಯಬೇಕು' ಎಂದರು.  ಇದಕ್ಕೆ ಪ್ರತಿಯಾಗಿ ರಾಜ್ಯದ ಸಂಸದರು ಮಾತನಾಡಲು ಮುಂದಾದಾಗ ತಮಿಳುನಾಡಿನ ಸಂಸದರು ಅಡ್ಡಿ ಪಡಿಸಿದರು. ನಂತರ ಸ್ವೀಕರ್ ಆಸನದತ್ತ ನುಗ್ಗಿದ ಉಭಯ ಗುಂಪುಗಳು ಪರಸ್ಪರರ ವಿರುದ್ಧ ಘೋಷಣೆ ಕೂಗಿದರು. ಕೆಲಹೊತ್ತಿನ ಪ್ರತಿಭಟನೆ ಹಿಂತೆಗೆದುಕೊಂಡ ಸದಸ್ಯರು ತಮ್ಮ ಆಸನಗಳಿಗೆ ಮರಳಿದರಾದರೂ ಪರಸ್ಪರರ ವಿರುದ್ಧ ಘೋಷಣೆ ಕೂಗುವುದನ್ನು ನಿಲ್ಲಿಸಲಿಲ್ಲ.ಯಾದವಿ ಕಲಹ: ಹಿಂದುಳಿದ ವರ್ಗದ 17 ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿದ್ದ ಹಿಂದಿನ ಸಮಾಜವಾದಿ ಸರ್ಕಾರದ ನಿರ್ಣವನ್ನು ರದ್ದುಗೊಳಿಸಿದ್ದ ಮಾಯಾವತಿ ಸರ್ಕಾರದ ಕ್ರಮದ ವಿರುದ್ಧ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂಸಿಂಗ್ ಯಾದವ್ ಹರಿಹಾಯ್ದರು.ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಸರ್ಕಾರ ಈ ಎಲ್ಲ 17 ಹಿಂದುಳಿದ ವರ್ಗಗಳನ್ನು ಪುನಃ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿದ ನಿರ್ಣಯವನ್ನು ಪ್ರಧಾನಿಗೆ ಕಳಿಸಿದೆ. ಈ ಕುರಿತು ಕೇಂದ್ರ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್‌ನ ಎಸ್.ಕೆ. ಬಿಸ್ವಮುಥಿಯಾರಿ ಪ್ರತ್ಯೇಕ ಬೋಡೊಲ್ಯಾಂಡ್ ರಾಜ್ಯಕ್ಕೆ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry