ಭಾನುವಾರ, ಏಪ್ರಿಲ್ 11, 2021
22 °C

ಲೋಕಾಯುಕ್ತರ ಜತೆ ನ್ಯಾ.ಷಾ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶವ್ಯಾಪಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತ ತನಿಖೆಗಾಗಿ ಕೇಂದ್ರ ಸರ್ಕಾರ ನೇಮಿಸಿರುವ ಏಕಸದಸ್ಯ ಆಯೋಗದ ಮುಖ್ಯಸ್ಥಞಾದ ನ್ಯಾಯಮೂರ್ತಿ ಎಂ.ಬಿ.ಷಾ ಮಂಗಳವಾರ ಬೆಂಗಳೂರಿಗೆ ಆಗಮಿಸುತ್ತಿದ್ದು, ತನಿಖೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಲೋಕಾಯುಕ್ತರ ಜತೆ ಚರ್ಚೆ ನಡೆಸಲಿದ್ದಾರೆ.ಅಕ್ರಮ ಗಣಿಗಾರಿಕೆ ತನಿಖೆಯಲ್ಲಿ ರಾಜ್ಯದ ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅನುಭವವಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಸಹಕಾರ ಪಡೆದು ತನ್ನ ಕೆಲಸ ಮುಂದುವರಿಸಲು ಕೇಂದ್ರದ ತನಿಖಾ ಆಯೋಗ ನಿರ್ಧರಿಸಿದೆ. ಅಕ್ರಮ ಗಣಿಗಾರಿಕೆ  ತನಿಖೆ ನಡೆಸುತ್ತಿರುವ ಲೋಕಾಯುಕ್ತ ತನಿಖಾ ತಂಡದ ಅಧಿಕಾರಿಗಳೊಂದಿಗೆ ಆಯೋಗ ಕೆಲ ದಿನಗಳ ಹಿಂದೆ ಪತ್ರ ವ್ಯವಹಾರ ನಡೆಸಿತ್ತು. ಈಗ ಲೋಕಾಯುಕ್ತರನ್ನೇ ಭೇಟಿ ಮಾಡಿ ನೇರ ಚರ್ಚೆಗೆ ಆಯೋಗ ಮುಂದಾಗಿದೆ. ಮಂಗಳವಾರ ಬೆಳಿಗ್ಗೆಯೇ ಆಯೋಗದ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ಲೋಕಾಯುಕ್ತ ಕಚೇರಿಗೆ ಭೇಟಿ ನೀಡುವರು. ಈ ಸಂದರ್ಭದಲ್ಲಿ  ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ತನಿಖಾ ತಂಡದ ಮುಖ್ಯಸ್ಥರಾಗಿರುವ ಡಾ.ಯು.ವಿ.ಸಿಂಗ್ ಮತ್ತಿತರರ ಜೊತೆ ಚರ್ಚೆ ನಡೆಸುವರು.ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು 2006ರಿಂದ ಈವರೆಗೆ ಲೋಕಾಯುಕ್ತ ನಡೆಸಿರುವ ತನಿಖೆ, ಗಣಿಗಾರಿಕೆಯಲ್ಲಿನ ಅವ್ಯವಹಾರಗಳನ್ನು ಗುರುತಿಸಲು ಅನುಸರಿಸಿದ ತನಿಖಾ ವಿಧಾನ, 2008ರ ಡಿಸೆಂಬರ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿನ ಪ್ರಮುಖ ಅಂಶಗಳು, ಅಕ್ರಮ ಗಣಿಗಾರಿಕೆ ಮತ್ತು ಅಕ್ರಮವಾಗಿ ನಡೆದಿರುವ ಅದಿರು ರಫ್ತು ಕುರಿತು ಸದ್ಯ ನಡೆಯುತ್ತಿರುವ ತನಿಖೆಯಲ್ಲಿ ಅನುಸರಿಸಿರುವ ವಿಧಾನಗಳ ಬಗ್ಗೆ ಲೋಕಾಯುಕ್ತರು ಆಯೋಗದ ಮುಖ್ಯಸ್ಥರಿಗೆ ಮಾಹಿತಿ ನೀಡುವ ಸಾಧ್ಯತೆ ಇದೆ.ನ್ಯಾಯಮೂರ್ತಿ ಷಾ ಆಯೋಗದ ಭೇಟಿ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಸಂತೋಷ್ ಹೆಗ್ಡೆ, ‘ಕೇಂದ್ರ ಸರ್ಕಾರ ನೇಮಿಸಿರುವ ತನಿಖಾ ಆಯೋಗ ನಮ್ಮನಮ್ಮ ಸಂಸ್ಥೆಯ ಸಹಕಾರ ಬಯಸಿದೆ. ಇದು ಕರ್ನಾಟಕದ ಲೋಕಾಯುಕ್ತ ಸಂಸ್ಥೆಗೆ ಸಂದ ಗೌರವವೂ ಹೌದು. ಆಯೋಗದ ಮುಖ್ಯಸ್ಥರು ಮೊದಲ ಬಾರಿಗೆ ನನ್ನನ್ನು ಭೇಟಿ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ಕುರಿತ ತನಿಖೆ ಬಗ್ಗೆ ಪರಸ್ಪರ ವಿಚಾರ ವಿನಿಮಯ ನಡೆಯಲಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.