ಸೋಮವಾರ, ಡಿಸೆಂಬರ್ 16, 2019
17 °C

ಲೋಕಾಯುಕ್ತ ದುರ್ಬಲ ಆಗಲು ಬಿಡುವುದಿಲ್ಲ - ಭಾರದ್ವಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಾಯುಕ್ತ ದುರ್ಬಲ ಆಗಲು ಬಿಡುವುದಿಲ್ಲ - ಭಾರದ್ವಾಜ್

ಬೆಂಗಳೂರು:  `ಲೋಕಾಯುಕ್ತ ಅಥವಾ ಯಾವುದೇ ತನಿಖಾ ಸಂಸ್ಥೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು   ಬಿಡುವುದಿಲ್ಲ. ಈ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನ ಎಂದಿಗೂ ಫಲಿಸುವುದಿಲ್ಲ~ ಎಂದು ರಾಜ್ಯಪಾಲ ಎಚ್. ಆರ್.ಭಾರದ್ವಾಜ್ ಇಲ್ಲಿ ತೀಕ್ಷ್ಣವಾಗಿ ನುಡಿದರು.ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ನಂತರ ಅವರು ಮಾತನಾಡಿದರು. `ಕರ್ನಾಟಕ ಲೋಕಾಯುಕ್ತ ಸಂಸ್ಥೆ ಉತ್ತಮ ಸೇವೆ ಸಲ್ಲಿಸಿದೆ; ಆದರ್ಶಪ್ರಾಯವಾಗಿದೆ. ಇಂತಹ ಹೆಮ್ಮೆಯ ಸಂಸ್ಥೆಯ ಸ್ವಾಯತ್ತತೆಯನ್ನು ಕಾಪಾಡುವ  ಭರವಸೆ ನೀಡುತ್ತೇನೆ~ ಎಂದರು.`ಭ್ರಷ್ಟಾಚಾರಮುಕ್ತ ಸಮಾಜಕ್ಕೆ ಜನರು ಹಾತೊರೆಯುತ್ತಿದ್ದಾರೆ. ಪ್ರಾಮಾಣಿಕತೆ ಪೂರ್ತಿ ಮರೆಯಾಗಿದೆ ಎಂಬ ಭಾವನೆ ಸಾರ್ವಜನಿಕ ವಲಯದಲ್ಲಿ ತಳವೂರಿದೆ. ಭ್ರಷ್ಟ ಪರಿಸರವನ್ನು ತೊಲಗಿಸುವ ಕೆಲಸಕ್ಕೆ ನಾವೆಲ್ಲ ಒಟ್ಟಾಗಿ ತೊಡಗಿಕೊಳ್ಳಬೇಕಿದೆ. ಆಡಳಿತ ಸ್ವರೂಪಕ್ಕೆ ಭಂಗ ತರುವ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನಗಳನ್ನು ಹಿಮ್ಮೆಟ್ಟಿಸಬೇಕು~ ಎಂದು ಹೇಳಿದರು.ಕಲಿಸುವ ಮಳಿಗೆ ಆಗದಿರಲಿ: `ವಿಶ್ವವಿದ್ಯಾಲಯಗಳು ಕೇವಲ ಪಠ್ಯ ಕಲಿಸುವ ಮಳಿಗೆ ಆಗದಿರಲಿ. ಅಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ಪ್ರೋತ್ಸಾಹ ದೊರೆಯಬೇಕು~ ಎಂದರು.

ಮೊದಲೇ ತೆರಳಿದ ಸಿ.ಎಂ
ಬೆಂಗಳೂರು: ಶಿಷ್ಟಾಚಾರ ಪ್ರಕಾರ ರಾಜ್ಯಪಾಲರನ್ನು ಸ್ವಾಗತಿಸಿ, ನಂತರ ಬೀಳ್ಕೊಡಬೇಕಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು, ಕಾರ್ಯಕ್ರಮ ಮುಗಿಯುವ ಮುನ್ನವೇ ಸಭೆ ಬಿಟ್ಟು ತೆರಳಿದ ಘಟನೆ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗುರುವಾರ ನಡೆಯಿತು.ರಾಜ್ಯಪಾಲರ ಭಾಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಬಹುಮಾನ ವಿತರಣಾ ಸಮಾರಂಭ ಇತ್ತು. ಆದರೆ ಬಹುಮಾನ ವಿತರಣೆಗೆ ನಿಲ್ಲದ ಸಿ.ಎಂ ಮೊದಲೇ ಹೊರ ನಡೆದರು.ಇವರು ಕಾರ್ಯನಿಮಿತ್ತ ತೆರಳಬೇಕಿದ್ದ ಹಿನ್ನೆಲೆಯಲ್ಲಿ ಮೊದಲೇ ರಾಜ್ಯಪಾಲರ ಅನುಮತಿ ಪಡೆದುಕೊಂಡಿದ್ದರು ಎನ್ನಲಾಗಿದೆ.

`ಸರ್ಕಾರ ಹೊಸ ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸುತ್ತಿದೆ. ವಿ.ವಿ.ಗಳ ಬೋಧಕರಿಗೆ ಯುಜಿಸಿ ವೇತನ ನೀಡಲಾಗುತ್ತಿದೆ. ವೇತನ ಪಡೆಯುವುದರೊಂದಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಾವಳಿಗಳನ್ನು ಎಲ್ಲ ವಿ.ವಿ.ಗಳು ಕಟ್ಟುನಿಟ್ಟಾಗಿ ಪಾಲಿಸಬೇಕು~ ಎಂದು ವಿ.ವಿ.ಗಳ ಕುಲಾಧಿಪತಿಯೂ ಆದ ರಾಜ್ಯಪಾಲರು ಸೂಚಿಸಿದರು.ಪಂಚಾಯತ್‌ರಾಜ್: `ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ರೂಪಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಪಂಚಾಯಿತಿಗಳಿಗೆ ಪಿಡಿಒಗಳನ್ನು ನೇಮಿಸುವ ಮೂಲಕ ಪಂಚಾಯಿತಿ ಅಭಿವೃದ್ಧಿ ವೃಂದ ಬಲಪಡಿಸುವ ಯತ್ನ ನಡೆದಿದೆ. ಆದರೆ ರಾಜಕೀಯ ಪ್ರಭಾವ ಹಾಗೂ ತೀವ್ರ ಒತ್ತಡಗಳಿಂದ ಈ ಅಧಿಕಾರಿಗಳು ನಲುಗಿದ್ದಾರೆ. ಇಂತಹ ಒತ್ತಡಗಳಿಗೆ ಅವಕಾಶ ನೀಡಬಾರದು~ ಎಂದು ಅವರು ಕಿವಿಮಾತು ಹೇಳಿದರು.`ಅಭಿವೃದ್ಧಿಯ ಮಾರ್ಗಸೂಚಿಯಲ್ಲಿ ಸಾಮಾಜಿಕ ನ್ಯಾಯ ಒಳಗೊಳ್ಳಬೇಕು. ಆ ನಿಟ್ಟಿನಲ್ಲಿ ಉದ್ಯೋಗಾವಕಾಶ, ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ಕಲ್ಪಿಸಬೇಕಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ವಸತಿ ಶಾಲೆಗಳನ್ನು ಸ್ಥಾಪಿಸಿದೆ. ಈ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕಿದೆ~ ಎಂದರು.ವಿದ್ಯುತ್ ಉತ್ಪಾದನೆ: `ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೂ ಬೇಡಿಕೆ ಮತ್ತು ಪೂರೈಕೆ ನಡುವೆ ಅಂತರ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಿ ಸಮಸ್ಯೆ ನೀಗಿಸಲು ಶ್ರಮಿಸಬೇಕಿದೆ~ ಎಂದು ಸೂಚಿಸಿದರು.`ರಾಜ್ಯದ ಮಕ್ಕಳು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವುದು ನೋವಿನ ಸಂಗತಿ. ಐಸಿಡಿಎಸ್ (ಶಿಶು ಸಮಗ್ರ ಅಭಿವೃದ್ಧಿ ಯೋಜನೆ) ಜಾರಿಯಾಗಿ ಮೂರು ದಶಕ ಕಳೆದರೂ ಇದುವರೆಗೆ ಅಪೌಷ್ಟಿಕತೆಯ ಸಮಸ್ಯೆ ತೊಲಗಿಲ್ಲ. ಮಕ್ಕಳ ಅಭಿವೃದ್ಧಿಗಾಗಿ ಈಗ ಇರುವ ಸೌಲಭ್ಯಗಳನ್ನು ಇಮ್ಮಡಿಗೊಳಿಸುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕಿದೆ~ ಎಂದು ನುಡಿದರು.ಪೊಲೀಸರ ಶ್ಲಾಘನೆ: ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲು ಅವರಿಗೆ ಸ್ವಾತಂತ್ರ್ಯ ನೀಡಬೇಕು. ಪೊಲೀಸ್ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯಬಾರದು. ಶಾಂತಿ ಮತ್ತು ಸುವ್ಯವಸ್ಥೆಗೆ ರಾಜ್ಯ ಹೆಸರಾಗಿದೆ. ಅದಕ್ಕೆ ಭಂಗ ತರಲು ಪ್ರಯತ್ನಿಸುವ ಎಲ್ಲ ಶಕ್ತಿಗಳನ್ನು ಮುಲಾಜಿಲ್ಲದೆ ಹತ್ತಿಕ್ಕಬೇಕು ಎಂದರು.`ನೈಸರ್ಗಿಕ ಸಂಪನ್ಮೂಲ ಉಳಿಸಬೇಕು. ಅದರ ಪ್ರಯೋಜನವನ್ನು ರಾಜ್ಯದ ಜನತೆ ಪಡೆಯುವಂತೆ ಮಾಡಬೇಕು. ಅದು ಯಾರೊಬ್ಬರ ಸ್ವತ್ತಾಗಿ ಉಳಿಯಬಾರದು~ ಎಂದು ಅವರು ಅಭಿಪ್ರಾಯ ಪಟ್ಟರು.ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಮುಂತಾದವರು ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)