ಬುಧವಾರ, ಮೇ 12, 2021
27 °C

ಲೋಕಾಯುಕ್ತ ಸಂಸ್ಥೆಯ ಮಾಸಿಕ ಸುದ್ದಿ ಬುಲೆಟಿನ್ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಲೋಕಾಯುಕ್ತ ಸಂಸ್ಥೆ ಮೇಲೆ ಸಾರ್ವಜನಿಕರಿಗೆ ಹೆಚ್ಚಿನ ವಿಶ್ವಾಸ ಇದೆ ಎಂಬುದು ಗುಲ್ಬರ್ಗ ಜಿಲ್ಲಾ ಪ್ರವಾಸದಿಂದ ಅನುಭವಕ್ಕೆ ಬಂದಿದ್ದು, ಇದೇರೀತಿ ಪ್ರತಿ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಇನ್ನೂ ಆರು ತಿಂಗಳಲ್ಲೇ ಲೋಕಾಯುಕ್ತ ಸಂಸ್ಥೆಗೆ ಇನ್ನು ಉತ್ತಮ ಕಾಯಕಲ್ಪ ಒದಗಿಸಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.ಸರ್ಕಾರಿ ಭೂ ಒತ್ತುವರಿ ಬಗ್ಗೆ ವಿ. ಬಾಲಸುಬ್ರಮಣ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿ ಕುರಿತು ಅವರನ್ನು ಔಪಚಾರಿಕವಾಗಿ ಭೇಟಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಗುಲ್ಬರ್ಗದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇಎಸ್) ಹಾಗೂ ನೂತನ ವಿದ್ಯಾಲಯ (ಎನ್.ವಿ) ಸಂಸ್ಥೆ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಸೊಸೈಟಿ ನೋಂದಾಯಿತಗೊಂಡಿರಬೇಕು ಹಾಗೂ ನೋಟಿಫೈಡ್ ಆಗಿರಬೇಕು ಎಂಬ ಬಗ್ಗೆ ಸ್ಪಷ್ಟನೆ ಇಲ್ಲ.

 

ಈ ಬಗ್ಗೆ ನಾವು ಮಾಹಿತಿ ಕಲೆ ಹಾಕಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಸಾರ್ವಜನಿಕರು ಲೋಕಾಯುಕ್ತ ಸಂಸ್ಥೆಗೆ ಈ ಮೊದಲು ಖುದ್ದಾಗಿ ಇಲ್ಲವೇ ರಿಜಿಸ್ಟರ್ಡ್‌ ಪೋಸ್ಟ್ ಮೂಲಕ ಸಲ್ಲಿಸಬೇಕಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಆನ್‌ಲೈನ್ ಮೂಲಕ ದೂರು ಸಲ್ಲಿಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.ಆಲಂ ಪಾಶಾ ಎಂಬುವವರು ಸಚಿವ ಮುರುಗೇಶ ನಿರಾಣಿ ವಿರುದ್ಧ ಲೋಕಾಯುಕ್ತಕ್ಕೆ ದುರು ಸಲ್ಲಿಸಿದ್ದು, ಇದರ ವಿಚಾರಣೆಗಾಗಿ ಅಂದಿನ ಮುಖ್ಯಮಂತ್ರಿ ಹಾಗೂ ಸಚಿವ ಮುರುಗೇಶ ನಿರಾಣಿ ಅವರ ಕಾಮೆಂಟ್ ಕೇಳಲು ಸಂಬಂಧಿಸಿದವರಿಗೆ ತಿಳಿಸಲಾಗಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.ಪಾರದರ್ಶಕ ದೃಷ್ಟಿಯಿಂದ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಮಂಥ್ಲಿ ನ್ಯೂಸ್ ಬುಲೆಟಿನ್ ಆರಂಭವಾಗಿದ್ದು, ಇನ್ನು ಮುಂದೆ ವೆಬ್‌ಸೈಟ್‌ನಲ್ಲೂ ಈ ಬಗ್ಗೆ ಮಾಹಿತಿ ನೀಡಲಾಗುವುದು. ಲೋಕಾಯುಕ್ತ ಸಂಸ್ಥೆಯಲ್ಲಿರುವ 22 ಎಸ್ಪಿ ಹುದ್ದೆಗಳಲ್ಲಿ 11 ಸ್ಥಾನಗಳು ಖಾಲಿಯಿದ್ದು, ಖಾಲಿ ಇರುವ ಲೋಕಾಯುಕ್ತ ಎಸ್ಪಿ ಹುದ್ದೆಗಳನ್ನು ಇನ್ನೂ ಕೆಲವೇ ದಿನಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.ನಾನು ಅಧಿಕಾರ ವಹಿಸಿಕೊಂಡಾಗಿನಿಂದ ನನಗೆ ಪರಮಾಧಿಕಾರ ಬೇಡ. ಸರ್ವಾಧಿಕಾರವೂ ಬೇಡ. ಆದರೆ ಸರಿಯಾದ ಅಧಿಕಾರ ಕೊಡಿ ಎಂದು ಸರ್ಕಾರವನ್ನು ಕೇಳಿದ್ದೇನೆ ಎಂದು ಲೋಕಾಯುಕ್ತ ಸಂಸ್ಥೆಯ ಇತಿಮಿತಿಗಳನ್ನು ವಿವರಿಸಿದರು.ಲೋಕಾಯುಕ್ತರ ಗುಲ್ಬರ್ಗದ ಪ್ರವಾಸದಲ್ಲಿ 98 ದೂರುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.