ಲೋಕಾಯುಕ್ತ ನೇಮಕಾತಿ ವಿವಾದ: ಹಿಂಜರಿದ ಬನ್ನೂರಮಠ

7

ಲೋಕಾಯುಕ್ತ ನೇಮಕಾತಿ ವಿವಾದ: ಹಿಂಜರಿದ ಬನ್ನೂರಮಠ

Published:
Updated:

ಬೆಂಗಳೂರು:ತಮ್ಮನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವಂತೆ ರಾಜ್ಯಪಾಲರಿಗೆ ಮಾಡಿರುವ ಶಿಫಾರಸನ್ನು ಹಿಂದಕ್ಕೆ ಪಡೆಯುವಂತೆ ಕೇರಳ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ ಅವರು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ, ಬನ್ನೂರಮಠ ನೇಮಕಾತಿಗೆ ಸಂಬಂಧಿಸಿದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ.ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದ ವಿವಾದ ವಿಧಾನಮಂಡಲ ಅಧಿವೇಶನದಲ್ಲೂ ಪ್ರತಿಧ್ವನಿಸಿತ್ತು. ಈ ಮಧ್ಯೆ ಬನ್ನೂರುಮಠ ಅವರು ಸೋಮವಾರ ಸಂಜೆ ದಿಢೀರನೆ ಸದಾನಂದ ಗೌಡ ಅವರಿಗೆ ರಹಸ್ಯ ಪತ್ರವೊಂದನ್ನು ರವಾನಿಸಿದರು. ತಮ್ಮನ್ನು ಲೋಕಾಯುಕ್ತ ಹುದ್ದೆಗೆ ನೇಮಕ ಮಾಡುವಂತೆ ರಾಜ್ಯಪಾಲರಿಗೆ ಕಳುಹಿಸಿರುವ ಶಿಫಾರಸನ್ನು ಹಿಂದಕ್ಕೆ ಪಡೆಯುವಂತೆ ಪತ್ರದಲ್ಲಿ ಕೋರುವ ಮೂಲಕ, ತಾವಾಗಿಯೇ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದರು.`ಲೋಕಾಯುಕ್ತ ನೇಮಕಾತಿಗೆ ಸಂಬಂಧಿಸಿದಂತೆ ನನ್ನ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗಿದೆ. ಈ ಬೆಳವಣಿಗೆಯಿಂದ ನನಗೆ ನೋವಾಗಿದೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರಿಂದಲೇ ನನ್ನ ನೇಮಕಾತಿ ಪ್ರಸ್ತಾವಕ್ಕೆ ವಿರೋಧ ವ್ಯಕ್ತವಾಗಿದೆ. ಇಂತಹ ಸಂದರ್ಭದಲ್ಲಿ ಒಂದು ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥನ ಸ್ಥಾನದಲ್ಲಿ ಕುಳಿತು ಕೆಲಸ ಮಾಡುವುದು ಕಷ್ಟವಾಗುತ್ತದೆ. ನನ್ನ ನೇಮಕಾತಿಗೆ ಸಂಬಂಧಿಸಿದ ಪ್ರಸ್ತಾವವನ್ನು ಹಿಂದಕ್ಕೆ ಪಡೆಯಿರಿ~ ಎಂದು ಪತ್ರದಲ್ಲಿ ಬನ್ನೂರಮಠ ಅವರು ಮನವಿ ಮಾಡಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.ಬನ್ನೂರಮಠ ಅವರು ಮುಚ್ಚಿದ ಲಕೋಟೆಯಲ್ಲಿ ಪತ್ರವನ್ನು ಕಳುಹಿಸಿದ್ದು, ಮುಖ್ಯಮಂತ್ರಿಯವರ ಸಚಿವಾಲಯದ ಅಧಿಕಾರಿಗಳು ಅದನ್ನು ಖುದ್ದಾಗಿ ಸದಾನಂದ ಗೌಡ ಅವರಿಗೆ ತಲುಪಿಸಿದರು. ಲಕೋಟೆ ತೆರೆದು ಪತ್ರವನ್ನು ನೋಡಿದ ಮುಖ್ಯಮಂತ್ರಿಯವರು, ಅದನ್ನು ತಾವೇ ಇಟ್ಟುಕೊಂಡರು ಎಂದು ಗೊತ್ತಾಗಿದೆ.ರಾಜ್ಯಪಾಲರಿಂದ ತಿರಸ್ಕಾರ: ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವುದು ಬಹಿರಂಗವಾದ ಕೆಲ ಕ್ಷಣಗಳಲ್ಲೇ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು, ಬನ್ನೂರಮಠ ಅವರ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಐದು ತಿಂಗಳ ಹಿಂದೆ ಕಳುಹಿಸಿದ್ದ ಪ್ರಸ್ತಾವವನ್ನು ತಿರಸ್ಕರಿಸಿದರು.ರಾತ್ರಿ ಏಳು ಗಂಟೆಯ ಸುಮಾರಿಗೆ ಈ ಸಂಬಂಧದ ಕಡತವನ್ನು ರಾಜಭವನದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಕಚೇರಿಗೆ ವಾಪಸ್ ಕಳುಹಿಸಲಾಗಿದೆ.

 

ರಾಜ್ಯಪಾಲರು ದಿಢೀರನೆ ಈ ಪ್ರಸ್ತಾವವನ್ನು ತಿರಸ್ಕರಿಸಿರುವುದಕ್ಕೆ ಸ್ಪಷ್ಟವಾದ ಕಾರಣಗಳು ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ, ಬನ್ನೂರಮಠ ಅವರು ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರದ ಪ್ರತಿಯೊಂದು ರಾಜ್ಯಪಾಲರನ್ನೂ ತಲುಪಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತಾವವನ್ನು ತಿರಸ್ಕರಿಸಿ, ಕಡತವನ್ನು ವಾಪಸ್ ಕಳುಹಿಸಲಾಗಿದೆ.`ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವಂತೆ ಮುಖ್ಯ ಕಾರ್ಯದರ್ಶಿಯವರ ಮೂಲಕ ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರ ನಡುವೆ ಇತ್ತೀಚೆಗೆ ವಿನಿಮಯ ಆಗಿರುವ ಪತ್ರಗಳ ಸಾರಾಂಶವನ್ನು ಗಮನಿಸಿ, ಈ ಪ್ರಸ್ತಾವವನ್ನು ರಾಜ್ಯಪಾಲರು  ತಿರಸ್ಕರಿಸಿದ್ದಾರೆ.ಸಂಬಂಧಿಸಿದ ಕಡತವನ್ನು ಸರ್ಕಾರಕ್ಕೆ ಹಿಂದಿರುಗಿಸಲಾಗಿದೆ~ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಕ್ಟೋಬರ್ ತಿಂಗಳಲ್ಲಿ ರಾಜ್ಯಪಾಲರಿಗೆ ಪ್ರಸ್ತಾವವೊಂದನ್ನು ಕಳುಹಿಸಿದ್ದ ರಾಜ್ಯ ಸರ್ಕಾರ, ಬನ್ನೂರಮಠ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವಂತೆ ಕೋರಿತ್ತು. ಆದರೆ, ಬನ್ನೂರಮಠ ಅವರ ಅರ್ಹತೆ ಮತ್ತು ನೇಮಕಾತಿ ಪ್ರಸ್ತಾವ ಕಳುಹಿಸುವ ಸಂದರ್ಭದಲ್ಲಿ ಸರ್ಕಾರ ಅನುಸರಿಸಿದ ವಿಧಾನದ ಬಗ್ಗೆ ಪ್ರಶ್ನೆ ಎತ್ತಿದ್ದ ರಾಜ್ಯಪಾಲರು, ಅದನ್ನು ತಡೆ ಹಿಡಿದಿದ್ದರು.ಬನ್ನೂರಮಠ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸುವಂತೆ ಸರ್ಕಾರ ಮಾಡಿದ್ದ ಶಿಫಾರಸನ್ನು ತಡೆಹಿಡಿದದ್ದು, ರಾಜ್ಯಪಾಲರು ಮತ್ತು ಸರ್ಕಾರದ ನಡುವಣ ಸಂಘರ್ಷಕ್ಕೆ ಕಾರಣವಾಗಿತ್ತು. ತಾವು ಕಳುಹಿಸಿದ ಪ್ರಸ್ತಾವದಂತೆಯೇ ಲೋಕಾಯುಕ್ತರ ನೇಮಕಾತಿ ನಡೆಯಬೇಕು ಎಂದು ಸರ್ಕಾರ ಹಠ ಹಿಡಿದಿತ್ತು.ಬನ್ನೂರಮಠ ಅವರ ನೇಮಕ ಸಾಧ್ಯವೇ ಇಲ್ಲ ಎಂದು ರಾಜ್ಯಪಾಲರು ಪಟ್ಟು ಹಿಡಿದಿದ್ದರು. ಐದು ತಿಂಗಳಿನಿಂದಲೂ ಈ ಹಗ್ಗಜಗ್ಗಾಟ ಮುಂದುವರೆದಿತ್ತು.ಇಂದು ಪತ್ರಿಕಾಗೋಷ್ಠಿ: ತಾವಾಗಿಯೇ ಕಣದಿಂದ ಹಿಂದೆ ಸರಿದಿರುವ ಬನ್ನೂರಮಠ ಅವರು, ಈ ಕುರಿತಂತೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ತಕ್ಷಣಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಅವರು, ಮಂಗಳವಾರ ಪತ್ರಿಕಾಗೋಷ್ಠಿ ನಡೆಸುವುದಾಗಿ ತಿಳಿಸಿದ್ದಾರೆ.

 

ಶಿಫಾರಸು ಪತ್ರ ಹಿಂದಕ್ಕೆ

ಬನ್ನೂರಮಠ ಅವರ ನೇಮಕಕ್ಕೆ ಸಂಬಂಧಿಸಿದಂತೆ ತಾವು ನೀಡಿದ್ದ ಶಿಫಾರಸು ಪತ್ರವನ್ನು ಹಿಂದಕ್ಕೆ ಪಡೆಯುವುದಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರು ಇದೇ 2ರಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವುದಾಗಿ ತಿಳಿದುಬಂದಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬನ್ನೂರಮಠ ಅವರು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry