ಶುಕ್ರವಾರ, ಮೇ 14, 2021
27 °C

ಲೋಕಾಯಕ್ತ ವರದಿ ಒಪ್ಪಿ, ಅಪರಾಧಿಗಳ ಬಂಧಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ಸಲ್ಲಿಸಿರುವ ವರದಿಯನ್ನು ಸರ್ಕಾರ ತಕ್ಷಣ ಒಪ್ಪಿಕೊಳ್ಳುವ ಮೂಲಕ ಅಪರಾಧಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಬೇಕು ಎಂದು ಪ್ರಗತಿಪರ ಹೋರಾಟಗಾರರು, ವಿಚಾರವಾದಿಗಳು ಹಾಗೂ ಸಾಹಿತಿಗಳು ಒತ್ತಾಯಿಸಿದ್ದಾರೆ.ಲೋಕಾಯುಕ್ತ ವರದಿಯ ಜಾರಿಗೆ ಆಗ್ರಹಿಸಿ ಸಿಪಿಐ(ಎಂ) ಬುಧವಾರ ಎಸ್‌ಸಿಎಂ ಹೌಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ  ಅವರು ಮಾತನಾಡಿದರು.ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ, `ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಸರ್ಕಾರ ಮೀನಮೇಷ ಎಣಿಸದೆ ಮೊದಲು ಒಪ್ಪಿಕೊಳ್ಳಬೇಕು~ ಎಂದು ಒತ್ತಾಯಿಸಿದರು.ಆಂದೋಲನಕ್ಕೆ ಸಜ್ಜುಗೊಳಿಸಬೇಕು: ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಮಾತನಾಡಿ, `ಲೋಕಾಯುಕ್ತವೇ ಒಂದು ಶಾಸನಬದ್ಧ ಸಮಿತಿಯಿದ್ದಂತೆ. ಹೀಗಾಗಿ, ಲೋಕಾಯುಕ್ತ ವರದಿಯನ್ನು ಪರಿಶೀಲಿಸಲು ಮತ್ತೊಂದು ಸಮಿತಿ ರಚಿಸುವ ಸರ್ಕಾರದ ನಿರ್ಧಾರವೇ ಅಪಹಾಸ್ಯ~ ಎಂದು ಟೀಕಿಸಿದರು.`ಖಾಸಗೀಕರಣ ತೀವ್ರ ಪ್ರಭಾವ ಬೀರುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಪ್ರಜ್ಞೆಯ ಹಿನ್ನೆಲೆಯೊಳಗೆ ಭ್ರಷ್ಟಾಚಾರ ವಿರೋಧಿ ಆಂದೋಲನ ರೂಪಿಸುವ ನಿಟ್ಟಿನಲ್ಲಿ ಪ್ರಗತಿಪರರು, ಎಡಪಂಥೀಯರು ಗಂಭೀರವಾಗಿ ಚಿಂತನೆ ನಡೆಸಬೇಕು~ ಎಂದು ಸಲಹೆ ಮಾಡಿದರು.ರಾಜ್ಯದಲ್ಲಿಯೂ ಸಿಬಿಐ ತನಿಖೆ ನಡೆಯಲಿ: `ಅಕ್ರಮ ಗಣಿಗಾರಿಕೆ ಕುರಿತು ಆಂಧ್ರಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲಿಯೂ ಸಿಬಿಐ ತನಿಖೆ ನಡೆದಲ್ಲಿ ಸಂಪೂರ್ಣ ಚಿತ್ರಣ ಸಿಗಲಿದೆ~ ಎಂದು ವಿಮರ್ಶಕ ಪ್ರೊ. ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.ದುರಂತದ ಮೂಲ: ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಗೈರು ಹಾಜರಿಯಲ್ಲಿ ಅವರ ಭಾಷಣವನ್ನು ಸಿಪಿಐ(ಎಂ) ಕಾರ್ಯದರ್ಶಿ ಮಂಡಳಿ ಸದಸ್ಯ ಎನ್.ವೈ. ಗುರುಶಾಂತ್ ಓದಿದರು.`ಭ್ರಷ್ಟಾಚಾರಕ್ಕೂ ಬಂಡವಾಳಶಾಹಿ ಅಭಿವೃದ್ಧಿಗೂ ಸಂಬಂಧವಿದೆ. ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳು ಸಾಮಾನ್ಯರಿಂದ ಓಟು ಪಡೆಯುತ್ತಾರೆ.ನಂತರ ತಮ್ಮ ಚುನಾವಣೆಗೆ ಹಣ ಖರ್ಚು ಮಾಡುವ ಸಂಘ- ಸಂಸ್ಥೆಗಳ ಹಿತಕಾಯಲು ಸರ್ಕಾರ ನಡೆಸುತ್ತಾರೆ. ಗಾಂಧಿಯವರ ಸರ್ವೋದಯ ತತ್ವ ಈಗ ನಮ್ಮ ಗುರಿಯಾಗಿ ಉಳಿದಿಲ್ಲ. ಇದು ನಮ್ಮ ದುರಂತದ ಮೂಲ~ ಎಂದು ಅನಂತಮೂರ್ತಿ ವಿಷಾದಿಸಿದ್ದಾರೆ.ಸಿಪಿಐ(ಎಂ) ಮುಖಂಡ ಜಿ.ಎನ್. ನಾಗರಾಜ್, ಕ್ಷದ ರಾಜ್ಯ ಕಾರ್ಯದರ್ಶಿ ವಿ.ಜೆ.ಕೆ. ನಾಯರ್, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, ವಿಜ್ಞಾನಿ ಎಸ್.ಚಟರ್ಜಿ, ಬೆಂಗಳೂರು ವಿವಿ ಸೆನೆಟ್ ಮಾಜಿ ಸದಸ್ಯೆ ಲಕ್ಷ್ಮಿ, ಸಿಪಿಐ(ಎಂ) ಕಾರ್ಯದರ್ಶಿ ಮಂಡಳಿ ಸದಸ್ಯ ಎನ್.ವೈ. ಗುರುಶಾಂತ್ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.