ಭಾನುವಾರ, ಮಾರ್ಚ್ 7, 2021
27 °C

ಲೋಕಾಯುಕ್ತ ನೇಮಕ: 25ಕ್ಕೆ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಾಯುಕ್ತ ನೇಮಕ: 25ಕ್ಕೆ ಸಭೆ

ಬೆಂಗಳೂರು: ಲೋಕಾಯುಕ್ತರ ನೇಮಕ ಕುರಿತು ಚರ್ಚಿಸಲು ಇದೇ 25ರಂದು ಎರಡನೇ ಬಾರಿ ಆಯ್ಕೆ ಸಮಿತಿ  ಸಭೆ ಸೇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.‘ಈ ಸಂಬಂಧ ಚರ್ಚಿಸಲು ಈ ಹಿಂದೆಯೂ ಒಮ್ಮೆ ಸಭೆ ಸೇರಲಾಗಿತ್ತು. ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ಕೆಲವು ನಿಯಮಗಳನ್ನು ಪಾಲಿಸಬೇಕಾಗಿದೆ. ಹೀಗಾಗಿ ಮತ್ತೊಮ್ಮೆ ಸಭೆ ಸೇರಿ ಅರ್ಹರನ್ನು ಲೋಕಾಯುಕ್ತ ಹುದ್ದೆಗೆ ನೇಮಿಸಲಾಗುವುದು’ ಎಂದುರು.ಆಯ್ಕೆ ಸಮಿತಿಯ ಸದಸ್ಯರ ಜತೆ ಚರ್ಚೆ ನಡೆಸಿಯೇ ತೀರ್ಮಾನಕ್ಕೆ ಬರಬೇಕು ಎನ್ನುವುದು ಸುಪ್ರೀಂಕೋರ್ಟ್‌ನ ಆದೇಶ. ಅದನ್ನು ಪಾಲಿಸಬೇಕು ಎಂದು ಅಡ್ವೊಕೇಟ್‌ ಜನರಲ್‌ ಸಲಹೆ ನೀಡಿದ್ದಾರೆ. ಆ ಕಾರಣಕ್ಕೆ ಮತ್ತೊಮ್ಮೆ ಸಭೆ ಸೇರಲಾಗುವುದು ಎಂದರು.ಲೋಕಾಯುಕ್ತ ಹುದ್ದೆಗೆ ತಮ್ಮ ಹೆಸರು ಪರಿಗಣಿಸದಂತೆ ಕೋರಿ ಸುಪ್ರಿಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿಕ್ರಮ್‌ಜಿತ್‌ ಸೇನ್‌ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿಲ್ಲ ಎಂದು ಮುಖ್ಯಮಂತ್ರಿಯವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಾಹಿತಿ ಆಯುಕ್ತರ ನೇಮಕ ಸಂಬಂಧ ಸದ್ಯದಲ್ಲೇ ಸಭೆ ಸೇರಿ ತೀರ್ಮಾನಿಸಲಾಗುವುದು ಎಂದರು. ‘ಹೆಲ್ಮೆಟ್‌ ನಮ್ಮ ತೀರ್ಮಾನ ಅಲ್ಲ’: ‘ಸುಪ್ರೀಂಕೋರ್ಟ್‌ ಆದೇಶದಂತೆ ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೂ ಹೆಲ್ಮೆಟ್‌ ಕಡ್ಡಾಯ ಮಾಡಲಾಗಿದೆ. ಇದು ರಾಜ್ಯ ಸರ್ಕಾರ ತೆಗೆದುಕೊಂಡ ತೀರ್ಮಾನ ಅಲ್ಲ’ ಎಂದು ಅವರು ಸ್ಪಷ್ಟಪಡಿಸಿದರು. ‘ಸುರಕ್ಷತೆ ದೃಷ್ಟಿಯಿಂದ ಈ ತೀರ್ಮಾನ ಮಾಡಲಾಗಿದೆ. ಇತರ ರಾಜ್ಯಗಳಲ್ಲಿಯೂ ಅದು ಜಾರಿಯಲ್ಲಿದೆ’ ಎಂದು ಅವರು ತಿಳಿಸಿದರು.ಹೆಲ್ಮೆಟ್‌ಗಳ ಅಭಾವ ಇರುವುದರಿಂದ ಕೆಲ ದಿನ ಕಡ್ಡಾಯ ಮಾಡುವುದನ್ನು ಮುಂದೂಡುತ್ತೀರಾ ಎನ್ನುವ ಪ್ರಶ್ನೆಗೆ ‘ಹೆಲ್ಮೆಟ್‌ಗಳನ್ನು ವ್ಯವಸ್ಥೆ ಮಾಡಿಕೊಳ್ಳಲಿ ಎನ್ನುವ ಸಲುವಾಗಿಯೇ ವರ್ಷ ಸಮಯ ನೀಡಲಾಗಿತ್ತು. ಈಗ ಮತ್ತೂ ಸಮಯ ನೀಡುವುದರಲ್ಲಿ ಅರ್ಥ ಇಲ್ಲ. ಸದ್ಯಕ್ಕೆ ಯಾವ ವಿನಾಯಿತಿಯೂ ಇರುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ನ್ಯಾಯಾಂಗ ನಿಂದನೆ ಆಗುತ್ತದೆ’ ಎಂದು ಹೇಳಿದರು.ಪುನರ್‌ರಚನೆ ಇಲ್ಲ: ರಾಜ್ಯ ಯೋಜನಾ ಮಂಡಳಿಯ ಪುನರ್‌ರಚನೆ ಸದ್ಯಕ್ಕೆ ಇಲ್ಲ ಎಂದು ಹೇಳಿದ ಅವರು ಸದ್ಯದಲ್ಲೇ ಪೂರ್ಣ ಪ್ರಮಾಣದ ಸಭೆ ನಡೆಸಲಾಗುವುದು ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.