ಮಂಗಳವಾರ, ಮೇ 11, 2021
25 °C

ಲೋಕಾಯುಕ್ತ ದಾಳಿ: ಪಾಲಿಕೆ ಎಂಜಿನಿಯರ್ ಮನೆಯಲ್ಲಿ 2.5 ಕೋಟಿ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಉತ್ತರಹಳ್ಳಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ವೆಂಕಟೇಶ್ ಅವರ ಮನೆ ಹಾಗೂ ಸಂಬಂಧಿಯೊಬ್ಬರ ನಿವಾಸದ ಮೇಲೆ ಶನಿವಾರ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, 2.53 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿ ಮತ್ತು 40 ಬಾಟಲಿ ವಿದೇಶಿ ಮದ್ಯವನ್ನು ಪತ್ತೆಹಚ್ಚಿದ್ದಾರೆ.ವೆಂಕಟೇಶ್ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಗುರುವಾರ ಮೊಕದ್ದಮೆ ದಾಖಲಿಸಿದ್ದರು. ಶನಿವಾರ ಬೆಳಿಗ್ಗೆಯೇ ಎಚ್‌ಎಸ್‌ಆರ್ ಬಡಾವಣೆಯಲ್ಲಿರುವ ವೆಂಕಟೇಶ್ ನಿವಾಸ, ಹೊಸಕೋಟೆ ತಾಲ್ಲೂಕಿನ ಯನಗುಂಟೆ ಗ್ರಾಮದಲ್ಲಿರುವ ಅವರ ಅತ್ತೆ ಜಯಮ್ಮ ಮನೆ ಮತ್ತು ಎಚ್‌ಎಸ್‌ಆರ್ ಬಡಾವಣೆಯಲ್ಲಿ ನಿರ್ಮಿಸಿರುವ ವಾಣಿಜ್ಯ ಸಮುಚ್ಚಯದ ಮೇಲೆ ದಾಳಿ ಮಾಡಿ ಶೋಧ ನಡೆಸಿದರು.ತಮ್ಮ ಸೇವಾ ಅವಧಿಯಲ್ಲಿ ವೇತನ ಮತ್ತು ಇತರೆ ರೂಪದಲ್ಲಿ ವೆಂಕಟೇಶ್ ಅವರು ಅಧಿಕೃತವಾಗಿ ಪಡೆದ ಆದಾಯ ಸುಮಾರು 38 ಲಕ್ಷ ರೂಪಾಯಿಯಷ್ಟಿದೆ. ಆದರೆ, ಅವರ ಬಳಿ ರೂ 2.53 ಕೋಟಿ ಆಸ್ತಿ ಪತ್ತೆಯಾಗಿದೆ. ಇನ್ನೂ ಮೂರು ಬ್ಯಾಂಕ್ ಲಾಕರ್‌ಗಳ ಪರಿಶೀಲನೆ ನಡೆಯಬೇಕಿದೆ. ಶೋಧನಾ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.ವೆಂಕಟೇಶ್ ಅವರು ಒಂದು ಕೋಟಿ ರೂಪಾಯಿ ವೆಚ್ಚ ಮಾಡಿ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಇತ್ತಿಚೆಗಷ್ಟೇ ಮೂರು ಮಹಡಿಯ ವಾಣಿಜ್ಯ ಸಮುಚ್ಚಯ ನಿರ್ಮಿಸಿರುವುದು ದಾಳಿಯ ವೇಳೆ ಬಯಲಿಗೆ ಬಂದಿದೆ. ವಾಣಿಜ್ಯ ಸಮುಚ್ಚಯದಲ್ಲೂ ಶೋಧಕಾರ್ಯ ನಡೆಸಲಾಗಿದೆ.ಎಚ್‌ಎಸ್‌ಆರ್ ಬಡಾವಣೆಯಲ್ಲಿ ರೂ 25 ಲಕ್ಷ ಮೌಲ್ಯದ ಮನೆ, ಹೊಸಕೋಟೆಯ ಯನಗುಂಟೆ ಗ್ರಾಮದಲ್ಲಿ ಜಯಮ್ಮ ಅವರ ಹೆಸರಿನಲ್ಲಿ ರೂ 5 ಲಕ್ಷ ಮೌಲ್ಯದ 3 ಎಕರೆ ಕೃಷಿ ಭೂಮಿ ಮತ್ತು ಅದೇ ಊರಿನಲ್ಲಿ ಸ್ವಂತ ಹೆಸರಿನಲ್ಲಿ ರೂ 5 ಲಕ್ಷ ಮೌಲ್ಯದ ನಿವೇಶನ ಹೊಂದಿರುವ ಬಗ್ಗೆ ತನಿಖಾ ತಂಡ ದಾಖಲೆಗಳನ್ನು ವಶಪಡಿಸಿಕೊಂಡಿದೆ.ಮನೆಯಲ್ಲಿ ರೂ 26,500 ನಗದು, 940 ಗ್ರಾಂ. ಚಿನ್ನ, 3.2 ಕೆ.ಜಿ. ಬೆಳ್ಳಿ, ಹೋಂಡಾ ಸಿವಿಕ್, ಹೋಂಡಾ ಸಿಟಿ ಮತ್ತು ಓಪೆಲ್ ಆಸ್ಟ್ರಾ ಕಾರುಗಳು ಪತ್ತೆಯಾಗಿವೆ.ಒಂಬತ್ತು ಬ್ಯಾಂಕ್ ಖಾತೆಗಳ ಪಾಸ್ ಪುಸ್ತಕಗಳು ದೊರೆತಿದ್ದು, ಈವರೆಗಿನ ಪರಿಶೀಲನೆ ಪ್ರಕಾರ ಖಾತೆಗಳಲ್ಲಿ ರೂ 9 ಲಕ್ಷ ಠೇವಣಿ ಇರುವುದು ಪತ್ತೆಯಾಗಿದೆ.ಮನೆಯಲ್ಲೇ ಬಾರ್: ಮನೆಯ ಎರಡನೇ ಮಹಡಿಯಲ್ಲಿ ಚಿಕ್ಕ ಬಾರ್ ವ್ಯವಸ್ಥೆ ಮಾಡಲಾಗಿತ್ತು.

ಅಲ್ಲಿ ವಿವಿಧ ಬ್ರಾಂಡ್‌ಗಳ ದುಬಾರಿ ಬೆಲೆಯ ವಿದೇಶಿ ಮದ್ಯದ 40 ಬಾಟಲಿಗಳು ಪತ್ತೆಯಾಗಿವೆ. 

ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿರುವ ತನಿಖಾ ತಂಡ, ಅಬಕಾರಿ ಕಾಯ್ದೆಯಡಿ ಪ್ರತ್ಯೇಕ ಮೊಕದ್ದಮೆ ದಾಖಲಿಸಿ ಅಬಕಾರಿ ಅಧಿಕಾರಿಗಳಿಗೆ ಹಸ್ತಾಂತರಿಸಲು ನಿರ್ಧರಿಸಿದೆ.ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಂಬತ್ತು ಇನ್‌ಸ್ಪೆಕ್ಟರ್‌ಗಳು ಮತ್ತು 50ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು.ಏನೇನು ಪತ್ತೆ?* ಮನೆಯಲ್ಲೇ ಬಾರ್* 40 ಬಾಟಲಿ ವಿದೇಶಿ ಮದ್ಯ* ಮನೆಯಲ್ಲಿ 940 ಗ್ರಾಂ ಚಿನ್ನ, 3.2 ಕೆ.ಜಿ.ಬೆಳ್ಳಿ ಹಾಗೂ ರೂ 26,500 ನಗದು* 9 ಬ್ಯಾಂಕ್ ಖಾತೆಗಳ ಪಾಸ್ ಬುಕ್

 49 ಲಕ್ಷ ರೂ ಠೇವಣಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.