ಲೋಕಾಯುಕ್ತ ನೇಮಕಕ್ಕೆ ವಾರದ ಗಡುವು

ಮಂಗಳವಾರ, ಜೂಲೈ 23, 2019
25 °C

ಲೋಕಾಯುಕ್ತ ನೇಮಕಕ್ಕೆ ವಾರದ ಗಡುವು

Published:
Updated:

ಬೆಂಗಳೂರು: `ವಾರದೊಳಗೆ ಲೋಕಾಯುಕ್ತರನ್ನು ನೇಮಿಸದಿದ್ದರೆ ಸರ್ಕಾರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ~ ಎಂದು ಹೈಕೋರ್ಟ್ ಸೋಮವಾರ ಎಚ್ಚರಿಕೆ ನೀಡಿದೆ.

`ಇದೇ 23ರ ಒಳಗೆ ನಿಮ್ಮ ನಿಲುವು ಏನೆಂದು ತಿಳಿಸಿ. ಇಲ್ಲದೇ ಹೋದರೆ ಈ ಸಾಂವಿಧಾನಿಕ ಬಿಕ್ಕಟ್ಟಿನ ಬಗ್ಗೆ ನಾವೇ ರಾಜ್ಯಪಾಲರಿಗೆ ಶಿಫಾರಸು ಮಾಡಬೇಕಾಗುತ್ತದೆ~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

`ಹುದ್ದೆ ತೆರವುಗೊಂಡು ವರ್ಷ ಆಗುತ್ತ ಬಂದಿದೆ (ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ ಹೆಗ್ಡೆ  ಅಧಿಕಾರಾವಧಿ 2011ರ ಆ. 2ರಂದು ಕೊನೆಗೊಂಡಿದೆ). ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ. ಆದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ಗಮನಿಸಿದರೆ ಅಚ್ಚರಿಯಾಗುತ್ತದೆ. ಇದೇನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆಯೇ, ಹೀಗೆಯೇ ಮುಂದುವರಿದರೆ ರಾಜ್ಯಪಾಲರು ಮಧ್ಯೆ ಪ್ರವೇಶಿಸುವಂತೆ ಮಾಡಬೇಕಾಗುತ್ತದೆ~ ಎಂದು ಪೀಠ ಎಚ್ಚರಿಸಿತು.

ಲೋಕಾಯುಕ್ತರನ್ನು ಶೀಘ್ರ ನೇಮಕ ಮಾಡುವಂತೆ ಸರ್ಕಾರಕ್ಕೆ ಆದೇಶಿಸಲು ಕೋರಿ ಎಚ್.ಎಸ್. ನೀಲಕಂಠಪ್ಪ ಎನ್ನುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

`ಇದು ತುರ್ತಾಗಿ ನಡೆಯಬೇಕಿರುವ ಕಾರ್ಯ. ಈ ಬಗ್ಗೆಯೂ ಸರ್ಕಾರ ಗಮನ ಹರಿಸಿಲ್ಲ ಎಂದರೆ ಏನರ್ಥ~ ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು  ಪ್ರತಿವಾದಿಗಳಾಗಿರುವ ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿದರು.

`ಈ ಹುದ್ದೆ ಭರ್ತಿ ಆಗಿಲ್ಲದ ಬಗ್ಗೆ ರಾಜ್ಯಪಾಲರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸರ್ಕಾರವಂತೂ ಈ ನಿಟ್ಟಿನಲ್ಲಿ ಯಾವುದೇ ಉತ್ಸುಕತೆ ತೋರುತ್ತಿಲ್ಲ. ಲೋಕಾಯುಕ್ತರ ಅನುಪಸ್ಥಿತಿಯಲ್ಲಿ ಲೋಕಾಯುಕ್ತ ಪೊಲೀಸರು ಹಲವಾರು ಭ್ರಷ್ಟ ಅಧಿಕಾರಿಗಳನ್ನು ಹಿಡಿದಿದ್ದಾರೆ.  ಭ್ರಷ್ಟಾಚಾರ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂಬುದಕ್ಕೆ ಇಂತಹ ಉದಾಹರಣೆಗಳು ಸಾಕ್ಷಿಯಾಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲೋಕಾಯುಕ್ತರ ನೇಮಕಗೊಂಡರೆ ಇನ್ನಷ್ಟು ಭ್ರಷ್ಟರು ಬಲೆಗೆ ಬೀಳಲಿದ್ದಾರೆ. ಇವೆಲ್ಲ ತಿಳಿದಿದ್ದರೂ ಒಬ್ಬ ಸೂಕ್ತ ವ್ಯಕ್ತಿಯನ್ನು ಹುಡುಕಲು ಸರ್ಕಾರ ವಿಫಲವಾಗಿರುವುದು ದುರದೃಷ್ಟಕರ~ ಎಂದು ಖುದ್ದು ವಾದ ಮಂಡಿಸುತ್ತಿರುವ ನೀಲಕಂಠಪ್ಪ ಹೇಳಿದರು. ವಿಚಾರಣೆ ಮುಂದೂಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry