ಲೋಕಾಯುಕ್ತ ವರದಿಯಲ್ಲಿ ಏನಿದೆ?

7

ಲೋಕಾಯುಕ್ತ ವರದಿಯಲ್ಲಿ ಏನಿದೆ?

Published:
Updated:

ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅವರು, ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತ ತನಿಖಾ ವರದಿಯನ್ನು ಸರ್ಕಾರದ ಮುಂದಿರಿಸಿದರು. ಆ ವರದಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ  ಎಬ್ಬಿಸಿತು. ಲೋಕಾಯುಕ್ತರ ವರದಿಯ ಪರಿಣಾಮ ವಾಗಿಯೇ, ವರದಿ ಸಲ್ಲಿಸಿದ  ನಾಲ್ಕೇ ದಿನಗಳಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಗಾದಿಯಿಂದ ಕೆಳಗೆ ಇಳಿದರು.  ಅದುವರೆಗೂ ಬಳ್ಳಾರಿಯನ್ನು ತಮ್ಮ ಕೈವಶದಲ್ಲಿ ಇರಿಸಿಕೊಂಡಿದ್ದ ಮೂವರು ಸಚಿವರು ಸಂಪುಟದಿಂದ ಹೊರಬಿದ್ದರು. ರಾಜಕೀಯ ವಿಪ್ಲವವೊಂದಕ್ಕೆ ಕಾರಣವಾದ ವರದಿ ಅಷ್ಟೇ ವೇಗದಲ್ಲಿ ಸರ್ಕಾರದ ಕಪಾಟು ಸೇರಿತು.ಅಕ್ರಮ ಗಣಿಗಾರಿಕೆ ನಡೆಸಿ ನೈಸರ್ಗಿಕ ಸಂಪತ್ತು ಲೂಟಿ ಮಾಡಿದ್ದ ಗಣಿ ಉದ್ಯಮಿಗಳು, ಅದಕ್ಕೆ ನೆರವು ನೀಡಿದ ಮತ್ತಷ್ಟು ರಾಜಕಾರಣಿಗಳು ಮತ್ತು ಅಕ್ರಮಗಳಿಗೆ ಬೆಂಗಾವಲಾಗಿ ನಿಂತಿದ್ದ ಅಧಿಕಾರಿಗಳು ಕಾನೂನು ಕ್ರಮದ ಬಲೆಯಿಂದ ಜಾರಿಕೊಂಡಿದ್ದರು.  ಲೋಕಾಯುಕ್ತರ ವರದಿ ಎರಡು ವರ್ಷಗಳ ಕಾಲ ದೂಳು ತಿನ್ನುತ್ತಾ ಬಿದ್ದಿತ್ತು. ಜನಾಭಿಪ್ರಾಯದ ಒತ್ತಡಕ್ಕೆ ಮಣಿದಿರುವ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾಯುಕ್ತ ವರದಿಯ ಶಿಫಾರಸುಗಳ ಜಾರಿಗೆ ಕೈ ಹಾಕಿದ್ದಾರೆ.  ಅಕ್ರಮ ಎಸಗಿದವರು ಮತ್ತು ಅವರಿಗೆ ಬೆಂಬಲವಾಗಿ ನಿಂತವರ ಮುಖಗಳಲ್ಲಿ ಆತಂಕದ ನೆರಿಗೆಗಳು ಮೂಡಲಾರಂಭಿಸಿವೆ.ಸಂತೋಷ್‌ ಹೆಗ್ಡೆ ಸಲ್ಲಿಸಿದ ವರದಿಯಲ್ಲಿ ಏನಿದೆ? ಅಕ್ರಮ ಗಣಿಗಾರಿಕೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದ ಅಂದಾಜು ನಷ್ಟ ಎಷ್ಟು? ಅಕ್ರಮ ಗಣಿಗಾರಿಕೆ, ಅದಿರು ಕಳ್ಳಸಾಗಣೆ ಮತ್ತು ರಫ್ತು ಹೇಗೆಲ್ಲಾ ನಡೆದಿತ್ತು ಎಂಬ ಸಂಗತಿಗಳತ್ತ ಒಂದು ಹೊರಳುನೋಟ ಇಲ್ಲಿದೆ.2006ರಲ್ಲಿ ಆಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗಣಿ ಉದ್ಯಮಿಗಳಿಗೆ ₨ 150 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆಗ ವಿಧಾನ ಪರಿಷತ್‌ ಸದಸ್ಯರಾಗಿದ್ದ ಜಿ.ಜನಾರ್ದನ ರೆಡ್ಡಿ  ಆರೋಪಿಸಿದರು.  ಈ ಘಟನೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಯಿತು.  ಕೆಲವೇ ದಿನಗಳಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು.ಎಲ್‌. ಭಟ್‌ ನೇತೃತ್ವದಲ್ಲಿ ಆಯೋಗವೊಂದನ್ನು ನೇಮಕ ಮಾಡಿದ  ಕುಮಾರ ಸ್ವಾಮಿ, ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆಗೆ ಆದೇಶಿಸಿದರು. ಆದರೆ, ಆಯೋ ಗದ ಅಧ್ಯಕ್ಷರು ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿದರು. ನಂತರ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ರಾಜಕೀಯ ಸಂಘರ್ಷ ಮತ್ತಷ್ಟು ಜೋರು ಪಡೆಯಿತು.  2007 ರ ಮಾರ್ಚ್ 12ರಂದು ಆದೇಶವೊಂದನ್ನು ಹೊರಡಿಸಿದ ರಾಜ್ಯ ಸರ್ಕಾರ, 2000ನೇ ವರ್ಷದ ಜನವರಿ 1ರಿಂದ 2006ರ ಜುಲೈ 22ರವರೆಗಿನ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತ ತನಿಖೆಯನ್ನು ಲೋಕಾಯುಕ್ತರಿಗೆ ಒಪ್ಪಿಸಿತು. ನಂತರ ಮೂರು ಬಾರಿ ತನಿಖೆಯ ಅವಧಿಯನ್ನು ವಿಸ್ತರಿಸಲಾಯಿತು.  ಅಂತಿಮವಾಗಿ 2000ನೇ ವರ್ಷದ ಜನವರಿ 1ರಿಂದ 2010ರ ಜುಲೈ 19ರವರೆಗಿನ ಅವಧಿಯ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ತನಿಖೆ ನಡೆಸಿದರು.ಆರಂಭದಲ್ಲಿ ಅರಣ್ಯ ಜಮೀನು ಅತಿಕ್ರಮಣ, ಕಂದಾಯ ಭೂಮಿಯಲ್ಲಿ ಪರವಾ ನಗಿ ಇಲ್ಲದೇ ಗಣಿಗಾರಿಕೆ, ಗಣಿ ಗುತ್ತಿಗೆ ನೀಡುವಲ್ಲಿ ಆಗಿರುವ ಲೋಪಗಳ ಬಗ್ಗೆಯೇ ತನಿಖೆ ಹೆಚ್ಚು ಕೇಂದ್ರೀಕೃತವಾಗಿತ್ತು. 2008ರ ಡಿಸೆಂಬರ್‌ 18ರಂದು ಲೋಕಾಯುಕ್ತರು ಮೊದಲ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು. 2011ರ ಜುಲೈ 27ರಂದು ಎರಡನೇ ವರದಿ ಸಲ್ಲಿಸುವಾಗ ಪರಿಸ್ಥಿತಿ ಬೇರೆಯೇ ಆಗಿತ್ತು.ಹಿರಿಯ ಐಎಫ್‌ಎಸ್‌ ಅಧಿಕಾರಿ ಯು.ವಿ.ಸಿಂಗ್‌ ನೇತೃತ್ವದ ತಂಡ ಲೋಕಾಯುಕ್ತ ತನಿಖೆಯನ್ನು ಮುನ್ನಡೆಸಿತು. ಈ ತಂಡ 22,228 ಪುಟಗಳ ವರದಿಯನ್ನು ಲೋಕಾಯುಕ್ತರಿಗೆ ಸಲ್ಲಿಸಿತು. ಅದರ ಆಧಾರದಲ್ಲಿ ಲೋಕಾಯುಕ್ತರು 466 ಪುಟಗಳ ವರದಿಯನ್ನು ಸಿದ್ಧಪಡಿಸಿ ರಾಜ್ಯಪಾಲರು ಮತ್ತು ಸರ್ಕಾರದ ಮುಖ್ಯ ಕಾಯದರ್ಶಿಯವರಿಗೆ ಸಲ್ಲಿಸಿದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಬ್ಬಿಣದ ಅದಿರಿಗೆ ಬೇಡಿಕೆ ಹೆಚ್ಚಿದಷ್ಟೇ ವೇಗದಲ್ಲಿ ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಅದಿರು ಕಳ್ಳತನವೂ ನಡೆದಿತ್ತು ಎಂಬುದನ್ನು ವರದಿ ಬಯಲು ಮಾಡಿತು.2010ರ ಮಾರ್ಚ್‌ನಲ್ಲಿ ತನಿಖಾ ತಂಡ ಅರಣ್ಯ ಇಲಾಖೆಯ ಜೊತೆಗೂಡಿ ಬೇಲೆಕೇರಿ ಬಂದರಿನ ಮೇಲೆ ದಾಳಿ ನಡೆಸಿತು. ಬಳ್ಳಾರಿಯಿಂದ ಕಳ್ಳಸಾಗಣೆ ಮಾಡಿದ್ದ 8 ಲಕ್ಷ ಟನ್‌ಗೂ ಹೆಚ್ಚು ಕಬ್ಬಿಣದ ಅದಿರು ಅಲ್ಲಿ ಪತ್ತೆಯಾಯಿತು. ಅದನ್ನು ಮುಟ್ಟು ಗೋಲು ಹಾಕಿಕೊಳ್ಳಲಾಯಿತು.  ಆದರೆ, ಈ ಪೈಕಿ 6.10 ಲಕ್ಷ ಟನ್‌ನಷ್ಟು ಅದಿರನ್ನು ಕೆಲವರು ಕದ್ದು ರಫ್ತು ಮಾಡಿದ್ದರು ಎಂಬುದು ಕೆಲ ದಿನಗಳ ಬಳಿಕ ಪತ್ತೆಯಾಯಿತು. ನಂತರ ತನಿಖೆಯ ದಿಕ್ಕು ಬದಲಾಯಿತು.

2006ರಿಂದ 2010ರ ಜುಲೈವರೆಗಿನ ಅವಧಿಯಲ್ಲಿ 12.57 ಕೋಟಿ ಟನ್‌ ಕಬ್ಬಿಣದ ಅದಿರು ಕರ್ನಾಟಕದಿಂದ ರಫ್ತಾಗಿತ್ತು.  ಈ ಪೈಕಿ 2.98 ಕೋಟಿ ಟನ್‌ ಅದಿರು ಕಳ್ಳತನ ಮಾಡಿದ್ದಾಗಿತ್ತು. ಹೀಗೆ ಕಳ್ಳಸಾಗಣೆ ಮಾಡಿದ ಅದಿರಿನ ಮೌಲ್ಯವೇ ₨ 12,228 ಕೋಟಿಗೂ ಹೆಚ್ಚು ಎಂದು ಲೋಕಾಯುಕ್ತರು ಅಂದಾಜು ಮಾಡಿದ್ದಾರೆ.ಗಣಿ ಪ್ರದೇಶಗಳ ಸಮೀಪದ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ದೊಡ್ಡ ಪ್ರಮಾಣದ ಅದಿರನ್ನು ಕಳ್ಳತನ ಮಾಡಲಾಗಿತ್ತು. ಇನ್ನು ಕೆಲವು ಪ್ರಕರಣ ಗಳಲ್ಲಿ ಅನುಮತಿಗಿಂತಲೂ ಹೆಚ್ಚು ಪ್ರಮಾಣದ ಅದಿರನ್ನು ಗುತ್ತಿಗೆ ಪ್ರದೇಶಗಳಿಂದ ತೆಗೆಯಲಾಗಿತ್ತು. ಈ ಜಾಲ, ‘ಅದಿರು ಸಾಗಣೆ ಪರವಾನಗಿ’ ಪತ್ರಗಳನ್ನೂ ಮುದ್ರಿಸಿ ಬಳಸಿಕೊಳ್ಳುತ್ತಿತ್ತು.2006–2010ರ ಅವಧಿಯಲ್ಲಿ ದೇಶದ ಒಳಗಿನ ಬಳಕೆಗಾಗಿ 6.80 ಕೋಟಿ ಟನ್‌ ಅದಿರು ಸಾಗಣೆ ಮಾಡಲಾಗಿತ್ತು. ರಾಜ್ಯದ ವಿವಿಧ ಕಡೆಗಳಿಂದ ರೈಲಿನ ಮೂಲಕ ಗೋವಾ ರಾಜ್ಯಕ್ಕೆ ಅದಿರು ಸಾಗಿಸಲಾಗಿತ್ತು. 2006–2010ರ ಅವಧಿಯಲ್ಲಿ 45.59 ಲಕ್ಷ ಟನ್‌ ಅಕ್ರಮ ಅದಿರನ್ನು ರೈಲಿನ ಮೂಲಕ ಗೋವಾಕ್ಕೆ ಸಾಗಿಸಲಾಗಿತ್ತು ಎಂಬ ಅಂಶವೂ ವರದಿಯಲ್ಲಿದೆ. ಈ ಬಗ್ಗೆ ಮತ್ತಷ್ಟು ತನಿಖೆಯ ಅಗತ್ಯವಿದೆ ಎಂಬ ಶಿಫಾರಸು ವರದಿಯಲ್ಲಿದೆ.ತೆರಿಗೆ ವಂಚಕರ ಬಣ್ಣ ಬಯಲು: ಅದಿರು ರಫ್ತು ಮಾಡುತ್ತಿದ್ದವರು ದಾಖಲೆಗಳಲ್ಲಿ ಅದಿರಿನ ಮೌಲ್ಯವನ್ನು ಕಡಿಮೆ ದಾಖಲಿಸುತ್ತಿದ್ದರು (ಅಂಡರ್‌ ಇನ್‌ವಾಯ್ಸ್‌). ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಬ್ಬಿಣದ ಅದಿರು ದರಕ್ಕೆ ಹೋಲಿಸಿದರೆ ಶೇಕಡಾ 50ಕ್ಕಿಂತಲೂ ಕಡಿಮೆ ಮೊತ್ತದ ಹಣ ದೇಶಕ್ಕೆ ವಾಪಸು ಬರುತ್ತಿತ್ತು. ಉಳಿದ ಮೊತ್ತ ಹವಾಲಾ ಮೂಲಕ ರವಾನೆ ಆಗುತ್ತಿತ್ತು. ಕೆಲವು ಪ್ರಕರಣಗಳಲ್ಲಿ ವಿದೇಶಗಳಿಗೆ ಕಪ್ಪುಹಣ ವರ್ಗಾವಣೆ ಆಗಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ.ಅಂಡರ್‌ ಇನ್‌ವಾಯ್ಸ್‌ ದಾಖಲಿಸಿದ 478 ಪ್ರಕರಣಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ರೂ 2,222.26 ಕೋಟಿ ನಷ್ಟವಾಗಿದೆ ಎಂದು ತನಿಖಾ ತಂಡ ಅಂದಾಜಿಸಿದೆ. ಇಂತಹ ಸಾವಿರಾರು ಪ್ರಕರಣಗಳು ನಡೆದಿರುವ ಸಾಧ್ಯತೆಯ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಅಧಿಕಾರಿಗಳ ಕೈವಾಡ: ಅಕ್ರಮ ಗಣಿಗಾರಿಕೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ನೇರವಾಗಿ ಶಾಮೀಲಾಗಿರುವುದನ್ನು ಲೋಕಾಯುಕ್ತರು ಸಾಕ್ಷ್ಯಸಮೇತ ಬಯಲಿಗೆ ತಂದಿದ್ದಾರೆ.  ಬಳ್ಳಾರಿಯಲ್ಲಿ  ಜನಾರ್ದನ ರೆಡ್ಡಿ ಅವರ ಆಪ್ತ ಖಾರದಪುಡಿ ಮಹೇಶ್‌ನಿಂದ ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡ ಕಂಪ್ಯೂಟರ್‌ ಒಂದರಲ್ಲಿ, ಸರ್ಕಾರದ ನೂರಾರು ಅಧಿಕಾರಿಗಳು ಮತ್ತು ನೌಕರರಿಗೆ ಲಂಚ ನೀಡುತ್ತಿದ್ದ ವಿವರ ಸಿಕ್ಕಿದೆ. ಇನ್ನೊಂದೆಡೆ ಅದಾನಿ ಎಂಟರ್‌ಪ್ರೈಸಸ್‌ ಮತ್ತು ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪೆನಿಗಳ ಕಂಪ್ಯೂಟರ್‌ಗಳಲ್ಲೂ ಇದೇ ಬಗೆಯ ಮಾಹಿತಿ ಲಭ್ಯವಾಗಿದೆ. ಸುಮಾರು 730 ಅಧಿಕಾರಿಗಳು ಮತ್ತು ನೌಕರರು, ಅಕ್ರಮ ಗಣಿಗಾರಿಕೆ ನಡೆಸಿರುವವರಿಂದ ಲಂಚ ಪಡೆದಿದ್ದಾರೆ ಎಂಬ ವಿವರ ಲೋಕಾಯುಕ್ತರ ವರದಿಯಲ್ಲಿ ಇದೆ.ಕೆಲವು ಶಾಸಕರು, ಸಂಸದರು ಸೇರಿದಂತೆ ಚುನಾಯಿತ ಪ್ರತಿನಿಧಿಗಳೂ ಅಕ್ರಮ ಗಣಿಗಾರಿಕೆ ಮಾಫಿಯಾದಿಂದ ‘ಮಾಮೂಲು’ ಪಡೆಯುತ್ತಿದ್ದರು ಎಂಬ ವಿವರವೂ ವರದಿಯಲ್ಲಿ ಇದೆ. ಈ ಎಲ್ಲರ ವಿರುದ್ಧವೂ ಕಠಿಣ ಕ್ರಮ ಜರುಗಿಸುವಂತೆ ಶಿಫಾರಸು ಮಾಡಲಾಗಿದೆ.ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರು ಕಪ್ಪು ಹಣ ವರ್ಗಾವಣೆ ಮಾಡಲು ಬ್ಯಾಂಕುಗಳು ನೆರವು ನೀಡುತ್ತಿದ್ದುದು, ಬೇನಾಮಿ ಕಂಪೆನಿಗಳನ್ನು ಸೃಷ್ಟಿಸಿ ತೆರಿಗೆ ವಂಚಿಸಿ ರುವುದು, ಸೇರಿದಂತೆ ವಿವಿಧ ಸ್ವರೂಪದ ಅಕ್ರಮಗಳನ್ನು ಲೋಕಾಯುಕ್ತರ ವರದಿ ಅನಾವರಣಗೊಳಿಸಿದೆ. ಅಂತರರಾಷ್ಟ್ರೀಯ ಮಟ್ಟದ ಕಪ್ಪು ಹಣ ವರ್ಗಾವಣೆ, ತೆರಿಗೆ ವಂಚನೆ ಮತ್ತಿತರ ವಿಷಯಗಳ ಕುರಿತು ಜಾರಿ ನಿರ್ದೇಶನಾಲಯ, ಕೇಂದ್ರ ಕಂದಾಯ ಗುಪ್ತಚರ ನಿರ್ದೇಶನಾಲಯ, ಸಿಬಿಐ, ಕೇಂದ್ರೀಯ ಸುಂಕ ಇಲಾಖೆ ಮತ್ತಿತರ ಕೇಂದ್ರ ಸರ್ಕಾರದ ಅಧೀನದ ಸಂಸ್ಥೆಗಳು, ಇಲಾಖೆಗಳಿಂದ ಹೆಚ್ಚಿನ ತನಿಖೆ ನಡೆಸುವಂತೆ ಶಿಫಾರಸು ಮಾಡಲಾಗಿದೆ.ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅವರು, ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತ ತನಿಖಾ ವರದಿಯನ್ನು ಸರ್ಕಾರದ ಮುಂದಿರಿಸಿದರು. ಆ ವರದಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ  ಎಬ್ಬಿಸಿತು.ಪ್ರಮುಖ ಘಟನಾವಳಿಗಳು...

24 ಮಾರ್ಚ್ 2006– ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆಗೆ ಮಧ್ಯಪ್ರದೇಶ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು.ಎಲ್‌.ಭಟ್‌ ನೇತೃತ್ವದ ವಿಚಾರಣಾ ಆಯೋಗ ಅಸ್ತಿತ್ವಕ್ಕೆ.* 12 ಮಾರ್ಚ್‌ 2007– 1 ಜನವರಿ 2000ನೇ ಅವಧಿಯಿಂದ 22 ಜುಲೈ 2006ರ ವರೆಗಿನ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ತನಿಖೆಗೆ ಆದೇಶ.* 09 ಸೆಪ್ಟೆಂಬರ್‌ 2008–  ಆ ದಿನದವರೆಗಿನ ಅಕ್ರಮ ಗಣಿಗಾರಿಕೆ ಕುರಿತು ತನಿಖೆಗೆ ಆದೇಶ.* 18 ಡಿಸೆಂಬರ್‌ 2008– ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅವರಿಂದ ಮೊದಲ ವರದಿ ಸಲ್ಲಿಕೆ* 24 ಡಿಸೆಂಬರ್‌ 2008– ಮತ್ತೊಮ್ಮೆ ಅವಧಿ ವಿಸ್ತರಣೆ.* 19 ಜುಲೈ 2010– ಈ ದಿನದವರೆಗಿನ ಅಕ್ರಮ ಗಣಿಗಾರಿಕೆಯನ್ನೂ ತನಿಖೆಗೆ ಒಪ್ಪಿಸಿ ಆದೇಶ.* 25 ಜುಲೈ 2010– ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್‌ ಪಕ್ಷದಿಂದ ಬೆಂಗಳೂರು– ಬಳ್ಳಾರಿ ಪಾದಯಾತ್ರೆ ಆರಂಭ.* 9 ಆಗಸ್ಟ್ 2010– ಬಳ್ಳಾರಿ ತಲುಪಿದ ಪಾದಯಾತ್ರೆ, ಬೃಹತ್‌ ಸಮಾವೇಶ.* 27 ಜುಲೈ 2011– ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗ್ಡೆ ಅವರಿಂದ ಎರಡನೇ ವರದಿ ಸಲ್ಲಿಕೆ.* ಐಎಫ್‌ಎಸ್‌ ಅಧಿಕಾರಿ ಡಾ.ಯು.ವಿ.ಸಿಂಗ್‌ ನೇತೃತ್ವದ ತನಿಖಾ ತಂಡದಿಂದ 22,228 ಪುಟಗಳ ವರದಿ.* ಲೋಕಾಯುಕ್ತರಿಂದ 466 ಪುಟಗಳ ವರದಿ.* ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ರೂ 16,085 ಕೋಟಿ ನಷ್ಟ.* ‘ಅಂಡರ್‌ ಇನ್‌ವಾಯ್ಸ್‌’ನಿಂದ ರೂ 2,222 ಕೋಟಿ ವಂಚನೆ.* 2006–2010ರ ಅವಧಿಯಲ್ಲಿ 2.98 ಕೋಟಿ ಟನ್‌ ಅದಿರು ಕಳ್ಳಸಾಗಣೆ.* ರೈಲಿನ ಮೂಲಕ 45 ಲಕ್ಷ ಟನ್‌ ಕಳ್ಳಸಾಗಣೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry