ಲೋಕಾಯುಕ್ತ ಬಲೆಗೆ ಬಿಇಓ

7

ಲೋಕಾಯುಕ್ತ ಬಲೆಗೆ ಬಿಇಓ

Published:
Updated:

ಬಳ್ಳಾರಿ: ಶಾಲೆಯೊಂದರ ಕೊಠಡಿ ನಿರ್ಮಾಣಕ್ಕೆ ಸಂಬಂಧಿಸಿದ ಬಿಲ್ ಪಡೆಯಲು ಅಗತ್ಯವಾಗಿರುವ ಪರಿಶೀಲನಾ ಪತ್ರ ನೀಡುವುದಕ್ಕೆ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಗರದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.ಬಳ್ಳಾರಿ ಪಶ್ಚಿಮ ವಲಯ (ಕುರುಗೋಡು) ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪರಂಗಯ್ಯ ಎಂಬುವವರೇ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಬಿದ್ದಿದ್ದಾರೆ.ಬಳ್ಳಾರಿ ತಾಲ್ಲೂಕು ಕುರುಗೋಡು ಬಳಿಯ ವದ್ದಟ್ಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿ ನಡೆದಿದ್ದು, ಈ ಕಟ್ಟಡದ ನಿರ್ಮಾಣಕ್ಕೆ ಸಂಬಂಧಿಸಿದ 4ನೇ ಹಂತದ ಬಿಲ್ ಪಡೆಯಲು ಅಧಿಕಾರಿಯ ಪರಿಶೀಲನಾ ಪತ್ರ ಅಗತ್ಯ. ಈಗಾಗಲೇ 3 ಹಂತಗಳಲ್ಲಿ ಹಣ ಬಿಡುಗಡೆಯಾಗಿದ್ದು, ಪ್ರತಿ ಹಂತಕ್ಕೂ ಕ್ಷೇತ್ರ ಶಿಕ್ಷಣಾಧಿಕಾರಿ ಪರಿಶೀಲನೆ ನಡೆಸಿ ವರದಿ ನೀಡಿದ್ದು, ಇದೀಗ 4ನೇ ಹಂತದ ನಿರ್ಮಾಣ ಕಾಮಗಾರಿ ಕುರಿತು ಪರಿಶೀಲನೆ ನಡೆಸಿ, ವರದಿ ನೀಡಲು ಲಂಚ ನೀಡುವಂತೆ ಬೇಡಿಕೆ ಇರಿಸಲಾಗಿತ್ತು. ರೂ 1.5 ಲಕ್ಷದ ಬಿಲ್‌ಗೆ ರೂ 5 ಸಾವಿರ ನೀಡಿದರೆ ಪರಿಶೀಲನಾ ಪತ್ರ ನೀಡುವುದಾಗಿ ಕೆಂಪರಂಗಯ್ಯ ತಿಳಿಸಿದ್ದರು. ಇದರಿಂದ ಬೇಸತ್ತ ಎಸ್‌ಡಿಎಂಸಿ ಅಧ್ಯಕ್ಷ ವಿ.ಎಸ್. ರಾಜಶೇಖರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.ಮಂತ್ರಾಲಯಕ್ಕೆ ಹೊರಟಿದ್ದರು: ತುಮಕೂರಿನವರಾದ ಕೆಂಪರಂಗಯ್ಯ, ಬಳ್ಳಾರಿಯಲ್ಲೇ ಒಂದು ಕೋಣೆ ಬಾಡಿಗೆಗೆ ಪಡೆದು ವಾಸವಿದ್ದು, ಮಂತ್ರಾಲಯಕ್ಕೆ ತೆರಳಲು ಹೆಂಡತಿ, ಮಕ್ಕಳನ್ನು ಕರೆಸಿದ್ದರು. ಹೆಂಡತಿಯ ತಂಗಿ, ಅವರ ಪತಿ, ಅವರ  ಮಕ್ಕಳೂ ಆಗಮಿಸಿದ್ದರು. ಬೆಳಿಗ್ಗೆ 9ರ ವೇಳೆಗೆ ಕೋಟೆ ಪ್ರದೇಶದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಎದುರಾದ ರಾಜಶೇಖರ, ಹಣ ನೀಡಲು ಮುಂದಾದಾಗ ಮನೆಯವರನ್ನೆಲ್ಲ ದೇವಸ್ಥಾನದ ಒಳಗೆ ಕಳುಹಿಸಿ, ಕೋಣೆಗೆ ಕರೆದೊಯ್ದ ಕೆಂಪರಂಗಯ್ಯ ಲಂಚದ ಹಣ ಇಸಿದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ಹಾಜರಾಗಿ ಹಣದ ಸಮೇತ ಬಂಧಿಸಿದರು. ಲೋಕಾಯುಕ್ತ ಡಿವೈಎಸ್‌ಪಿ ದೇಸಾಯಿ ನೇತೃತ್ವ ದಾಳಿ ನಡೆಯಿತು., ಇನ್ಸ್‌ಪೆಕ್ಟರ್‌ಗಳಾದ ಲಕ್ಷ್ಮಣ ನಾಯಕ್, ಚಿಟಗುಬ್ಬಿ ಮತ್ತಿತರರು ದಾಳಿಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry