ಲೋಕಾಯುಕ್ತ ಪರ ವಕೀಲರ ನೇಮಕ

7

ಲೋಕಾಯುಕ್ತ ಪರ ವಕೀಲರ ನೇಮಕ

Published:
Updated:

ಬೆಂಗಳೂರು: ಕೆಐಎಡಿಬಿ ಭೂ ಹಗರಣದಲ್ಲಿ ಪಾಲಿಕೆ ಸದಸ್ಯ ಕಟ್ಟಾ ಜಗದೀಶ್ ಮತ್ತು ನಿವೃತ್ತ ಕೆಎಎಸ್ ಅಧಿಕಾರಿ ಟಿ.ಪಿ.ಮುನಿನಾರಾಯಣಪ್ಪ ವಿರುದ್ಧದ ನಾಲ್ಕು ಪ್ರಕರಣಗಳಲ್ಲಿ ಲೋಕಾಯುಕ್ತದ ಪರ ವಾದಿಸಲು ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಆಗಿ ನೇಮಕ ಮಾಡಲಾಗಿದೆ.ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂ ಹಗರಣಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ತಮ್ಮ ಸಂಸ್ಥೆಯ ಪರ ಎಸ್‌ಪಿಪಿ ಆಗಿ ಆಚಾರ್ಯ ಅವರನ್ನು ನೇಮಕ ಮಾಡುವಂತೆ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಗುರುವಾರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಶುಕ್ರವಾರ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿರುವ ರಾಜ್ಯ ಸರ್ಕಾರ, ಈ ಸಂಬಂಧ ಆದೇಶ ಹೊರಡಿಸಿದೆ.

ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್  ರದ್ದು ಮಾಡುವಂತೆ ಕೋರಿ ಜಗದೀಶ್  ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಪರ ಆಚಾರ್ಯ ಹೈಕೋರ್ಟ್‌ಗೆ ಹಾಜರಾಗಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಜಗದೀಶ್ ಪರ ವಕೀಲ ಸಿ.ವಿ.ನಾಗೇಶ್, ‘ಲೋಕಾಯುಕ್ತದ ಪರ ವಾದಿಸಲು ಸರ್ಕಾರದ ಎಸ್‌ಪಿಪಿ ಇದ್ದಾರೆ. ಆಚಾರ್ಯ ಎಸ್‌ಪಿಪಿ ಎಂದು ಸರ್ಕಾರ ಅಧಿಸೂಚನೆ ಪ್ರಕಟಿಸಿಲ್ಲ. ಹೀಗಿರುವಾಗ ಅವರು ಲೋಕಾಯುಕ್ತದ ಪರ ವಾದಿಸುವಂತಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ವಾದ ಪುರಸ್ಕರಿಸಿದ್ದ ನ್ಯಾ. ವಿ.ಜಗನ್ನಾಥನ್, ಆಚಾರ್ಯ  ಲೋಕಾಯುಕ್ತ ಪೊಲೀಸರ ಪರ ವಾದಿಸಲು ಅವಕಾಶವಿಲ್ಲ ಎಂದು ಮಂಗಳವಾರ ಆದೇಶ ನೀಡಿದ್ದರು. ಫೆ. 18ರಂದು ನಡೆಯುವ ವಿಚಾರಣೆಯಲ್ಲಿ ಎಸ್‌ಪಿಪಿಯೇ ವಾದಿಸಬೇಕು ಎಂದು ಸೂಚಿಸಿದ್ದರು. ಗುರುವಾರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದ ಲೋಕಾಯುಕ್ತರು, ಆಚಾರ್ಯರನ್ನು   ಎಸ್‌ಪಿಪಿಯನ್ನಾಗಿ ನೇಮಿಸುವಂತೆ ಕೋರಿದ್ದರು. ಅದಕ್ಕೆ ಶುಕ್ರವಾರ ಸಮ್ಮತಿ ನೀಡಿರುವ ಸರ್ಕಾರ, ಆದೇಶ ಪ್ರಕಟಿಸಿದೆ. ಇದರಿಂದಾಗಿ ಇನ್ನು ಲೋಕಾಯುಕ್ತದ ಪರ ಆಚಾರ್ಯ ಅವರೇ ವಾದ ಮಂಡಿಸಲು ಅವಕಾಶ ದೊರೆತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry