ಭಾನುವಾರ, ನವೆಂಬರ್ 17, 2019
29 °C

ಲೋಕಸಭೆ ಚುನಾವಣೆಗೆ ಸಜ್ಜಾಗಲು ಕರೆ

Published:
Updated:

ಬೀದರ್: `ಲೋಕಸಭೆ ಚುನಾವಣೆ ಯಾವುದೇ ಸಂದರ್ಭದಲ್ಲಿ ಎದುರಾಗಲಿದ್ದು, ವಿಧಾನಸಭೆ ಚುನಾವಣೆ ಸೋಲಿನಿಂದ ಕಂಗೆಡದೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷ ಸಂಘಟನೆಗೆ ಒತ್ತು ನೀಡಬೇಕು' ಎಂದು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಕರೆ ನೀಡಿದ್ದಾರೆ.`ಬಿಜೆಪಿ ಒಂದು ಸೋಲಿನಿಂದ ಧೃತಿಗೆಡುವ ಪಕ್ಷವಲ್ಲ. ಪಕ್ಷದ ಸಂಘಟನೆಗೆ ಒತ್ತು ನೀಡುವ ಪಕ್ಷ. ವಿಧಾನಸಭೆ, ಲೋಕಸಭೆ ಚುನಾವಣೆಯ ವಿಷಯಗಳು ಭಿನ್ನವಾಗಿದ್ದು, ಬಿಜೆಪಿ ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ನರೇಂದ್ರ ಮೋದಿ ಅವರು ಪ್ರಧಾನಿ ಆಗಲು ಶಕ್ತಿ ನೀಡುವುದು ಖಚಿತ' ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಜಿಲ್ಲಾ ಬಿಜೆಪಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, `ನಾಯಕರ ಗುಂಪುಗಾರಿಕೆಯಿಂದ ವಿಧಾನಸಭೆ ಚುನಾವಣೆಯಲ್ಲಿ ಸೋಲಾಯಿತು. ಈಗ  ಗುಂಪುಗಾರಿಕೆಯನ್ನು ಕಾರ್ಯಕರ್ತರು ಕೂಡಾ ಸಹಿಸುವುದಿಲ್ಲ ಎಂಬುದು ಮುಖಂಡರಿಗೆ ಅರಿವಾಗಿದೆ' ಎಂದರು.ಲೋಕಸಭೆ ಚುನಾವಣೆಯು ಬರುವ ಏಪ್ರಿಲ್- ಮೇ ತಿಂಗಳು ನಡೆಯಬೇಕು. ಆದರೆ, ಕಾಂಗ್ರೆಸ್ ಪಕ್ಷದ ಬಿಜೆಪಿ ಅಧಿಕಾರಕ್ಕೆ ಬರುವ ಆತಂಕದಿಂದಾಗಿ, ಈ ವರ್ಷದ ನವೆಂಬರ್‌ನಲ್ಲಿ ನಾಲ್ಕು ರಾಜ್ಯಗಳಿಗೆ ಚುನಾವಣೆ ನಡೆಸುವ ಸಂದರ್ಭದಲ್ಲಿ ಲೋಕಸಭೆ ಚುನಾವಣೆಗೂ ಮುಂದಾದರೆ ಆಶ್ಚರ್ಯವಿಲ್ಲ. ಹೀಗಾಗಿ ಸಜ್ಜಾಗಬೇಕು' ಎಂದರು.ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಪಕ್ಷ ಚುನಾವಣೆ ಎದುರಿಸುತ್ತಿದೆ. ಮೋದಿ ಪ್ರಧಾನಿ ಅಗಬೇಕು ಎಂಬುದು ಯುವಜನರ ಅಪೇಕ್ಷೆ. ಈ ಅಪೇಕ್ಷೆ ಈಡೇರಿಸಲು ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.ಯಡಿಯೂರಪ್ಪ ಸೇರ್ಪಡೆ: ಈಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಕ್ಷ ಸೇರ್ಪಡೆ ಕುರಿತು ಚರ್ಚೆ ನಡೆಸಿದೆ. ಮುಖಂಡರ ಅಭಿಪ್ರಾಯವನ್ನು ಆಧರಿಸಿ ಕೇಂದ್ರ ಸಮಿತಿಯು ಈ ಬಗೆಗೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.ಕೇಂದ್ರ ಸಮಿತಿಯು ಕೈಗೊಳ್ಳುವ ತೀರ್ಮಾನಕ್ಕೆ ಕಾರ್ಯಕರ್ತರು ಬದ್ಧರಾಗಿರುತ್ತಾರೆ. ಕೇಂದ್ರ ಸಮಿತಿಯು ಈ ವಿಷಯ ಕುರಿತು ಆದಷ್ಟು ಜರೂರು ತೀರ್ಮಾನ ಮಾಡಬೇಕು ಎಂದು ಎಂದು ಅಭಿಪ್ರಾಯಪಟ್ಟರು.ಪಕ್ಷದ ಸಂಘಟನೆ ಕುರಿತು ಮಾತನಾಡಿದ ಅವರು ಪಕ್ಷದ ಸ್ಥಾನೀಯ, ಮಂಡಲ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಜಿಲ್ಲಾವಾರುವೀಕ್ಷಕರ ಸಭೆಯು 3ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದರು.ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಶಾಸಕ ಪ್ರಭು ಚವ್ಹಾಣ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ಅಮರನಾಥ್ ಪಾಟೀಲ್, ಮಾಜಿ ಶಾಸಕರಾದ ರಾಜೇಂದ್ರ ವರ್ಮಾ, ಪ್ರಕಾಶ್ ಖಂಡ್ರೆ, ಪ್ರಮುಖರಾದ ಬಾಬುರಾವ್ ಮದಕಟ್ಟಿ, ಬಾಬುವಾಲಿ, ವಿಜಯಲಕ್ಷ್ಮಿ ಹೂಗಾರ್, ಸಂಜಯ್ ಪಟವಾರಿ, ಪದ್ಮಾಕರ್ ಪಾಟೀಲ್, ಅಶೋಕ್ ಗುತ್ತೆದಾರ್ ಇದ್ದರು.

ಪ್ರತಿಕ್ರಿಯಿಸಿ (+)