ಲೋಕಾಯುಕ್ತ ಎಸ್‌ಪಿಪಿ ರಾಜೀನಾಮೆ

7

ಲೋಕಾಯುಕ್ತ ಎಸ್‌ಪಿಪಿ ರಾಜೀನಾಮೆ

Published:
Updated:

ಬೆಂಗಳೂರು: ಲೋಕಾಯುಕ್ತದ ಬೆಂಗಳೂರು ನಗರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಆಗಿ ಇತ್ತೀಚೆಗಷ್ಟೇ ನೇಮಕಗೊಂಡಿದ್ದ ವಕೀಲ ಪಂಚಾಕ್ಷರಿ ಮಠ  ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಕೆಲವೇ ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಈ ಹುದ್ದೆ ಖಾಲಿಯಾಗಿದೆ.ದೀರ್ಘ ಕಾಲ ಲೋಕಾಯುಕ್ತದ ಬೆಂಗಳೂರು ಎಸ್‌ಪಿಪಿ ಹುದ್ದೆಯಲ್ಲಿದ್ದ ಪ್ರಮೋದ್ ಅವರ ನಿರ್ಗಮನದಿಂದ ಈ ಹುದ್ದೆ ತೆರವಾಗಿತ್ತು. ಕೆಲ ದಿನಗಳ ಬಳಿಕ ಉಮಾಕಾಂತನ್ ಎಂಬುವರನ್ನು ನೇಮಿಸಲಾಗಿತ್ತು. 350ಕ್ಕೂ ಹೆಚ್ಚು ಪ್ರಕರಣಗಳನ್ನು ನಿಭಾಯಿಸಲಾಗದೆ ಅವರು ಕೆಲವೇ ದಿನಗಳಲ್ಲಿ ಹುದ್ದೆಗೆ ವಿದಾಯ ಹೇಳಿದ್ದರು. ಮಾರ್ಚ್ ಎರಡನೇ ವಾರದಲ್ಲಿ ಪಂಚಾಕ್ಷರಿ ಮಠ ಈ ಹುದ್ದೆಗೆ ನೇಮಕವಾಗಿದ್ದರು. ಈಗ ವೈಯಕ್ತಿಕ ಕಾರಣ ನೀಡಿ ಲೋಕಾಯುಕ್ತದ ರಿಜಿಸ್ಟ್ರಾರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.ಈ ಬಗ್ಗೆ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಅವರು, `ಲೋಕಾಯುಕ್ತದ ವಿಶೇಷ ನ್ಯಾಯಾಲಯ ಈಗ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಗೊಂಡಿದೆ. ಈ ಕಾರಣದಿಂದ ನಿತ್ಯವೂ 30 ಕಿ.ಮೀ. ಪ್ರಯಾಣಿಸಬೇಕಿತ್ತು. 350ಕ್ಕೂ ಹೆಚ್ಚು ಪ್ರಕರಣಗಳು ಬೆಂಗಳೂರು ನಗರ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಇವೆ.ಪ್ರತಿದಿನ 15ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆಗೆ ಸಿದ್ಧವಾಗಬೇಕಿತ್ತು. ನಿತ್ಯವೂ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಹೃದಯದ ತೊಂದರೆ ಇರುವ ನನಗೆ ಇದರಿಂದ ಮತ್ತಷ್ಟು ಸಮಸ್ಯೆ ಕಾಣಿಸಿಕೊಂಡಿತ್ತು. ಈ ಕಾರಣದಿಂದ ಬುಧವಾರವೇ ರಾಜೀನಾಮೆ ನೀಡಿದ್ದೇನೆ~ ಎಂದರು.`ಒಂದೂವರೆ ತಿಂಗಳ ಕಾಲ ಎಸ್‌ಪಿಪಿ ಹುದ್ದೆಯನ್ನು ನಿರ್ವಹಿಸಿದ್ದೇನೆ. ದಿನವೂ ಕೆಲಸದ ಒತ್ತಡ ಹೆಚ್ಚುತ್ತಲೇ ಇತ್ತು. ರಾಜ್ಯದ ಯಾವುದೇ ನ್ಯಾಯಾಲಯದಲ್ಲೂ ಇಷ್ಟು ಒತ್ತಡ ಇಲ್ಲ. ಈ ಕಾರಣಗಳಿಂದ ರಾಜೀನಾಮೆ ನೀಡಿದ್ದೇನೆ. ತಕ್ಷಣವೇ ಅಂಗೀಕರಿಸುವಂತೆ ಲೋಕಾಯುಕ್ತದ ರಿಜಿಸ್ಟ್ರಾರ್ ಅವರನ್ನು ಕೋರಿದ್ದೇನೆ~ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry