ಶುಕ್ರವಾರ, ಜೂನ್ 25, 2021
29 °C

ಲೋಕಸಭೆ ಸ್ಪರ್ಧೆಗೆ ಸಚಿವರ ನಿರಾಸಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗು­ತ್ತಿದ್ದಂತೆ ಕಾಂಗ್ರೆಸ್‌ ಪಕ್ಷದಲ್ಲೂ ಚಟುವಟಿಕೆಗಳು ಚುರುಕುಗೊಂಡಿದ್ದು, ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಕಸರತ್ತು ನಡೆದಿದೆ.ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನವದೆಹಲಿಯಲ್ಲಿ ಇದೇ 7ರಂದು ನಡೆಯಲಿದ್ದು, ರಾಜ್ಯದ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಅಂದು ಸಂಜೆ ವೇಳೆಗೆ ಪ್ರಕಟವಾಗುವ ನಿರೀಕ್ಷೆ ಇದೆ.ಆದರೆ, ಚುನಾವಣೆಗೆ ಕೆಲವು ಸಚಿವರು ಮತ್ತು ಶಾಸಕರನ್ನು ಕಣಕ್ಕಿಳಿಸುವ ಮೂಲಕ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಚಿಂತನೆ ಸಾಕಾರಗೊಳ್ಳುವ ಸಾಧ್ಯತೆಗಳು ಕಾಣುತ್ತಿಲ್ಲ. ಸಚಿವರು ಸ್ಪರ್ಧಿಸಲು ನಿರಾಸಕ್ತಿ ತೋರಿದ್ದು, ತಾವು ಸೂಚಿಸುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಂತೆ ವರಿಷ್ಠರನ್ನು ಕೋರಿದ್ದಾರೆ.ಪ್ರಮುಖವಾಗಿ ಸಚಿವರಾದ ಪ್ರಕಾಶ ಹುಕ್ಕೇರಿ (ಚಿಕ್ಕೋಡಿಯಿಂದ), ಎಚ್‌. ಆಂಜನೇಯ (ಚಿತ್ರದುರ್ಗ) ಮತ್ತು ಕೃಷ್ಣ ಬೈರೇಗೌಡ (ಬೆಂಗಳೂರು ಉತ್ತರ)  ಅವರನ್ನು ಕಣಕ್ಕಿಳಿಸುವ ಬಗ್ಗೆ ವರಿಷ್ಠರು ಸಮಾಲೋಚನೆ ನಡೆಸಿದ್ದರು. ಆದರೆ, ಈ ಮೂವರೂ ಸ್ಪರ್ಧೆಗೆ ಹಿಂದೇಟು ಹಾಕಿದ್ದು, ಈಗಿರುವ ಹುದ್ದೆಯಲ್ಲೇ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ.ಪ್ರಕಾಶ ಹುಕ್ಕೇರಿ ಅವರು ತಮ್ಮ ಮಗ ಗಣೇಶ ಹುಕ್ಕೇರಿಯನ್ನು ಚಿಕ್ಕೋಡಿಯಲ್ಲಿ ಕಣಕ್ಕಿಳಿಸಲು ಮುಂದಾಗಿದ್ದಾರೆ. ಈ ಕ್ಷೇತ್ರದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮಣ ಸಿಂಗಳೆ, ಬಿಜೆಪಿಯ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಪುತ್ರ ಅಮಿತ್‌ ಕೋರೆ, ಮಾಜಿ ಸಚಿವ ಎ.ಬಿ. ಪಾಟೀಲ್‌ ಅವರು ಸಹ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಆಕಾಂಕ್ಷಿಗಳಾಗಿದ್ದಾರೆ.ಚಿತ್ರದುರ್ಗದಿಂದ ಲಿಡ್ಕರ್‌ ಮಾಜಿ ಅಧ್ಯಕ್ಷ ಚಂದ್ರಪ್ಪ ಅವರನ್ನು ಕಣಕ್ಕಿಳಿಸುವ ಬಗ್ಗೆ ಆಂಜನೇಯ ಒಲವು ತೋರಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ 35ಕ್ಕೂ ಹೆಚ್ಚು ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದಾರೆ. ಈ ಕ್ಷೇತ್ರದಲ್ಲಿ ಎಡಗೈ ಸಮುದಾಯಕ್ಕೆ ಟಿಕೆಟ್‌ ನೀಡುವ ಬಗ್ಗೆ ಹೈಕಮಾಂಡ್‌ ಒಲವು ತೋರಿದೆ.ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿ.ಎಲ್‌. ಶಂಕರ್‌, ಕೆ.ಸಿ. ರಾಮಮೂರ್ತಿ, ಜಿ.ಸಿ. ಚಂದ್ರಶೇಖರ್‌, ಸಿ. ನಾರಾಯಣಸ್ವಾಮಿ, ಆರತಿ ಕೃಷ್ಣ, ರಾಜೀವ್‌ಗೌಡ, ಎನ್‌.ಎಲ್‌. ನರೇಂದ್ರಬಾಬು ಸೇರಿದಂತೆ ಹಲವಾರು ಆಕಾಂಕ್ಷಿಗಳಿದ್ದಾರೆ.ದಾವಣಗೆರೆಯಲ್ಲಿ ಬಿಜೆಪಿ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಪ್ರಬಲ ಸ್ಪರ್ಧೆ ನೀಡುವ ಉದ್ದೇಶದಿಂದ ಸ್ಪರ್ಧಿಸುವಂತೆ ಎಸ್‌.ಎಸ್‌. ಮಲ್ಲಿಕಾರ್ಜುನ ಅವರಿಗೆ ಸೂಚಿಸಲಾಗಿದೆ. 2009ರ ಚುನಾವಣೆಯಲ್ಲೂ ಇವರಿಬ್ಬರೂ ಎದುರಾಳಿಗಳಾಗಿದ್ದರು. ಮಹಿಮಾ ಪಟೇಲ್‌ ಅವರ ಹೆಸರು ಕೂಡ ಕೇಳಿಬರುತ್ತಿದೆ.‘ವರಿಷ್ಠರು ಸೂಚಿಸಿದರೆ ಸಚಿವರು ಸ್ಪರ್ಧಿಸಲೇಬೇಕು’

ಲೋಕಸಭೆ ಚುನಾವಣೆಯಲ್ಲಿ ಅಗತ್ಯಬಿದ್ದರೆ ಕೆಲವು ಸಚಿವರು ಮತ್ತು ಶಾಸಕರನ್ನು ಕಣಕ್ಕಿಳಿಸ­ಲಾಗುವುದು.  ಕೆಲವೇ ಕ್ಷೇತ್ರಗಳಲ್ಲಿ ಮಾತ್ರ ಈ ಪ್ರಯೋಗ ನಡೆಯಲಿದೆ. ವರಿಷ್ಠರು ಸೂಚಿಸಿದರೆ ಸಚಿವರು ಸ್ಪರ್ಧಿಸುವುದು ಅನಿವಾರ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಸಚಿವರು, ಶಾಸಕರನ್ನು ಕಣಕ್ಕಿಳಿಸಲು ಪ್ರಯತ್ನ ಮಾಡುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸಾಮಾನ್ಯ’ ಎಂದು ಸಮರ್ಥಿಸಿಕೊಂಡರು.ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಮುಕ್ತಾಯಗೊಂಡಿದೆ. ಕೆಲವು ಕಾರಣಗಳಿಂದ ಕೇಂದ್ರ ಚುನಾವಣಾ ಸಮಿತಿ ಸಭೆ ಸೇರುವುದು ಸಾಧ್ಯವಾಗಿಲ್ಲ. ಆದರೆ ಅಭ್ಯರ್ಥಿಗಳಿಗೆ ಸೂಚ್ಯವಾಗಿ ತಿಳಿಸಲಾಗಿದೆ ಎಂದರು.6 ತಿಂಗಳಿಂದ ಪಕ್ಷವು  ಚುನಾವಣೆ ಸಿದ್ಧತೆಗಳನ್ನು ಕೈಗೊಂಡಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗಳು ಸಹ ನಡೆಯುತ್ತಿವೆ. ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ಎಲ್ಲ ರಾಜ್ಯಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದು, ರಾಜ್ಯದಲ್ಲಿ ಇನ್ನೂ ಎರಡು ಅಥವಾ ಮೂರು ಬಾರಿ ಪ್ರಚಾರದಲ್ಲಿ ತೊಡಗುತ್ತಾರೆ. ಜತೆಗೆ ತಾರಾ ಪ್ರಚಾರಕರ ಪಟ್ಟಿಯೂ ಸಿದ್ಧಗೊಂಡಿದೆ ಎಂದು ತಿಳಿಸಿದರು.ಉಪಮುಖ್ಯಮಂತ್ರಿ ನೇಮಕ ವರಿಷ್ಠರಿಗೆ ಬಿಟ್ಟ ವಿಚಾರ. ಸಚಿವ ಸಂಪುಟಕ್ಕೆ ಯಾರನ್ನು ಯಾವಾಗ ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆ ವರಿಷ್ಠರೇ ನಿರ್ಧಾರ ಕೈಗೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ವರಿಷ್ಠರು ಮುಖ್ಯಮಂತ್ರಿ ಅಭಿಪ್ರಾಯ ಕೇಳಬಹುದು ಎಂದರು.‘ಮುಖ್ಯಮಂತ್ರಿ ಮತ್ತು ನನ್ನ ನಡುವೆ ಯಾವುದೇ ರೀತಿ ಭಿನ್ನಾಭಿಪ್ರಾಯ ಇಲ್ಲ. ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಇಬ್ಬರೂ ಸಮಾಲೋಚನೆ ನಡೆಸುತ್ತೇವೆ’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.