ಲೋಕಾಯುಕ್ತ ವರದಿ, ಭಾಗ್ಯಜ್ಯೋತಿ ಯೋಜನೆ ಜಾರಿಗೆ ಆಗ್ರಹ

ಭಾನುವಾರ, ಮೇ 26, 2019
25 °C

ಲೋಕಾಯುಕ್ತ ವರದಿ, ಭಾಗ್ಯಜ್ಯೋತಿ ಯೋಜನೆ ಜಾರಿಗೆ ಆಗ್ರಹ

Published:
Updated:

ಚಿಕ್ಕನಾಯಕನಹಳ್ಳಿ: ಲೋಕಾಯುಕ್ತ ವರದಿ ಜಾರಿಗೆ ಒತ್ತಾಯಿಸಿ ಹಾಗೂ ರೈತ ವಿರೋಧಿ ಭೂ ಸ್ವಾಧೀನ ನೀತಿ ವಿರೋಧಿಸಿ ಇಲ್ಲಿನ ವಿವಿಧ ಸಂಘಟನೆಗಳು ಸೋಮವಾರ ನಗರದಲ್ಲಿ ಜನ ಜಾಗೃತಿ ಜಾಥಾ ಹಾಗೂ ಪ್ರತಿಭಟನಾ ಮೆರವಣಿಗೆ ನಡೆಸಿದವು.ಪಟ್ಟಣದ ಜನ ಸಂಗ್ರಾಮ ಪರಿಷತ್ತು, ಸೃಜನ, ಗ್ರಾಮೀಣ ಮಹಿಳಾ ವೇದಿಕೆ, ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಸದಸ್ಯರು ಸೋಮವಾರ ಇಲ್ಲಿನ ಪುರಸಭಾ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ತಾಲ್ಲೂಕು ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು.ರಾಜ್ಯ ರೈತಸಂಘದ ಉಪಾಧ್ಯಕ್ಷ ಸೋಮಗಡದ ರಂಗಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 8ಸಾವಿರ ಕೋಟಿ ಟನ್ ಅದಿರನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂದು ದೂರಿದರು.ಜಿಲ್ಲಾ ವಿಜ್ಞಾನ ಕೇಂದ್ರದ ರಾಮಕೃಷ್ಣಯ್ಯ ಮಾತನಾಡಿ, ಸಂತೋಷ್ ಹೆಗ್ಡೆ ನೀಡಿದ ಅಕ್ರಮ ಗಣಿಗಾರಿಕೆಯ ತನಿಖಾ ವರದಿಯನ್ನು ಸರ್ಕಾರ ಜಾರಿಗೊಳಿಸಬೇಕು. ಬಲವಂತದ ಭೂಸ್ವಾಧೀನ ನಿಲ್ಲಬೇಕು. ಜನ ಲೋಕಪಾಲ ಮಸೂದೆ ಜಾರಿ ಹಾಗೂ ನೈಸರ್ಗಿಕ ಸಂಪನ್ಮೂಲಗಳು ಸಮುದಾಯದ ಒಡೆತನದಲ್ಲಿರಬೇಕು ಎಂಬ ಮನವಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು.ರೈತ ಸಂಘದ ಕೆಂಕೆರೆ ಸತೀಶ್, ಮಲ್ಲೇಶ್ ಮಾತನಾಡಿದರು. ಪುರಸಭಾ ಸದಸ್ಯರಾದ ರೇಣುಕಮ್ಮ ಗುರುಮೂರ್ತಿ, ಧರಣಿ ಲಕ್ಕಪ್ಪ, ಗಾಯತ್ರಿದೇವಿ, ಕವಿತಾ ಚನ್ನಬಸವಯ್ಯ, ಸೃಜನ ಸಂಘದ ಅಧ್ಯಕ್ಷೆ ಜಯಮ್ಮ ಹಾಗೂ ರೈತಸಂಘದ ಹಲವು ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಭಾಗ್ಯಜ್ಯೋತಿ ಜಾರಿಗೆ ಆಗ್ರಹ

ನಾಲ್ಕು ವರ್ಷಗಳಿಂದ ಭಾಗ್ಯಜ್ಯೋತಿ ಯೋಜನೆ ಜಾರಿಗೆ ತರುವಲ್ಲಿ ವಿಳಂಬಿಸುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಯೋಜನೆ ಫಲಾನುಭವಿಗಳ ವೇದಿಕೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಕೇಂದ್ರ ಸರ್ಕಾರದ ರಾಜೀವ್‌ಗಾಂಧಿ ವಿದ್ಯುದೀಕರಣ ಭಾಗ್ಯಜ್ಯೋತಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಲು ವಿಳಂಬಿಸುತ್ತಿದೆ ಎಂದು ತಾಲ್ಲೂಕಿನ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು.ನೆಹರೂ ವೃತ್ತದಿಂದ ತಾಲ್ಲೂಕು ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದ ನಂತರ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರುದ್ರೇಶ್ ಮಾತನಾಡಿ, ಬಡವರಿಗೆ ವರದಾನವಾಗಬೇಕಿದ್ದ ಕೇಂದ್ರ ಸರ್ಕಾರದ ಕುಟೀರ ಜ್ಯೋತಿ ಯೋಜನೆಯನ್ನು ಸರ್ಕಾರ ನಿರ್ಲಕ್ಷ್ಯಿಸಿದೆ. ತಾಲ್ಲೂಕಿನ 28 ಗ್ರಾಮ ಪಂಚಾಯಿತಿಯಿಂದ ಅರ್ಹ ಫಲಾನುಭವಿಗಳ ಪಟ್ಟಿಯನ್ನು ವಿದ್ಯುತ್ ಇಲಾಖೆಗೆ  ನೀಡಿ ನಾಲ್ಕು ವರ್ಷವಾಗಿದೆ.ಯೋಜನೆ ಜಾರಿಯಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಗ್ರಾಮೀಣ ವಿದಾರ್ಥಿಗಳು ರಾತ್ರಿ ವ್ಯಾಸಂಗ ಮಾಡಲು ಕಷ್ಟ ಪಡಬೇಕಿದೆ ಎಂದು ದೂರಿದರು.ದಲಿತ ವಿಮೋಚನಾ ಸೇನೆ ಸಂಚಾಲಕ ಬಿಳಗಿಹಳ್ಳಿ ರಾಜು, ದಲಿತ ಸಂಘದ ಪಿ.ಪಿ. ರಾಮಣ್ಣ ಹಾಗೂ ರೈತಸಂಘದ ಕೆಂಕೆರೆ ಸತೀಶ್ ಮಾತನಾಡಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಜೆ.ಸಿ.ಪುರ ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದಯ್ಯ, ಕಂದಿಕೆರೆ ಪಂಚಾಯಿತಿ ಸದಸ್ಯ ಉಮಾದೇವಿ, ಮುದ್ದೇನಹಳ್ಳಿ ಪಂಚಾಯಿತಿ ಸದಸ್ಯ ಚಂದ್ರಯ್ಯ ಹಾಗೂ ದಲಿತ ಸಂಘರ್ಷ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry