ಲೋಕಾಯುಕ್ತರ ಭೇಟಿ: ಅವ್ಯವಸ್ಥೆಗೆ ಸಿಡಿಮಿಡಿ

7

ಲೋಕಾಯುಕ್ತರ ಭೇಟಿ: ಅವ್ಯವಸ್ಥೆಗೆ ಸಿಡಿಮಿಡಿ

Published:
Updated:

ಶಿರಹಟ್ಟಿ: ಅವಧಿ ಮೀರಿದ ಮಾತ್ರೆಗಳು. ಮಾತ್ರೆಗಳಿಗೆ ಲೆಕ್ಕಚಾರ ಇಲ್ಲ. ಗಬ್ಬೆದ್ದು ನಾರುತ್ತಿರುವ ಶೌಚಾಲಯ. ಅಲ್ಲಲ್ಲಿ ಸಂಗ್ರಹಗೊಂಡ ಕಸದ ರಾಶಿ.ಮಂಗಳವಾರ ಲೋಕಾಯುಕ್ತ ಅಧಿಕಾರಿ ಎಂ.ಎನ್. ಕರಿಬಸನಗೌಡ ತಾಲ್ಲೂಕು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದಾಗ ಕಂಡುಬಂದ ದೃಶ್ಯಗಳಿವು.ಅವಧಿ ಮುಗಿದರೂ ಮಾತ್ರೆಗಳನ್ನು ವಿತರಣೆ ಮಾಡುವ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡ ಲೋಕಾಯುಕ್ತರು, ಆಸ್ಪತ್ರೆಯಲ್ಲಿ ಕೆಲ ಮಾತ್ರೆಗಳಿದ್ದರೂ ರೋಗಿಗಳಿಗೆ ಬೇರೆಡೆ ಮಾತ್ರೆ ತಗೆದುಕೊಳ್ಳುವಂತೆ ಚೀಟಿ ಬರೆಯುವುದೇಕೆ ಎಂದು ದಬಾಯಿಸಿದರು.ಮಾತ್ರೆಗಳಿಗೆ ದಾಖಲಾತಿ ಇಲ್ಲದಿರುವುದು ಹಾಗೂ ಹೊರರೋಗಿಗಳಿಗೆ ನೀಡುವ ಚಿಕಿತ್ಸೆ ಮತ್ತು ದಾಖಲಾದ ರೋಗಿಗಳ ಕುರಿತು ದಾಖಲಾತಿಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನಲೆಯಲ್ಲಿ ವೈದ್ಯರನ್ನು ತರಾಟೆಗೆ ತಗೆದುಕೊಂಡರು. ತಾಲ್ಲೂಕು ಆರೋಗ್ಯ ಕೇಂದ್ರ ಎಂಬ ಹಣೆ ಪಟ್ಟಿ ಹೊತ್ತ ಆಸ್ಪತ್ರೆಯಲ್ಲಿ ಆಪರೇಷನ್ ಕೊಠಡಿ ಇಲ್ಲದಿರುವದನ್ನು ಕಂಡು ಅವಕ್ಕಾದರು. ಚುಚ್ಚುಮದ್ದು ಕೊಠಡಿಯಲ್ಲಿ ಸಹ ಅವ್ಯವಸ್ಥೆ ಪುನರಾವರ್ತನೆಯಾಯಿತು.ಬೇಕಾಬಿಟ್ಟಿ ಕಸ, ಚುಚ್ಚುಮದ್ದು ತುಣುಕುಗಳು, ವಿಶೇಷವಾಗಿ ಅದೇ ಕೊಠಡಿಯಲ್ಲಿ 11 ಸಲೈನ್ ಬಾಟಲಿಗಳು ಕಂಡುಬಂದವು. ಅವುಗಳಿಗೆ ಯಾವುದೇ ಲೆಕ್ಕಪತ್ರ ಇಲ್ಲದಿರುವುದನ್ನು ಕಂಡು ರೋಸಿಹೋದ ಅಧಿಕಾರಿಗಳು ಈ ಕುರಿತು ಸಂಬಂಧಿಸಿದವರನ್ನು ವಿಚಾರಿಸಿದರೆ ಕ್ಷಮಿಸಿ ಇನ್ನೊಮ್ಮೆ ಇದಕ್ಕೆ ಅವಕಾಶ ನೀಡುವದಿಲ್ಲ ಎಂಬ ಉತ್ತರ ಬಂದಿತು.   

ನೈರ್ಮಲ್ಯವಿಲ್ಲದ ಆಸ್ಪತ್ರೆ ಶೌಚಾಲಯ  ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕನ್ನಡಿಯಾಯಿತು.‘ತಾಲ್ಲೂಕು ಆರೋಗ್ಯ ಕೇಂದ್ರಕ್ಕೆ ಸರ್ಕಾರ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದರೂ ರೋಗಿಗಳಿಗೆ ಮಾತ್ರ ತಲುಪುತ್ತಿಲ್ಲ. ಮತ್ತು ಸಮರ್ಪಕವಾಗಿ ಬಳಸುತ್ತಿಲ್ಲ’ ಎಂದು ಲೋಕಾಯುಕ್ತರು ಕಿಡಿಕಾರಿದರು.ಆರೋಗ್ಯ ಕೇಂದ್ರದಲ್ಲಿ ಪ್ರತಿ ಹೆಜ್ಜೆಹೆಜ್ಜೆಗೆ ಸಾಕಷ್ಟು ತಪ್ಪುಗಳು ಕಂಡುಬಂದಿದ್ದು, ಈ ಕುರಿತು ಮೇಲಾಧಿಕಾರಿಗಳಿಗೆ ವರವಿ ಸಲ್ಲಿಸುವುದಾಗಿ ಎಚ್ಚರಿಸಿದರು.ಈ ಸಂದರ್ಭದಲ್ಲಿ ಲೋಕಾಯುಕ್ತ ಎಸ್.ಪಿ. ಬಿ.ಎನ್. ನೀಲಗಾರ, ಅಯ್ಯನಗೌಡ್ರ ಮತ್ತಿತರರು ಉಪಸ್ಥಿತರಿದ್ದರು.

 

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry