ಲೋಕಾಯುಕ್ತ ದಾಳಿ

7

ಲೋಕಾಯುಕ್ತ ದಾಳಿ

Published:
Updated:

ಬೆಂಗಳೂರು/ಶಿವಮೊಗ್ಗ: ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಬೆಂಗಳೂರು ಮತ್ತು ಶಿವಮೊಗ್ಗದ ನಿವಾಸಗಳು ಸೇರಿದಂತೆ ಅವರಿಗೆ ಸಂಬಂಧಿಸಿದ ಒಂಬತ್ತು ಕಡೆಗಳಲ್ಲಿ ಸೋಮವಾರ ಏಕಕಾಲಕ್ಕೆ ಲೋಕಾಯುಕ್ತ ದಾಳಿ ನಡೆದಿದೆ. ದೊಡ್ಡ ಸಂಖ್ಯೆಯ ದಾಖಲೆಗಳು, ರೂ 10.90 ಲಕ್ಷ  ನಗದು, 1.9 ಕೆ.ಜಿ. ಚಿನ್ನ ಮತ್ತು 37 ಕೆ.ಜಿ. ಬೆಳ್ಳಿಯನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.ಈಶ್ವರಪ್ಪ, ಅವರ ಪುತ್ರ ಕೆ.ಇ.ಕಾಂತೇಶ್ ಮತ್ತು ಸೊಸೆ ಶಾಲಿನಿ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ ವಕೀಲ ವಿನೋದ್ ಶಿವಮೊಗ್ಗದ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಅದರಂತೆ, ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಈಶ್ವರಪ್ಪ ಮತ್ತು ಇತರರ ವಿರುದ್ಧ `ಪ್ರಥಮ ಮಾಹಿತಿ ವರದಿ' ದಾಖಲಿಸಿದ್ದರು.ಶಿವಮೊಗ್ಗ ನಗರದ ಗುಂಡಪ್ಪ ಶೆಡ್‌ನ `ಜಯಲಕ್ಷ್ಮೀ ನಿವಾಸ', ಗೋಂಧಿಚಟ್ನಳ್ಳಿ ಗ್ರಾಮದಲ್ಲಿನ ಪೇಸ್ ಕಾಲೇಜು, ಬೈಪಾಸ್ ರಸ್ತೆಯ ನಂದನ್ ಎಜುಕೇಷನ್ ಸೊಸೈಟಿ, ತಿಲಕ್ ನಗರದ ವಾಸವದತ್ತಾ ಸಿಮೆಂಟ್ ಏಜೆನ್ಸಿ, ಜೆ.ಎಸ್.ಕೆ.ಎಂ. ರಸ್ತೆಯ ಎ.ಎಎಂ. ಟ್ರೇಡರ್ಸ್‌ ಅಂಗಡಿ ಮೇಲೆ ದಾಳಿ ನಡೆದಿದೆ. ಈಶ್ವರಪ್ಪ ಅವರ ನಿಕಟವರ್ತಿಗಳಾದ ಸ್ಟಾಂಪ್ ವೆಂಡರ್ ಸೋಮಶೇಖರ್ ಅವರ ಮಿಷನ್ ಕಾಂಪೌಂಡ್ ಬಡಾವಣೆ ನಿವಾಸ, ಇನ್ನೊಬ್ಬ ಸ್ಟಾಂಪ್ ವೆಂಡರ್ ರವಿ ಅವರ ವಿನೋಬನಗರ ನಿವಾಸ ಹಾಗೂ ಆಶೋಕ ರಸ್ತೆಯ ಮಂಡಿ ಮಹೇಶ್ ನಿವಾಸದಲ್ಲೂ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದರು.

ಬೆಂಗಳೂರಿನ ವಸಂತನಗರದ ಚಕ್ರವರ್ತಿ ಬಡಾವಣೆಯಲ್ಲಿರುವ `ಜಯಲಕ್ಷ್ಮಿ ಈಶ್ವರಪ್ಪ ನಿವಾಸ'ದ ಮೇಲೆ ಬೆಳಿಗ್ಗೆಯೇ ನಡೆದ ದಾಳಿಯ ನೇತೃತ್ವವನ್ನು ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ವಿ.ಪಿ.ಎಂ.ಸ್ವಾಮಿ ವಹಿಸಿದ್ದರು. ಶಿವಮೊಗ್ಗದ ಎಂಟು ಸ್ಥಳಗಳಲ್ಲಿ ದಾವಣಗೆರೆ ಲೋಕಾಯುಕ್ತ ಎಸ್‌ಪಿ ಲಿಂಗಾರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಯಿತು.ಈಶ್ವರಪ್ಪ, ಕಾಂತೇಶ್ ಮತ್ತು ಶಾಲಿನಿ ಸದಸ್ಯರಾಗಿರುವ 18 ಟ್ರಸ್ಟ್‌ಗಳು ಹಾಗೂ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ವಶಪಡಿಸಿಕೊಂಡಿದೆ. ಹಲವು ಸಂಸ್ಥೆಗಳ ಹೆಸರಿನಲ್ಲಿ ಶಿವಮೊಗ್ಗ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಜಮೀನು ಖರೀದಿಸಿರುವ ದಾಖಲೆಗಳೂ ದೊರೆತಿವೆ. ಜಮೀನು ಖರೀದಿ, ಸಾರಿಗೆ ವಹಿವಾಟು, ವ್ಯಾಪಾರದಲ್ಲಿ ಹೂಡಿಕೆಗೆ ಸಂಬಂಧಿಸಿದ ದಾಖಲೆಗಳೂ ಶೋಧದ ವೇಳೆ ಪತ್ತೆಯಾಗಿವೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.ನಂದನ್ ಎಜುಕೇಷನ್ ಸೊಸೈಟಿ ಮತ್ತು ಮಂಡಿ ಮಹೇಶ್ ಮನೆಯಲ್ಲಿ ದಾಖಲೆಗಳು ದೊರೆತಿಲ್ಲ. ಈಶ್ವರಪ್ಪ ಅವರ ಅತ್ಯಂತ ನಿಕಟವರ್ತಿಯಾಗಿರುವ ಸ್ಟಾಂಪ್ ವೆಂಡರ್ ಸೋಮಶೇಖರ್ ನಿವಾಸದಲ್ಲಿ ಹಲವು ದಾಖಲೆಗಳು ಪತ್ತೆಯಾಗಿವೆ. ಬ್ಯಾಂಕ್ ಪಾಸ್ ಪುಸ್ತಕಗಳು, ವಿವಿಧೆಡೆ ಹೂಡಿಕೆ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ದಾಳಿಯ ವೇಳೆ ವಶಕ್ಕೆ ಪಡೆಯಲಾಗಿದೆ.ಗಣಿಗಾರಿಕೆಯಲ್ಲಿ ಭಾಗಿ?: ಬೆಂಗಳೂರಿನ ನಿವಾಸದಲ್ಲೂ ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಚಿತ್ರದುರ್ಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಎರಡು ಕಂಪೆನಿಗಳಲ್ಲಿ ಕಾಂತೇಶ್ ಪಾಲುದಾರಿಕೆ ಹೊಂದಿರುವುದಕ್ಕೆ ಸಂಬಂಧಿಸಿದ ಎರಡು ದಾಖಲೆಗಳು ತನಿಖಾ ತಂಡಕ್ಕೆ ದೊರೆತಿವೆ. ಈ ಪೈಕಿ ಒಂದು ಕಂಪೆನಿಯಿಂದ ಕಾಂತೇಶ್ ಹೊರಬಂದಿದ್ದಾರೆ. ಒಂದರಲ್ಲಿ ಈಗಲೂ ಅವರು ಪಾಲುದಾರರು ಎಂಬುದು ದಾಖಲೆಗಳಲ್ಲಿ ಇದೆ ಎಂದು ಮೂಲಗಳು ಹೇಳಿವೆ.

ದಾಳಿ ಕುರಿತು `ಪ್ರಜಾವಾಣಿ' ಜೊತೆ ಮಾತನಾಡಿದ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್, `ದಾಳಿಯ ವೇಳೆ ದೊರೆತಿರುವ ನಗದು, ಚಿನ್ನ ಮತ್ತು ಬೆಳ್ಳಿಯ ಮೌಲ್ಯವನ್ನು ದಾಖಲಿಸಲಾಗಿದೆ. ವಶಕ್ಕೆ ಪಡೆದಿರುವ ದಾಖಲೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಶೀಘ್ರದಲ್ಲೇ ಅವುಗಳ ಪರಿಶೀಲನೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು' ಎಂದರು.ಶಿವಮೊಗ್ಗದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲಿಂಗಾರೆಡ್ಡಿ ಅವರೊಂದಿಗೆ 6 ಡಿವೈಎಸ್ಪಿ, 8 ಇನ್‌ಸ್ಪೆಕ್ಟರ್, 30 ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ಬೆಂಗಳೂರಿನಲ್ಲಿ ಸ್ವಾಮಿ ಅವರೊಂದಿಗೆ ಮೂವರು ಇನ್‌ಸ್ಪೆಕ್ಟರ್‌ಗಳು, ಹತ್ತಕ್ಕೂ ಹೆಚ್ಚು ಸಿಬ್ಬಂದಿ ಇದ್ದ ತಂಡ ದಾಳಿ ನಡೆಸಿತ್ತು. ಸಂಜೆ 7.30ರವರೆಗೂ ಶೋಧ ಮುಂದುವರಿದಿತ್ತು.ರಾಜೀನಾಮೆ ಕೊಡಬೇಕಾಗಿಲ್ಲ

`ಲೋಕಾಯುಕ್ತ ದಾಳಿಯ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆಯನ್ನು ಕೇಳುವುದಿಲ್ಲ. ಅವರು ರಾಜೀನಾಮೆ ಕೊಡುವ ಅಗತ್ಯವೂ ಇಲ್ಲ. ಈಶ್ವರಪ್ಪ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡುವ ತೀರ್ಪಿನ ನಂತರ ಕ್ರಮದ ಕುರಿತು ಆಲೋಚಿಸಲಾಗುವುದು'.ಮುಖ್ಯಮಂತ್ರಿ ಜಗದೀಶ ಶೆಟ್ಟರ್ದಾಳಿ ನಿರೀಕ್ಷಿತ


`ಎರಡು ವರ್ಷಗಳಿಂದ ಕೆಲ ವ್ಯಕ್ತಿಗಳು ನನ್ನ ಆಸ್ತಿಯನ್ನು ಗಮನಿಸುತ್ತಿದ್ದರಲ್ಲದೆ, ನನ್ನ ವಿರುದ್ಧ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸುತ್ತಿದ್ದ ಬಗ್ಗೆ ತಿಳಿದಿತ್ತು. ಹೀಗಾಗಿ ನನ್ನ ಆದಾಯ- ಆಸ್ತಿ ಕುರಿತಂತೆ ಪ್ರಕರಣ ದಾಖಲಾಗಿ, ದಾಳಿ ನಡೆದಿರುವುದು ನಿರೀಕ್ಷಿತ'.ಕೆ.ಎಸ್. ಈಶ್ವರಪ್ಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry