ಲೋಕಾಯುಕ್ತ ದಾಳಿ; ಲಂಚಕೋರರ ಸೆರೆ

ಮಂಗಳವಾರ, ಜೂಲೈ 16, 2019
28 °C

ಲೋಕಾಯುಕ್ತ ದಾಳಿ; ಲಂಚಕೋರರ ಸೆರೆ

Published:
Updated:

ಬೆಂಗಳೂರು: ನೆಲಮಂಗಲ, ಹೊಸಕೋಟೆ, ಅತ್ತಿಬೆಲೆ ಹಾಗೂ ಚಿಕ್ಕಬಳ್ಳಾಪುರ ವಾಣಿಜ್ಯ ತೆರಿಗೆ ಇಲಾಖೆ ತನಿಖಾ ಠಾಣೆಗಳು ಮತ್ತು ಅತ್ತಿಬೆಲೆ ಸಾರಿಗೆ ಇಲಾಖೆ ತನಿಖಾ ಠಾಣೆ ಮೇಲೆ ಶನಿವಾರ ನಸುಕಿನ ಜಾವ ದಿಢೀರ್ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಲಂಚ ವಸೂಲಿಯಲ್ಲಿ ತೊಡಗಿದ್ದ ಹತ್ತು ಸರ್ಕಾರಿ ನೌಕರರು, ಮೂವರು ಖಾಸಗಿ ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.ವಾಣಿಜ್ಯ ತೆರಿಗೆ ಇಲಾಖೆಯ ಐದು ತನಿಖಾ ಠಾಣೆಗಳಿಂದ 1,07,288 ರೂಪಾಯಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಅತ್ತಿಬೆಲೆ ಸಾರಿಗೆ ಇಲಾಖೆ ತನಿಖಾ ಠಾಣೆಯಲ್ಲಿ ಅಧಿಕೃತವಾಗಿ ದಂಡ ವಸೂಲಿ ಮಾಡಿದ್ದ ಮೊತ್ತದಲ್ಲಿ 5,627 ರೂಪಾಯಿ ಕಡಿವೆು ಇರುವುದು ಪತ್ತೆಯಾಗಿದೆ. ಕಾರ್ಯಾಚರಣೆ ಸಂಬಂಧ ಬೆಂಗಳೂರಿನಲ್ಲಿ ಮೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಒಂದು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.ವಾಣಿಜ್ಯ ತೆರಿಗೆ ಇಲಾಖೆಯ ನೆಲಮಂಗಲ ತನಿಖಾ ಠಾಣೆಯಲ್ಲಿ ರೂ 41,318 ಲಂಚದ ಹಣ ಪತ್ತೆಯಾಗಿದ್ದು, ವಾಣಿಜ್ಯ ತೆರಿಗೆ ಅಧಿಕಾರಿ (ಸಿಟಿಓ) ರಾಮು, ತೆರಿಗೆ ಇನ್‌ಸ್ಪೆಕ್ಟರ್ ರಾಮು, ಖಾಸಗಿ ಏಜೆಂಟ್‌ಗಳಾದ ಸುಬ್ಬೇಗೌಡ ಮತ್ತು ಗಾಳಪ್ಪ ಎಂಬುವರನ್ನು ಬಂಧಿಸಲಾಗಿದೆ. ಇಲಾಖೆಯ ಹೊಸಕೋಟೆ ತನಿಖಾ ಠಾಣೆಯಲ್ಲಿ 8,500 ಅಕ್ರಮ ನಗದು ಪತ್ತೆಯಾಗಿದ್ದು, ಸಿಟಿಓ ಜಯಂತಕುಮಾರ್ ಮತ್ತು ಕುಮಾರ ಎನ್. ಚಂದ್ರಶೇಖರ ಎಂಬ ಗುಮಾಸ್ತನನ್ನು ಬಂಧಿಸಲಾಗಿದೆ.ಅತ್ತಿಬೆಲೆ ವಾಣಿಜ್ಯ ತೆರಿಗೆ ತನಿಖಾ ಠಾಣೆಯ ಮೇಲೆ ದಾಳಿ ನಡೆಸಿದಾಗ ರೂ 28,385 ಲಂಚದ ಹಣ ಪತ್ತೆಯಾಗಿದೆ. ಈ ಸಂಬಂಧ ಅಲ್ಲಿನ ಸಿಟಿಓ ಎಸ್.ರವಿಶಂಕರ್, ತೆರಿಗೆ ಇನ್‌ಸ್ಪೆಕ್ಟರ್ ರುದ್ರೇಶ್, `ಡಿ~ ದರ್ಜೆ ನೌಕರ ರಾಜಶೇಖರಯ್ಯ ಮತ್ತು ಯೋಗೇಶ್ ಎಂಬ ಖಾಸಗಿ ಮಧ್ಯವರ್ತಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಬಾಗೇಪಲ್ಲಿ ವಾಣಿಜ್ಯ ತೆರಿಗೆ ತನಿಖಾ ಠಾಣೆಯಲ್ಲಿ 9,090 ರೂ. ಲಂಚದ ಹಣವನ್ನು ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ತೆರಿಗೆ ಇನ್‌ಸ್ಪೆಕ್ಟರ್ ರವಿಪ್ರಕಾಶ್, ಗುಮಾಸ್ತರಾದ ಮುನಿಯಪ್ಪ ಮತ್ತು ಕೆ.ರಾಮಕೃಷ್ಣ ಎಂಬ `ಡಿ~ ದರ್ಜೆ ನೌಕರನನ್ನು ಬಂಧಿಸಲಾಗಿದೆ.ಇಲಾಖಾ ತನಿಖೆಗೆ ಶಿಫಾರಸು: ಅತ್ತಿಬೆಲೆ ಸಾರಿಗೆ ತನಿಖಾ ಠಾಣೆಯಲ್ಲಿ ರಸೀದಿ ನೀಡಿ ವಿಧಿಸಿದ್ದ ದಂಡದ ಮೊತ್ತಕ್ಕಿಂತಲೂ 5,672 ರೂಪಾಯಿ ಕಡಿಮೆ ಇರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಈ ಸಂಬಂಧ ಮೋಟಾರು ವಾಹನ ಇನ್‌ಸ್ಪೆಕ್ಟರ್ ಸೈಯದ್ ರಸೂಲ್ ಮತ್ತು ಇತರೆ ಮೂವರು ನೌಕರರ ವಿರುದ್ಧ ಇಲಾಖಾ ತನಿಖೆಗೆ ಶಿಫಾರಸು ಮಾಡಲು ತನಿಖಾ ತಂಡ ನಿರ್ಧರಿಸಿದೆ.ಅತ್ತಿಬೆಲೆಯ ಹೊರ ವಾಣಿಜ್ಯ ತನಿಖಾ ಠಾಣೆಯಲ್ಲಿ 1,995 ರೂ.ಹೆಚ್ಚುವರಿಯಾಗಿ ಪತ್ತೆಯಾಗಿದೆ. ಈ ಸಂಬಂಧ ಕರ್ತವ್ಯದಲ್ಲಿದ್ದ ಸಿಟಿಓ ಸಿದ್ದೇಶ್‌ಕುಮಾರ್ ವಿರುದ್ಧವೂ ಇಲಾಖಾ ತನಿಖೆ ನಡೆಸುವಂತೆ ವಾಣಿಜ್ಯ ತೆರಿಗೆ ಇಲಾಖೆಗೆ ಶಿಫಾರಸು ಮಾಡುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.ದಿಢೀರ್ ದಾಳಿ: ವಾಣಿಜ್ಯ ತೆರಿಗೆ ಇಲಾಖೆ ಮತ್ತು ಸಾರಿಗೆ ಇಲಾಖೆಯ ತನಿಖಾ ಠಾಣೆಗಳಲ್ಲಿ ರಾತ್ರಿ ವೇಳೆ ವಾಹನ ಚಾಲಕರಿಂದ ದೊಡ್ಡ ಪ್ರಮಾಣದಲ್ಲಿ ಲಂಚ ವಸೂಲಿ ಮಾಡುತ್ತಿರುವ ಕುರಿತು ಲೋಕಾಯುಕ್ತ ಪೊಲೀಸರಿಗೆ ಸುಳಿವು ದೊರಕಿತ್ತು. ಈ ಜಾಲವನ್ನು ಭೇದಿಸಲು ನಿರ್ಧರಿಸಿದ್ದ ಲೋಕಾಯುಕ್ತ ಡಿಐಜಿ ಪ್ರಣಬ್ ಮೊಹಂತಿ ಅವರು ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಪೊಲೀಸರನ್ನು ಸಜ್ಜುಗೊಳಿಸಿದ್ದರು.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಲೋಕಾಯುಕ್ತ ಎಸ್‌ಪಿ ಬಿ.ಪರಮೇಶ್ವರಪ್ಪ ನೇತೃತ್ವದಲ್ಲಿ ಐದು ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಡಿವೈಎಸ್‌ಪಿ ಎನ್.ಸಿ.ಬೂದಿಹಾಳ್ ನೇತೃತ್ವ ವಹಿಸಿದ್ದರು. ಶನಿವಾರ ಬೆಳಗಿನ ಜಾವ ಐದು ಗಂಟೆಯ ವೇಳೆಗೆ ತನಿಖಾ ಠಾಣೆಗಳ ಬಳಿ ತೆರಳಿದ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry