ಭಾನುವಾರ, ಜನವರಿ 19, 2020
25 °C

ಲೋಕಾಯುಕ್ತರಾಗಿ ಅರ್ಹರ ನೇಮಕಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಲೋಕಾಯುಕ್ತರ ಹುದ್ದೆಗೆ ಅರ್ಹರೊಬ್ಬರನ್ನು ನೇಮಿಸಲು ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು~ ಎಂದು `ಲೋಕಾಯುಕ್ತ ಉಳಿಸಿ~ ವೇದಿಕೆಯು ಶನಿವಾರ ಆಗ್ರಹಿಸಿದೆ.ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆದ `ಲೋಕಾಯುಕ್ತ ಉಳಿಸಿ~ ವೇದಿಕೆಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, `ನ್ಯಾಯಮೂರ್ತಿ ಶ್ರೀಕೃಷ್ಣ, ಎನ್.ಕೆ. ಸೋಧಿ, ಬಿ.ಪಿ. ಸಿಂಗ್. ಅರಿಜಿತ್ ಪಸಾಯತ್ ಹೆಸರನ್ನು ಲೋಕಾಯುಕ್ತರ ಹುದ್ದೆಗೆ ಪರಿಗಣಿಸುವಂತೆ ಸರ್ಕಾರವನ್ನು ಕೋರುತ್ತ್ದ್ದಿದೇವೆ ಎಂದರು.`ಶೀಘ್ರ ರಾಜ್ಯಪಾಲರು, ಮುಖ್ಯಮಂತ್ರಿಗಳು, ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ. ಆನಂತರವೂ ಲೋಕಾಯುಕ್ತ ಬಿಕ್ಕಟ್ಟನ್ನು ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಜನಾಂದೋಲನ ರೂಪಿಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ~ ಎಂದು ಹೇಳಿದರು.`ಲೋಕಾಯುಕ್ತರ ನೇಮಕ ವಿಚಾರದಲ್ಲಿ  ಅರ್ಹ ವ್ಯಕ್ತಿಯ ಹೆಸರನ್ನು ಸೂಚಿಸಿದಲ್ಲಿ ಒಂದೇ ಗಂಟೆಯಲ್ಲಿ ಅಂತಿಮಗೊಳಿಸುವುದಾಗಿ ರಾಜ್ಯಪಾಲರು ಹೇಳಿಕೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರಕ್ಕೆ ಅರ್ಹ ವ್ಯಕ್ತಿಯನ್ನು ಸೂಚಿಸುವ ಇಚ್ಛೆಯಿದ್ದಂತಿಲ್ಲ~ ಎಂದು ಟೀಕಿಸಿದರು.ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎಫ್. ಸಲ್ಡಾನ, `ನ್ಯಾಯಮೂರ್ತಿ ವಿ. ಶಿವರಾಜ್ ಪಾಟೀಲ್ ಅವರು ಲೋಕಾಯುಕ್ತ ಸ್ಥಾನವನ್ನು ತ್ಯಜಿಸಿದ ನಂತರ ಸಂಸ್ಥೆಯಲ್ಲಿ ದಾಖಲಾಗುತ್ತಿದ್ದ ಭ್ರಷ್ಟಾಚಾರ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ. ಈ ಹಿಂದೆ ಪ್ರತಿ ತಿಂಗಳು 500ರಿಂದ 600 ಗಂಭೀರ ಸ್ವರೂಪದ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗುತ್ತಿದ್ದರೆ, ಅವುಗಳ ಸಂಖ್ಯೆ ಇದೀಗ ಕೇವಲ 15ರಿಂದ 16ಕ್ಕೆ ಇಳಿದಿವೆ~ ಎಂದರು.`ಲೋಕಾಯುಕ್ತರ ಹುದ್ದೆಗೆ ನ್ಯಾಯಮೂರ್ತಿ ಶ್ರೀಕೃಷ್ಣ ಸೇರಿದಂತೆ 50 ಮಂದಿ ಅರ್ಹ ಪ್ರಾಮಾಣಿಕರ ಹೆಸರನ್ನು ಸೂಚಿಸಬಹುದು. ಆದರೆ, ಸರ್ಕಾರ ಭ್ರಷ್ಟಾಚಾರವನ್ನು ಪೋಷಿಸುವ ಉದ್ದೇಶದಿಂದ ಅರ್ಹರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡುತ್ತಿಲ್ಲ. ರಾಜ್ಯದಲ್ಲಿ ಕೆಲ ಸಚಿವರೂ ಸೇರಿದಂತೆ ಅನೇಕ ಜನಪ್ರತಿನಿಧಿಗಳ ವಿರುದ್ಧವೇ ಭ್ರಷ್ಟಾಚಾರ ಪ್ರಕರಣಗಳು ಲೋಕಾಯುಕ್ತದಲ್ಲಿ ಬಾಕಿ ಉಳಿದಿರುವುದರಿಂದ ಅವರನ್ನು ರಕ್ಷಿಸುವ ಉದ್ದೇಶದಿಂದ ಲೋಕಾಯುಕ್ತರನ್ನು ನೇಮಿಸುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ~ ಎಂದು ಆರೋಪಿಸಿದರು.12 ಲಕ್ಷ ಎಕರೆ ಸರ್ಕಾರಿ ಜಮೀನು ಒತ್ತುವರಿ: ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷ ವಿ. ಬಾಲಸುಬ್ರಮಣಿಯನ್, `ರಾಜ್ಯದಲ್ಲಿ 12 ಲಕ್ಷ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದ್ದು, ಇದರ ಮಾರುಕಟ್ಟೆ ಬೆಲೆ ಸುಮಾರು 1,89,212 ಕೋಟಿ ರೂಪಾಯಿಗಳಾಗಿದೆ. ರಾಜಕೀಯ ಮುಖಂಡರು ಹಾಗೂ ಪ್ರಭಾವಿಗಳೇ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ್ದಾರೆ. ಆದರೆ, ಇದುವರೆಗೆ ಒಂದೇ ಒಂದು ಪ್ರಕರಣದಲ್ಲಿ ಒತ್ತುವರಿ ಜಮೀನನ್ನು ತೆರವುಗೊಳಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ~ ಎಂದು ವಿಷಾದಿಸಿದರು.`ಲೋಕಾಯುಕ್ತ ಸಂಸ್ಥೆಗೆ ಘನತೆ ಬರಬೇಕಾದರೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರಂತಹ ಪ್ರಭಾವಿ ವ್ಯಕ್ತಿಯನ್ನು ಲೋಕಾಯುಕ್ತರನ್ನಾಗಿ ನೇಮಿಸಬೇಕು~ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ಒತ್ತಾಯಿಸಿದರು. ಮಾಜಿ ಸಚಿವ ಎಸ್.ಕೆ. ಕಾಂತ, ಮಾಜಿ ಶಾಸಕ ಮೈಕೆಲ್ ಫರ್ನಾಂಡೀಸ್, ವೇದಿಕೆಯ ಕೋರ್ ಕಮಿಟಿ ಸದಸ್ಯರಾದ ಆರ್.ಕೆ. ಮಿಶ್ರಾ, ಜಯಶ್ರೀ, ಎಂ.ಎನ್. ಕಾಂತ ಮತ್ತಿತರರು ಮಾತನಾಡಿದರು. ಕಾರ್ಮಿಕ ಮುಖಂಡ ಸಂಗನಗೌಡ ಬಿರಾದಾರ್ ಮತ್ತಿತರರು ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)