ಮಂಗಳವಾರ, ಮೇ 18, 2021
22 °C

ಲೋಕಾಯುಕ್ತ ಬಲೆಗೆ ಉಪ ತಹಶೀಲ್ದಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ಜಮೀನಿನ ಖಾತೆ ಬದಲಾವಣೆ ಮುಂದೂಡಲು ತಾಲ್ಲೂಕು ಕಚೇರಿಯಲ್ಲಿ ವ್ಯಕ್ತಿಯೊಬ್ಬರಿಂದ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗಲೇ ಇಲ್ಲಿನ ಉಪತಹಶೀಲ್ದಾರ್ ರಾಮಚಂದ್ರಪ್ಪ, ದ್ವಿತೀಯ ದರ್ಜೆ ನೌಕರ ಬಾಲಕೃಷ್ಣ ಲೋಕಾಯುಕ್ತ ಪೊಲೀಸರಿಗೆ ಸೋಮವಾರ ಸಿಕ್ಕಿ ಬಿದ್ದಿದ್ದಾರೆ.  ಸಂಜೆ ಲೋಕಾಯುಕ್ತರು ನಡೆಸಿದ ಕಾರ್ಯಾಚರಣೆಯಲ್ಲಿ ಈ ಇಬ್ಬರೂ ಸಿಕ್ಕಿ ಬಿದ್ದರು.ವಿವರ: ತಾಲ್ಲೂಕಿನ ಲಕ್ಕೂರು ಹೋಬಳಿಯ ಚಿಕ್ಕತಿರುಪತಿ ಗ್ರಾಮದ ನಿವಾಸಿ ದೇವರಾಜು ಮತ್ತು ಆತನ ದೊಡ್ಡಪ್ಪ ಶ್ರೀನಿವಾಸ್ ನಡುವೆ 1-33 ಗುಂಟೆ ಜಮೀನು ವಿವಾದವಿದ್ದು, ಜಿಲ್ಲಾ ಉಪವಿಭಾಗ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ಶ್ರೀನಿವಾಸ್ 1-33 ಎಕರೆ ಜಮೀನಿನಲ್ಲಿ 33 ಗುಂಟೆ ಜಮೀನನ್ನು ಬೆಂಗಳೂರಿನ ವಿನೋಬ ಎಂಬುವರಿಗೆ ಮಾರಾಟ ಮಾಡಿದ್ದು, ಖಾತೆ ಬದಲಾವಣೆ ಮಾಡುವಂತೆ ಲಕ್ಕೂರಿನ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಜಮೀನಿನ ಬಗ್ಗೆ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ದಾವೆ ಇರುವುದರಿಂದ ಖಾತೆ ಬದಲಾವಣೆ ಮುಂದೂಡಬೇಕು ಎಂದು ದೇವರಾಜ್ ಅವರು ಅರ್ಜಿ ಸಲ್ಲಿಸಿದ್ದರು.ಈ ಅರ್ಜಿ ಸಂಬಂಧ ಖಾತೆ ಬದಲಾವಣೆ ಪ್ರಕ್ರಿಯೆ ಮುಂದೂಡಲು ಉಪತಹಶೀಲ್ದಾರ್ 54 ಸಾವಿರ ರೂಪಾಯಿ ಲಂಚಕ್ಕೆ ಆಗ್ರಹಿಸಿದ್ದರು. ಲಂಚದ ಮೊದಲ ಕಂತಾಗಿ 4 ಸಾವಿರ ರೂಪಾಯಿಯನ್ನು ಮೇ 31ರಂದು ನೀಡಿದ್ದ ದೇವರಾಜ್ ಉಳಿದ ಹಣವನ್ನು ಜೂನ್ 3ರಂದು ನೀಡುವ ಭರವಸೆ ನೀಡಿದ್ದರು. ಈ ಬಗ್ಗೆ ಅಂದೇ ಲೋಕಾಯುಕ್ತರಿಗೆ ದೂರು ನೀಡಿದ್ದರು.ಒಪ್ಪಂದದಂತೆ 50 ಸಾವಿರ ರೂಪಾಯಿಯನ್ನು ಸೋಮವಾರ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನೀಡುತ್ತಿದ್ದ ವೇಳೆ ಲೋಕಾಯುಕ್ತ ಡಿಎಸ್‌ಪಿ ನಾಗರಾಜ್ ನೇತೃತ್ವದ ಅಧಿಕಾರಿಗಳು ಉಪತಹಶೀಲ್ದಾರ್ ರಾಮಚಂದ್ರಪ್ಪ, ದ್ವಿತೀಯ ದರ್ಜೆ ನೌಕರ ಬಾಲಕೃಷ್ಣ ಅವರನ್ನು ವಶಕ್ಕೆ ಪಡೆದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.