ಲೋಕಾಯುಕ್ತ ತನಿಖೆಗೆ ಆಗ್ರಹ

7

ಲೋಕಾಯುಕ್ತ ತನಿಖೆಗೆ ಆಗ್ರಹ

Published:
Updated:

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಪ್ರಭಾವಿ ರಾಜಕಾರಣಿಗಳ ಮಕ್ಕಳೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಈ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಸಮಗ್ರ ಮರಳು ನೀತಿ ಜಾರಿಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ರಾಜ್ಯದ ಮರಳು ಸಾಗಣೆ ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳ ಜೊತೆ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ, `ಸರ್ಕಾರ ಕೂಡಲೇ ಲಾರಿ ಮಾಲೀಕರ ಸಭೆ ಕರೆದು ಮರಳು ನೀತಿ ಜಾರಿ ಕುರಿತು ಘೋಷಣೆ ಮಾಡಬೇಕು. ಫಿಲ್ಟರ್ ಮರಳನ್ನು ನಿಷೇಧಿಸಬೇಕು~ ಎಂದು ಆಗ್ರಹಿಸಿದರು.`ಸಮಗ್ರ ಮರಳು ನೀತಿ ಇಲ್ಲದ ಕಾರಣ ಲಾರಿ ಮಾಲೀಕರ ಮೇಲೆ ಸರ್ಕಾರದ ವಿವಿಧ ಹಂತದ ಅಧಿಕಾರಿಗಳಿಂದ ದೌರ್ಜನ್ಯ ನಡೆಯುತ್ತಿದೆ. ಮಾಲೀಕರ ಮತ್ತು ಕಾರ್ಮಿಕರ ಪರವಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರನ್ನು ನಾನೇ ಖುದ್ದಾಗಿ ಭೇಟಿ ಮಾಡಿ ಈ ದೌರ್ಜನ್ಯಕ್ಕೆ ಅಂತ್ಯ ಹಾಡಬೇಕು ಎಂಬ ಮನವಿ ಸಲ್ಲಿಸುತ್ತೇನೆ~ ಎಂದು ಹೇಳಿದರು. ಲಾರಿ ಮಾಲೀಕರ ಮುಷ್ಕರಕ್ಕೂ ಬೆಂಬಲ ಸೂಚಿಸಿದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮರಳು ಸಾಗಿಸುವ ಲಾರಿ ಮಾಲೀಕರ ಜೊತೆ ನಾಲ್ಕು ಬಾರಿ ಸಭೆ ನಡೆಸಲಾಗಿದೆ. ಮರಳು ನೀತಿ ಜಾರಿಗೆ ತರುವುದಾಗಿ ಏಪ್ರಿಲ್‌ನಲ್ಲಿಯೇ ಸರ್ಕಾರ ಹೇಳಿಕೆ ನೀಡಿತ್ತು. ಆದರೆ ಇದುವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಟೀಕಿಸಿದರು.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮರಳು ಗಣಿಗಾರಿಕೆ ನಡೆಸಲು ರಾಜ್ಯದಲ್ಲಿ 319 ಸ್ಥಳಗಳನ್ನು ಗುರುತಿಸಲಾಗಿತ್ತು. ಆಗ 9 ಸಾವಿರ ರೂಪಾಯಿಗೆ ಒಂದು ಲೋಡ್ ಮರಳು ದೊರೆಯುತ್ತಿತ್ತು. ಈಗ ರಾಜ್ಯಕ್ಕೆ ಪ್ರತಿನಿತ್ಯ 3 ಸಾವಿರ ಲೋಡ್‌ನಷ್ಟು ಅಕ್ರಮ ಮರಳು ಬರುತ್ತಿದೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್. ಷಣ್ಮುಖಪ್ಪ ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry