ಶುಕ್ರವಾರ, ಡಿಸೆಂಬರ್ 13, 2019
17 °C

ಲೋಕಾಯುಕ್ತ ತನಿಖೆಗೆ ತಡೆ: ಕೃಷ್ಣ ನಿರಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಾಯುಕ್ತ ತನಿಖೆಗೆ ತಡೆ: ಕೃಷ್ಣ ನಿರಾಳ

ನವದೆಹಲಿ (ಪಿಟಿಐ): ಕರ್ನಾಟಕದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಎಸ್. ಎಂ.ಕೃಷ್ಣ ಅವರ ವಿರುದ್ಧ ನಡೆಯುತ್ತಿರುವ ಲೋಕಾಯುಕ್ತ ತನಿಖೆಗೆ ಶುಕ್ರವಾರ ಸುಪ್ರೀಂಕೋರ್ಟ್ ತಡೆ ನೀಡಿದೆ.ತಾವು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (1999- 2004) ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾದ ಖಾಸಗಿ ದೂರು ಮತ್ತು ಲೋಕಾಯುಕ್ತ ತನಿಖೆಯನ್ನು ರದ್ದುಪಡಿಸುವಂತೆ ಕೋರಿ ಕೃಷ್ಣ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಈ ಮೊದಲು ಅವರು ಹೈ ಕೋರ್ಟ್‌ಗೂ ಈ ಸಂಬಂಧ ಅರ್ಜಿ ಸಲ್ಲಿಸಿದ್ದರು. ಆದರೆ ಇದೇ 20ರಂದು ಹೈಕೋರ್ಟ್, ಅರ್ಜಿಯನ್ನು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಕೃಷ್ಣ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.`ಗಣಿಗಾರಿಕೆಗೆ ಸಂಬಂಧಿಸಿದಂತೆ ಸಂಪುಟದಲ್ಲಿ 34 ಸಚಿವರು ತೆಗೆದುಕೊಂಡ ನಿರ್ಧಾರವು ಒಮ್ಮತದ್ದಾಗಿದೆ. ಹಾಗಾಗಿ ಇದಕ್ಕೆ ಯಾವುದೇ ಒಬ್ಬ ವ್ಯಕ್ತಿ ಹೊಣೆಯಲ್ಲ~ ಎಂದು ಕೃಷ್ಣ ಪರ ವಕೀಲ ಕೆ.ಕೆ.ವೇಣುಗೋಪಾಲ್ ವಾದಿಸಿದರು.`ಲೋಕಾಯುಕ್ತ ಕೋರ್ಟ್, ಕೃಷ್ಣ ಅವರ ವಿರುದ್ಧ ತನಿಖೆಗೆ ಆದೇಶ ನೀಡಿರುವುದು ಅವಸರದ ನಿರ್ಧಾರವಾಗಿದೆ~ ಎಂದು ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಹಾಗೂ ಜ್ಞಾನ್ ಸುಧಾ ಮಿಶ್ರಾ ಅವರನ್ನು ಒಳಗೊಂಡ ಪೀಠ ಹೇಳಿದೆ.

ಈ ಸಂಬಂಧ ಪೀಠವು, ಕರ್ನಾಟಕ ಸರ್ಕಾರ ಹಾಗೂ ದಾವೆ ಹೂಡಿದವರಿಗೆ ನೋಟಿಸ್ ಜಾರಿ ಮಾಡಿ, ಮೂರು ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಬಾರದು ಎಂದು ವಕೀಲ ಪ್ರಶಾಂತ್ ಭೂಷಣ್ ಪದೇ ಪದೇ ಹೇಳಿದರು. ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.`ನೀವು ಸಂದರ್ಭವನ್ನು ಸೃಷ್ಟಿಸಬೇಕಾಗಿಲ್ಲ. ಆದರೆ ಸಂದರ್ಭಕ್ಕೆ ತಕ್ಕಂತೆ ನಡೆಯಬೇಕಾಗುತ್ತದೆ~ ಎಂದು ಪೀಠವು ಭೂಷಣ್ ಅವರಿಗೆ ಹೇಳಿತು.`ಕರ್ನಾಟಕ ಸರ್ಕಾರ ಹಾಗೂ ದಾವೆ ಹೂಡಿದವರು ಪ್ರತಿ ಪ್ರಮಾಣಪತ್ರಗಳನ್ನು ಸಲ್ಲಿಸಿದ ಬಳಿಕ ಮಧ್ಯಂತರ ಆದೇಶ ಹೊರಡಿಸಲಾಗುತ್ತದೆ. ನಂತರದಲ್ಲಿ ಎಲ್ಲವನ್ನೂ ಪರಿಶೀಲಿಸಲಾಗುತ್ತದೆ~ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿತು.ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಕೃಷ್ಣ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಎನ್.ಧರ್ಮ ಸಿಂಗ್ ಅವರ ವಿರುದ್ಧ ಅಬ್ರಹಾಂ ದೂರು ಸಲ್ಲಿಸಿದ್ದರು.ಇದೇ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಬಾಕಿ ಇರುವುದರಿಂದ, ತಮ್ಮ ವಿರುದ್ಧದ ತನಿಖೆಯನ್ನು ರದ್ದುಗೊಳಿಸಬೇಕೆಂದು ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಧರ್ಮ ಸಿಂಗ್ ವಾಪಸ್ ತೆಗೆದುಕೊಂಡಿದ್ದರು.

 

ಪ್ರತಿಕ್ರಿಯಿಸಿ (+)